ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ ಕರ್ನಾಟಕಕ್ಕೆ ಬರುವುದು ಬೇಡ

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಗುಜರಾತಿನ ಮುಖ್ಯಮಂತ್ರಿ ದಸರಾ ಹಬ್ಬದಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಬರುತ್ತಾರೆ ಎಂಬ ಸುದ್ದಿ ಇದೆ. ಅವರು ರಾಜ್ಯದಲ್ಲಿ ಇನ್ನೆರಡು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದೂ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಈ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಗುಜರಾತಿನ ಸರ್ಕಾರ ದೇಶದಾದ್ಯಂತ ಲಕ್ಷಾಂತರ ಹೂಡಿಕೆದಾರರಿಗೆ ನಷ್ಟವುಂಟು ಮಾಡುವ ಒಂದು ಕಾಯ್ದೆಯನ್ನು ಸಂವಿಧಾನ ವಿರೋಧಿಯಾಗಿ ರೂಪಿಸಿದ ವಿಷಯ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತಿರುವ ಸಂಗತಿಯನ್ನು ರಾಜ್ಯದ ಜನತೆಯ ಗಮನಕ್ಕೆ ತರಲು ಇಚ್ಛಿಸುತ್ತೇನೆ.
 
ನರ್ಮದಾ ನದಿಯ ಗುಜರಾತಿನ ಪಾಲಿನ ನೀರಿನ ಬಳಕೆಗಾಗಿ ರೂಪಿಸಲಾಗಿದ್ದ ಹಲವಾರು ನೀರಾವರಿ ಯೋಜನೆಗಳಿಗೆ ಪರಿಸರದ ಮೇಲಿನ ದುಷ್ಪರಿಣಾಮದ ನಿಮಿತ್ತವಾಗಿ ವಿಶ್ವಬ್ಯಾಂಕ್ ಮುಂತಾದ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಸಾಲವನ್ನು ನೀಡಲು 1992ರಲ್ಲಿ ನಿರಾಕರಿಸಿದ್ದವು.

ಆಗ ಈ ನೀರಾವರಿ ಯೋಜನೆಗಳಿಗೆ ಬೇಕಾಗಿದ್ದ ಆರ್ಥಿಕ ಸಂಪನ್ಮೂಲ ಸಂಗ್ರಹಿಸಲು ಗುಜರಾತ್ ಸರ್ಕಾರದ ಪೂರ್ಣ ಮಾಲೀಕತ್ವಕ್ಕೆ ಒಳಪಟ್ಟಿರುವ `ಸರ್ದಾರ್ ಸರೋವರ್ ನರ್ಮದಾ ನಿಗಮ್ ನಿಯಮಿತ~ ಎಂಬ ಕಂಪೆನಿಯನ್ನು ಸ್ಥಾಪಿಸಿ ಆ ಮೂಲಕ ಗುಜರಾತ್ ಸರ್ಕಾರದಿಂದ ಪೂರ್ಣವಾಗಿ ಗ್ಯಾರಂಟಿ ಕೊಟ್ಟಿದ್ದ ಬಾಂಡ್‌ಗಳನ್ನು ಬಿಡುಗಡೆ ಮಾಡಿ 7-1-1994 ರಂದು ಹೂಡಿಕೆದಾರರಿಗೆ ಬಾಂಡ್‌ಗಳನ್ನು ಹಂಚಿಕೆ ಮಾಡುವ ಮೂಲಕ ಸಾವಿರಾರು ಕೋಟಿ ಹಣವನ್ನು ಸಂಗ್ರಹಿಸಿತ್ತು.
  
ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸುವ ಸಂದರ್ಭದಲ್ಲಿ ಹೊರಡಿಸಿದ ಕಾನೂನಿನ ಪರಿಮಿತಿಯ ಪತ್ರಿಕೆಯಲ್ಲಿ (ಪ್ರಾಸ್ಪೆಕ್ಟಸ್) ಕಂಪೆನಿಗೆ ಅವಧಿ ಪೂರ್ಣವಾಗುವ ಮುಂಚೆ ಈ ಬಾಂಡ್‌ಗಳನ್ನು ಹೂಡಿಕೆದಾರರಿಗೆ ಮರು ಪಾವತಿಸಲು ಅವಕಾಶವಿರಲಿಲ್ಲ.

ಕೇವಲ ಹೂಡಿಕೆದಾರರು ಮಾತ್ರ ನಿರ್ದಿಷ್ಟ ಅವಧಿ ಪೂರ್ಣಗೊಂಡ ನಂತರ ಆದರೆ ಪೂರ್ಣ ಅವಧಿ ಮುಗಿಯುವ ಮುಂಚೆ ಕೇವಲ 80ದಿನಗಳು ತಮ್ಮ ಹೂಡಿಕೆಯನ್ನು ಪೂರ್ಣ ಅವಧಿಯ ಒಳಗೇ ಪಡೆದುಕೊಳ್ಳಲು ಅವಕಾಶವಿತ್ತು. ಈ ಬಾಂಡ್‌ಗಳ ಪೂರ್ಣ ಅವಧಿ 20 ವರ್ಷಗಳಾಗಿದ್ದು 7-1-2014ಕ್ಕೆ ಮುಕ್ತಾಯವಾಗಲಿತ್ತು.
  
ಆದರೆ ನರೇಂದ್ರ ಮೋದಿ ಸರ್ಕಾರ 2003ರ ಡಿಸೆಂಬರ್‌ನಲ್ಲಿಯೇ ಈ ಬಾಂಡ್‌ಗಳನ್ನು ಅವಧಿ ಮುಗಿಯುವ ಮುಂಚೆ ಮರುಪಾವತಿ ಮಾಡಲು ಬಾಂಡ್‌ದಾರರ ಸಭೆ ಕರೆದಿತ್ತು. ಅಲ್ಲಿ ತೀವ್ರವಾದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಪ್ರಯತ್ನವನ್ನು ಕೈಬಿಟ್ಟಿತ್ತು.

ಆದರೂ 2008ರ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಗುಜರಾತಿನ ಅಸೆಂಬ್ಲಿಯಲ್ಲಿ ಸಂವಿಧಾನ ವಿರೋಧಿಯಾದ ವಿಶೇಷ ಕಾನೂನನ್ನು ತಂದು ಈ ಬಾಂಡ್‌ಗಳನ್ನು ಕಡ್ಡಾಯವಾಗಿ ಅವಧಿಗೆ ಮುಂಚೆಯೇ ಮರುಪಾವತಿಸಲು ಅವಕಾಶ ಮಾಡಿಕೊಂಡಿತು.

ಬಾಂಡ್‌ಗಳನ್ನು ಡಿಮ್ಯಾಟ್ ರೂಪದಲ್ಲಿ ಹೊಂದಿದ್ದವರಿಗೆ ಚೆಕ್‌ಗಳನ್ನು ಕಳುಹಿಸಿತು. ಇದರ ವಿರುದ್ಧ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನೌಕರರ ಭವಿಷ್ಯನಿಧಿ ಟ್ರಸ್ಟ್, ಜನಪಥ್ ಹೋಟೆಲ್ ಎಂಪ್ಲಾಯೀಸ್ ಭವಿಷ್ಯನಿಧಿ ಟ್ರಸ್ಟ್ ಮತ್ತು ನಮ್ಮ ರಾಜ್ಯದ ಸಾರ್ವಜನಿಕ ಕ್ಷೇತ್ರದ ಉದ್ಯಮ ಮೈಸೂರು ಪೇಪರ್ ಮಿಲ್ಸ್ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಟ್ರಸ್ಟ್ ಸೇರಿದಂತೆ ಹಲವಾರು ಸಂಸ್ಥೆಗಳು, ವ್ಯಕ್ತಿಗಳು ವಿವಿಧ ಹೈಕೋರ್ಟ್‌ನಲ್ಲಿ ನ್ಯಾಯ ಕೋರಿ ದಾವೆ ಹಾಕಿವೆ.
 
ಈಗ ಈ ಎಲ್ಲಾ ದಾವೆಗಳನ್ನು ಕ್ರೋಡೀಕರಿಸಿ ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿದೆ. ಸಾಮಾನ್ಯ ಹೂಡಿಕೆದಾರರ ಪರವಾಗಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಡುತ್ತಿದೆ.

1992 ರಲ್ಲಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಸಾಲವನ್ನು ಕೊಡಲು ನಿರಾಕರಿಸಿದಾಗ ಸ್ವದೇಶೀ ಹೂಡಿಕೆದಾರರಿಂದ ಹಣಕಾಸಿನ ಸಂಪನ್ಮೂಲ ಸಂಗ್ರಹಿಸಿ ವರ್ಷಕ್ಕೆ ಆಕರ್ಷಕ ಶೇ 17.50 ಬಡ್ಡಿ ನೀಡಿದ್ದ ಗುಜರಾತ್ ಸರ್ಕಾರದ ಸಂಪೂರ್ಣ ಮಾಲೀಕತ್ವದ ಸಂಸ್ಥೆಯ ಬಾಂಡ್‌ಗಳನ್ನು ಹೆಚ್ಚಿನ ಬೆಲೆ ತೆತ್ತು ಷೇರು ವಿನಿಮಯ ಕೇಂದ್ರಗಳ ಮೂಲಕ ಕೊಂಡುಕೊಂಡ ಲಕ್ಷಾಂತರ ಹೂಡಿಕೆದಾರರ ಅಸಲಿಗೇ ಮೋಸವಾಗಿದೆ.
  
ಈ ಅಂಶಗಳನ್ನು ಪರಿಗಣಿಸಿ `ಸೆಬಿ~, ಗುಜರಾತ್ ಸರ್ಕಾರ ಮತ್ತು ಕಂಪೆನಿಗೆ ನೀಡಿದ ನೋಟೀಸ್‌ಗೆ ಸರಿಯಾದ ಉತ್ತರವನ್ನೂ ನೀಡಿಲ್ಲ. ಹೂಡಿಕೆದಾರರು ಕಂಪೆನಿಗೆ ಈ ನಿಟ್ಟಿನಲ್ಲಿ ಬರೆಯುವ ಪತ್ರ ಕಳುಹಿಸುವ ವಿದ್ಯುನ್ಮಾನ ಅಂಚೆಗೆ (ಇ- ಮೇಲ್) ಯಾವುದೇ ಉತ್ತರವಿಲ್ಲ.

ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನವನ್ನು ಅತ್ಯಂತ ಯೋಜಿತವಾಗಿ ನಡೆಸಿ ಸಾವಿರಾರು ಕೋಟಿ ಬಂಡವಾಳ ಹೂಡುವ ಉದ್ಯಮಪತಿಗಳಿಗೆ ನೂರಾರು ಕೋಟಿ ರೂಪಾಯಿಗಳ ವಾರ್ಷಿಕ ತೆರಿಗೆ ರಿಯಾಯಿತಿಯನ್ನು ಹತ್ತಾರು ವರ್ಷಗಳ ಅವಧಿಗೆ ನೀಡುವ, ಭೂಮಿಯನ್ನು ರಿಯಾಯಿತಿ ದರದಲ್ಲಿ ಉದ್ಯಮಿಗಳಿಗೆ ನೀಡುವ ಗುಜರಾತ್
ಸರ್ಕಾರ ಮತ್ತು ಮುಖ್ಯಮಂತ್ರಿ ಮೋದಿ ಅವರಿಗೆ ನಿರಂತರವಾಗಿ ಬರಗಾಲ ಪೀಡಿತವಾದ ಗುಜರಾತ್ ರಾಜ್ಯದ ನೀರಾವರಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲವಿಲ್ಲದೆ ನರ್ಮದಾ ನದಿಯ ಹಲವಾರು ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಆಗದೆ ಕೈಚೆಲ್ಲಿ ಕೂತಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ನೆರವಿಗೆ ಧಾವಿಸಿದ ದೇಶವಾಸಿಗಳಿಗೆ ಅನ್ಯಾಯ ಮಾಡಿರುವುದು ಅಕ್ಷಮ್ಯ ಅಪರಾಧ. 
 
ಇದರಿಂದ ಕರ್ನಾಟಕದ ಹತ್ತಾರು ಸಾವಿರ ಹೂಡಿಕೆದಾರರಿಗೆ ಅನ್ಯಾಯವಾಗಿದೆ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ನೌಕರರ ಭವಿಷ್ಯ ನಿಧಿ ತೊಡಗಿಸಿದ ಬಂಡವಾಳಕ್ಕೂ ಸಂಚಕಾರ ಬಂದಿದೆ.

ಇಂತಹ ವ್ಯಕ್ತಿ ಕರ್ನಾಟಕ ರಾಜ್ಯದ ದಸರಾ ವೀಕ್ಷಿಸಲು ರಾಜ್ಯ ಸರ್ಕಾರದ ಅತಿಥಿಯಾಗಿ ಬರುವುದು ಬೇಡ, ರಾಜ್ಯದಲ್ಲಿ ಹಲವು ಸಂಸ್ಥೆಗಳು ಮೋದಿ ಅವರನ್ನು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದರ ಬಗ್ಗೆ ಮತ್ತೊಮ್ಮೆ ವಿಚಾರ ಮಾಡಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT