ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಹೋಲಿಕೆಯೇ ನಮ್ಮಯಶಸ್ಸು

ಅಂತರ್ಯುದ್ಧ
Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

ಅಮೆರಿಕದ ಜಾನ್ ಮೆಕೆನ್ರೊ ಟೆನ್ನಿಸ್ ಚಾಂಪಿಯನ್. ಅವರು ನಿವೃತ್ತರಾಗುವಾಗ ಒಬ್ಬ ಪತ್ರಕರ್ತ ಅವರಿಗೆ ಒಂದು ಪ್ರಶ್ನೆ ಕೇಳಿದ.
`ಸರ್, ನೀವು ಮೂರು ಸಲ ವಿಂಬಲ್ಡನ್‌ನಲ್ಲಿ ಗೆದ್ದಿದ್ದೀರಿ, ನಾಲ್ಕು ಸಲ ಯು.ಎಸ್. ಓಪನ್ ಗೆದ್ದಿದ್ದೀರಿ. ಆದರೆ ಒಂದು ಸಲವೂ ಫ್ರೆಂಚ್ ಓಪನ್‌ನಲ್ಲಿ ಗೆಲ್ಲಲಿಲ್ಲ. ಈ ಬಗ್ಗೆ ನಿಮಗೆ ದುಃಖ ಇದೆಯೇ?'.

ಅದಕ್ಕೆ ಜಾನ್ ಮೆಕೆನ್ರೊ ಹೇಳಿದರು `20 ವರ್ಷಗಳ ಹಿಂದೆ ನಾನು ಟೆನ್ನಿಸ್ ಆಡಲು ಪ್ರಾರಂಭಿಸಿದಾಗ ಲಕ್ಷಾಂತರ ಜನ ಅದರ ಬಗ್ಗೆ ಕನಸು ಕಾಣುತ್ತಿದ್ದರು, ಸಾವಿರಾರು ಜನ ಟೆನ್ನಿಸ್‌ಗೆ ಸೇರಿದರು, ನೂರಾರು ಜನ ಸ್ಥಳೀಯ ಟೂರ್ನಮೆಂಟ್‌ಗಳಲ್ಲಿ ಆಡಿದರು, 8-10 ಜನ ಕ್ವಾರ್ಟರ್ ಫೈನಲ್ ತಲುಪಿದರು, 4 ಜನ ಸೆಮಿಫೈನಲ್ ಮುಟ್ಟಿದರು.

ಕೇವಲ ಇಬ್ಬರು ಫೈನಲ್‌ನಲ್ಲಿ ಆಡಿದರು ಮತ್ತು ನಾನು ಮಾತ್ರ ಅದರಲ್ಲಿ ಗೆಲುವು ಸಾಧಿಸಿದೆ. ನಾನು ಆಡಲು ಪ್ರಾರಂಭಿಸಿದಾಗ ಈ ಮಟ್ಟ ತಲುಪುತ್ತೇನೆಂದು ಖಂಡಿತಾ ಭಾವಿಸಿರಲಿಲ್ಲ. ನನ್ನ ದೇಶಕ್ಕಾಗಿ ಆಡಬೇಕು ಅಂದುಕೊಂಡಿದ್ದೆ ಅಷ್ಟೆ. ಆದರೆ ಈಗ ಚಾಂಪಿಯನ್ ಆಗಿದ್ದರಿಂದ ನನಗೆ ಬಹಳ ಸಂತೋಷವಾಗಿದೆ. ಫ್ರೆಂಚ್ ಓಪನ್ ಗೆಲ್ಲದೇ ಇರುವುದಕ್ಕೆ ಒಂದು ಸಲವೂ ನನಗೆ ಯಾವುದೇ ರೀತಿಯಲ್ಲಿ ವಿಷಾದವಿಲ್ಲ'.

* * *
ಕ್ರೇಜಿ ಮೋಹನ್ ಆಗಿನ್ನೂ ಪ್ರಸಿದ್ಧ ಬರಹಗಾರರಾಗಿರಲಿಲ್ಲ. ಸಣ್ಣ ಧಾರಾವಾಹಿಗಳಿಗೆ ಕಥೆಗಳನ್ನು ಬರೆಯುತ್ತಿದ್ದರು. ಒಮ್ಮೆ ಒಬ್ಬ ನಿರ್ದೇಶಕರು ಮೋಹನ್ ಅವರನ್ನು ಕಂಡು `ಒಂದು ದೊಡ್ಡ ಧಾರಾವಾಹಿಗೆ ಕಥೆ ಬರೆದರೆ ಒಂದು ಕೋಟಿ ರೂಪಾಯಿ ಕೊಡುತ್ತೇನೆ.

ಇದೋ 50 ಲಕ್ಷ ರೂಪಾಯಿಯ ಚೆಕ್‌ಅಡ್ವಾನ್ಸ್ ಆಗಿ ಕೊಡುತ್ತೇನೆ' ಎಂದರು. ಮೋಹನ್ ಅವರಿಗೆ ತುಂಬಾ ಸಂತೋಷವಾಯಿತು. ಚೆಕ್‌ನ್ನು ತಂದೆಗೆ ತೋರಿಸಿ ಕೇಳಿದರು `ಅಪ್ಪಾಜಿ, ನನ್ನ ಕನಸು ನನಸಾಗಿದೆ. ಚಿಕ್ಕ ಸೀರಿಯಲ್‌ಗಳಿಗೆ ಬರೆಯುತ್ತಿದ್ದ ನನಗೆ ದೊಡ್ಡ ಸೀರಿಯಲ್‌ಗೆ ಬರೆಯುವ ಅವಕಾಶ ಸಿಕ್ಕಿದೆ. 50 ಲಕ್ಷ ರೂಪಾಯಿಯ ಅಡ್ವಾನ್ಸ್ ಚೆಕ್ ಸಹ ಸಿಕ್ಕಿದೆ. ಈಗ ನಾನು ನನಗೆ ಇಷ್ಟವಾದ ಹೋಂಡಾ ಸಿಟಿ ಕಾರು ತೆಗೆದುಕೊಳ್ಳಲಾ?'

ತಂದೆ ಕೇಳಿದರು `ಈಗ ನಿನ್ನ ಬಳಿ ಯಾವ ಕಾರಿದೆ?'. ಮೋಹನ್ `ಸ್ಯಾಂಟ್ರೊ' ಎಂದರು. ತಂದೆ `ಅದಕ್ಕೆ ಎಷ್ಟು ಚಕ್ರಗಳಿವೆ?' ಎಂದರು. ಮಗ- `ನಾಲ್ಕು'. ತಂದೆ- `ಅದರಲ್ಲಿ ಎಷ್ಟು ಜನ ಕುಳಿತು ಕೊಳ್ಳಬಹುದು?' ಮಗ- `ಐದು ಜನ'. ತಂದೆ- `ಹಾಗಾದರೆ ಹೊಸಾ ಹೋಂಡಾ ಸಿಟಿ ಯಾಕೆ ಬೇಕು?' ಮಗ- `ಹಾಗಾದರೆ, ಈ ಚೆಕ್‌ನ್ನು ಏನು ಮಾಡಲಿ?' ತಂದೆ- `ಟೇಬಲ್ ಮೇಲಿಡು'.

ಕ್ರೇಜಿ ಮೋಹನ್‌ಗೆ ಅರ್ಥವಾಗಲಿಲ್ಲ. ಚೆಕ್‌ನ್ನು ಟೇಬಲ್ ಮೇಲಿಟ್ಟರು. ಮೂರು ದಿನ ಅದು ಅಲ್ಲೇ ಇತ್ತು. ನಾಲ್ಕನೇ ದಿನ ತಂದೆ ಮಗನಿಗೆ ಹೇಳಿದರು `ಈ ಚೆಕ್ ತೆಗೆದುಕೊಂಡು ಹೋಗಿ ನಿನಗೆ ಇಷ್ಟವಾದ ಹೋಂಡಾ ಸಿಟಿ ಕಾರನ್ನು ತೆಗೆದುಕೋ'. ಮೋಹನ್‌ರಿಗೆ ಗೊಂದಲ ಉಂಟಾಯಿತು. ಅವರು ತಂದೆಯನ್ನು ಕೇಳಿದರು `ಮೂರು ದಿನಗಳಿಂದ ಚೆಕ್ ಇಲ್ಲೇ ಇದೆ. ಈಗೇಕೆ ಕಾರು ಕೊಳ್ಳಲು ಹೇಳುತ್ತಿದ್ದೀರಿ? ಅದೇಕೆ ಈ ನಾಟಕ?'.

ತಂದೆ ಹೇಳಿದರು `ಈ ಹಣ ಬರುವ ಮೊದಲು ಸಂತೃಪ್ತಿ ಇತ್ತು. ಈಗಲೂ ಸಂತೃಪ್ತಿ ಇರಬೇಕು. ಹಣ ಬಂದಿದ್ದರಿಂದ ಸಂತೋಷ ಜಾಸ್ತಿಯಾದರೆ ಮತ್ತು ಹಣ ಬರದಿದ್ದಾಗ ಕಡಿಮೆಯಾದರೆ ನಾವು ಯಾವತ್ತೂ ಸಂತೋಷವಾಗಿರಲು ಸಾಧ್ಯವಿಲ್ಲ. ಮೂರು ದಿನಗಳಿಂದ ಚೆಕ್ ಇದ್ದರೂ ಮನಸ್ಸು ಯಾವುದೇ ರೀತಿ ಚಂಚಲವಾಗದೆ ಮೊದಲಿನಂತೆಯೇ ಪ್ರೀತಿ ಇದೆಯೋ ಅಥವಾ ಕಡಿಮೆಯಾಗಿದೆಯೋ ಎಂದು ಪರೀಕ್ಷಿಸುತ್ತಿದ್ದೆ. ಈಗ ನೀನು ಹೋಂಡಾ ಸಿಟಿ ಕೊಳ್ಳಬಹುದು. ಆದರೆ ಮೊದಲು ನಿನ್ನ ಹಳೆಯ ಸ್ಕೂಟರ್ ತೆಗೆದುಕೊಂಡು ಹೋಗಿ, ಹಳೆಯ ಸ್ನೇಹಿತರೊಡನೆ ಬೋಂಡಾ ತಿನ್ನುತ್ತಿದ್ದ ಜಾಗಕ್ಕೆ ಹೋಗು. ಅಲ್ಲಿ ಬೋಂಡಾ ತಿಂದು ಕಾಫಿ ಕುಡಿದು ಬಾ. ನಂತರ ಕಾರು ಕೊಂಡುಕೋ'.

ಮೋಹನ್‌ರಿಗೆ ತಲೆ ಕೆಟ್ಟಿತು. ಆದರೆ ಅವರು ತಮ್ಮ ಅಪ್ಪಾಜಿಯನ್ನು ಎಂದೂ ಪ್ರಶ್ನಿಸುತ್ತಿರಲಿಲ್ಲ. ಅವರು ಹೇಳಿದ್ದನ್ನು ಅಕ್ಷರಶಃ ಪಾಲಿಸುತ್ತಿದ್ದರಷ್ಟೆ. ಅದರಂತೆ ಸ್ನೇಹಿತರ ಜೊತೆ ಹೋಗಿ ಬೋಂಡಾ ತಿಂದು ಬಂದರು. ಮತ್ತೆ `ಅಪ್ಪಾಜಿ ಇದೆಲ್ಲ ನಾಟಕ ಯಾಕಾಗಿ' ಎಂದು ಬೇಸರದಿಂದಲೇ ಕೇಳಿದರು. ತಂದೆ ಹೇಳಿದರು `ಇನ್ನು ಮೇಲೆ ನೀನು ಲಕ್ಷ- ಕೋಟಿ ಸಂಪಾದಿಸುತ್ತೀ. ಆದರೆ ಅದನ್ನು ಎಲ್ಲಿಂದ ಶುರು ಮಾಡಿದೆಯೋ ಆ ಜಾಗವನ್ನು ಎಂದೆಂದಿಗೂ ನೆನಪಿಟ್ಟುಕೋ. ಈ ವಿಷಯವನ್ನು ನಿನಗೆ ಮನದಟ್ಟು ಮಾಡಿಸಲು ಇಷ್ಟೆಲ್ಲ' ಎಂದರು.
* * *

ನಮ್ಮಲ್ಲಿ ಕೆಲವರು ಐದು, ಹತ್ತು ವರ್ಷಗಳ ಹಿಂದೆ, ಇನ್ನು ಕೆಲವರು 50 ವರ್ಷಗಳ ಹಿಂದೆ ನಡೆದುಕೊಂಡು ಓಡಾಡುತ್ತಿದ್ದೆವು. ಸ್ವಲ್ಪ ದಿನಗಳ ನಂತರ ಸೈಕಲ್ ಕೊಂಡೆವು. ಮತ್ತೆ ಕೆಲವು ದಿನಗಳ ನಂತರ ಸಾಲ ಮಾಡಿ ಸ್ಕೂಟರ್ ಕೊಂಡೆವು. ವೆಸ್ಪಾ, ಲ್ಯಾಂಬ್ರೆಟ್ಟಾ, ಹೆಚ್ಚು ಜನ ಬಜಾಜ್ ಚೇತಕ್. ಆ ಮೇಲೆ ಬರಬರುತ್ತಾ ಕಾರಿನಲ್ಲಿ ಓಡಾಡಲು ಪ್ರಾರಂಭಿಸಿದೆವು.

ನಮ್ಮಲ್ಲಿ ಇನ್ನು ಕೆಲವರದು ಹತ್ತಿಪ್ಪತ್ತು ವರ್ಷಗಳ ಹಿಂದೆ ಹಳ್ಳಿಯಲ್ಲಿ ವಾಸ. ನಂತರ ಬೆಂಗಳೂರಿಗೆ ಬಂದೆವು. ಇಲ್ಲಿ ಬಂದಾಗ ಯಾರ ಆಸರೆಯೂ ಇಲ್ಲದೆ ಫುಟ್‌ಪಾತ್ ಮೇಲೆ ಮಲಗಿ ಕಾಲ ಕಳೆದವರೂ ಬಹಳಷ್ಟು ಮಂದಿ ಇದ್ದಾರೆ. ಬಳಿಕ ಮೂರ‌್ನಾಲ್ಕು ಸ್ನೇಹಿತರೊಂದಿಗೆ ಸೇರಿ ಚಿಕ್ಕ ಬಾಡಿಗೆ ಮನೆಯಲ್ಲಿ ವಾಸ. ಕ್ರಮೇಣ ಬೇರೆ ಮನೆ, ಮದುವೆ, ನಂತರ ಸ್ವಂತ ಮನೆ ಕಟ್ಟಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಈ ಎಲ್ಲ ಸಂದರ್ಭಗಳಲ್ಲೂ ನಾವು ಸಂತೋಷವಾಗಿ ಇದ್ದದ್ದೇ ಆದರೆ ಅದೇ ಸಂತೃಪ್ತಿ.

ಬದುಕಿನಲ್ಲಿ ಎಷ್ಟೆಲ್ಲ ಬೆಳೆದರೂ ಸುಖದ ಕನಸು ಕಾಣುತ್ತಾ ಮಲಗಿರುತ್ತಿದ್ದ ಆ ಫುಟ್‌ಪಾತ್ ವಾಸವನ್ನು ಎಂದಿಗೂ ಮರೆಯಬಾರದು. ಅಲ್ಲೇ ಸಂತೃಪ್ತಿ ಇರುವುದು. ಜೀವನದಲ್ಲಿ ಸಂತೃಪ್ತಿಯಿಂದ ಇದ್ದು, ಯಾವುದೇ ಕೆಲಸವನ್ನು ಸಂತೋಷದಿಂದ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಯಶಸ್ಸು ಕಾಣಬೇಕು ಎಂದರೆ ಬೇರೆಯವರಿಗೆ ಹೋಲಿಸಿಕೊಳ್ಳುತ್ತಾ ನಾವು ಬೆಳೆಯುವುದಲ್ಲ. 5-10 ವರ್ಷಗಳ ಹಿಂದೆ ನಾವು ಇದ್ದುದಕ್ಕಿಂತ ಈಗ ಇರುವುದಕ್ಕೆ ಹೋಲಿಸಿಕೊಂಡಾಗ ನಾವು ಬೆಳೆದಿರುವುದೇ ನಿಜವಾದ ನಮ್ಮ ಯಶಸ್ಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT