ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮಳಗನ್ನು ಮಾತನಾಡಿಸುವ ಕವಿತೆ

Last Updated 6 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ರೂಪ ಹಾಸನರ `ಕಡಲಿಗೆಷ್ಟೊಂದು ಬಾಗಿಲು~ ಕವನ ಸಂಕಲನದಲ್ಲಿ `ರೂಪರೂಪಗಳನು ದಾಟಿ~ ಎಂಬ ಕವಿತೆ ಅಯಾಚಿತವಾಗಿ ನಮ್ಮ ಗಮನ ಸೆಳೆಯುತ್ತದೆ. ಮನೆಯೊಳಗಿನ ಪರಿಕರ ಮತ್ತು ದೈನಿಕದ ಸಣ್ಣ ಪುಟ್ಟ ಸರಳ ಸಂಗತಿಗಳನ್ನೇ ಕಾವ್ಯರೂಪಕವಾಗಿಸುವ ಪ್ರಯತ್ನ ಇಲ್ಲಿಯ ಅನೇಕ ಕವಿತೆಗಳಲ್ಲಿ ನಡೆದಿದೆ. ತನ್ನದೇ ಎನಿಸಿಬಿಡುವ ಇಂತಹ ವಸ್ತುಗಳಿಗೆ ಓದುಗನೂ ತನ್ಮಯತೆಯಿಂದ ಸ್ಪಂದಿಸುವ ಅವಕಾಶ ಇದರ ಪ್ರಯೋಜನಗಳಲ್ಲೊಂದು. ಪ್ರಸ್ತುತ `ರೂಪರೂಪಗಳನು ದಾಟಿ~ ಕವಿತೆಯು ಭತ್ತ ಮತ್ತು ಅಕ್ಕಿಗಳನ್ನು ತನ್ನ ಕೇಂದ್ರವಾಗಿರಿಸಿಕೊಂಡಿದೆ. ಭತ್ತ ಮತ್ತು ಅಕ್ಕಿಗಳು ಒಂದೆನಿಸಿಯೂ ಬೇರೆಯಾಗಿರುವ, ಬೇರೆಯೆನಿಸಿಯೂ ಒಂದಾಗಿರಬಹುದಾದ ಅಸ್ತಿತ್ವ ವಿಶೇಷವನ್ನು ಕವಯತ್ರಿ ಇಲ್ಲಿ ಸರಳ ಜಿಜ್ಞಾಸೆಗೆ ಒಳಪಡಿಸಿದ್ದಾರೆ. ತಿಳಿವು, ಅರಿವು ಮತ್ತು ಸಂಧಾನ ಎಂದು ಮೂರು ಭಾಗಗಳನ್ನಾಗಿಸಿ ತರ್ಕ, ತತ್ವ, ವಿವೇಕಗಳನ್ನು ಕವಿತೆಯಾಗಿಸಿದ್ದಾರೆ. ನಾವು ಭತ್ತ ಎಂದು ಕರೆಯುವಾಗ ಅದರೊಳಗಿನ ಅಕ್ಕಿಯೂ ಪರೋಕ್ಷವಾಗಿ ನಿರ್ದೇಶಿತವಾಗಿರುತ್ತದೆ. ಅಕ್ಕಿಯು ಹೊಟ್ಟಿನ ಪದರವನ್ನು ಹೊದ್ದಾಗ ಅದು ಭತ್ತವೆನಿಸುತ್ತದೆ. ಒಂದನ್ನೊಂದು ಬಿಟ್ಟಿರಲಾಗದ ಸೃಷ್ಟಿಯ ಉಪಕ್ರಮದಲ್ಲಿ ಭತ್ತ ಮೂಲರೂಪವಾಗಿಯೂ ಅಕ್ಕಿ ರೂಪಕವಾಗಿಯೂ ಕವಯತ್ರಿಗೆ ಕಾಣುತ್ತದೆ. ಭತ್ತ ಎಂಬ ಹೊಟ್ಟಿನ ಪದರ ಕಳಚುವವರೆಗಿನ ಅವುಗಳ ನಡುವಿನ ಸಂಬಂಧ ಯಾವುದು? ಏಕವೇ, ಅನೇಕವೇ, ಆತ್ಮರೂಪವೇ, ದೈವರೂಪವೇ? ಅದು ಒಂದು ಜೀವದ ಎರಡು ಭಾವಗಳಿರಬಹುದೇ?  ಹಾಗಾದರೆ ಏಕತೆ ಅನೇಕತೆಗಳೂ ಕೇವಲ ಭಾವಗಳೇ? ಹೀಗೆ ಹಲವು ಪ್ರಶ್ನೆಗಳಿಗೆ ಇದು ಎಡೆಮಾಡಿಕೊಡುತ್ತದೆ.

ಭತ್ತವನ್ನು ಬಿತ್ತಿ ಅದರಿಂದ ಮತ್ತೆ ಬೆಳೆದುಕೊಳ್ಳಬಹುದು. ಆದರೆ ಅಕ್ಕಿಯನ್ನು ಬಿತ್ತಿ ಮತ್ತೆ ಬೆಳೆಯಲಾರೆವು. ಅಂತೆಯೇ ಬೀಜರೂಪಿಯಾದ ಭತ್ತವನ್ನು ಅದರೊಳಗಿನ ಅಕ್ಕಿಯಿಂದ ಬೇರ್ಪಡಿಸಿ ಬರಿಯೇ ಬಿತ್ತಲಾರೆವು. ಅಂದರೆ ಸೃಷ್ಟಿ ಕ್ರಿಯೆಯಲ್ಲಿ ಅಕ್ಕಿಯ ಪಾತ್ರವೂ ಇದೆ, ಆದರೆ ಅದು ಅಂತರತಮ ಪಾತ್ರ. ಬಿತ್ತಿದ ಭತ್ತ ತನ್ನನ್ನು ಸೀಳಿ ಭೂಮಿಯ ಒಡಲನ್ನೂ ಸೀಳಿ ಪೈರಾಗುವಲ್ಲಿ ಅದರ ಮಹತ್ತು ಇರುವಂತೆ ಅಲ್ಲಿ ಒಡ್ಡಿಕೊಳ್ಳುವ ಮತ್ತು ಇಲ್ಲವಾಗುವ ಆಪತ್ತೂ ಇದೆ. ಹಾಗೆ ಅಕ್ಕಿಯನ್ನು ಧಾನ್ಯವೆಂದು ಉಪಯೋಗಿಸುವಾಗ ಅದು ತಾನೇ ಬೆಂದು ಭವದ ಹಸಿವು ನೀಗಿಸುವ ತನ್ಮೂಲಕ ತಾನೇ ನೀಗಿಕೊಳ್ಳುವ ಮಹತ್ತು ಮತ್ತು ವಿಪತ್ತುಗಳಿವೆ. ಈ ರೂಪಾಂತರ ದ್ವಂದ್ವದಲ್ಲಿ `ಗುರುತಿಸಿಕೊಳ್ಳುವುದು~ ಏನನ್ನು? ಎಂಬ ಪ್ರಶ್ನೆ ರೂಪಾ ಅವರಿಗೆ ಕಾಡಿದೆ. `ಭತ್ತ ಭತ್ತವಾಗಿಯೂ ಅಕ್ಕಿ: ಅಕ್ಕಿ ಅಕ್ಕಿಯಾಗಿಯೂ ಭತ್ತ~ವಾಗಿದ್ದು, ಇದೆಲ್ಲವನ್ನೂ ಮೀರಿ ಅನೂಹ್ಯ ರೂಪಾತೀತ ಸಾಧ್ಯತೆಗಳಿರಬಹುದೇ ಮತ್ತು ಇದು ಬ್ರಹ್ಮಾಂಡವನ್ನೂ ದಾಟಬಹುದೇ ಎಂಬ ಸುಳಿವಿನ ಅಚ್ಚರಿಯಲ್ಲಿ ಕವಿತೆಯನ್ನು ಮುಗಿಸಿದ್ದಾರೆ. ಸ್ವಲ್ಪ ಆತುರದ ನಿಲುಗಡೆಯಂತೆ ಇದು ಕಾಣುತ್ತದೆ. ಅವರು ನೀಡಿದ ಅನೂಹ್ಯ ಎಂಬ ಭತ್ತದ ಪದರದೊಳಗೆ ಊಹಿಸಬಹುದಾದ ಅಕ್ಕಿಯ ಹಲವು ರೂಪಕಗಳಿವೆ.

ಲೌಕಿಕದ ನೆಲೆಯಲ್ಲಿ ಗಂಡು-ಹೆಣ್ಣುಗಳ ಸಂಸಾರ ಗೃಹೀತದ ಹಾಗೆ ಇದು ಸಂವಾದ ನಡೆಸುತ್ತದೆ. `ಇದು ಸೃಷ್ಟಿಯ ಹಿಕ್ಮತ್ತು~ ಎಂದು ಬರೆಯುವಲ್ಲಿ ಕವಯತ್ರಿ ಸಾಂಸಾರಿಕ ಅಸಮತೋಲದ ಗ್ರಹಿಕೆಯಲ್ಲಿರುವಂತೆ ಕಾಣುತ್ತದೆ. ಆದರೆ ಇಲ್ಲಿ ಅಸಮತೋಲದ ಪ್ರಶ್ನೆಗಿಂತಲೂ ದಾಂಪತ್ಯದ ಅವಿನಾಭಾವವೇ ಸೂಚಿತವಾಗುತ್ತಿದೆ. ಸಂಸಾರ ತತ್ತ್ವದಲ್ಲಿ ಗಂಡಾಗಲೀ ಹೆಣ್ಣಾಗಲೀ ಪೂರ್ಣರೂ ಅಲ್ಲ ಅಪೂರ್ಣರೂ ಅಲ್ಲ. ಅಥವಾ ಎರಡೂ ಹೌದು. ಅವರು ಕಾಯ್ದುಕೊಳ್ಳಬೇಕಾದ ಪಾರಸ್ಪರಿಕ ದೂರ ಮತ್ತು ಮೀರಬೇಕಾದ ಸನಿಹದ ಹೊಸ್ತಿಲನ್ನೂ ಈ ಕವಿತೆಯು ಆದೇಶಿಸುತ್ತದೆ. 

ಮತ್ತೂ ಮುಂದುವರಿದು ಹೋಗುವುದಾದಲ್ಲಿ ಈ ಭತ್ತ, ಅಕ್ಕಿಗಳು ಜೀವಾತ್ಮ ಮತ್ತು ಪರಮಾತ್ಮದ ಸೂಚಕಗಳಾಗಿಬಿಡುತ್ತವೆ. `ಭತ್ತ ಭತ್ತವಾಗಿಯೂ ಅಕ್ಕಿ, ಅಕ್ಕಿ ಅಕ್ಕಿಯಾಗಿಯೂ ಭತ್ತ~ ಎನ್ನುವಲ್ಲಿ ಕವಯತ್ರಿ ಇದನ್ನು ತಲುಪಿದಂತೆ ಕಾಣುತ್ತದೆ. ಹೀಗೆ ರೂಪ ರೂಪಗಳನ್ನು ದಾಟುವ ಕ್ರಿಯೆಯಲ್ಲಿ ದ್ವೈತವಾಗಲಿ, ಅದ್ವೈತವಾಗಲಿ ಸಮೈಕ್ಯವಾಗುವ, ಸಮೈಕ್ಯವಾಗುತ್ತಲೇ ತಮ್ಮ ವಿಶಿಷ್ಟತೆ ಮೆರೆಯುವ ಸನ್ನಿವೇಶ ಪ್ರಾಪ್ತವಾಗುತ್ತದೆ. ಈ ಹಾದಿಯಲ್ಲಿ ದೇಶ-ರಾಜ್ಯ, ಕಾಲ-ದೇಶಗಳ ನಡಿಗೆಯೂ ಸಾಧಿತವಾಗುತ್ತದೆ.

ಕವಿತೆಯೊಂದು ನಮ್ಮಳಗೆ ಹೀಗೆ ವಿಸ್ತಾರಗೊಳ್ಳುವುದು, ಆಲೋಚನೆಯ ತಡಿಕೆಗಳನ್ನು ನಿರ್ಮಿಸುವುದು ಒಂದು ಅಪೇಕ್ಷಿತ ಲಕ್ಷಣ. ಆದರೆ ಯಾವುದೇ ಕವಿತೆ ಹೀಗೆಯೇ ಇರಬೇಕಿಲ್ಲ. ಇದೂ ಒಂದು ರೂಪವಷ್ಟೇ. ಇದು ಕವಿತೆಯ ಶ್ರೇಷ್ಠತೆಯ ಮಾಪಕವೂ ಅಲ್ಲ. ಓದುಗ ಮತ್ತು ಕವಿತೆಯ ನಡುವೆ ಭಾವಾತ್ಮಕ ಇಲ್ಲವೇ ಚಿಂತನಾತ್ಮಕ ಸಾಹಚರ್ಯ ಸ್ಥಾಪಿತವಾಗುವುದು ಬಹು ಮುಖ್ಯ. ಅದು ಇಲ್ಲಿ ಸಾಧ್ಯವಾಗಿದೆ. ಆದರೆ ಬ್ರಹ್ಮಾಂಡ ಸಾಧ್ಯತೆಯ ಸೂಚನೆ ಕೊಡುವ ಈ ಕವಿತೆ ತಾನು ಮಾತ್ರ ಆ ಜವಾಬ್ದಾರಿಯಿಂದ ನಿರ್ಗಮಿಸುತ್ತದೆ. ಸಾಧ್ಯತೆಗಳನ್ನು ತೋರುವಲ್ಲಿನ ಆಸಕ್ತಿಗೆ ಪೂರಕವಾದ ಧಾರಣ ಶಕ್ತಿಯೂ ಕವಿತೆಯಲ್ಲಿರಬಹುದಿತ್ತು. ಇಷ್ಟಾಗಿಯೂ ನಮ್ಮಳಗೆ ಮಾತನಾಡಿಸುವ ಗುಣವಿರುವ ಈ ಕವಿತೆ ಓದಿನ ಪ್ರೀತಿ ಹುಟ್ಟಿಸುವಂತಹುದು. ಕವಿತೆಯ ಬುದ್ಧಿ, ಭಾವಗಳ ಕುರಿತು ಪಕ್ಷವಹಿಸಿ ಮಾತನಾಡುವಾಗ ಇಲ್ಲಿಯ ಭತ್ತ ಮತ್ತು ಅಕ್ಕಿಗಳೇ ನಮಗೊಂದು ರೂಪಕವಾಗಬಹುದು.

------------------------------------------------------------------------------

ರೂಪರೂಪಗಳನು ದಾಟಿ

ರೂಪ ಹಾಸನ


ತಿಳಿವು

ತಂದೆ ನಿನ್ನೊಳಗಾವ ಭೇದವೂ ಇಲ್ಲ
ಭತ್ತ ಅಕ್ಕಿಗಳೆರಡೂ ಏಕಜೀವ
ಅದಿಲ್ಲದೇ ಇದಿಲ್ಲ ಇದಿಲ್ಲದೇ ಅದಿಲ್ಲ
ಒಂದೇ ಜೀವ ಎರಡು ಭಾವ
ಮೂಲರೂಪ ಭತ್ತ
ಅದರೊಳಗಣ ರೂಪಕ ಅಕ್ಕಿ.

ಹೊಟ್ಟಿನ ಪದರ ಮೂಡೇ ಭತ್ತ
ಹೊಟ್ಟು ಕಳಚಿದೊಡೆ ಅಕ್ಕಿ
ನಡುವೆ ಸುಳಿವಾತ್ಮ
ಭತ್ತವೂ ಅಲ್ಲ ಅಕ್ಕಿಯೂ ಅಲ್ಲ
ಎರಡರೊಳಗೂ ಏಕತ್ವಗೊಂಡ
ಏಕೈಕ ರೂಪ ತಾನೇ ಎಲ್ಲಾ!

ಅರಿವು

ತಂದೆ ಭತ್ತ ಒಂದು ಬೀಜ
ಅಕ್ಕಿಯೊಂದು ಧಾನ್ಯ
ಭೂಮಿಯೊಡಲು ಸೀಳಿ ಬಿತ್ತಿಕೊಳ್ಳಬಲ್ಲುದೇ?
ಭತ್ತದ ಕಿಮ್ಮತ್ತು! ಆಪತ್ತೂ?
ಬೆಂದು ಹಸಿವು ನೀಗಬಲ್ಲುದೇ
ಅಕ್ಕಿಯ ತಾಕತ್ತು! ವಿಪತ್ತು?

ಭತ್ತ ಭತ್ತವೇ ಅಕ್ಕಿ ಅಕ್ಕಿಯೇ
ಇದು ನಡುವೆ ಸುಳಿವಾತ್ಮದ ಪ್ರಶ್ನೆಯಲ್ಲ ತಂದೆ
ಒಂದೇ ಜೀವ ಎರಡು ಭಾವದ ಪ್ರಶ್ನೆ
ಅದರಾಚೆಗೂ ಮಿಡಿದ ದ್ವಂದ್ವದಚ್ಚರಿಯ ಪ್ರಶ್ನೆ.

ಭತ್ತದೊಳಗಣ ಅಕ್ಕಿಯನಿವಾರ್ಯತೆ
ಸೃಷ್ಟಿಯ ಹಿಕ್ಮತ್ತು
ಭತ್ತವೇ ಅಕ್ಕಿಯ ಮರುಸೃಷ್ಟಿಗನಿವಾರ್ಯ
ಪ್ರಕೃತಿಯ ಗೈರತ್ತು.

ಸಂಧಾನ

ಭತ್ತ ಭತ್ತವಾಗಿಯೂ ಅಕ್ಕಿ
ಅಕ್ಕಿ ಅಕ್ಕಿಯಾಗಿಯೂ ಭತ್ತ
ಎಲ್ಲ ಎಲ್ಲವ ಮೀರಿ ಅನೂಹ್ಯ
ರೂಪಾತೀತ ಸಾಧ್ಯತೆಗಳೊಳಗೆ ಅಕ್ಕಿ ಭತ್ತ
ಇದು ಇಷ್ಟೇ ಅಲ್ಲ ಹೀಗೇ ಅಲ್ಲ
ಬ್ರಹ್ಮಾಂಡ ಪರಿಧಿ ದಾಟಿ ಅಲ್ಲೋಲ ಕಲ್ಲೋಲ.

ನನ್ನೀ ಅರಿವಿನಾ ಜಿಜ್ಞಾಸೆ
ನೀ ಕ್ಷಮಿಸು ತಂದೆ
ನಿನ್ನೀ ತಿಳಿವಿನ ಸೃಷ್ಟಿಯಾಟ
ನಾ ಮನ್ನಿಸುವೆನಿಂದೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT