ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೇ ನಾಯಕ ನಾನೇ ಜನನಾಯಕ

Last Updated 24 ಮೇ 2012, 19:30 IST
ಅಕ್ಷರ ಗಾತ್ರ

ನಲವತ್ತು ವರ್ಷಗಳ ಹಿಂದೆ `ನಾಗರಹಾವು~ (1972) ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟವರು ಅಂಬರೀಷ್. ಮೇ 29ರಂದು ಅವರ 60ನೇ ವರ್ಷದ ಹುಟ್ಟುಹಬ್ಬ. ಅವರ ಅರವತ್ತರ ಹುಟ್ಟುಹಬ್ಬ ಮತ್ತು ಚಿತ್ರರಂಗ ಪ್ರವೇಶದ ನಲವತ್ತರ ಸಂಭ್ರಮವನ್ನು ಒಂದೇ ವೇದಿಕೆಯಲ್ಲಿ ಆಚರಿಸಲು ಕನ್ನಡ ಚಿತ್ರೋದ್ಯಮ ನಿರ್ಧರಿಸಿದೆ.
 
ಈ ಯುಗಳ `ಅಂಬಿ ಸಂಭ್ರಮ~ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೇ 29ರಂದು ಅನಾವರಣಗೊಳ್ಳಲಿದೆ. ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ, ಭಾರತೀಯ ಚಿತ್ರೋದ್ಯಮದ ವಿವಿಧ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಹಿನ್ನೆಲೆಯಲ್ಲಿ, `ಸಿನಿಮಾ ರಂಜನೆ~ ಅಂಬರೀಷ್ ಅವರನ್ನು ಮಾತನಾಡಿಸಿತು.

ಸಿನಿಮಾ ಮತ್ತು ರಾಜಕಾರಣ ಎರಡಕ್ಕೂ ಆಕಸ್ಮಿಕವಾಗಿ ಬಂದವರು ನೀವು. ಎರಡರಲ್ಲಿ ನಿಮಗೆ ಹೆಚ್ಚು ಖುಷಿ ಕೊಟ್ಟಿದ್ದು ಯಾವುದು?
ರಾಜಕಾರಣ ಖುಷಿ ಕೊಡೋಕೆ ಸಾಧ್ಯವಾ? ಅಲ್ಲಿರೋದು ಸುಳ್ಳು, ಮೋಸ ಮತ್ತು ವಂಚನೆ. ಸಿನಿಮಾ ನನಗೆ ಯಾವಾಗಲೂ ಖುಷಿ ಕೊಡುತ್ತದೆ.

ನೀವು ಸಿನಿಮಾಗೆ ಬಂದು ನಾಲ್ಕು ದಶಕಗಳಾದವು? ಇಲ್ಲಿಯವರೆಗಿನ ಮರೆಯಲಾಗದ ಘಟನೆ ಯಾವುದು?
ಅಂಥವು ತುಂಬಾ ಇವೆ. ಮದುವೆಯಾಗಿದ್ದು, ಮಗ ಹುಟ್ಟಿದ್ದು, ಅಪ್ಪ-ಅಮ್ಮನನ್ನು ಖುಷಿಯಾಗಿ ನೋಡಿಕೊಂಡಿದ್ದು, ಇವೆಲ್ಲ ಖುಷಿಯ ಸಂಗತಿಗಳೇ. ನಲವತ್ತು ವರ್ಷಗಳಿಂದ ಇರುವ ಸಾಕಷ್ಟು ಗೆಳೆಯರು ಗೆಳೆಯರಾಗಿಯೇ ಇರುವುದು ದೊಡ್ಡ ಖುಷಿ.

ಸಿನಿಮಾರಂಗದಲ್ಲಿ ಏನೇ ಸಮಸ್ಯೆ ಬಂದರೂ ಎಲ್ಲರೂ ನಿಮ್ಮ ಬಳಿಗೆ ಬರುತ್ತಾರೆ. ಆದರೆ ನಾಯಕರಾಗಲು ನಿಮ್ಮಲ್ಲಿಯೇ ಹಿಂಜರಿಕೆ ಇದ್ದಂತಿದೆಯಲ್ಲಾ?
ಹಿಂಜರಿಕೆ ಏನಿಲ್ಲ. ನಾನೇ ನಾಯಕ. ನಾನೇ ಜನನಾಯಕ.

ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಇದ್ದವರು ನೀವು? ಅವತ್ತಿನ ಸಿನಿಮಾಗೂ ಇವತ್ತಿನ ಸಿನಿಮಾಗೂ ಏನು ವ್ಯತ್ಯಾಸ ಇದೆ?
ಆವತ್ತಿನ ಸಿನಿಮಾ ರೀತಿಯೇ ಇವತ್ತಿನ ಸಿನಿಮಾ ಇರಬೇಕು ಅಂತೇನೂ ಇಲ್ಲ. ಜನರ ಅಭಿರುಚಿಗೆ ತಕ್ಕಂತೆ ಸಿನಿಮಾಗಳ ವ್ಯಾಖ್ಯಾನ ಬದಲಾಗುತ್ತಿರುತ್ತದೆ. ಆದರೆ ಯಶಸ್ಸಿನ ಒಳಗುಟ್ಟು ಯಾರಿಗೂ ತಿಳಿದಿಲ್ಲ.

ರಾಜ್‌ಕುಮಾರ್, ವಿಷ್ಣುವರ್ಧನ್, ಅಶ್ವತ್ಥ್, ಬಾಲಕೃಷ್ಣ ಅವರಂಥ ಹಿರಿಯರನ್ನು ಕಳೆದುಕೊಂಡು ಚಿತ್ರರಂಗ ಹಿರಿಯರಿಲ್ಲದ ಮನೆಯಾಗಿದೆ? ನಿಮಗೂ ಅಂಥ ಅನಾಥ ಭಾವ ಕಾಡುತ್ತಿದೆಯೇ?
ಹುಟ್ಟು ಸಾವು ಯಾರಿಗೂ ತಿಳಿಯದ ಕಗ್ಗಂಟು. ಯಾರ ಜಾಗವನ್ನು ಯಾರೂ ತುಂಬಲೂ ಸಾಧ್ಯವಿಲ್ಲ. ಯಾರಿಗೆ ಯಾರನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಅವರವರದೇ ಆದ ಸಾಮರ್ಥ್ಯ ಇರುತ್ತದೆ.

ಸುಮಲತಾ ಅವರು ನಿಮ್ಮ ಬದುಕಿಗೆ ಬಂದ ಮೇಲೆ ಆದ ಬದಲಾವಣೆ ಏನು?
ತುಂಬಾ ಬದಲಾವಣೆಗಳಾದವು. ನನ್ನ ತಿದ್ದಿ ತೀಡಿದ ನನ್ನ ಮುದ್ದು ಹೆಂಡತಿ ಬದುಕನ್ನು ಬದಲಿಸಿದಳು. (ನಗು)

`ಮಮತೆಯ ಮಡಿಲು~ ಚಿತ್ರದಲ್ಲಿ ರೇಬಿಸ್ ರೋಗದ ಬಗ್ಗೆ ಮತ್ತು `ಮೌನರಾಗ~ದಲ್ಲಿ ಜೆನೆಟಿಕ್ಸ್ ಬಗ್ಗೆ ಜಾಗೃತಿ ಮೂಡಿಸುವ ಪಾತ್ರದಲ್ಲಿ ನಟಿಸಿದ್ದೀರಿ. ಅದಕ್ಕೆ ಏನು ಸ್ಫೂರ್ತಿ?
ನನ್ನ ಸಿನಿಮಾಗಳಲ್ಲಿ ಏನಾದರೂ ಸಂದೇಶ ಇರಬೇಕು ಎಂದುಕೊಳ್ಳುತ್ತಿದ್ದೆ. ಜನರಲ್ಲಿ ಜಾಗೃತಿ ಮೂಡಿಸಲು ನಾನು ಕೆಲವು ಕ್ರಾಂತಿಕಾರಿ ಪಾತ್ರಗಳನ್ನು ನಿರ್ವಹಿಸಿದೆ. ನಾನು ಪೊಲೀಸ್ ಸಮವಸ್ತ್ರ ಧರಿಸಿದಾಗ ಸೆಟ್‌ನಲ್ಲಿ ಯಾರೂ ಹತ್ತಿರ ಬರುತ್ತಿರಲಿಲ್ಲ.

ನಿಮಗಿದ್ದ ರೆಬೆಲ್ ಇಮೇಜಿನಿಂದ ಸೌಮ್ಯ ಸ್ವಭಾವದ ಪಾತ್ರಗಳಿಗೆ ಬದಲಾಗಲು ಕಾರಣ?
ಅಂಥ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. `ಹೃದಯ ಹಾಡಿತು~ ಚಿತ್ರದಲ್ಲಿ ನನ್ನದು ಸೌಮ್ಯ ಸ್ವಭಾವದ ಪಾತ್ರ. ಫೈಟ್ ಬೇಡ ಎಂದರೂ ಬಿಡದೇ ಮಾಡಿಸಿದರು. ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಮಾಡಬೇಕಾಗುತ್ತದೆ. ರಷ್ಯಾದ `ಕ್ರೈಮ್ ಅಂಡ್ ಪನಿಶ್‌ಮೆಂಟ್~ ಕಾದಂಬರಿಯನ್ನು ಆಧರಿಸಿ ಬಂದ `ಏಳು ಸುತ್ತಿನ ಕೋಟೆ~ ಸಿನಿಮಾ ಬಿಡುಗಡೆಯಾದಾಗ ಜನ ನೋಡಲಿಲ್ಲ. ಆ ಚಿತ್ರವನ್ನು ಟೀವಿಯಲ್ಲಿ ನೋಡಿ ಮೆಚ್ಚಿಕೊಂಡರು. ಏನು ಪ್ರಯೋಜನ? 

ದೊಡ್ಡ ಸಂಭ್ರಮದ ಕೇಂದ್ರದಲ್ಲಿ ನಿಂತಿದ್ದೀರಿ. ಏನನ್ನಿಸುತ್ತಿದೆ...?
ಅದನ್ನು ಸಮಾರಂಭದಲ್ಲಿ, ವೇದಿಕೆಯ ಮೇಲೆ ಹೇಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT