ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡ: ಸಿಡಿಲು ಬಡಿದು ಮನೆಗೆ ಹಾನಿ

Last Updated 1 ಜೂನ್ 2013, 12:53 IST
ಅಕ್ಷರ ಗಾತ್ರ

ನಾಡ (ಬೈಂದೂರು): ಗುರುವಾರ ರಾತ್ರಿ ನಾಡ ಗ್ರಾಮದ ತೆಂಕಬೈಲು ಎಂಬಲ್ಲಿ ಹೆಂಚಿನ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿಯಾಗಿದ್ದು, ಮನೆ ಮಂದಿ ಆಘಾತಕ್ಕೊಳಗಾದರು. ಸಿಡಿಲಿನ ರಭಸಕ್ಕೆ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

ಮನೆಗೆ ಅಪ್ಪಳಿಸಿದ ಸಿಡಿಲು ಲಾರೆನ್ಸ್ ಕ್ರಾಸ್ತಾ ಅವರ ಮನೆಯ ಪೂರ್ವಭಾಗದ ಅಡುಗೆ ಮನೆಯ ಹೆಂಚಿನ ಮಾಡನ್ನು ತೂರಿ ಒಳ ನುಗ್ಗಿತು. ಅಡುಗೆ ಕೆಲಸ ನಿರತರಾಗಿದ್ದ ಅವರ ಪತ್ನಿ ಫಿಲೋಮಿನಾ ಕ್ರಾಸ್ತಾ ಆಘಾತಕ್ಕೊಳಗಾದರು. ಒಲೆಯ ಮೇಲಿರಿಸಿದ್ದ ಅನ್ನದ ಮಡಕೆ ಹೋಳಾದುದಲ್ಲದೆ, ಅನ್ಯ ಪರಿಕರಗಳು ಚೆಲ್ಲಾಪಿಲ್ಲಿಯಾದುವು.

ನಡುಮನೆಯ ಮಂಚದ ಮೇಲೆ ಮಲಗಿದ್ದ ಮಗ ಸ್ಟೀವನ್ ಕ್ರಾಸ್ತಾ ಕೆಳಕ್ಕೆ ಬಿದ್ದರು. ಮನೆಯ ವಿದ್ಯುತ್ ವೈರಿಂಗ್ ಹೊತ್ತಿ ಉರಿಯಿತು. ಬಲ್ಬ್‌ಗಳು ಸ್ಫೋಟಗೊಂಡುವು. ಮನೆ ಮುಂಭಾಗದ ಕಡುಮಾಡಿನ ಒಂದು ಸಿಮೆಂಟ್ ಶೀಟು ಛಿದ್ರವಾಯಿತಲ್ಲದೆ, ಮೂರು ತೆಂಗಿನ ಮರಗಳಿಗೂ ಸಿಡಿಲು ಬಡಿದಿದ್ದು, ಅವು ಸಾಯುವ ಸಾಧ್ಯತೆ ಇದೆ. ತೀವ್ರ ಆಘಾತಗೊಂಡು ಕೇಳುವ ಶಕ್ತಿ ಕಳೆದುಕೊಂಡಿರುವ ಫಿಲೋಮಿನಾ ಕ್ರಾಸ್ತಾರನ್ನು ತಕ್ಷಣ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಡಿಲಿನ ತೀವ್ರತೆ ಎಷ್ಟಿತ್ತೆಂದರೆ ಕ್ರಾಸ್ತಾ ಅವರ ಮನೆಯಿಂದ ಕೆಲವು ಮೀಟರ್‌ಗಳ ದೂರದಲ್ಲಿದ್ದ ಜೆಸಿಂಥಾ ಕ್ರಾಸ್ತಾ, ಸೆಲಿನ್ ಫರ್ನಾಂಡಿಸ್, ಉದಯ ಜೋಗಿ ಮತ್ತು ಜಾನಕಿ ಪೂಜಾರಿ ಅವರ ಮನೆಗಳಲ್ಲೂ ಆಘಾತದ ಅನುಭವವಾಗಿದ್ದು, ವಿದ್ಯುತ್ ವೈರಿಂಗ್, ಬಲ್ಬ್, ಫ್ಯಾನ್‌ಗಳಿಗೆ ಹಾನಿಯಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣಕುಮಾರ ಶೆಟ್ಟಿ, ಸದಸ್ಯರಾದ ವಾಸು ಪೂಜಾರಿ, ರಾಜು ಪಡುಕೋಣೆ, ಶೇಖರ ಶೆಟ್ಟಿ, ಮಾಜಿ ಅಧ್ಯಕ್ಷ ರಾಜೀವ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭು ಕೆನೆಡಿ ಪಿರೇರಾ, ಅಭಿವೃದ್ಧಿ ಅಧಿಕಾರಿ ವೈ.ಡಿ.ನಿರಂಜನ, ಚರ್ಚ್‌ನ ಧರ್ಮಗುರು ಜೋಸೆಫ್ ಮಚಾದೊ ಮತ್ತು ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಗ್ರಾಮ ಕರಣಿಕ ಸಂತೋಷ್ ಆರ್ ಮಹಜರು ನಡೆಸಿದ್ದು, ಕ್ರಾಸ್ತಾ ಅವರಿಗೆ ರೂ.75 ಸಾವಿರ ನಷ್ಟ ಸಂಭವಿಸಿರುವುದನ್ನು ದಾಖಲಿಸಿ, ಮೇಲಿನ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT