ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಇರುವ ಹಾಗೆಯೇ ಒಪ್ಪಿಕೊಳ್ಳಿ...

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಇಪ್ಪತ್ತೊಂಬತ್ತರ ಹರೆಯದ ಲೈಂಗಿಕ ಅಲ್ಪಸಂಖ್ಯಾತರಾದ ಅಕ್ಕೈ ಪದ್ಮಸಾಲಿ (ಅವನು- ಅವಳಾದ) ಮತ್ತು ಸೋನು ನಿರಂಜನ್ (ಅವಳು- ಅವನಾದ) ಪ್ರಕೃತಿಯ ವೈಚಿತ್ರ್ಯಕ್ಕೆ ಬಲಿಯಾಗಿ ನೊಂದವರು. ಈಗ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಈ ಧೀರ-ಧೀರೆಯ ಸಂದರ್ಶನ ಇಲ್ಲಿದೆ.

*  ಪುರುಷರಂತೆ ಸಹಜವಾಗಿ ಇದ್ದೀರಾ?
 ಹೌದು ನಾನು ಮಾನಸಿಕವಾಗಿ ಗಂಡಿನಂತೆಯೇ ಸಹಜವಾಗಿಯೇ ಇದ್ದೇನೆ. ಸುತ್ತಲ ಸಮಾಜ ಮಾತ್ರ ನೀನು ಹೆಣ್ಣು ಅಂತಾ ಹೇಳುತ್ತಿದೆ. ಅದಕ್ಕೆ ನನಗೆ ಬೇಸರವಿಲ್ಲ. ನನ್ನ ಮೂಲ ಕೇರಳ. ತಂದೆ ತಾಯಿಯಿಲ್ಲದ ಅನಾಥೆ. ಕಷ್ಟದಲ್ಲಿ ಪಿಯುಸಿವರೆಗೂ ತಲುಪಿದೆ.

ಆದರೆ ನಾನಿದ್ದ ಮಹಿಳಾ ಕಾಲೇಜಿನಲ್ಲಿ ಪುರುಷರಂತೆ ಇರುವವರನ್ನು ಯಾಕೆ ಇಟ್ಟುಕೊಂಡಿದ್ದಾರೆ ಎಂದು ಕೆಲವು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪಿಯುಸಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

*  ಗಂಡ್ತನ ಪಡೆಯುವುದಕ್ಕಾಗಿ ಯಾವುದಾದರೂ ಸಿದ್ಧತೆ ನಡೆಸಿದ್ದೀರಾ?
ಗಂಡ್ತನ ಪಡೆಯುವುದಕ್ಕಾಗಿ ಯಾವ ಸಿದ್ಧತೆನೂ ಇಲ್ಲ. ಸಹಜವಾಗಿ ಮನಸ್ಸು ಗಂಡಿನಂತೆಯೇ ವರ್ತಿಸುತ್ತದೆ. ಆದರೆ, ಸಮಾಜ ಹಾಗೇ ಗುರುತಿಸಲೆಂದು ಪುರುಷರ ಉಡುಪನ್ನು ಧರಿಸುತ್ತೇನೆ, ಕೇಶ ಶೈಲಿಯೂ ಪುರುಷರದ್ದೆ. ಇನ್ನು ನಮಗಾಗಿ (ಅವಳು ಅವನಾಗುವವರಿಗಾಗಿ) ಇರುವ ಶಸ್ತ್ರಚಿಕಿತ್ಸೆಗೆ 40 ಲಕ್ಷ ಬೇಕಾಗುತ್ತದೆ.
 
ಒಪ್ಪತ್ತಿನ ಊಟಕ್ಕೆ ಪರದಾಡುವವರಿಗೆ ಇದು ಬಹಳ ದುಬಾರಿ. ಆದ್ದರಿಂದ ಹೆಣ್ಣಿನ ದೇಹದ ಭಾಗಗಳನ್ನು ತೆಗೆದು, ದೈಹಿಕವಾಗಿಯೂ ಗಂಡಾಗಬೇಕೆಂಬ ಆಸೆಯಿದೆ. ಸರ್ಕಾರ ಇದಕ್ಕೆ ಸಹಾಯ ಮಾಡಿದರೆ ಒಳಿತು. ಕನಿಷ್ಠ ಪಕ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಈ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಬೇಕು.

*  ಹೊಟ್ಟೆಪಾಡಿಗಾಗಿ ಏನು ಮಾಡಿಕೊಂಡಿದ್ದೀರಿ?
ಲೈಂಗಿಕ ಅಲ್ಪಸಂಖ್ಯಾತರು, ಎಚ್‌ಐವಿ ಪೀಡಿತರು ಮತ್ತು ವೇಶ್ಯೆಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ `ಸಂಗಮ~ ಮತ್ತು `ಸಮರ~ದಂತಹ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಲೈಂಗಿಕ ಅಲ್ಪಸಂಖ್ಯಾತರು ( ಅವಳು-ಅವನಾದವರು) ಸಾಮಾನ್ಯವಾಗಿ ವೇಶ್ಯಾವೃತ್ತಿಯಲ್ಲಿ ತೊಡಗಿಕೊಳ್ಳುವುದಿಲ್ಲ.

ನಾವು ಹೆಣ್ಣುಮಕ್ಕಳು ಅಂತ ಸುಳ್ಳು ಹೇಳಿದರೆ ಮಾತ್ರ ಈ ಸಮಾಜ ಉದ್ಯೋಗ, ಬಾಡಿಗೆಗೆ ಮನೆ ಎಲ್ಲವನ್ನು ನೀಡುತ್ತದೆ. ಹಾಗೇ ಆತ್ಮದ್ರೋಹ ಮಾಡಿಕೊಳ್ಳಲು ಮನಸ್ಸು ಬರುವುದಿಲ್ಲ. ಆದರೆ ಹಾಗೇ ಮಾಡದೇ ವಿಧಿಯಿಲ್ಲ.

*  ಸಾಮಾನ್ಯವಾಗಿ ಯಾವ ತೆರನಾದ ಮುಜುಗರವನ್ನು ಎದುರಿಸಿದ್ದೀರಾ?
ನನಗೆ ಯಾರಾದರೂ `ಮೇಡಂ~ ಅಂತಾ ಕರೆದರೆ ಅತಿಯಾದ ಮುಜುಗರ ಉಂಟಾಗುತ್ತದೆ. ಇದಲ್ಲದೇ ಮನಸ್ಸು ಗಂಡಾದರೂ, ದೇಹ ಹೆಣ್ಣಾಗಿರುವುದರಿಂದ, ಹೆಣ್ಣು ಅನುಭವಿಸುವ ತಿಂಗಳ ನೋವಿನ ಸಂದರ್ಭದಲ್ಲಿ ಅತಿ ಹಿಂಸೆ ಎನಿಸುತ್ತದೆ.

ಹೆಣ್ಣಿನ ದೇಹವನ್ನು ವೈದ್ಯಕೀಯವಾಗಿ ಮರೆಮಾಚಬೇಕೆಂಬ ಆಸೆಯಿದೆ.  ಆದರೆ ಅದಕ್ಕೆ ಆರ್ಥಿಕ ಬಲ ಬೇಕು. ಸಾಧ್ಯವಾದಷ್ಟು ಹಣ ಉಳಿತಾಯ ಮಾಡುತ್ತಿದ್ದೇನೆ.

*  ಮಾನಸಿಕ ಬೆಂಬಲಕ್ಕೆ ಯಾರಿದ್ದಾರೆ?
ಪ್ರತಿ ಹಂತದಲ್ಲೂ ನನ್ನ ಮನೆಯಂತಿರುವ `ಸಂಗಮ~ ಸಂಸ್ಥೆಯ ಸದಸ್ಯರಿದ್ದಾರೆ. ಅದಕ್ಕಿಂತ ಹೆಚ್ಚಾಗಿ ನಾನು ಚಿತ್ರಾ ಎಂಬುವವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದೇನೆ. ಆಕೆ ಉತ್ತಮ ಹಾಡುಗಾರ್ತಿ, ಪ್ರತಿ ಕ್ಷಣ ನನ್ನ ಎಲ್ಲ ಸಮಸ್ಯೆ, ನೋವುಗಳಿಗೆ ಸ್ಪಂದಿಸುತ್ತಾಳೆ. ಈ ನಡುವೆ ಮಗುವೊಂದನ್ನು ದತ್ತು ತೆಗೆದುಕೊಂಡು ಸಾಕಬೇಕೆಂಬ ಆಸೆಯಿದೆ.

*  ನಕಲಿ ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ?
ಹೌದು ನಾವು ಭಿಕ್ಷೆ ಬೇಡುವುದರಿಂದ ಆದಾಯ ದೊರೆಯುತ್ತದೆ. ಇದಕ್ಕಾಗಿಯೇ ಕೆಲವು ಮಂದಿ ನಿರುದ್ಯೋಗಿಗಳು ಲೈಂಗಿಕ ಅಲ್ಪಸಂಖ್ಯಾತರೆಂದು ಹೇಳಿಕೊಳ್ಳುತ್ತಾರೆ. ಇಂತಹವರಿಂದ ನಮ್ಮ ಸಮುದಾಯಕ್ಕೆ ಕಳಂಕ. ಇದನ್ನು ವಿರೋಧಿಸುತ್ತೇವೆ. ಆದರೆ ಇವರ ನೆಪದಲ್ಲಿ ಸಮಾಜ ನಮ್ಮನ್ನು ಕಡೆಗಣಿಸದಿರಲಿ. ನಾವು ಇರುವ ಹಾಗೆಯೇ ನಮ್ಮನ್ನು ಒಪ್ಪಿಕೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT