ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಹಂತಕ ಸಲಗ ಮೌನಕ್ಕೆ ಶರಣು!

Last Updated 2 ಡಿಸೆಂಬರ್ 2013, 8:54 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಸಕಲೇಶಪುರದ ಶಿವಳ್ಳಿಕೂಡಿಗೆ ಸಂಪತ್‌ ಕಾಡಿನಲ್ಲಿ ನಾಲ್ಕು ದಿನಗಳ ಹಿಂದೆ ಸೆರೆಹಿಡಿದ ಪುಂಡಾನೆ ಇದೀಗ ದಕ್ಷಿಣಕೊಡಗಿನ ಮತ್ತಿಗೋಡು ಸಾಕಾನೆ ಶಿಬಿರದ ದೊಡ್ಡಿಯಲ್ಲಿ ಮೌನವಾಗಿ ನಿಂತಿದೆ. ರಂಗದ ಮೇಲೆ ಸಾಕಷ್ಟು ಆರ್ಭಟ ಪ್ರದರ್ಶಿಸಿದ ಕಲಾವಿದ ದನಿವಾರಿಸಿಕೊಳ್ಳಲು ತಣ್ಣಗೆ ಕುಳಿತ ಹಾಗೆ ವರ್ತಿಸುತ್ತಿದೆ ಈ ಸಲಗ.

ಕಾಫಿ ತೋಟದೊಳಗೆ ನುಗ್ಗಿ ದಾಂಧಲೆ ಎಬ್ಬೆಸಿ ಇಬ್ಬರನ್ನು ಬಲಿತೆಗೆದುಕೊಂಡಿರುವ ಈ ಸಲಗ; ಮರದ ದೊಡ್ಡಿಯ ಒಳಗೆ ಕೇವಲ 20 ಅಡಿ ಸುತ್ತಳತೆಯ ಜಾಗದಲ್ಲಿ ಬಂಧಿಯಾಗಿದೆ. ತನಗೆ ಇಷ್ಟ ಬಂದ ತೆಂಗು, ಬಾಳೆ, ಹಲಸು ಮತ್ತಿತರ ಆಹಾರಗಳನ್ನು ತಿಂದು ಕೊಬ್ಬಿ ಬೆಳೆದಿದ್ದ ಆನೆ; ಇದೀಗ ಮಾವುತರು ಕೊಡುವ ಒಣಗಿದ ಭತ್ತದ ಹುಲ್ಲು ಬೇಯಿಸಿದ ಹುರುಳಿ, ಆಲ, ಬಸುರಿ ಸೊಪ್ಪು ತಿನ್ನುತ್ತ ಕಾಲ ಕಳೆಯುತ್ತಿದೆ. 

ತನ್ನತ್ತ ಬರುವ ಜನರನ್ನು ದುರುಗುಟ್ಟಿ ನೋಡುವುದಷ್ಟೇ ಅದರ ಕೆಲಸವಾಗಿದೆ. ಇದನ್ನು ಪಳಗಿಸುವ ಕಾರ್ಯದಲ್ಲಿ ಮಾವುತ ಸಣ್ಣ, ಕಾವಾಡಿ ಸತೀಶ್‌ ನಿರತರಾಗಿದ್ದಾರೆ.

ಬಿಡುಗಡೆಗೆ ಹೋರಾಟ: ದೊಡ್ಡಿಯೊಳಗೆ ಕೂಡಿಹಾಕಿದ ಮೊದಲ ಮೂರು ದಿನಗಳ ಕಾಲ ಪುಂಡಾನೆ ಹೊರ ಬರಲು ತೀವ್ರ ಚಡಪಡಿಸಿತು. ಸುತ್ತಲೂ ನಿರ್ಮಿಸಿರುವ ತೇಗದ ಬೃಹತ್‌ ಮರದ ದಿಮ್ಮಿಗಳನ್ನು ಹತ್ತಿ ಹೊರ ಬರಲು ಯತ್ನಿಸಿತು. ಆದರೆ, ಪ್ರಯತ್ನ ವ್ಯರ್ಥವಾದಾಗ ಮತ್ತೆ ಮೌನವಾಗಿದೆ. ಬಳಿಕ ಮರದ ದಿಮ್ಮಿಯ ಸಿಪ್ಪೆ ಎಳೆದುಕೊಂಡು ತಿಂದು ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಮುಂದಾಗಿದೆ.

‘ಆರಂಭದಲ್ಲಿ ಹತ್ತಿರ ಹೋದರೆ ಹೂಂಕರಿಸುತ್ತಿತ್ತು, ಇದೀಗ ದಿನಗಳೆದಂತೆ ನಿಧಾನವಾಗಿ ಸ್ಪಂದಿಸತೊಡಗಿದೆ. ಮೊದಲಿನ ಆಕ್ರೋಶ ಕಡಿಮೆಯಾಗಿದೆ.  ನರಹಂತಕ ಸಲಗನನ್ನು ಸೆರೆಹಿಡಿದ ಸುದ್ದಿಯನ್ನು ಪತ್ರಿಕೆಯ ಮೂಲಕ  ತಿಳಿದುಕೊಂಡಿರುವ ಪ್ರವಾಸಿಗರು, ಇದನ್ನು ನೋಡಲು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಇವರೆಲ್ಲರ ವೀಕ್ಷಣೆಯಿಂದಲೂ ಸಲಗಕ್ಕೆ ಮನುಷ್ಯರ ಸಹವಾಸ ಸಿಕ್ಕಿದಂತಾಗಿದೆ. ಇದು ಸಂಪೂರ್ಣವಾಗಿ ಪಳಗಲು ಕನಿಷ್ಠ ಆರು ತಿಂಗಳಾದರೂ ಬೇಕಾಗಬಹುದು’ ಎಂಬ ಅಭಿಪ್ರಾಯ ಸಣ್ಣಪ್ಪ ಮತ್ತು ಸತೀಶ್‌ ಅವರದ್ದು.

ಅರಮನೆಯ ಸಲಗ: ಇದರ ಪಕ್ಕದಲ್ಲಿಯೇ ಮತ್ತೊಂದು ದೊಡ್ಡಿಯಲ್ಲಿ ಮೈಸೂರು ಅರಮನೆಯ  ಸಲಗವೊಂದು ಬಂಧಿಯಾಗಿದೆ. ದಸರಾ ಉತ್ಸವಕ್ಕೂ ಮುನ್ನ ಆಕ್ರೋಶಗೊಂಡು ಮಾವುತನನ್ನೇ ಬಲಿ ತೆಗೆದುಕೊಂಡಿದ್ದ ‘ಇಂದ್ರ’ ಎಂಬ ಸಲಗ ಕಳೆದ ಮೂರು ತಿಂಗಳಿಂದ ಮಳೆಯಲ್ಲಿ ನೆನೆಯುತ್ತ, ಬಿಸಿಲಲ್ಲಿ ಒಣಗುತ್ತ ಮಾವುತರು ನೀಡುವ ಆಹಾರ ತಿನ್ನುತ್ತ ದಿನದೂಡುತ್ತಿದೆ.

ಆನೆ ಶಿಬಿರದ ಮಕ್ಕಳು ಶಾಲೆಗೆ ರಜೆ ಇರುವ ಸಂದರ್ಭದಲ್ಲಿ ತಮ್ಮ ತಂದೆಯೊಂದಿಗೆ ಕಾಡಿಗೆ ತೆರಳಿ ಆನೆಗಳಿಗೆ ಸೊಪ್ಪು ತರುತ್ತಾರೆ. ಇದು ಅವರಿಗೆ ಬದುಕಿನ ಪಾಠದಂತಿದ್ದರೂ, ಪುಟಾಣಿ ವಯಸ್ಸಿನ ಆಟವಾಗಿದೆ. ಮರಿಯಾನೆ ಭೀಷ್ಮನ ಮೇಲೆ ಕುಳಿತು ಈ ಮಕ್ಕಳು ಸೊಪ್ಪು ಹೊತ್ತು ತರುವ ದೃಶ್ಯ ನೋಡುಗರಿಗೆ ಪುಳಕ ಉಂಟುಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT