ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಚ್ಚನಬಂಡಹಳ್ಳಿ ರಸ್ತೆ ಸಮಸ್ಯೆ :ಬಂಡೆಯಂಥವರೂ ಬೆಚ್ಚಿ ಬೀಳ್ತಾರೆ

Last Updated 19 ಅಕ್ಟೋಬರ್ 2012, 8:10 IST
ಅಕ್ಷರ ಗಾತ್ರ

ಗುಡಿಬಂಡೆ: ರಸ್ತೆ ದುರಸ್ತಿ, ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಭಾರಿ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡುತ್ತಿದ್ದು, ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆದಿರುವುದು ಕಂಡು ಬರುತ್ತದೆ. ಆದರೆ ಕೆಲವೇ ತಿಂಗಳಲ್ಲಿ,  ಕೆಲವು ಬಾರಿ ಬೆರಳೆಣಿಕೆಯಷ್ಟು ದಿನಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿರುತ್ತದೆ.

ಆಗ ವಾಹನ ಸವಾರರು, ಪಾದಚಾರಿಗಳ ಪಡಿಪಾಟಲು ಒಂದೆರಡಲ್ಲ. ಈ ರೀತಿ ತೊಂದರೆ ಆಗುತ್ತಿರುವುದರಲ್ಲಿ ತಾಲ್ಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಚ್ಚನಬಂಡಹಳ್ಳಿ ರಸ್ತೆಯೂ ಒಂದು. ಐದಾರು ವರ್ಷಗಳಿಂದ ನಿಚ್ಚನಬಂಡಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.

2002ರಲ್ಲಿ ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಲಾಯಿತು. ಆದರೆ ನಂತರದ ವರ್ಷಗಳಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿಲ್ಲ. ಅದರ ನಿರ್ವಹಣೆ ಕಡೆಗೆ ಯಾರೂ ಗಮನಹರಿಸಲಿಲ್ಲ. ಹಂತಹಂತವಾಗಿ ಹದಗೆಡುತ್ತ ಈಗ ಸಂಪೂರ್ಣವಾಗಿ ಹಾಳಾಗಿದೆ. ಈ ರಸ್ತೆಯಲ್ಲಿ ಪ್ರಯಾಣಿಸುವುದೆಂದರೆ ನರಕಯಾತನೆಯೆ. ವಾಹನಗಳು ಜಖಂಗೊಳ್ಳುತ್ತವೆ ಇಲ್ಲವೇ ಮೈಕೈ ನೋವಾಗುತ್ತದೆ ಎಂದು ಗ್ರಾಮಸ್ಥರು ದೂರುತ್ತಾರೆ.

ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ಬಸ್‌ಗಳು ಕೂಡ ಸಂಚರಿಸುವುದಿಲ್ಲ. ಬೀದಿದೀಪಗಳು ಇಲ್ಲದ ಈ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದರೆ ಅಪಘಾತ ನಿಶ್ಚಿತ. ಈ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮುನಿಯಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ನಿಚ್ಚನಬಂಡಹಳ್ಳಿ ಗ್ರಾಮದಲ್ಲಿ ರಸ್ತೆಯಷ್ಟೇ ಅಲ್ಲ, ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆಯೂ ಹಲವು ಸಮಸ್ಯೆಗಳಿವೆ. ಇಲ್ಲಿ ಇರುವ ಕುಡಿಯುವ ನೀರಿನ ಟ್ಯಾಂಕ್‌ಗಳು ಶುಚಿಯಾಗದೆ ಹಲವು ದಿನಗಳೇ ಕಳೆದಿವೆ. ಈ ಸಮಸ್ಯೆ ಪರಿಹರಿಸುವಲ್ಲಿ ಗ್ರಾಮಪಂಚಾಯಿತಿ ವಿಫಲವಾಗಿದೆ. ಮಲಿನ ನೀರು ಸೇವನೆಯಿಂದ ಗ್ರಾಮಸ್ಥರು ಅಸ್ವಸ್ಥರಾಗುತ್ತಿದ್ದಾರೆ. ಚರಂಡಿ ವ್ಯವಸ್ಥೆ ಸರಿಯಿರದೆ ಪರಿಸರ ಇನ್ನಷ್ಟು ಮಲಿನವಾಗುತ್ತಿದೆ ಎಂದರು.

ಕೆಲವೇ ದಿನಗಳಲ್ಲಿ ನಮ್ಮ ಗ್ರಾಮದ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಅನಿವಾರ್ಯವಾಗುತ್ತದೆ. ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT