ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಿ ವೈದ್ಯರು ನಕಲಿ ವೈದ್ಯರಲ್ಲ; ಅವರಿಗೆ ನೋಂದಣಿ ಅಗತ್ಯವಿಲ್ಲ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ನಾಟಿ ವೈದ್ಯರು ಯಾವತ್ತೂ ಅತಂತ್ರರಲ್ಲ; ಅವರು ಸ್ವತಂತ್ರರು. ಅವರಿಗೆ ಯಾವ ವೈದ್ಯಕೀಯ ಕಾಯ್ದೆಗಳೂ ಅನ್ವಯಿಸುವುದಿಲ್ಲ. ಅವರಿಗೆ ಯಾವ ನೋಂದಣಿಯ ಅಗತ್ಯವೂ ಇಲ್ಲ (ಸಂಗತ, ಜ.2). ಏಕೆಂದರೆ ಅವರು ಯಾವ ಅಪಾಯಕಾರಿ ಚಿಕಿತ್ಸೆಯನ್ನೂ ನೀಡುವುದಿಲ್ಲ. ಅವರ ಚಿಕಿತ್ಸೆಯಿಂದ ಯಾರೂ ಸತ್ತ ಉದಾಹರಣೆಗಳಿಲ್ಲ.     
                                                      
ವೈದ್ಯಕೀಯ ಪದವಿ ಪಡೆದ ವೈದ್ಯರು ನೀಡಿದ ಚಿಕಿತ್ಸೆಯಿಂದ ಅಥವಾ ಅವರ ಉದಾಸೀನತೆಯಿಂದ ಅಥವಾ ಅರೆಬರೆ ಜ್ಞಾನದಿಂದ ನೀಡಿದ ಚಿಕಿತ್ಸೆಯಿಂದ ಅನೇಕರು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ.

 ಆದರೆ ನಾಟಿ ವೈದ್ಯರು ನೀಡಿದ ಚಿಕಿತ್ಸೆಯಿಂದ ದೊಡ್ಡ ದುರಂತಗಳೇನೂ ಸಂಭವಿಸಿಲ್ಲ. ಆದರೆ ಅವರು ಕೊಟ್ಟ ಔಷಧದಿಂದ ಪ್ರಾಣಹಾನಿಯಾದರೆ ಅವರ ಹೆಸರು ನೋಂದಣಿಯಾಗದೇ ಇದ್ದರೂ ಅವರ ಮೇಲೆ ಕ್ರಮ ಜರುಗಿಸಲು ಸಾಧ್ಯವಿದೆ. ಈಗ ಇರುವ ಕಾನೂನುಗಳನ್ನು ಬಳಸಿಕೊಂಡು ಅವರ ವಿರುದ್ಧ ಕ್ರಮ ಜರುಗಿಸಬಹುದು.

ಇಂದಿಗೂ ಸಹ ಸಾವಿರಾರು ಹಳ್ಳಿಗಳಲ್ಲಿ, ಕುಗ್ರಾಮಗಳಲ್ಲಿನ ತೀರಾ ಕೆಳವರ್ಗದ ಜನರ ಆರೋಗ್ಯ ರಕ್ಷಣೆಯ ಹೊಣೆಯನ್ನು ಹೊತ್ತು ನಿರ್ವಹಣೆ ಮಾಡುವವರು ನಾಟಿ ವೈದ್ಯರೇ ಹೊರತು ಪದವಿ ಪಡೆದ ಆಧುನಿಕ ವೈದ್ಯರಲ್ಲ.

ನಾಟಿ ವೈದ್ಯ, ಜಾನಪದ ವೈದ್ಯ, ಪಾರಂಪರಿಕ ವೈದ್ಯಗಳೆಂಬ ಹೆಸರಿನಿಂದ ಕರೆಯುವ ವೈದ್ಯರು ಗಿಡಮೂಲಿಕೆಗಳು ಮತ್ತು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾಯಿಲೆಗಳನ್ನು ವಾಸಿ ಮಾಡುತ್ತಿದ್ದಾರೆ.

ಅವರು ಅನುಸರಿಸುತ್ತಿರುವ ವೈದ್ಯ ಪದ್ಧತಿ ಭಾರತದ ಮೂಲ ಪರಂಪರೆಯಿಂದ ಬಂದಿದ್ದು. ಅದನ್ನು ಉಳಿಸಿ ಬೆಳೆಸಿ ಸಂರಕ್ಷಿಸಿಕೊಳ್ಳಬೇಕಾದುದು ಪ್ರತಿಯೊಬ್ಬರ ಭಾರತೀಯನ ಕರ್ತವ್ಯ.

ಪಾಶ್ಚಾತ್ಯ ವೈದ್ಯ ಪದ್ಧತಿಗಳೆಲ್ಲ ಇತ್ತೀಚೆಗೆ ಭಾರತಕ್ಕೆ ಬಂದಂತವು. ಮೂಲಿಕೆ ಚಿಕಿತ್ಸೆಯಿಂದ ಕಾಯಿಲೆಗಳು ಗುಣವಾಗುವುದು ಕೊಂಚ ನಿಧಾನವೇ ಹೊರತು ಅದರಿಂದ ಯಾವ ಅಡ್ಡ ಪರಿಣಾಮಗಳೂ ಇಲ್ಲ. ವ್ಯಕ್ತಿಯ  ಪ್ರಾಣಕ್ಕೆ ಹಾನಿಯಾಗುವುದಿಲ್ಲ.

ಪಾಶ್ಚಾತ್ಯ ವೈದ್ಯ ಪದ್ಧತಿಗಳು ಭಾರತಕ್ಕೆ ಬಂದ ನಂತರವೇ ಮಾನವನ ಆಯುಷ್ಯ ಪ್ರಮಾಣ ಕಡಿಮೆಯಾಯಿತು. ಆದರೂ ತೀರಾ ತುರ್ತು ಸಂದರ್ಭಗಳಲ್ಲಿ ಮಾತ್ರ ಅವು ಪ್ರಾಣ ರಕ್ಷಣೆ ಮಾಡುತ್ತವೆ. ಹಾಗೆಂದ ಮಾತ್ರಕ್ಕೆ ಯಾವ ವೈದ್ಯ ಪದ್ಧತಿಯನ್ನೂ ಅಲ್ಲಗಳೆಯಲಾಗದು.

 ಲೇಖನದಲ್ಲಿ, 2007ರ  ವೈದ್ಯಕೀಯ ಕಾಯಿದೆಯನ್ನು ಉಲ್ಲೇಖಿಸಿದ್ದಾರೆ. ಯಾವುದೇ ಕಾಯಿದೆ ಇರುವುದು ಜನರ ರಕ್ಷಣೆಗಾಗಿಯೇ ಹೊರತು ಭ್ರಷ್ಟಾಚಾರಕ್ಕಲ್ಲ. ನಾಟಿ ವೈದ್ಯರ ಹೆಸರನ್ನು ನೋಂದಣಿ ಮಾಡಿಸಿದರೆ ಅವರು ಸೌಲಭ್ಯ ಕೇಳುತ್ತಾರೆ ಎಂದು ಆಯುಷ್ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿದೆ.

ಈಗ ನೋಂದಣಿಯಾಗಿರುವ ವೈದ್ಯ ಪದವೀಧರರಿಗೆ ಸರ್ಕಾರ ಯಾವ ಸೌಲಭ್ಯಗಳನ್ನು ನೀಡಿದೆ? ನಾಟಿ ವೈದ್ಯರು ಯಾವ ಸೌಲಭ್ಯವನ್ನು ಕೇಳಿದ್ದಾರೆ? ಅವರ ಪಾಡಿಗೆ ಅವರನ್ನು ಜನರ ಸೇವೆ ಮಾಡಲು ಬಿಟ್ಟು ಬಿಡಬೇಕು.

ಎಷ್ಟೋ ಕಡೆ ಅಲೋಪತಿ ವೈದ್ಯರು ವಾಸಿ ಮಾಡಲಾಗದ ಕಾಯಿಲೆಗಳನ್ನು ನಾಟಿ ವೈದ್ಯರು ವಾಸಿ ಮಾಡುತ್ತಿದ್ದಾರೆ. ಐವತ್ತು ಸಾವಿರ ಖರ್ಚು ತಗಲುವ ಕಾಯಿಲೆಯನ್ನು ಕೇವಲ ಔಷಧಿ ಖರ್ಚು (ಸುಮಾರು ಒಂದು ಸಾವಿರ) ಪಡೆದು ಯಶಸ್ವಿ ಚಿಕಿತ್ಸೆ ನೀಡುವವರೂ ಇದ್ದಾರೆ. ಈ ಮಾತಿನಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ.

ನಾಟಿ ವೈದ್ಯರನ್ನು ನೋಂದಣಿ ಮಾಡಿಸಿದರೆ ಪದವಿ ವೈದ್ಯರು ಅದನ್ನು ಪ್ರತಿಭಟಿಸಿ ಮುಷ್ಕರ ಮಾಡುತ್ತಾರೆ ಎಂದು ಹೇಳಲಾಗಿದೆ. ಅವರೇಕೆ ಮುಷ್ಕರ ಮಾಡಬೇಕು? ಅವರು ಮುಷ್ಕರ ಮಾಡುವುದನ್ನು ಬಿಟ್ಟು ಹಳ್ಳಿಗಳಿಗೆ ಹೋಗಿ ಜನರ ಸೇವೆ ಮಾಡಲಿ. ಈ ಕ್ಷೇತ್ರದಲ್ಲಿ ಜನರ ಸೇವೆಯೇ ಮುಖ್ಯವೇ ಹೊರತು ಪದವಿಯಲ್ಲ.

ಇಂಜೆಕ್ಷನ್ ಮಾಡುವ ಕೆಲವರು ನಕಲಿ ವೈದ್ಯರಿದ್ದಾರೆ. ಅವರ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿ. ನಾಟಿ ವೈದ್ಯರು ನೀಡಿದ ಚಿಕಿತ್ಸೆಯಿಂದ ಪ್ರಾಣಹಾನಿಯಾದರೆ ಅವರ ಮೇಲೆ ಕ್ರಮ ಜರುಗಿಸಲು ವಿಶೇಷ ಕಾನೂನು ಬೇಕಿಲ್ಲ.

ಕೇಂದ್ರ ಸರ್ಕಾರವು ಜ್ಞಾನ ಆಯೋಗದ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರಾಗತ ಜ್ಞಾನವನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಸಲ್ಲದ ತಗಾದೆ ತೆಗೆದು ಕಾಯಿದೆಯನ್ನು ಮುಂದಿಟ್ಟುಕೊಂಡು ನಾಟಿ ವೈದ್ಯರಿಗೆ ತೊಂದರೆ ಕೊಟ್ಟರೆ ಅದನ್ನು ವಿರೋಧಿಸಿ ಅವರೂ ಬೀದಿಗೆ ಇಳಿದು ಹೋರಾಡಬೇಕಾಗುತ್ತದೆ. ಅವರಿಗೆ ಸಾಮಾನ್ಯ ಜನರ ಬೆಂಬಲ ಸದಾ ಇದ್ದೇ ಇದೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೊಂದಿದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪದವಿ ಪಡೆದ ಎಷ್ಟೋ ಮಂದಿ ವೈದ್ಯರೂ ಸಹ ಆಲೋಪತಿ ಪದ್ಧತಿಯಲ್ಲಿ ಚಿಕಿತ್ಸೆ ಕೊಡುತ್ತಿದ್ದಾರೆ. ಅತ್ತ ಆಲೋಪಥಿಯ ಬಗ್ಗೆಯೂ ಹೆಚ್ಚು ಜ್ಞಾನವಿಲ್ಲ. ಇತ್ತ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆಯನ್ನೂ ನೀಡುವುದಿಲ್ಲ. ಹೀಗಿರುವಾಗ ನಮ್ಮದೇ ಆದ ಸ್ವಂತ ದೇಶಿ ವೈದ್ಯ ಪದ್ಧತಿಯನ್ನು ಉಳಿಸಿ ಬೆಳೆಸುವವರು ಯಾರು?

ಇಂದಿಗೂ ಆಯುರ್ವೇದದ ಮೂಲವನ್ನು ಉಳಿಸಿ ಸಂರಕ್ಷಿಸಿಕೊಂಡು ಬರುತ್ತಿರುವವರು ನಾಟಿ ವೈದ್ಯರೇ. ಇವರಿಗೆ ಸರ್ಕಾರದ ಪ್ರೋತ್ಸಾಹ ಬೇಕಿದೆ. ಸನಾತನ ವಿದ್ಯೆಯನ್ನು ಅದಕ್ಕೆ ಬೇಕಾಗಿರುವ ಮೂಲಿಕೆ ಸಂಪತ್ತನ್ನೂ ಉಳಿಸುವತ್ತ ಗಮನ ಹರಿಸಬೇಕಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT