ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯೋಕೆ ಆಗೊಲ್ಲ, ಆದರೆ ಬದುಕಿನ ನಡಿಗೆ ನಿಂತಿಲ್ಲ...

Last Updated 3 ಡಿಸೆಂಬರ್ 2013, 6:29 IST
ಅಕ್ಷರ ಗಾತ್ರ

‘ಎರಡೂ ಕಾಲು ಕಳೆದುಕೊಂಡ ನನಗೆ ಎಲ್ಲರಂತೆ ನಡೆಯಲಿಕ್ಕೆ ಆಗೊಲ್ಲ. ಹಾಗಂತ ಕೈ ಚೆಲ್ಲಿ ಕೂತಿಲ್ಲ. ಮಾನಸಿಕವಾಗಿ ಕುಗ್ಗಿಲ್ಲ. ಈ ಜಗತ್ತಿನಲ್ಲಿ ನನಗೂ ಬದುಕಲು ಅವಕಾಶ ಮತ್ತು ಹಕ್ಕಿದೆ. ಆದ್ದರಿಂದಲೇ ಆತ್ಮಬಲ, ಆತ್ಮವಿಶ್ವಾಸದಿಂದ ಬದುಕು ನಡೆಸಿಕೊಂಡು ಬರುತ್ತಿದ್ದೇನೆ. ಸಮಸ್ಯೆ, ಸವಾಲುಗಳು ಎದುರಾದರೂ ಗುರಿಯಿಂದ ವಿಮುಖಳಾಗಲ್ಲ’

–ಹೀಗೆ ಗಟ್ಟಿದನಿಯಲ್ಲಿ ಹೇಳುವವರು ಬಾನೊತ್‌ ಉಷಾಕಿರಣ್‌. ಅವರು ಕರ್ನಾಟಕ ಅಂಗವಿಕಲರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ. ತಮ್ಮದಲ್ಲದ ಊರು ಮತ್ತು ರಾಜ್ಯದಲ್ಲಿ ಅಪರಿಚಿತ ಜನರ ಮಧ್ಯೆ ಬದುಕಿ ಇಲ್ಲಿನ ಭಾಷೆ, ಸಂಸ್ಕೃತಿ ಮತ್ತು ಜೀವನಶೈಲಿ ರೂಢಿಸಿಕೊಳ್ಳುತ್ತಿರುವ ಅವರು ಮಾತನಾಡತೊಡಗಿದರೆ ಅಂಗವಿಕಲರ ದಯನೀಯ ಸ್ಥಿತಿ ಒಂದೊಂದಾಗಿ ಬೆಳಕಿಗೆ ಬರುತ್ತದೆ.
ಅಂಗವಿಕಲರ ಕಷ್ಟ–ಕಾರ್ಪಣ್ಯ ಮತ್ತು ಸಮಾಜ ಅವರನ್ನು ನೋಡುವ ರೀತಿ ಎಲ್ಲವನ್ನೂ ವಿವರಿಸುತ್ತಾರೆ. ಮನೆಯೊಳಗೆ ಮತ್ತು ಹೊರಗೆ ಸಮಾಜದಲ್ಲಿ ಅಂಗವಿಕಲರ ಮೇಲೆ ಆಗುತ್ತಿರುವ ಶೋಷಣೆ, ದೌರ್ಜನ್ಯದ ಬಗ್ಗೆ ಬಿಡಿಬಿಡಿಯಾಗಿ ಹೇಳುತ್ತಾರೆ.

ನಾನೂ ಮಾನಸಿಕ ಹಿಂಸೆ, ಶೋಷಣೆ ಮತ್ತು ದೌರ್ಜನ್ಯವನ್ನು ದಿಟ್ಟವಾಗಿ ಎದುರಿಸಿಕೊಂಡು ಬಂದಿದ್ದೇನೆ ಎಂದು ಹೇಳುವಾಗ ಉಷಾಕಿರಣ್‌ ಅವರ ಕಣ್ಣಂಚಿನಲ್ಲಿ ನೀರು ಕಾಣಿಸಿಕೊಳ್ಳುತ್ತದೆ. ಆದರೆ ಅದನ್ನು ಗಟ್ಟಿಯಾಗಿ ಅದುಮಿಡುವ ಅವರು, ‘ನಾನು ಈ ಜಗತ್ತಿನಲ್ಲಿ ಬದುಕಬೇಕೆಂದರೆ ಎಲ್ಲವನ್ನೂ ಮತ್ತು ಎಲ್ಲರನ್ನೂ ಸಹಿಸಿಕೊಳ್ಳಬೇಕು. ಸುಳ್ಳು ಮಾತನಾಡಬಾರದು, ಚಾಡಿ ಹೇಳಬಾರದು ಮತ್ತು ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ನನ್ನ ಹಿರಿಯರು ಮತ್ತು ಸ್ನೇಹಿತರು ತಿಳಿ ಹೇಳಿದ್ದಾರೆ. ಅದರಂತೆಯೇ ನಾನು ಬದುಕುತ್ತಿದ್ದೇನೆ. ಬದುಕುವ ಅದಮ್ಯ ವಿಶ್ವಾಸ ಹೊಂದಿದ್ದೇನೆ’ ಎನ್ನುತ್ತಾರೆ.

ಆಂಧ್ರಪ್ರದೇಶ ವಾರಂಗಲ್‌ ಸಮೀಪದ ನರಸನಪೇಟೆಯಲ್ಲಿ 1986ರ ಜನವರಿ 1ರಂದು ಜನಿಸಿದ ಆದಿವಾಸಿ ಲಂಬಾಣಿ ಸಮುದಾಯದ ಉಷಾಕಿರಣ್‌ ಜೀವನಗಾಥೆ ಸಾಮಾನ್ಯವಾದುದ್ದೇನಲ್ಲ. ಹೆಣ್ಣಾಗಿ ಜನಿಸಿದ ಅವರು ಲಿಂಗ ಪರಿವರ್ತನೆಗೊಂಡವರು. ಅಂಗವಿಕಲೆಯಾಗಿದ್ದೇ ಕಾರಣವಾಗಿಸಿಕೊಂಡು ಮನೆ ಮತ್ತು ಸಮಾಜದಲ್ಲಿ ಆಗುತ್ತಿದ್ದ ಹಿಂಸೆ, ಕಿರುಕುಳಕ್ಕೆ ತಕ್ಕ ಉತ್ತರ ನೀಡಬೇಕೆಂದು ಹೊಸ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಿದರು. 2007ರಲ್ಲಿ ಬೆಂಗಳೂರಿಗೆ ಬಂದ ಅವರು ಸ್ನೇಹಿತರನ್ನು ಗಳಿಸಿದರು. ಕಷ್ಟಪಟ್ಟು ಕನ್ನಡ ಕಲಿತರು. ಅಂಗವಿಕಲರ ಸಂಘಟನೆಯನ್ನು ಆರಂಭಿಸಿ, ಅವರ ಹಕ್ಕುಗಳಿಗಾಗಿ ಈಗ ಹೋರಾಟವನ್ನೇ ಕೈಗೊಂಡಿದ್ದಾರೆ.

‘ಬಡ ಕುಟುಂಬದಲ್ಲಿ ಜನಿಸಿದ ನಾನು ಮೂರನೇ ವಯಸ್ಸಿನಲ್ಲೇ ಪೋಲಿಯೊದಿಂದಾಗಿ ಎರಡೂ ಕಾಲು ಸ್ವಾಧೀನ ಕಳೆದುಕೊಂಡು ಅಂಗವಿಕಲೆಯಾದೆ. ಶಸ್ತ್ರಚಿಕಿತ್ಸೆ ಮೂಲಕ ಕಾಲುಗಳನ್ನು ಗುಣಪಡಿಸಲು ತಂದೆ–ತಾಯಿ ಮನೆಯಲ್ಲಿನ ಹಸುಗಳನ್ನು ಮಾರಾಟ ಮಾಡಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಅಂಗವಿಕಲೆಯಾದ ಮಗಳಿಗೆ ಸಾಮಾಜಿಕ ಭದ್ರತೆ ನೀಡುವುದು ಕಷ್ಟ ಎಂಬ ಕಾರಣಕ್ಕೆ ತಂದೆ–ತಾಯಿ ನನ್ನನ್ನು ಮಗನಾಗಿ ಬೆಳೆಸಿದರು. ಬಾಲಕಿಯರು ತೊಡುವ ಉಡುಪುಗಳನ್ನು ಬಿಟ್ಟು ಬಾಲಕರು ತೊಡುವಂತಹ ಉಡುಪುಗಳನ್ನು ನೀಡಿದರು. ಮಗಳಲ್ಲ, ಮಗ ಎಂಬಂತೆ ನನ್ನನ್ನು ಬೆಳೆಸತೊಡಗಿದರು’ ಎಂದು ಅವರು  ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಗೆ ಹೋಗುವುದನ್ನೇ ಬಿಡಿಸಿದರು. ಮನೆಯಲ್ಲೇ ಇರುವಂತೆ ನೋಡಿಕೊಂಡರು. ಆದರೆ ಇದೆಲ್ಲವನ್ನೂ ಗಮನಿಸಿದ ಶಾಲೆಯ ಶಿಕ್ಷಕ ಕೃಷ್ಣಮೂರ್ತಿಯವರು ನನ್ನ ಸಮಸ್ಯೆ ಅರಿತರು. ತಂದೆ–ತಾಯಿ ಅವರ ಮನವನ್ನು ಒಲಿಸಲು ಸಾಕಷ್ಟು ಪ್ರಯತ್ನಪಟ್ಟರು. ಶಾಲೆಗೆ ಕಳುಹಿಸುವುದು ಕಷ್ಟವೆಂದಾಗ, ಕೃಷ್ಣಮೂರ್ತಿಯವರೇ ನನ್ನನ್ನು ತಮ್ಮ ಸೈಕಲ್‌ನಲ್ಲಿ ಕೂರಿಸಿಕೊಂಡು ಶಾಲೆಗೆ ಕರೆತರುತ್ತಿದ್ದರು.
‘ಹಾಗೂ–ಹೀಗೂ ಕಷ್ಟಪಟ್ಟು ಬಿ.ಎ.ವರೆಗೆ ಓದಿದೆ. ನಂತರ ಸರಿತಾ, ಭದ್ರಾನಾಯಕ್‌, ರಂಜಿತಾ, ಕುಮಾರ್‌ ಮತ್ತು ಶಂಕರ್‌ರಂತಹ ಸ್ನೇಹಿತರು ಸಿಕ್ಕರು. ಅಲ್ಲಿನ ಶಾಸಕರೊಬ್ಬರು ಅಂಗವಿಕಲರಿಗೆ ಸಂಬಂಧಿಸಿದಂತೆ ಮಾಹಿತಿಯೊಂದನ್ನು ನೀಡಲು ನಿರಾಕರಿಸಿದಾಗ, ಪ್ರತಿಭಟನೆಯ ರೂಪದಲ್ಲಿ 2003ರ ಡಿಸೆಂಬರ್‌ 3ರಂದು ವಾರಂಗಲ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಅಂಗವಿಕಲರನ್ನು ಒಂದೆಡೆ ಸೇರಿಸಿದ್ದೆವು. ಅಲ್ಲಿ ಶಾಸಕರು ಬರಲು ಇಷ್ಟಪಡಲಿಲ್ಲ. ಸ್ಥಳಕ್ಕೆ ಬರದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ಪೊಲೀಸರು ಹೇಳಿದಾಗ, ಶಾಸಕರು ಸ್ಥಳಕ್ಕೆ ಬಂದರು. ಅಂದೇ ಅಲ್ಲಿ ಪ್ರಜ್ವಲ ವಿಕಲಾಂಗ ಸಂಕ್ಷೇಮ ಸಂಘ ಅಸ್ತಿತ್ವಕ್ಕೆ ಬಂತು. ಆಗ ಆರಂಭಗೊಂಡ ಪಯಣ ಈಗ ಚಿಕ್ಕಬಳ್ಳಾಪುರದಲ್ಲಿ ಮುಂದುವರಿದಿದೆ’ ಎಂದು ಅವರು ತಿಳಿಸಿದರು.

‘ವೈಯಕ್ತಿಕ ಕಾರಣಗಳು ಮತ್ತು ಇನ್ನಿತರ ಸಮಸ್ಯೆಗಳಿಂದ ವಾರಂಗಲ್‌ ತೊರೆದು ಬೆಂಗಳೂರಿಗೆ ಬಂದ ನಾನು ಎಪಿಡಿ ಸಂಸ್ಥೆಯಲ್ಲಿ ಕಂಪ್ಯೂಟರ್‌ ಕಲಿತೆ. ಜೊತೆಗೆ ಕನ್ನಡವನ್ನೂ ಕಲಿತೆ. ಜೀವನದುದ್ದಕ್ಕೂ ಹಲವಾರು ಸಮಸ್ಯೆಗಳು ತಲೆದೋರಿದರೂ ನಾನು ದೃತಿಗೆಡಲಿಲ್ಲ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬಂದ ನಾನು 13 ಮಂದಿ ಸ್ನೇಹಿತರೊಂದಿಗೆ 2010ರ ಮಾರ್ಚ್‌ನಲ್ಲಿ ಕರ್ನಾಟಕ ಅಂಗವಿಕಲರ ಸಂಘಟನೆ ಆರಂಭಿಸಿದೆ. 13 ಮಂದಿ ಮಾತ್ರವಿದ್ದ ಈ ಸಂಘಟನೆಯಲ್ಲಿ ಈಗ 3000ಕ್ಕೂ ಹೆಚ್ಚು ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಅಂಗವಿಕಲರ ಬದುಕು ಮತ್ತು ಹಕ್ಕಿಗಾಗಿ ನಿರಂತರ ಹೋರಾಟ ಮುಂದುವರಿದಿದೆ’ ಎಂದು ಉಷಾಕಿರಣ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT