ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೇ ಅರ್ಹ, ನನಗೇ ಪ್ರಶಸ್ತಿ ಕೊಡಿ...!

Last Updated 12 ಅಕ್ಟೋಬರ್ 2012, 7:30 IST
ಅಕ್ಷರ ಗಾತ್ರ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ನಿರ್ಮಾತೃ ಡಾ.ಡಿ.ಸಿ.ಪಾವಟೆ ಅವರ ಹೆಸರಿನಲ್ಲಿ ಪ್ರತಿವರ್ಷ ವಿ.ವಿ.ಯ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ವಿಭಾಗವು ನೀಡುತ್ತಿರುವ `ಅತ್ಯುತ್ತಮ ಎನ್‌ಎಸ್‌ಎಸ್ ಅಧಿಕಾರಿ~ ಪ್ರಶಸ್ತಿಗೆ ಈ ಬಾರಿ ಪೈಪೋಟಿ ಜೋರಾಗಿದ್ದು, ಪ್ರಶಸ್ತಿ ತಮಗೇ ಸಿಗಬೇಕು ಎಂದು ನಗರದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಯೊಬ್ಬರು ಪಟ್ಟು ಹಿಡಿದಿದ್ದಾರೆ.

ಈ ಪ್ರಶಸ್ತಿಯನ್ನು ಪ್ರತಿವರ್ಷ ಇಬ್ಬರಿಗೆ ನೀಡಲಾಗುತ್ತಿದ್ದು, ಜೆಎಸ್‌ಎಸ್ ಕಾಲೇಜಿನ ಕಾರ್ಯಕ್ರಮ ಅಧಿಕಾರಿಯೊಬ್ಬರಿಗೆ ಈ ಬಾರಿ ದೊರೆಯುವುದು ಖಚಿತವಾಗಿದೆ. `ಉಳಿದ ಒಂದು ಪ್ರಶಸ್ತಿಯನ್ನು ತಮಗೇ ಕೊಡಬೇಕು~ ಎಂದು ಆಯ್ಕೆ ಸಮಿತಿಗೆ ದುಂಬಾಲು ಬಿದ್ದಿದ್ದಾರೆ.

ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ ಧಾರವಾಡದ ಕಿಟೆಲ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜು, ಜೆಎಸ್‌ಎಸ್ ಪದವಿ ಕಾಲೇಜು, ದಾಂಡೇಲಿ ಹಾಗೂ ನರೇಗಲ್ ಕಾಲೇಜುಗಳ ಎನ್‌ಎಸ್‌ಎಸ್ ಅಧಿಕಾರಿಗಳಿಗೆ ಸಮಿತಿಯು ಇತ್ತೀಚೆಗೆ ಸಂದರ್ಶನ ಏರ್ಪಡಿಸಿತ್ತು. ಅದರಲ್ಲಿ ಇಬ್ಬರನ್ನು ಆಯ್ಕೆ ಮಾಡಲಾಗಿದ್ದು, ಕಳೆದ ಬಾರಿಯೂ ಪ್ರಶಸ್ತಿ ಆಕಾಂಕ್ಷಿಯಾಗಿದ್ದ ಜೆಎಸ್‌ಎಸ್ ಕಾಲೇಜಿನ ಪ್ರೊ.ಮಠಪತಿ ಅವರಿಗೆ ಪ್ರಶಸ್ತಿ ನೀಡುವ ಸಂಬಂಧದ ಪತ್ರವನ್ನು ವಿ.ವಿ.ಯ ಎನ್‌ಎಸ್‌ಎಸ್ ವಿಭಾಗ ಈಗಾಗಲೇ ಕಳುಹಿಸಿದೆ.

ಇದನ್ನು ಅರಿತ ಪ್ರಶಸ್ತಿ ಆಕಾಂಕ್ಷಿಯೊಬ್ಬರು, `ರಾಷ್ಟ್ರ ಹಾಗೂ ರಾಜ್ಯಮಟ್ಟದ ಎನ್‌ಎಸ್‌ಎಸ್ ಶಿಬಿರಗಳಲ್ಲಿ ಕರ್ನಾಟಕ ವಿ.ವಿ. ಯನ್ನು ಪ್ರತಿನಿಧಿಸಿದ್ದೇನೆ. ಉಳಿದ ಮೂವರು ನನ್ನಷ್ಟು ಅರ್ಹರಾಗಿಲ್ಲ. ಪ್ರಶಸ್ತಿಯನ್ನೂ ನನಗೇ ಕೊಡಬೇಕು~ ಎಂದು ಕುಲಪತಿ ಡಾ.ಎಚ್.ಬಿ.ವಾಲೀಕಾರ, ಕುಲಸಚಿವ ಡಾ.ಎಸ್.ಎ.ಪಾಟೀಲ ಅವರನ್ನು ಗುರುವಾರ ಭೇಟಿಯಾಗಿ ಅಳಲು ತೋಡಿಕೊಂಡರು!

ಇದೇ 13ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಯಾರು ಪಡೆಯುತ್ತಾರೋ ಕಾದು ನೋಡಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT