ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಬಾಕ್ಸರ್ ಆಗಿದ್ದೆ...

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಮ್ಮ ಟೀವಿಯಲ್ಲಿ ಧಾರಾವಾಹಿ ನೋಡುತ್ತಾ ಕುಳಿತಿದ್ದಳು. ನಾನು ಅಂದಿನ ಹೋಂವರ್ಕ್ ಮಾಡುತ್ತಾ, ಆಗಾಗ್ಗೆ ಧಾರಾವಾಹಿಯನ್ನು, ನಡುನಡುವೆ ಬರುವ ಜಾಹೀರಾತನ್ನು ಕದ್ದು ಕದ್ದು ನೋಡುತ್ತಿದ್ದೆ.

ಹೊರಗೆ ಹೋಗಿದ್ದ ಅಪ್ಪ ಮನೆಗೆ ಬಂದರು. ಬಂದವರೇ ರಿಮೋಟ್ ಕಂಟ್ರೋಲ್ ತೆಗೆದುಕೊಂಡು ಚಾನಲ್ ಬದಲಿಸಿದರು. ಆ ಚಾನಲ್‌ನಲ್ಲಿ ಮಹಿಳಾ ಬಾಕ್ಸಿಂಗ್! ಭಾರತ ದೇಶದ ಪರವಾಗಿ ಮೇರಿಕೋಮ್ ಸೆಣಸಾಡುತ್ತಿದ್ದಳು. ಹಲವಾರು ಸುತ್ತು ನಡೆದು ಕೊನೆಗೆ ಕೋಮ್ ವಿಜಯಮಾಲೆ ಧರಿಸಿದಳು.

`ನೋಡು ಮಗಾ, ನೀನೂ ಈ ಥರ ಬಾಕ್ಸರ್ ಆಗಬೇಕು. ಇಲ್ಲವೇ ಸೈನಾ ನೆಹ್ವಾಲ್ ತರಹ ಬ್ಯಾಡ್ಮಿಂಟನ್ ಆಡುವುದನ್ನು ರೂಢಿ ಮಾಡಿಕೊಂಡು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗೆಲ್ಲಬೇಕು. ಓದು ಬರಹದ ಜೊತೆಗೆ ಆಟವಾಡುವುದರಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು~ ಎಂದು ಅಪ್ಪ ಹೇಳಿದರು.

ಅಪ್ಪನ ಮಾತಿನ ನಡುವೆ ಅಮ್ಮಾ ನುಸುಳಿದಳು. `ಆಗ್ತಾಳೆ, ಆಗ್ತಾಳೆ, ಬಾಕ್ಸರ್ ಆಗ್ತಾಳೆ. ಅವಳು ಆಟದಲ್ಲಿ ಗೆದ್ದಾಗ, ನೀವು ಎದ್ದುನಿಂತು ಚಪ್ಪಾಳೆ ತಟ್ಟುತ್ತಾ ಕುಣಿಯುವಿರಂತೆ~ ಎಂದು ತಮಾಷೆ ಮಾಡಿದಳು.

`ಏನ್ ಮಾತು ಅಂತ ಆಡ್ತೀಯಾ ಬಿಡು. ಪ್ರಯತ್ನದಿಂದ ಪರಮೇಶ್ವರನೂ ಆಗಬಹುದು~ ಎಂದು ಅಪ್ಪ ಹೇಳಿದರು.

`ಅಪ್ಪ-ಮಗಳು ಮೊದಲು ಊಟ ಮಾಡಿ~ ಎಂದು ಅಮ್ಮ ಮತ್ತೆ ತಮಾಷೆ ಮಾಡಿದಳು.
ಅಪ್ಪ ಏನೋ ಗುನುಗುತ್ತಾ ಮುಖ ತೊಳೆಯಲು ಹೋದರು. ನಾನು ಕೈತೊಳೆದು ಊಟಕ್ಕೆ ಕುಳಿತೆ. ಊಟ ಮುಗಿಸಿ ಸ್ವಲ್ಪ ಅಡ್ಡಾಡಿ ಮಲಗಲು ಹೋದೆ. ಅಪ್ಪನ ಆಸೆಯ ಮಾತುಗಳು ಅಮ್ಮನ ಕೀಟಲೆಯ ಮಾತುಗಳನ್ನು ಮೆಲುಕು ಹಾಕುತ್ತಿರುವಾಗಲೇ ನಿದ್ರಾದೇವಿ ಬಂದು ನನ್ನನ್ನು ಅಪ್ಪಿಕೊಂಡಿದ್ದಳು.

“ಸ್ಟೇಡಿಯಂನಲ್ಲಿ ಕಿಕ್ಕಿರಿದ ಜನಸಂದಣಿ. ನನಗೂ ನನ್ನ ಎದುರಾಳಿಗೂ ಜಿದ್ದಾಜಿದ್ದಿ. ಸೋಲುತ್ತೇನೆ ಎಂದು ನನಗೆ ಅನ್ನಿಸಿತು. ಪ್ರೇಕ್ಷಕರತ್ತ ನೋಟ ಹರಿಸಿದೆ. ಅಲ್ಲಿ ಅಪ್ಪ ಎದ್ದು ನಿಂತಿದ್ದರು. ನನ್ನನ್ನು ಹುರಿದುಂಬಿಸುವಂತೆ ಕೈ ಬೀಸಿದರು. ನಮ್ಮಿಬ್ಬರ ಮಧ್ಯೆ ಕಾದಾಟ ಜೋರಾಯಿತು. ಏಟು ಬಿದ್ದಂತೆಲ್ಲಾ ಮರು ಏಟು ಕೊಡುತ್ತಿದ್ದೆ. ಎದುರಾಳಿ ತಗ್ಗಿ ಹೋದಳು. ನಾನು ವಿಜಯದ ನಗೆ ಬೀರಿದ್ದೆ. ಅಂಪೈರ್ ಕೈ ಎತ್ತಿ ನನ್ನ ಗೆಲುವನ್ನು ಸಮರ್ಥಿಸಿದ್ದ.

ಅಪ್ಪ ಬಂದು ನನ್ನನ್ನು ಅಪ್ಪಿಕೊಂಡು ಕೈ ಕುಲುಕಿದರು. ಕ್ಲಿಕ್ ಕ್ಲಿಕ್ ಫೋಟೋ ಕ್ಲಿಕ್ಕಿಸಿಕೊಂಡರು. ಟೀವಿ ಪರದೆಯ ಮೇಲೆ ನನ್ನ ಚಿತ್ರ ಮೂಡಿ ಬರುತ್ತಿತ್ತು. ಮನೆಯಲ್ಲಿ ಅಮ್ಮ ಖುಷಿಯಿಂದ ಬೀಗುತ್ತಿರಬೇಕು”.

ನಾನು ಹೋ ಎಂದು ಕೂಗಿದೆ. `ಅಪ್ಪ ಅಪ್ಪ ನಿನ್ನ ಕನಸು ನನಸಾಗಿಸಿಬಿಟ್ಟೆ....~
`ಏನು ಮಗು, ಕನಸು ಬಿತ್ತಾ,,,~ ಎಂದು ಅಪ್ಪ ಮೈ ತಡವಿದರು. ಆಗಲೇ ನನಗೆ ಬಿದ್ದುದು ಕನಸು ಎಂದು ಅರ್ಥವಾದದ್ದು. ಸಾಧನೆಗೆ ಮೊದಲ ಮೆಟ್ಟಿಲು ಕನಸು ಕಾಣುವುದು ಎನ್ನುವ ಹಿರಿಯರ ಮಾತು ನೆನಪಿಸಿಕೊಂಡು ಮತ್ತೆ ನಿದ್ದೆಹೋದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT