ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ಜಾತ್ರೆ ಪೂರ್ವಸಿದ್ಧತಾ ಸಭೆ

Last Updated 15 ಫೆಬ್ರುವರಿ 2011, 7:30 IST
ಅಕ್ಷರ ಗಾತ್ರ

ನಾಯಕನಹಟ್ಟಿ: ‘ಅಧಿಕಾರಿಗಳು ಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸಿ ತಿಪ್ಪೇರುದ್ರಸ್ವಾಮಿಯ ಜಾತ್ರೆ ಯಶಸ್ವಿಗೊಳಿಸಬೇಕು’ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಕರೆ ನೀಡಿದರು.
ರಾಜ್ಯದ ಪ್ರಸಿದ್ಧವಾದ ತಿಪ್ಪೇರುದ್ರಸ್ವಾಮಿ ಜಾತ್ರೆಗೆ  ಹೊರ ರಾಜ್ಯಗಳಿಂದಲೂ ಭಕ್ತರು  ಆಗಮಿಸುವುದರಿಂದ ಸ್ಥಳಿಯ ಆಡಳಿತ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ನಿರ್ವಹಿಸಬೇಕು. ಪೊಲೀಸ್,  ಆರೋಗ್ಯ, ಸಾರಿಗೆ ಇಲಾಖಾ ಅಧಿಕಾರಿಗಳು ಶ್ರಮವಹಿಸಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಪ ವಿಭಾಗಾಧಿಕಾರಿ ವೆಂಕಟೇಶ್ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಮಾಹಿತಿ ವಿನಿಮಯ ಮಾಡಿಕೊಂಡರು.ತಾಲ್ಲೂಕು ವೈದ್ಯಾಧಿಕಾರಿ ಡಾ.ಪಾಲಾಕ್ಷ ಮಾತನಾಡಿ, ಪಟ್ಟಣದ ನಾಲ್ಕು ಕಡೆಗಳಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆದು ಸುಮಾರು 80 ಜನ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.

ಬಸ್ ವ್ಯವಸ್ಥೆ
: ಸಾರಿಗೆ ಇಲಾಖೆಯ ದಾವಣಗೆರೆ ಡಿಪೋದ ಅಧಿಕಾರಿಗಳು  ಮಾತನಾಡಿ, ಜಾತ್ರೆಗಾಗಿ ಸುಮಾರು 300 ಬಸ್ ಬಿಡಲಾಗುವುದು. ಚಿತ್ರದುರ್ಗ, ದಾವಣಗೆರೆ, ಚಳ್ಳಕೆರೆ, ಹಿರಿಯೂರು, ಬಳ್ಳಾರಿಗಳಿಂದ ನಾಯಕನಹಟ್ಟಿಗೆ ಬಸ್ ಸಂಪರ್ಕ ಕಲ್ಪಿಸಲಾಗುವುದು. ನಾಯಕನ ಹಟ್ಟಿಯಲ್ಲಿ ತಾತ್ಕಾಲಿಕ ಎರಡು ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಅದಕ್ಕೆ ಸೂಕ್ತ ಜಾಗ ನೀಡುವಂತೆ ಸಭೆಗೆ ವಿನಂತಿಸಿದರು.

ಕುಡಿಯುವ ನೀರು
: ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರುವುದರಿಂದ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. 10 ಬೋರ್‌ವೆಲ್‌ಗಳನ್ನು ರಿ-ಬೋರಿಂಗ್ ಮಾಡಿ ನೀರನ್ನು ಸರಬರಾಜು ಮಾಡಲು ಸೂಕ್ತ ಕ್ರಮಕೈಗೊಳ್ಳುವಂತೆ ವೆಂಕಟೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಬೋರ್‌ವೆಲ್‌ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಬೆಸ್ಕಾಂಗೆ ತಿಳಿಸಿದರು. ನಾಯಕನಹಟ್ಟಿಗೆ 24 ಗಂಟೆ ವಿದ್ಯುತ್ ಸೌಲಭ್ಯವಿರುವುದರಿಂದ ನೀರಿನ ಬೋರ್‌ವೆಲ್‌ಗಳಿಗೂ ಒಂದು ವಾರ ನಿರಂತರ ವಿದ್ಯುತ್ ನೀಡಲಾಗುವುದು ಎಂದು ಬೆಸ್ಕಾಂನ ಸೂರಲಿಂಗಪ್ಪ ತಿಳಿಸಿದರು.ಸಭೆಯಲ್ಲಿ ಗ್ರಾ.ಪಂ. ಸದಸ್ಯರು ಶಾಶ್ವತವಾಗಿ ಶೌಚಾಲಯ ನಿರ್ಮಿಸಲು ಮನವಿ ಮಾಡಿದರು.

ಜಾತ್ರೆಗಾಗಿ ಸದ್ಯ ತಾತ್ಕಾಲಿಕ ಶೌಚಾಲಯ ನಿರ್ಮಿಸುವಂತೆ ವೆಂಕಟೇಶ್ ಅಧಿಕಾರಿಗಳಿಗೆ ತಿಳಿಸಿದರು.ಜಿ.ಪಂ. ಸದಸ್ಯೆ ಜಯಮ್ಮ ಬಾಲರಾಜ್, ತಾ.ಪಂ. ಅಧ್ಯಕ್ಷೆ ಬೋರಮ್ಮ ಬಂಗಾರಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಪಿ. ತಿಪ್ಪೇಸ್ವಾಮಿ, ಗ್ರಾ.ಪಂ. ಅಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯರು, ಡಿವೈಎಸ್‌ಪಿ ಹನುಮಂತರಾಯ, ಸಿಪಿಐ ವಾಸುದೇವ್, ಪ್ರೋಬೆಷನರಿ ಉಪ ವಿಭಾಗಾಧಿಕಾರಿ ಡಾ.ಸ್ನೇಹಾ ಮತ್ತು ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT