ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗಾಗಿ ಒಂದಿಷ್ಟು ಸಮಯ...!

Last Updated 25 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ದಿನಕ್ಕೆ ಇಪ್ಪತ್ತ್ನಾಲ್ಕು ಗಂಟೆಗಳ ಬದಲು ಇನ್ನೊಂದಿಷ್ಟು ಹೆಚ್ಚಿದ್ದಿದ್ರೆ....’ ಅನ್ನೋದು ಲಕ್ಷಾಂತರ ಮಹಿಳೆಯರ ಅಳಲು. ಮನೆಕೆಲಸ, ಹೊರಗಡೆ ಉದ್ಯೋಗ, ಮಕ್ಕಳ ಲಾಲನೆ-ಪಾಲನೆ, ಗಂಡನ ಬೇಕು-ಬೇಡಗಳು ಹೀಗೆ ಒಂದೇ, ಎರಡೇ? ಹತ್ತಾರು ಕೆಲಸಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಮಹಿಳೆಯರಿಗೆ ದಿನವಿಡೀ ಸಾಲದೇ ಇರುವುದು ಆಶ್ಚರ್ಯವೇನಲ್ಲ.

ಆದರೆ ನಿಸರ್ಗ ನಿಯಮವನ್ನು ಬದಲಿಸಲು ಸಾಧ್ಯವೇ? ಇರುವಷ್ಟು ಸಮಯದಲ್ಲಿ ಎಲ್ಲಾ ಕೆಲಸ ಮುಗಿಸುವುದು ಹೇಗೆ? ಉಳಿದಿರುವುದು ಒಂದೇ ದಾರಿ! ತನಗೆ ಸಂಬಂಧಿಸಿದ ವಿಷಯಗಳಲ್ಲಿ ಹೊಂದಾಣಿಕೆ ಅಥವಾ ನಿರ್ಲಕ್ಷ್ಯ. ಅಂದರೆ ತನಗಾಗಿ ಇದ್ದ ಸಮಯದಲ್ಲಿ ಬೇರೆ ಕೆಲಸ ಮಾಡುವುದು. ಹೀಗೆ ತನ್ನ ಸಮಯದಲ್ಲಿ ರಾಜಿ ಮಾಡಿಕೊಂಡು ಮಹಿಳೆ ಸತತವಾಗಿ ದುಡಿದಾಗ ಆಕೆಯ ಆರೋಗ್ಯ
ಹದಗೆಡಬಲ್ಲದು. ಕೇಳಲು-ಓದಲು ‘ಇದೆಂಥಾ ಮಹಾ ಕೆಲಸ’ ಅನ್ನಿಸಿದರೂ ದೊಡ್ಡ ಪರಿಣಾಮ ಬೀರಬಲ್ಲ ಕೆಲಸಗಳು ಇಲ್ಲಿವೆ.

*ಬೆಳಗಿನ ತಿಂಡಿ ತಿನ್ನದೇ ಇರುವುದು/ತೀರಾ ತಡವಾಗಿ ತಿನ್ನುವುದು.
ನಸುಕಿನಲ್ಲೇ ಎದ್ದು ಕೆಲಸ ಮುಗಿಸಿ, ಗಂಡ-ಮಕ್ಕಳಿಗೆ ತಯಾರು ಮಾಡಿ ಹೈರಾಣಾಗಿ, ನಂತರ ‘ಏನೂ ಬೇಡ’ ಅನ್ನಿಸಿ ತಿಂಡಿ ಬಿಡುವುದು ಅಥವಾ ತಡವಾಗಿ ತಿನ್ನುವುದು, ತುಂಬಾ ಮಹಿಳೆಯರ ಪಾಡು.

ಬೆಳಗಿನ ತಿಂಡಿ ದಿನದ ಆಹಾರದಲ್ಲಿ ಅತೀ ಮುಖ್ಯ. ಅದನ್ನು ಬಿಟ್ಟಲ್ಲಿ ದಣಿವು-ಆಯಾಸದ ಜತೆ ಗ್ಲೂಕೋಸ್ ಅಂಶ ಕಡಿಮೆಯಾಗಿ ಕಿರಿಕಿರಿ ಅನ್ನಿಸುತ್ತದೆ. ಊಟದ ಸಮಯಕ್ಕಿಂತ ಮುಂಚೆ ಅದೂ-ಇದೂ ತಿಂದು ಊಟವೂ ಸೇರದೇ ಶಕ್ತಿ ಕಡಿಮೆಯಾಗುತ್ತದೆ. ಕೆಲವೊಮ್ಮೆ ಮಧ್ಯಾಹ್ನ ಅನಗತ್ಯವಾಗಿ ಆಹಾರ ಹೆಚ್ಚಿಗೆ ಸೇವಿಸಿ ಬೊಜ್ಜಿಗೂ ಕಾರಣವಾಗಬಹುದು. ಹೀಗೆ ಬೆಳಗಿನ ತಿಂಡಿ ಬಿಟ್ಟಲ್ಲಿ ಕೆಲಸ ಮೆಲ್ಲಗೆ, ದೇಹ ದಪ್ಪಗೆ!

*ಹೆಲ್ಮೆಟ್ ಹಾಕದೇ ಗಾಡಿ ಓಡಿಸುವುದು.
ಮಕ್ಕಳನ್ನು ಬೇಗ ಶಾಲೆಗೆ ಬಿಟ್ಟು ಆಫೀಸಿಗೆ ಓಡುವ ಅಥವಾ ಮನೆಕೆಲಸ-ಅಡಿಗೆ ಮುಗಿಸುವ ತರಾತುರಿ ಹೆಲ್ಮೆಟ್ ಧರಿಸಿದರೆ ಕೂದಲು ಹಾಳಾಗುತ್ತದೆ, ಜತೆಗೆ ಇಲ್ಲೇ ಹತ್ತಿರಕ್ಕೆ ಹೆಲ್ಮೆಟ್ ಯಾಕೆ ಎಂಬ ದೃಷ್ಟಿಯಿಂದ, ಹಾಗೇ ಗಾಡಿ ಓಡಿಸುವುದು ಸಾಮಾನ್ಯ.

ಜನಸಂದಣಿ-ವಾಹನದಟ್ಟಣೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ವೇಗವೂ ಮಿತಿಮೀರುತ್ತಿದೆ. ಯಾರಿಗೆ, ಯಾವಾಗ, ಎಲ್ಲಿ ಅಪಘಾತವಾಗುತ್ತದೋ ಯಾರು ಬಲ್ಲರು? ರಸ್ತೆ ಅಪಘಾತಗಳಲ್ಲಿ ಅತಿ ಹೆಚ್ಚು ಪ್ರಾಣ ಹಾನಿಗೆ ಕಾರಣವಾಗುವುದು ತಲೆಗೆ ಆದ ಪೆಟ್ಟಿನಿಂದ, ಹಾಗಾಗಿ ತನಗಾಗಿ ಮತ್ತು ತನ್ನ ಕುಟುಂಬದವರ ಸುರಕ್ಷತೆಯ ಸಲುವಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯ.

*ಆಪ್ತರೊಂದಿಗೆ ಸ್ನೇಹಿತರೊಂದಿಗೆ ಕಡಿಮೆ ಒಡನಾಟ.

‘ಮದುವೆ, ಮಕ್ಕಳು, ಕೆಲಸ ಹೀಗೆಲ್ಲಾ ಆದ ಮೇಲೆ ಫ್ರೆಂಡ್ಸ್ ಎಲ್ಲಾ ಮೂಲೆಗೆ! ಮಾತನಾಡಲು-ಮೀಟ್ ಮಾಡಲು ಟೈಂ ಇಲ್ಲ’ ಎನ್ನುವುದು ಬಹಳಷ್ಟು ಮಹಿಳೆಯರ ಅಭಿಮತ. ನಿಧಾನವಾಗಿ ಆಪ್ತರೊಂದಿಗೆ ಸಂಪರ್ಕ ಕಡಿಮೆಯಾಗುತ್ತಾ ಕಡೆಗೆ ಇಲ್ಲವಾಗುತ್ತದೆ.

ಬೆಳಿಗ್ಗೆಯಿಂದ ರಾತ್ರಿಯವರೆಗೆ ಯಂತ್ರದ ಹಾಗೆ ದುಡಿದ ಮಹಿಳೆಗೂ ಮನಸ್ಸಿದೆ, ಆಸೆ-ಆಕಾಂಕ್ಷೆಗಳಿವೆ. ಸಂಸಾರದ ಹೊರತಾಗಿಯೂ ಆಕೆಗೆ ತನ್ನ ಸುಖ-ದುಃಖ ಹೇಳಿಕೊಳ್ಳಲು, ಹಗುರವಾಗಲು ಆತ್ಮೀಯರು ಬೇಕು. ಒಂದಿಷ್ಟು ಹೊತ್ತು ಕಡೇ ಪಕ್ಷ ದೂರವಾಣಿಯ ಮುಖಾಂತರವಾದರೂ ಸಂಪರ್ಕದಲ್ಲಿರದಿದ್ದರೆ ಮನಸ್ಸು ಒತ್ತಡಕ್ಕೆ ಸಿಲುಕುತ್ತದೆ, ಬದುಕು ಅಸಹನೀಯವಾಗುತ್ತದೆ. ಒಳ್ಳೆಯ ಗೆಳೆಯ-ಗೆಳತಿಯರನ್ನು ಹೊಂದಿರುವವರು ಮಾನಸಿಕ ಒತ್ತಡಕ್ಕೆ, ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುವ ಸಾಧ್ಯತೆ ಕಡಿಮೆ ಎಂಬುದನ್ನು ವಿಜ್ಞಾನಿಗಳು ನಿರೂಪಿಸಿದ್ದಾರೆ. ಪ್ರತಿಯೊಬ್ಬರಿಗೂ ಆತ್ಮೀಯರ ಸಂಪರ್ಕ-ಒಡನಾಟ ಬೇಕೇ ಬೇಕು.

*ಮುಖದ ಮೇಕಪ್ ತೊಳೆಯದೇ ಇರುವುದು.
ಹಿತ-ಮಿತವಾಗಿ ಮೇಕಪ್ ಬಳಸಿದರೆ ವ್ಯಕ್ತಿತ್ವಕ್ಕೆ ಮೆರುಗು ನೀಡುವುದು ನಿಜ. ಆದರೆ ರಾತ್ರಿ ಮಲಗುವ ಮುನ್ನ ಸಂಪೂರ್ಣವಾಗಿ ತೆಗೆಯಬೇಕು. ಮಕ್ಕಳಿಗೆ ಪಾಠ ಹೇಳಿಕೊಟ್ಟು, ಅಡುಗೆ ಮುಗಿಸಿ, ಸೀರಿಯಲ್ ನೋಡಿ ಸುಸ್ತಾಗಿ, ಮತ್ತೆ ಮರುದಿನಕ್ಕೆ ಹೆದರುತ್ತಾ ಹಾಗೇ ಮಲಗುವವರು ಸಾಕಷ್ಟು ಜನ.

ಮುಖಕ್ಕೆ ಹಚ್ಚುವ ಫೌಂಡೇಶನ್-ಕ್ರೀಂಗಳು ಚರ್ಮದ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿಬಿಡುತ್ತದೆ. ಹಾಗಾಗಿ ಚರ್ಮಕ್ಕೆ ಉಸಿರಾಡಲು ಅವಕಾಶ ಇಲ್ಲ. ಇದರಿಂದಾಗಿ ಕೊಳೆ-ಕ್ರಿಮಿ ಸೇರಿಕೊಂಡು ಕಪ್ಪು ಮಚ್ಚೆ, ಮೊಡವೆಗಳು ಆರಂಭವಾಗುತ್ತದೆ. ಹಾಗೇ ಕಣ್ಣಿಗೆ ಹಚ್ಚುವ ಮಸ್ಕರಾ ತೆಗೆಯದೇ ಇದ್ದಲ್ಲಿ ರಾತ್ರಿ ನಿದ್ರಿಸುವಾಗ ಕಣಗಳು ಕಣ್ಣಿಗೆ ಸೇರಿ ನೋವು-ಸೋಂಕು ಉಂಟುಮಾಡಬಹುದು. ನೆನಪಿರಲಿ, ಮಲಗುವ ಮುನ್ನ ಯಾವುದೇ ರೀತಿ ಮೇಕಪ್ ಇರಬಾರದು. ತಣ್ಣಗಿನ-ಸ್ವಚ್ಛ ನೀರಿನಿಂದ ಮುಖವನ್ನು ತೊಳೆಯಲೇಬೇಕು.

*ರಾತ್ರಿ ಬ್ರಶ್ ಮಾಡದೇ ಇರುವುದು.
ಬೆಳಗ್ಗಿನಿಂದ ದುಡಿದು ದಣಿವಾಗಿ, ಮಕ್ಕಳಿಗೆ ಮಲಗಿಸಿ, ತಾವೂ ಹಾಸಿಗೆ ಕಂಡರೆ ಸಾಕು ಎನ್ನಿಸುವಷ್ಟಾದಾಗ ಬ್ರಶ್ ಮಾಡುವುದು ಬೇಡ ಅನ್ನಿಸುವುದು ಸಹಜ. ‘ಹೇಗಿದ್ದರೂ ಬೆಳಿಗ್ಗೆ ಹಲ್ಲು ಬ್ರಶ್ ಮಾಡಿದ್ದಾಗಿದೆ. ಈಗಾಗಲೇ ತಡ ಆಗಿದೆ. ಹಾಗೇ ಮಲಗೋಣ’ ಎಂಬ ಮನೋಭಾವ ಹಲವರದ್ದು.

ರಾತ್ರಿಯ ಹೊತ್ತು ಬಾಯಲ್ಲಿ ಜೊಲ್ಲುರಸದ ಉತ್ಪತ್ತಿ ತೀರಾ ಕಡಿಮೆ. ಆಗ ಸೂಕ್ಷ್ಮಾಣುಜೀವಿಗಳು ಹಲ್ಲಿನ ಮೇಲೆ ದಾಳಿ ಮಾಡುತ್ತವೆ. ಬ್ರಶ್ ಮಾಡದೇ ಇದ್ದಲ್ಲಿ ಅವುಗಳಿಗೆ ಪುಷ್ಕಳ ಭೋಜನ. ಇದರಿಂದಾಗಿ ಬಾಯಿ ವಾಸನೆ, ಒಸಡು ರೋಗ, ಹಲ್ಲು ಹುಳುಕು ಎಲ್ಲಾ ಆರಂಭವಾಗುತ್ತದೆ. ಇದಲ್ಲದೆ ಬಾಯಿಯಲ್ಲಿ  ಸೂಕ್ಷ್ಮಾಣುಜೀವಿಗಳ ಏರಿಕೆಗೂ ಹೃದಯ ಸಂಬಂಧಿ ರೋಗಕ್ಕೂ ಸಂಬಂಧವಿದೆ ಎಂದು ಸಾಬೀತಾಗಿದೆ. ಹಾಗಾಗಿ ಹಲ್ಲು ಫಳ ಫಳ ಹೊಳೆಯಲು, ಹೃದಯ ಆರೋಗ್ಯವಾಗಿಡಲು, ಬ್ರಶ್ ಮಾಡಲೇಬೇಕು.

*ವೈದ್ಯರ ಭೇಟಿ ಮುಂದೂಡುವುದು.
ಯಾವುದೇ ರೀತಿ ಅನಾರೋಗ್ಯವಿದ್ದರೂ ‘ಈಗ ಮಕ್ಕಳಿಗೆ ಪರೀಕ್ಷೆ ಇದೆ. ಗಂಡನಿಗೆ ಆಫೀಸಿನಲ್ಲಿ ಕೆಲಸ ಹೆಚ್ಚು, ಹಬ್ಬ ಬಂತು, ನೆಂಟರು ಬರ್ತಾರೆ’ ಎಂಬ ಹಲವಾರು ಕಾರಣಗಳಿಂದ ವೈದ್ಯರ ಭೇಟಿ ಮುಂದೂಡುವುದು ಸರ್ವೇಸಾಮಾನ್ಯ. ಹಾಗೇ ಯಾವುದೋ ಮಾತ್ರೆ ನುಂಗಿ ತಾತ್ಕಾಲಿಕ ಉಪಶಮನಕ್ಕೆ ಮೊರೆ ಹೋಗುವವರೂ ಅದೆಷ್ಟೋ ಜನ.

* ಒಂದು ಸಲ ಸರಿ, ಆದರೆ ಪ್ರತೀ ಬಾರಿ ಹೀಗಾದರೆ ಹೇಗೆ?
ವೈದ್ಯರ ಸಲಹೆ ಇಲ್ಲದೆ ಯಾವುದೋ ಮಾತ್ರೆ ಸೇವಿಸುವುದು ಖಂಡಿತಾ ತಪ್ಪು. ಬರೀ ಜ್ವರ, ತಲೆನೋವೂ ಕೂಡಾ ಎಷ್ಟೋ ಬಾರಿ ಒಳಗಿರುವ ರೋಗದ ಹೊರಚಿಹ್ನೆಯಾಗಿರಬಹುದು. ಆರಂಭದಲ್ಲಿ ನಿರ್ಲಕ್ಷ್ಯದಿಂದಾಗಿ ಮುಂದೆ ಗಂಭೀರ ಪರಿಣಾಮ ಎದುರಿಸುವ ಸಂದರ್ಭ ಬರಬಹುದು. ವೈದ್ಯರ ಭೇಟಿ ಮುಂದೂಡುವುದು ಸಲ್ಲದು.

ಒಂದಲ್ಲ ಹತ್ತು ಕಡೆ ಸಮರ್ಥವಾಗಿ ಸಣ್ಣ-ದೊಡ್ಡ ಜವಾಬ್ದಾರಿ ನಿರ್ವಹಿಸುವ ಮಹಿಳೆಗೆ ಸಮಯದ ಅಭಾವ-ಕೊರತೆ ಕಾಡೇ ಕಾಡುತ್ತದೆ. ಹಾಗೆಂದು ತನಗಾಗಿ, ತನ್ನ ಆರೋಗ್ಯಕ್ಕಾಗಿ ಒಂದಿಷ್ಟು ಸಮಯವನ್ನೂ ಮೀಸಲಿಡದೇ ಹೊಂದಾಣಿಕೆ ಮಾಡಿಕೊಂಡಲ್ಲಿ ಆಕೆಗೆ-ಕುಟುಂಬಕ್ಕೆ ಅಪಾಯ ತಪ್ಪಿದ್ದಲ್ಲ. ಇದನ್ನರಿತು ಕುಟುಂಬದ ಸದಸ್ಯರೆಲ್ಲರೂ ಆಕೆಗೆ ನೆರವು ನೀಡಿದಾಗ, ಸಮಯ ಕೊಟ್ಟಾಗ ಕೆಲಸ ಮಾತ್ರವಲ್ಲ ಸಂಸಾರ ರಥವೂ ಸುಗಮವಾಗಿ ಸಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT