ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರೋತ್ಥಾನ ಹಣ ಮಾಸ್ಟರ್ ಪ್ಲಾನ್‌ಗೆ ಬೇಡ

Last Updated 25 ಫೆಬ್ರುವರಿ 2012, 8:15 IST
ಅಕ್ಷರ ಗಾತ್ರ

ವಿಜಾಪುರ: ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾಗಲಿರುವ ಅನುದಾನವನ್ನು ಮಾಸ್ಟರ್ ಪ್ಲಾನ್‌ಗೆ ವಿನಿಯೋಗಿಸುವುದಕ್ಕೆ ನಗರಸಭೆಯ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ನಗರೋತ್ಥಾನ ಯೋಜನೆಯಡಿ ಮೂರು ವರ್ಷಗಳ ಅವಧಿಯಲ್ಲಿ 100 ಕೋಟಿ ರೂಪಾಯಿ ವಿಶೇಷ ಅನುದಾನ ಬರಲಿದ್ದು, ಮಾಸ್ಟರ್ ಪ್ಲಾನ್ ಜಾರಿಯಿಂದ ಹಾನಿಯಾಗುವ ಆಸ್ತಿಗಳ ಮಾಲಿಕರಿಗೆ ಪರಿಹಾರ ನೀಡಲು ಅಗತ್ಯವಿರುವ ಹಣವನ್ನು ಈ ಅನುದಾನದಲ್ಲಿ ಪಡೆಯಲು ಜಿಲ್ಲಾ ಆಡಳಿತ ನಿರ್ಧರಿಸಿತ್ತು.

`ಕಳೆದ ವರ್ಷಗಳಲ್ಲಿ ನಗರ ವಲಯದಲ್ಲಿ ಯಾವುದೇ ಯೋಜನೆಗಳು ಕಾರ್ಯಗತಗೊಂಡಿಲ್ಲ. ಅತೀ ಹಿಂದುಳಿದ ನಗರಸಭೆ ಎಂದು ಪರಿಗಣಿಸಿ ಹಾಗೂ ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಐತಿಹಾಸಿಕ ನಗರಕ್ಕೆ ಹಣ ಮಂಜೂರಾಗಿದೆ. ಈ ಹಣವನ್ನು ಮಾಸ್ಟರ್ ಪ್ಲಾನ್ ಯೋಜನೆಗೆ ಬಳದೆ ನಗರದ ಅಭಿವೃದ್ಧಿಗಾಗಿ ಬಳಸಬೇಕು~ ಎಂದು ಈ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಿದ್ದಾರೆ.

`2009ರ ಅತಿವೃಷ್ಟಿಯಿಂದ ಹಾಳಾಗಿರುವ ಹಾನಿಯನ್ನೂ ಇಲ್ಲಿಯವರೆಗೆ ಸರಿಪಡಿಸಲಾಗಿಲ್ಲ. ನಗರ ಸಭೆಯ ಆಯುಕ್ತರು ತೆರಿಗೆಯನ್ನು ಸಮರ್ಪಕವಾಗಿ ವಸೂಲಿ ಮಾಡದ ಕಾರಣ ಎರಡು ವರ್ಷಗಳಿಂದ ನಗರದ ಯಾವುದೇ ವಾರ್ಡ್‌ಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ನಡೆದಿಲ್ಲ~ ಎಂದು ಅವರು ಹೇಳಿದ್ದಾರೆ.

`ವಿಜಾಪುರ ನಗರಸಭೆ ಸಂಪೂರ್ಣ ಹಾಳಾಗಿ ಹೋಗಿದೆ. ನಗರದ ತುಂಬೆಲ್ಲ ಧೂಳು, ರಸ್ತೆಗಳಲ್ಲಿ ಗುಂಡಿಗಳು, ಅರ್ಧಮರ್ಧ ತೆರೆದ ಚರಂಡಿಗಳು.  ಕತ್ತಲೆ ಆವರಿಸಿದ ನಗರ... ಹೀಗೆ ಅನೇಕ ಮೂಲಭೂತ ಸೌಕರ್ಯ ಇಲ್ಲದೆ ಜನ ಪರದಾಡುತ್ತಿದ್ದಾರೆ.

ಜನ ನಿತ್ಯವೂ ತಮ್ಮ ಸಂಕಷ್ಟಗಳನ್ನು ನಮ್ಮೆದುರು ಹೇಳಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಗಳ ಕುರಿತು ನಾವು ಎಷ್ಟೋ ಬಾರಿ ಆಯುಕ್ತರ ಗಮನಕ್ಕೆ ತಂದರೂ ಅವರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ~ ಎಂದು ದೂರಿದ್ದಾರೆ.

`ನಗರದ ಮೂಲ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕು. ನಗರೋತ್ಥಾನ ಅನುದಾನ ನಗರದ ಅಭಿವೃದ್ಧಿಗೆ ಮೀಸಲಿಡಬೇಕು.

ಈ ಕುರಿತು ಮೂರು ದಿನದಲ್ಲಿ ಉತ್ತರಿಸಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ~ ಎಂದು ನಗರ ಸಭೆ ಅಧ್ಯಕ್ಷ ಪರಶುರಾಮ ರಜಪೂತ, ಉಪಾಧ್ಯಕ್ಷ ಚನ್ನಪ್ಪ ಬಜಂತ್ರಿ, ಸದಸ್ಯರಾದ ರವಿಕಾಂತ ಬಗಲಿ, ಪ್ರಕಾಶ ಮಿರ್ಜಿ, ಪ್ರಕಾಶ ಎಸ್. ಬಗಲಿ, ಎಂ.ಎಸ್. ಕರಡಿ,  ರಾಜೇಶ ದೇವಗಿರಿ, ರವೀಂದ್ರ ಕುಲಕರ್ಣಿ, ವಿ.ಎಸ್. ಮಂಗಳವೇಡೆ, ಪಿ.ಎಸ್. ಹಳ್ಳಿ, ಎಸ್.ಪಿ. ಜಾಧವ ಸೇರಿದಂತೆ  26 ಜನ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

`ಪ್ರಜ್ವಲ್ ಕುಟುಂಬಕ್ಕೆ ಪರಿಹಾರ ನೀಡಿ~
ವಿಜಾಪುರ ನಗರದಲ್ಲಿ ಒಳಚರಂಡಿ ಯೋಜನೆಯ ಕಾಮಗಾರಿಗಾಗಿ ತೋಡಲಾದ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗೆ ಪ್ರಜ್ವಲ್ ಶ್ರಿಕಾಂತ ಸ್ವಾಮಿ ಕುಟುಂಬಕ್ಕೆ ಮುಖ್ಯ ಮಂತ್ರಿಗಳು ತಮ್ಮ ಪರಿಹಾರ ನಿಧಿಯಿಂದ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎ. ಜಿದ್ದಿ ಒತ್ತಾಯಿಸಿದ್ದಾರೆ.
 

ಒಳಚರಂಡಿ ಯೋಜನೆಗಾಗಿ ತೋಡಿ ಅನೇಕ ದಿನಗಳಿಂದ ಹಾಗೇ ಬಿಟ್ಟಿದ್ದ ನೀರು ತುಂಬಿದ್ದ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಈ ಬಾಲಕ ಮೃತಪಟ್ಟಿದ್ದಾನೆ. ಈ ಘಟನೆಗೆ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಹೊಣೆ. ಆದ್ದರಿಂದ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ  ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT