ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ನಡುವಿನ ಸಾಹಿತ್ಯಕ, ಸಾಂಸ್ಕೃತಿಕ ಪಲ್ಲಟಗಳು

Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ತ್ತೀಚೆಗೆ ನಾವು ಒಂದಷ್ಟು ಸ್ನೇಹಿತರು ಚರ್ಚಿಸುತ್ತಿದ್ದೆವು. ಸಂವಾದಕ್ಕೆ `ನಾಲ್ಕು ದಶಕಗಳ ಸಾಂಸ್ಕೃತಿಕ ಪಲ್ಲಟಗಳು' ಎಂದು ಚೌಕಟ್ಟು ಹಾಕಿಕೊಂಡೆವು. ಹಾಗೆ ನೋಡಿದರೆ ನಮ್ಮ ಸ್ವಾತಂತ್ರ್ಯ ಚಳವಳಿ ನಾನಾ ರೀತಿಯ ಸಂಘರ್ಷಗಳ ಮೂಲಕ ಸ್ವಾತಂತ್ರ್ಯ ತಂದುಕೊಟ್ಟು, ಮುಂದೆ ನನಗೂ ಇದಕ್ಕೂ ಸಂಬಂಧವಿಲ್ಲವೆಂದು ಹೊರಟು ಹೋಗಲಿಲ್ಲ.

ನೂರಾರು ವರ್ಷಗಳಿಂದ ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದ್ದ, ಅವಮಾನ, ಅಸಮಾಧಾನ ಮತ್ತು ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಮುಖಾಮುಖಿಯಾದುವು. ಹೀಗೆ ಆಗುವಾಗ `ಶೂದ್ರ' ಸಾಹಿತ್ಯ ಮತ್ತು ಸಾಂಸ್ಕೃತಿಕ ಪತ್ರಿಕೆಯ ಮೂಲಕ ಹೇಗೆ ಗ್ರಹಿಸಿದೆ ಎಂಬುದು ಒಂದು ದೃಷ್ಟಿಯಿಂದ ಸಂಭ್ರಮದ ವಿಷಯವೇ ಆಗಿದೆ.

ಈ ಗ್ರಹಿಕೆಗೆ ಹಿನ್ನೆಲೆಯಾಗಿ ಸಾಕ್ಷಿ, ಸಂಕ್ರಮಣ ಅಂಕಣ, ಮನ್ವಂತರ, ಪಂಚಮ ಮತ್ತು ರುಜುವಾತು ರೀತಿಯ ಸಾಹಿತ್ಯಕ ಪತ್ರಿಕೆಗಳು ಬೆಳೆಸಿದ ಸಂವೇದನೆ ಅರ್ಥಪೂರ್ಣವಾದದ್ದು. ಯಾಕೆಂದರೆ ಇವು ಎಂದೂ ಸಾಹಿತ್ಯ, ರಾಜಕೀಯ ಮತ್ತು ಸಂಸ್ಕೃತಿಯನ್ನು ಪ್ರತ್ಯೇಕಿಸಿ ನೋಡಲು ಹೋಗಲಿಲ್ಲ. ಒಂದಕ್ಕೊಂದು ಇರುವ ಅವಿನಾಭಾವತೆಯನ್ನು ವಿವಿಧ ಹಂತಗಳಲ್ಲಿ ಅವಲೋಕಿಸಿಕೊಳ್ಳುವಂತೆ ಮಾಡಿದವು.

ಆದ್ದರಿಂದ ಇಲ್ಲಿಯೇ ಗಾಂಧಿ, ಲೋಹಿಯಾ. ಅಂಬೇಡ್ಕರ್ ಮತ್ತು ಪಾಶ್ಚಿಮಾತ್ಯ ಚಿಂತಕರ ಜೊತೆಗೆ,  `ಸಮಾಜವಾದ ಮತ್ತು ಸಮತಾವಾದ'ವನ್ನು ಕುರಿತಂತೆ ವ್ಯಾಪಕವಾದ ವಾಗ್ವಾದದಿಂದ ಕೂಡಿದ ಬರವಣಿಗೆ ಬರಲು ಸಾಧ್ಯವಾಯಿತು. ಇಂಥದ್ದು ಜಾಗತಿಕ ಮಟ್ಟದಲ್ಲೂ ನಡೆಯುತ್ತಿದ್ದುದರಿಂದ ಜಗತ್ತಿನ ಸಣ್ಣಪುಟ್ಟ ಭಾಷೆಗಳಲ್ಲಿಯೂ ಕಾಣಿಸಿಕೊಳ್ಳಲು ತೊಡಗಿದ್ದು ಅದರ ಸಾಂಸ್ಕೃತಿಕ ಅನನ್ಯತೆಯನ್ನು ತೋರಿಸುತ್ತದೆ.

ಈ ಕಾರಣಕ್ಕಾಗಿ ನಾವು ಹೊರಗಿನ ಮಹತ್ವಪೂರ್ಣ ಚಿಂತಕರನ್ನು ಒಳಗೆ ಬಿಟ್ಟುಕೊಂಡೆವು. ಹಾಗೆಯೇ ಅವರನ್ನು ಎಲ್ಲೆಲ್ಲಿ ನಮ್ಮವರನ್ನಾಗಿ ಮಾಡಿಕೊಳ್ಳಲು ಸಾಧ್ಯ ಎಂಬುದು ಮಂಥನಕ್ಕೆ ಒಳಪಟ್ಟಿದೆ. ಆದ್ದರಿಂದಲೇ ಸಾಂಸ್ಕೃತಿಕ ಸಮೃದ್ಧಿ ಎಂಬುದು ಕಳೆದ ನಾಲ್ಕೈದು ದಶಕಗಳಲ್ಲಿ ದಟ್ಟವಾಗಿ ನಡೆದಿದೆ. ಯಾವುದೂ ಏಕಾಏಕಿ ಸಾಮ್ರಾಜ್ಯಶಾಹಿಗಳು ಅಕ್ರಮವಾಗಿ ನುಸುಳಿದ ರೀತಿಯಲ್ಲಿ ಒಳಗೆ ಪ್ರವೇಶಿಸಲಿಲ್ಲ.

ಅದರ ಪ್ರಸ್ತುತತೆ ಮತ್ತು ಅಪ್ರಸ್ತುತತೆ ಕುರಿತು ನಡೆದ ಮುಖಾಮುಖಿಯನ್ನು ಅಧ್ಯಯನ ಮಾಡುವುದು ರೋಚಕ ಸಂಗತಿಯೇ ಆಗಿದೆ. `ಶೂದ್ರ' ದಂಥ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಿರುಪತ್ರಿಕೆ ಹುಟ್ಟಿಕೊಳ್ಳಲು ಮೇಲೆ ಪ್ರಸ್ತಾಪಿಸಿದ ಸಾಹಿತ್ಯಕ ಪತ್ರಿಕೆಗಳ ಜೊತೆಗೆ `ಪ್ರಜಾವಾಣಿ'ಯಂಥ ದಿನಪತ್ರಿಕೆಯೊಂದು ಎಂತೆಂಥ ವಾಗ್ವಾದಗಳನ್ನು ಹುಟ್ಟುಹಾಕಲು ವೇದಿಕೆಯಾಯಿತು ಎಂಬುದು ಕೂಡ ಅಧ್ಯಯನಕ್ಕೆ ಯೋಗ್ಯವಾದದ್ದು.

`ವಾಚಕರವಾಣಿ'ಯಂಥ ಓದುಗರ ವೇದಿಕೆಯೂ ಎಂಥ ಸ್ಮರಣೀಯ ಅಭಿಪ್ರಾಯಗಳನ್ನು ದಾಖಲಿಸಲು ಸಾಧ್ಯವಾಯಿತು. ಹಾಗೆ ನೋಡಿದರೆ ನಾವೆಲ್ಲ ಈ ವೇದಿಕೆಯ ಮೂಲಕವೇ ಬೆಳೆದವರು. ಈಗಲೂ ಅತ್ಯಂತ ಸರಳವಾಗಿ ಹೆಚ್ಚು ಜನಕ್ಕೆ ತಲುಪುವುದು ಇದರಿಂದಲೇ ಎಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯ. ಹೀಗಿರುವಾಗ ಇಲ್ಲಿ ನಡೆದ ಸಾಂಸ್ಕೃತಿಕ ಪಲ್ಲಟಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದು; ಯಾವಾಗಲೂ ಅರ್ಥವ್ಯಾಪ್ತಿಯಿಂದಲೇ ಕೂಡಿರುವಂಥದ್ದು.ಇಂಥ ಹಿನ್ನೆಲೆಯಿಂದ ಕೂಡಿದ ಎಷ್ಟೊಂದು ಸಂಸ್ಥೆಗಳು ಹಾಗೂ ಚಳವಳಿಗಳು ಹುಟ್ಟಿಕೊಂಡವು.

ಸೂಕ್ಷ್ಮಗ್ರಾಹಿಯಾದವರು ಅರಿಯುವ ಕ್ರಮಕ್ಕೆ ಹತ್ತಾರು ಹಾದಿಗಳಿರಬಹುದು. ಈ ಅರಿವಿನ ಹಿನ್ನೆಲೆಯಿಂದ ವಿಭಿನ್ನ ನೆಲೆಯ ಸಾಹಿತ್ಯ ಕೃತಿಗಳು ನಿರ್ಮಾಣವಾದವು. ಬದ್ಧತೆ, ಪ್ರತಿಗಾಮಿ ಮತ್ತು ಪ್ರಗತಿಪರ ಹಾಗೂ ಬುದ್ಧಿಜೀವಿ ಎಂಬುದು ಸಾಕಷ್ಟು ಚಲಾವಣೆಯಾಗುತ್ತ ಬಂತು. ಅದೇ ಸಮಯಕ್ಕೆ ಜಾತಿ ಮತ್ತು ವರ್ಗವನ್ನು ಕೇಂದ್ರವಾಗಿಟ್ಟುಕೊಂಡು ಸ್ವಾರಸ್ಯಕರವಾದ ಚರ್ಚೆಗಳೆಲ್ಲ ಆಗಿವೆ.

  ಈ ದೃಷ್ಟಿಯಿಂದ ಎಡಪಂಥೀಯ ಮತ್ತು ಸಮಾಜವಾದಿ ಎಂಬ ಎರಡು ಭಿನ್ನ ಚಿಂತನೆಯ ನೆಲೆಗಳು ಸಾಕಷ್ಟು ರೀತಿಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡವು. ಮೊದಲನೆಯ ಬಾರಿಗೆ ಸ್ವಾತಂತ್ರ್ಯದ ನಂತರ ತುಂಬ ತೀವ್ರ ಪ್ರಮಾಣದಲ್ಲಿ ವಿಚಾರ ಸಾಹಿತ್ಯ ಹತ್ತಾರು ದಿಕ್ಕುಗಳಿಗೆ ಹರಡಲು ಸಾಧ್ಯವಾಯಿತು. ಗಾಂಧಿ, ಅಂಬೇಡ್ಕರ್ ಮತ್ತು ಲೋಹಿಯಾ ಅವರ ಆಲೋಚನಾ ಕ್ರಮಕ್ಕೆ ಪೂರಕವಾಗಿ ಪೆರಿಯಾರ್, ಕೋವೂರ್ ಮತ್ತು ನಾರಾಯಣಗುರು ಅಂಥವರನ್ನು ಅವಲೋಕಿಸಿಕೊಳ್ಳಲು ಪ್ರಯತ್ನಿಸಿದರು. ಈ ದೃಷ್ಟಿಯಿಂದ ಬ್ರಾಹ್ಮಣ - ಅಬ್ರಾಹ್ಮಣ ಎಂಬ ಪರಿಕಲ್ಪನೆಯನ್ನು ಸೈದ್ಧಾಂತಿಕವಾಗಿ ವಿವೇಚಿಸಿಕೊಳ್ಳಲು ತೊಡಗಿದ್ದು ಮಹತ್ವಪೂರ್ಣವಾದದ್ದು.

ಇಲ್ಲೆಲ್ಲ ಕೆಲವು ದೊಡ್ಡ ದಿನಪತ್ರಿಕೆಗಳ ಜೊತೆಗೆ,  ಸಣ್ಣ ಸಣ್ಣ ಸಾಹಿತ್ಯ ಪತ್ರಿಕೆಗಳ ಕೊಡುಗೆಯನ್ನು ಈ ಕಾಲಘಟ್ಟದಲ್ಲಿ ಹೇಗೆ ಪರಿಭಾವಿಸಿಕೊಳ್ಳುತ್ತೇವೆ ಎಂಬುದು ಕೂಡ ಬಹಳ ಮುಖ್ಯವಾದದ್ದು. ಹೊಸ ಮನಸ್ಸುಗಳನ್ನು ಸ್ವತಂತ್ರ ವಿಚಾರಧಾರೆಯತ್ತ ಬೆಳೆಸಲು ಇವು ಅರ್ಥಪೂರ್ಣ ಪಾತ್ರವನ್ನು ನಿರ್ವಹಿಸುತ್ತ ಬಂದಿವೆ. ಇದು ಕೇವಲ ಕನ್ನಡ ಮತ್ತು ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ವಿಷಯವಲ್ಲ.

ವಿಶ್ವವ್ಯಾಪಿ ದೊಡ್ಡ ದೊಡ್ಡ ಚಿಂತಕರು ಮತ್ತು ವಿಜ್ಞಾನಿಗಳು ಬೆಳೆದಿರುವುದೇ ಇಂಥ ಪತ್ರಿಕೆಗಳಿಂದ. ಪರೋಕ್ಷವಾಗಿ ಇದನ್ನು ದೊಡ್ಡ ಪತ್ರಿಕೆಗಳು ಪೋಷಿಸುತ್ತ ಬಂದಿವೆ. ಈ ಕಾರಣಕ್ಕಾಗಿ ಇದನ್ನೆಲ್ಲ ಸಿಂಹಾವಲೋಕನ ಮಾಡಿಕೊಳ್ಳುವುದು ಮತ್ತು ಅದರ ಸಾರ್ಥಕತೆಯನ್ನು ವರ್ತಮಾನದ ಮುಂದಿಡುವುದು; ನಮ್ಮ ಗ್ರಹಿಕೆಗಳನ್ನು ವಿಮರ್ಶಿಸಿಕೊಂಡಂತೆ ಆಗುತ್ತದೆ.

ಈ ದೃಷ್ಟಿಯಿಂದ ಕೆಲವು ಅರ್ಥಪೂರ್ಣ ಲೇಖಕರು ಮತ್ತು ಸಮಾಜ ವಿಜ್ಞಾನಿಗಳು ನಮ್ಮಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಘಟಿಸಿದ ಎಷ್ಟೋ ಸಂಗತಿಗಳಿಗೆ ಮುಖಾಮುಖಿಯಾಗಿದ್ದಾರೆ. ಅದು ಒಕ್ಕೂಟದಂಥ ಅಬ್ರಾಹ್ಮಣ ಲೇಖಕರ ಸಂಘಟನೆ ತುಂಬ ಮಾರ್ಮಿಕವಾದ ಸಂವೇದನೆಗಳನ್ನು ಈ ಸಮಾಜಕ್ಕೆ ಧಾರೆಯೆರೆದಿದೆ. ಈ ಒಕ್ಕೂಟದಲ್ಲಿ ಕನ್ನಡ ಸಾಹಿತ್ಯ ಸಂದರ್ಭದ ಕೆಲವು ಪ್ರಮುಖ ಲೇಖಕರೆಲ್ಲ ಭಾಗಿಯಾಗಿದ್ದರು. ಮುಖ್ಯವಾಗಿ ಜಿ.ಎಸ್. ಶಿವರುದ್ರಪ್ಪ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಪ್ರೊ. ನಂಜುಂಡಸ್ವಾಮಿ, ಚಂದ್ರಶೇಖರ ಪಾಟೀಲ, ಬೆಸಗರಹಳ್ಳಿ ರಾಮಣ್ಣ, ಕೃಷ್ಣ ಆಲನಹಳ್ಳಿ, ಸಿದ್ಧಲಿಂಗಪಟ್ಟಣ ಶೆಟ್ಟಿ ಮುಂತಾದವರೆಲ್ಲ ಕೆಲಕಾಲ ಸಕ್ರಿಯರಾಗಿದ್ದರು.

ಕರ್ನಾಟಕದ ಉದ್ದಗಲಕ್ಕೂ ಇದು ನಡೆಸಿದ ಚರ್ಚೆ ಮತ್ತು ಸಂವಾದ ಮಹತ್ವಪೂರ್ಣವಾದದ್ದು. ಇದರಿಂದ ಎಂತೆಂಥ ಕೆಳವರ್ಗದ ಲೇಖಕರೆಲ್ಲ ಹುಟ್ಟಿಕೊಂಡರು. ಹಾಗೆಯೇ ಬಸವಲಿಂಗಪ್ಪನವರ ಕಾರಣಕ್ಕಾಗಿ ಹುಟ್ಟಿಕೊಂಡ ಬೂಸಾ ಚಳವಳಿ; ಒಂದು ಹೊಸ ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಯಾಮವನ್ನು ಪಡೆಯಿತು. ಇದರ ಬೆನ್ನಲ್ಲೇ ಪ್ರಕಟವಾದ ಡಾ. ಸಿದ್ಧಲಿಂಗಯ್ಯನವರ `ಹೊಲೆಮಾದಿಗ ಹಾಡು' ಕವನ ಸಂಕಲನದಿಂದ ಕರ್ನಾಟಕದ ಉದ್ದಗಲಕ್ಕೂ ಸ್ವಾಭಿಮಾನದಿಂದ ಯೋಚಿಸುವ ನೂರಾರು ಕಾರ್ಯಕರ್ತರು ಸೃಷ್ಟಿಯಾದರು. ಇದಂತೂ ಅತ್ಯಂತ ಮಾರ್ಮಿಕವಾದದ್ದು.

ಮುಂದೆ ದಲಿತ ಚಳವಳಿ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಗಳು ಹುಟ್ಟಿಕೊಳ್ಳಲು ಕಾರಣವಾಯಿತು. ದಲಿತ ಚಳವಳಿಯ ಕೊಡುಗೆಯೂ ಅಪಾರವಾದದ್ದು. ಪ್ರಾರಂಭದಲ್ಲಿ ಇದಕ್ಕೆ ದೇವನೂರ ಮಹಾದೇವ, ಸಿದ್ಧಲಿಂಗಯ್ಯ ಮತ್ತು ಡಿ, ಆರ್. ನಾಗರಾಜ್ ನೀಡಿದ ಮಾರ್ಗದರ್ಶನ ಅಮೂಲ್ಯವಾದದ್ದು. ಇಂದು ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲಿಯೂ ಒಂದು ಅಂಬೇಡ್ಕರ್ ಸಂಘವಿದೆ.  ಇದನ್ನೆಲ್ಲ ಸಾಹಿತ್ಯಕ ಸಂವೇದನೆಯ ಮೂಲಕವೇ ವಿಶ್ಲೇಷಿಸಿಕೊಳ್ಳ ಬೇಕಾಗುತ್ತದೆ. ಇದರ ಮುಂದುವರಿದ ಭಾಗವೆಂಬಂತೆ ರೈತ ಚಳವಳಿ ಹೊಸ ಆಯಾಮಗಳನ್ನೇ ಸೃಷ್ಟಿಸಿತು.

ರಾಜಕೀಯ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಒಟ್ಟಿಗೆ ಸೇರಿಸಿ ಕಸಿ ಮಾಡಿ, ಈ ಸಮಾಜಕ್ಕೆ ಕೊಡುವಲ್ಲಿ ಈ ಎಲ್ಲ ಚಳವಳಿಗಳು ಸಾರ್ಥಕ ಕೆಲಸವನ್ನು ಮಾಡಿವೆ. ಹಾಗೆಯೇ ಮಹಿಳಾ ಸಂಘಟನೆಗಳು. ಆ ಸಂಘಟನೆಗಳ ಮೂಲಕ ಹುಟ್ಟಿಕೊಂಡ ಸ್ತ್ರೀ ಸಂವೇದನೆಯ ಲೇಖಕಿಯರ ಕೊಡುಗೆಯನ್ನು ಇಲ್ಲಿ ವ್ಯಾಖ್ಯಾನಿಸಿಕೊಳ್ಳ ಬೇಕಾಗುತ್ತದೆ. ಹೊಸದಾಗಿ, ಸ್ವತಂತ್ರವಾಗಿ ಯೋಚಿಸುವ ಲೇಖಕಿಯರೆಲ್ಲ ಹುಟ್ಟಿಕೊಂಡರು. ತುಂಬ ನಿರ್ಭಿಡೆಯಿಂದ ಬರೆಯುವ ಮತ್ತು ಮಾತಾಡುವಂಥವರಿಗೆ ಇಲ್ಲೆಲ್ಲ ವೇದಿಕೆ ದೊರಕಿದಂತಾಯಿತು.

ಈ ನಾಲ್ಕು ದಶಕಗಳಲ್ಲಿ ನವನಿರ್ಮಾಣ ಕ್ರಾಂತಿಯಂಥದ್ದು ತುರ್ತು ಪರಿಸ್ಥಿತಿಯಂಥದ್ದು, ರಥಯಾತ್ರೆಯಂಥದ್ದು ಹಾಗೂ ಬಾಬರಿ ಮಸಿದಿಯಂಥದ್ದನ್ನು ಕೆಡವಿದ್ದು ಘಟಿಸಿ ಹೋಗಿದೆ. ಇದಕ್ಕೆಲ್ಲ ಲೇಖಕರು, ಲೇಖಕಿಯರು, ಕಲಾವಿದರು ಮತ್ತು ಸಾಮಾಜಿಕ ಕಾರ್ಯಕರ್ತರು ಸ್ಪಂದಿಸಿದ ಕ್ರಮವೇ ಅಪರೂಪದ್ದು. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ಅಸಹನೀಯವಾದದ್ದು ನಡೆದರೆ, ಇಲ್ಲಿಯವರು ಅದರ ವಿರುದ್ಧ ದನಿಯೆತ್ತಿದ್ದಾರೆ. ಇದೆಲ್ಲ ಒಂದು ಸಾಹಿತ್ಯ ಲೋಕದ ಶ್ರೀಮಂತಿಕೆಯ ಆಶಯಗಳೇ ಆಗಿರುತ್ತದೆ.
= ಶೂದ್ರ ಶ್ರೀನಿವಾಸ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT