ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಗಳಿಗೆ ನೀರು ಬಿಡುಗಡೆ

ಅವಳಿ ಜಲಾಶಯಗಳಿಂದ 13 ಕೆರೆ ಭರ್ತಿಗೆ ಕ್ರಮ
Last Updated 21 ಡಿಸೆಂಬರ್ 2013, 9:58 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಜೀವನಾಡಿಗಳಾದ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಅವಳಿ ಜಲಾಶಯದಿಂದ ಶುಕ್ರವಾರ ಅರೆ ನೀರಾವರಿ ಬೆಳೆ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ನಾಲೆಗಳಿಗೆ ನೀರು ಬಿಡಲಾಗಿದೆ.

ಎರಡು ಜಲಾಶಯದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಪೂಜೆ ನೆರವೇರಿಸಿದ ನಂತರ ನೀರೆತ್ತುವ ತೂಬಿನ ಹ್ಯಾಂಡಲ್ ತಿರುಗಿಸಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಸುವರ್ಣಾವತಿ ಜಲಾಶಯದ ವ್ಯಾಪ್ತಿಯ 2,418 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಅರೆ ನೀರಾವರಿ ಬೆಳೆ ಹಾಗೂ ಕುಡಿಯುವ ನೀರಿನ ಅನುಕೂಲಕ್ಕಾಗಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ರೈತರು, ಬೆಳೆಗಾರರು ಸಲ್ಲಿಸಿದ ಮನವಿಯನ್ನು ಪರಿಗಣಿಸಿ ನೀರು ಬಿಡುಗಡೆ ಮಾಡಲಾಗಿದೆ ಎಂದರು.

ಸುವರ್ಣಾವತಿ ಜಲಾಶಯದಿಂದ ಬಿಡುಗಡೆ ಆಗುವ ನೀರಿನಿಂದ 1,500 ಎಕರೆ, ಚಿಕ್ಕಹೊಳೆ ಜಲಾಶಯ ನೀರಿನಿಂದ 918 ಎಕರೆ ಜಮೀನಿನಲ್ಲಿ ಬೆಳೆ ತೆಗೆಯಲು ರೈತರಿಗೆ ಅನುಕೂಲವಾಗಲಿದೆ.

ಸುವರ್ಣಾವತಿ ಜಲಾಶಯದಲ್ಲಿ ಪ್ರಸ್ತುತ ಶೇ 62 ರಷ್ಟು ಹಾಗೂ ಚಿಕ್ಕಹೊಳೆ ಜಲಾಶಯದಲ್ಲಿ ಶೇ 75 ರಷ್ಟು ನೀರು ಸಂಗ್ರಹವಿದೆ. ಬರುವ ಏಪ್ರಿಲ್‌ವರೆಗೆ ಒಟ್ಟು 110 ದಿನಗಳ ಕಾಲ ಬೆಳೆ, ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಪ್ರಸ್ತುತ ನಾಲೆಗಳಿಗೆ ನೀರು ಬಿಡುಗಡೆ ಮಾಡಿರುವುದರಿಂದ ರಾಗಿ, ಜೋಳ ಬೆಳೆಯಲು ರೈತರಿಗೆ ಅನುಕೂಲವಾಗಲಿದೆ. ಅಭಾವ ಪರಿಸ್ಥಿತಿ ಸಂದರ್ಭದಲ್ಲೂ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿರುವುದು ತಾಲ್ಲೂಕಿನ ಜನರಿಗೆ ವರದಾನವಾಗಿದೆ. ನೀರನ್ನು ಪೋಲು ಮಾಡದೇ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಚಿಕ್ಕಹೊಳೆ, ಸುವರ್ಣಾವತಿ ಜಲಾಶಯದ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಟಿ.ಎಂ. ಸುರೇಶ್ ಮಾತನಾಡಿ, ಸುವರ್ಣಾವತಿ ಜಲಾಶಯದಲ್ಲಿ ಪ್ರಸ್ತುತ 537.9 ದಶಲಕ್ಷ ಘನ ಅಡಿ ನೀರು, ಚಿಕ್ಕಹೊಳೆ ಜಲಾಶಯದಲ್ಲಿ 225.17 ದಶಲಕ್ಷ ಘನ ಅಡಿ ನೀರು ಸಂಗ್ರಹವಾಗಿದೆ. ಇದರಲ್ಲಿ ಶೇ 60ರಷ್ಟು ನೀರನ್ನು ಅರೆ ನೀರಾವರಿ ಬೆಳೆ ಹಾಗೂ ಕುಡಿಯುವ ನೀರಿನ ಬಳಕೆಗಾಗಿ ಬಿಡುಗಡೆ ಮಾಡಲಾಗಿದೆ. ಉಳಿದ ಶೇ 40ರಷ್ಟು ನೀರನ್ನು ಮುಂಬರುವ ಬೇಸಿಗೆ ಅವಧಿಗೆ ಕಾಯ್ದಿರಿಸಲಾಗುವುದು ಎಂದರು.

ಸುವರ್ಣಾವತಿ ಜಲಾಶಯದಿಂದ ಬಿಡುಗಡೆ ಮಾಡಿರುವ ನೀರಿನಿಂದ 11 ಕೆರೆಗಳು ಭರ್ತಿ ಆಗಲಿವೆ. ಚಿಕ್ಕಹೊಳೆ ಜಲಾಶಯ ನೀರಿನಿಂದ 2 ಕೆರೆಗಳಲ್ಲಿ ನೀರು ಸಂಗ್ರಹವಾಗಲಿದೆ. ಇದರಿಂದ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದರು.

ತಾಲ್ಲುಕು ಪಂಚಾಯಿತಿ ಸದಸ್ಯ ಚಿಕ್ಕ ಮಹದೇವು, ನೀರು ಬಳಕೆದಾರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಸಿದ್ದಯ್ಯ, ಜಲಾಶಯ ನಿರ್ವಹಣಾ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT