ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕರಲ್ಲೇ ಮೂಡದ ಒಮ್ಮತ

ಬಿಎಸ್‌ವೈ ನಿಷ್ಠರ ವಿರುದ್ಧ ಕ್ರಮಕ್ಕೆ ಗಂಭೀರ ಚಿಂತನೆ
Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಷ್ಠರೆಂದು ಗುರುತಿಸಿಕೊಂಡಿರುವ ಬಿಜೆಪಿ ಶಾಸಕರು ಮತ್ತು ಮಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಪ್ರಮುಖರಲ್ಲೇ ಈಗ ತೀವ್ರ ಸ್ವರೂಪದ ಭಿನ್ನಾಭಿಪ್ರಾಯ ಕಂಡು ಬಂದಿದೆ.

ಶುಕ್ರವಾರ ತಡರಾತ್ರಿ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಮನೆಯಲ್ಲಿ ನಡೆದ ಕೋರ್ ಕಮಿಟಿಯ ಸಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನ ದನಿಗಳು ಕೇಳಿ ಬಂದವು. ಯಡಿಯೂರಪ್ಪ ಅವರು ಡಿಸೆಂಬರ್ 9ರಂದು ಹಾವೇರಿಯಲ್ಲಿ ನಡೆಸಲು ಉದ್ದೇಶಿಸಿರುವಕರ್ನಾಟಕ ಜನತಾ ಪಾರ್ಟಿಯ (ಕೆಜೆಪಿ) ಸಭೆಗೆ ಸಂಬಂಧಿಸಿದಂತೆ ಸಭೆಯು ಗಂಭೀರವಾಗಿ ಚರ್ಚಿಸಿತು.

8ನೇ ಪುಟ ನೋಡಿಸಭೆಯಲ್ಲಿ ಪಕ್ಷದ ಕಾರ್ಯದರ್ಶಿ ಅನಂತಕುಮಾರ್, ಕರ್ನಾಟಕದ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ಮತ್ತು ಆರ್.ಅಶೋಕ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಘಟನಾ ಕಾರ್ಯದರ್ಶಿ ಸಂತೋಷ್ ಮತ್ತು ಸತೀಶ್ ಪಾಲ್ಗೊಂಡಿದ್ದರು.

`ಪಕ್ಷವು ತನ್ನ ಮುಖ ಉಳಿಸಿಕೊಳ್ಳಬೇಕೆಂದರೆ ಕೂಡಲೇ ವಿಧಾನಸಭೆಯನ್ನು ವಿಸರ್ಜಿಸಬೇಕು' ಎಂದು ಕೆಲವು ನಾಯಕರು ಪ್ರತಿಪಾದಿಸಿದರೆ ಇನ್ನೂ ಕೆಲವು ನಾಯಕರು ಇದನ್ನು ಬಲವಾಗಿ ವಿರೋಧಿಸಿದರು. ಈ ರೀತಿ ಮಾಡಿದ್ದೇ ಆದರೆ ಅದು ಯಡಿಯೂರಪ್ಪ ಅವರಿಗೆ ಇನ್ನಷ್ಟು ಅನುಕೂಲವಾಗಿ ಪರಿಣಮಿಸುತ್ತದೆ ಎಂದರು.

`ಯಡಿಯೂರಪ್ಪ ಅವರು ಶುಕ್ರವಾರ ಬೆಳಗಾವಿಯಲ್ಲಿ ನಡೆಸಿದ `ಟೀ ಪಾರ್ಟಿ'ಯಲ್ಲಿ ಪಾಲ್ಗೊಂಡವರನ್ನು ಕೂಡಲೇ ಪಕ್ಷದಿಂದ ಅಮಾನತುಗೊಳಿಸಬೇಕು' ಎಂದು ಕೆಲವು ನಾಯಕರು ಸಲಹೆ ಇತ್ತರು.  ಆದರೆ ಇದಕ್ಕೆ ಸಭೆಯಲ್ಲಿದ್ದ ಹಿರಿಯ ನಾಯಕರು ಸಮ್ಮತಿ ಸೂಚಿಸಲಿಲ್ಲ. `ಈ ರೀತಿ ಮಾಡಿದ್ದೇ ಆದರೆ ಸರ್ಕಾರದ ಪತನಕ್ಕೆ ನಾಂದಿ ಹಾಡುವುದು ಖಚಿತ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಆದಾಗ್ಯೂ ಪಕ್ಷದ ನಾಯಕರು ಬಿಜೆಪಿಯಿಂದ ಕೆಜೆಪಿ ಕಡೆಗೆ ವಲಸೆ ಹೋಗಲಿರುವ ಶಾಸಕರು ಮತ್ತು ಮಂತ್ರಿಗಳನ್ನು ತಡೆಯುವುದು ಹೇಗೆಂಬ ಬಗ್ಗೆ ಈ ಸಭೆಯಲ್ಲಿ ಸುದೀರ್ಘ ಚಿಂತನ ಮಂಥನ ನಡೆಸಿದರು.ಪಕ್ಷವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಈಗಿನ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರನ್ನು ಬದಲಿಸುವ ಕುರಿತಂತೆಯೂ ಸಭೆಯಲ್ಲಿ ಹಾಜರಿದ್ದ ನಾಯಕರ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು. ನಸುಕಿನ ಎರಡು ಗಂಟೆಯವರೆಗೂ ಸಭೆ ಮುಂದುವರೆದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT