ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ಕಾಮಗಾರಿ: ತಪ್ಪದ ಅಪಾಯ

Last Updated 16 ಸೆಪ್ಟೆಂಬರ್ 2011, 5:40 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಹುಲಸೂರ ಸಮೀಪದಲ್ಲಿನ ಮಾಂಜರಾ ನದಿ ಮೇಲಿನ ಸಾಯಗಾಂವ ಮತ್ತು ಕೊಂಗಳಿ ಸೇತುವೆಗಳನ್ನು ಎತ್ತರಿಸಲು ಹೋರಾಟ ಈಗ ಆರಂಭವಾಗಿದ್ದು ಈಚೆಗೆ ಶಾಸಕ ಈಶ್ವರ ಖಂಡ್ರೆ ನೇತೃತ್ವದಲ್ಲಿಯೇ ಧರಣಿ ನಡೆದಿದೆ. ಆದರೆ ಎರಡು ದಶಕಗಳಿಂದ ಒತ್ತಾಯಿಸುತ್ತ ಬಂದರೂ ಬಸವಕಲ್ಯಾಣಕ್ಕೆ ಸಮೀಪದಲ್ಲಿರುವ ಚುಳಕಿ ಜಲಾಶಯದ ಹಿನ್ನೀರಿನಲ್ಲಿ ಮುಳುಗುವ ಧನ್ನೂರ (ಕೆ) ಸೇತುವೆಯನ್ನು ಎತ್ತರಿಸುವ ಕಾರ್ಯ ಇದುವರೆಗೆ ನಡೆದಿಲ್ಲ.

ಮಳೆ ಹೆಚ್ಚಾಯಿತೆಂದರೆ ಬಸವಕಲ್ಯಾಣ ತಾಲ್ಲೂಕಿನ ಸರಹದ್ದಿನಲ್ಲಿರುವ ಮಾಂಜರಾ ನದಿ ಹಾಗೂ ಚುಳಕಿನಾಲಾ ಜಲಾಶಯದ ಸುತ್ತಲಿನ ರಸ್ತೆಗಳ ಸೇತುವೆಗಳ ಮೇಲಿನಿಂದ ನೀರು ಹರಿದು ಅನೇಕ ಗ್ರಾಮಗಳ ಸಂಪರ್ಕ ಕಡಿದು ಹೋಗುತ್ತದೆ. ಹುಲಸೂರನಿಂದ ಮಾಂಜರಾ ನದಿ ಆಚೆಗಿನ ಮೆಹಕರ್ ಹತ್ತಿರದ ಹಳ್ಳಿಗಳಿಗೆ ಹೋಗಲಾಗುವುದಿಲ್ಲ.

ಬಸವಕಲ್ಯಾಣದಿಂದ ಕೇವಲ 5 ಕಿ.ಮೀ. ಅಂತರದಲ್ಲಿನ ಚುಳಕಿನಾಲಾ ಜಲಾಶಯದ ಸುತ್ತಲಿನ ಧನ್ನೂರ್, ಬೆಟಬಾಲ್ಕುಂದಾ, ಜಾನಾಪುರ ಮತ್ತು ಗೌರ ರಸ್ತೆಯಲ್ಲಿನ ಸೇತುವೆಗಳು ನೀರಿನಲ್ಲಿ ಮುಳಗುತ್ತವೆ. ಹೀಗಾಗಿ ಹುಲಸೂರ, ಬೇಲೂರ್, ಮುಚಳಂಬ, ನಿಲಂಗಾ, ಉದಗೀರ್, ಭಾಲ್ಕಿಗೆ ಹೋಗುವ ಪ್ರಯಾಣಿಕರು ಅಷ್ಟೇಅಲ್ಲ; ಶಾಲೆ, ಕಾಲೇಜಿಗೆ ಹೋಗುವ ಮಕ್ಕಳು ಮತ್ತು ನೌಕರರು ಪರದಾಡಬೇಕಾಗುತ್ತಿದೆ. ಆದರೂ ನೀರಿನಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ಸ್ಥಳಗಳಲ್ಲಿನ ಸೇತುವೆಗಳನ್ನು ಎತ್ತರಿಸುವ ಪ್ರಯತ್ನ ನಡೆಯುತ್ತಿಲ್ಲ.

ಧನ್ನೂರ (ಕೆ) ಸೇತುವೆ ಎತ್ತರಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಬಸವಕಲ್ಯಾಣದಿಂದ ಭಾಲ್ಕಿಗೆ ಹೋಗಲು ಇದು ಸಮೀಪದ ಮಾರ್ಗ ಇರುವುದರಿಂದ ಇಲ್ಲಿಂದ ಹೆಚ್ಚಿನ ವಾಹನಗಳು ಸಂಚರಿಸುತ್ತವೆ.

ಅಲ್ಲದೆ ಈ ಸೇತುವೆ ಹಳೆಯದಾಗಿದ್ದು ಅಪಾಯದ ಅಂಚಿಗೆ ತಲುಪಿದೆ. ಸೇತುವೆಯ ಮೇಲೆ ತಡೆಗೋಡೆ ಇಲ್ಲದ್ದರಿಂದ ವಾಹನಗಳು ಒಳಗೆ ಬೀಳುವ ಭೀತಿ ಆವರಿಸಿದೆ. ಮುಖ್ಯವೆಂದರೆ ಈ ಸೇತುವೆಯ ರಕ್ಷಣೆಗಾಗಿ ಚುಳಕಿನಾಲಾ ಜಲಾಶಯದಲ್ಲಿನ ನೀರು ನಾಲೆಗೆ ಬಿಡಬೇಕಾಗುತ್ತಿದೆ. ಈ ಕಾರಣ ಜಲಾಶಯದಲ್ಲಿನ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ.

ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುವಷ್ಟು ನೀರು ಹಿಡಿದಿಟ್ಟರೆ ಸೇತುವೆ ಪೂರ್ಣವಾಗಿ ಮುಳುಗುತ್ತದೆ. ಹಾಗಾದರೆ ರಸ್ತೆ ಸಂಚಾರ ನಿಂತುಹೋಗುವುದರಿಂದ ಜನರು ಸಂಕಟಪಡುತ್ತಾರೆ. ಆದ್ದರಿಂದ ಕಳೆದ ಒಂದು ತಿಂಗಳಲ್ಲಿ ಧಾರಾಕಾರ ಮಳೆ ಸುರಿದು ನೀರು ಸಾಕಷ್ಟು ಪ್ರಮಾಣದಲ್ಲಿ ಬಂದರೂ ಜಲಾಶಯದ ನೀರನ್ನು ಆಗಾಗ ನಾಲೆಗೆ ಬಿಡಲಾಗಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ.

ಚಿಕ್ಕದಾಗಿರುವ ಈ ಸೇತುವೆಯಿಂದ ಹೀಗೆ ಒಂದೆಡೆ ರಸ್ತೆ ಸಂಚಾರಕ್ಕೆ ತೊಂದರೆಯಾದರೆ, ಇನ್ನೊಂದೆಡೆ ಜಲಾಶಯದಲ್ಲಿನ ನೀರಿನ ಸಂಗ್ರಹ ಹೆಚ್ಚಿಸಲು ಅಡ್ಡಿಯಾಗಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಶೀಘ್ರ ನಿರ್ಣಯ ಕೈಗೊಳ್ಳಬೇಕು. ಮುಂದಿನ ಮಳೆಗಾಲ ಬರುವುದರೊಳಗಾಗಿ ಇದನ್ನು ಎತ್ತರಿಸುವ ಕೆಲಸ ಆರಂಭಿಸಬೇಕು ಎಂದು ಈ ಭಾಗದಲ್ಲಿನ ಗೋರಟಾ, ಮುಚಳಂಬ, ಧನ್ನೂರ್(ಕೆ), ತೊಗಲೂರ, ಕಾದೇಪುರ, ಗಡಿರಾಯಪಳ್ಳಿ, ಲಿಂಬಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT