ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನ್ನ ನೆನಪಿನ ಹಂಗ್ಯಾಕೆ?

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ದುಃಖ ಉಮ್ಮಳಿಸಿ ಕಣ್ಣೀರು ಜಾರುವಾಗ ಕೆನ್ನೆ ಅನೂಹ್ಯ ಪುಳಕ ಅನುಭವಿಸುತ್ತದೆ. ಇದು ಅನಿವಾರ್ಯತೆ- ನಿಯಮ. ನೀರು ಜಾರಿದರೂ, ಕಣ್ಣೀರು ಹರಿದರೂ ಅಲ್ಲೊಂದು ಸಣ್ಣ ಸಂಚಲನ ಸೃಷ್ಟಿಯಾಗಿ ಬಿಡುತ್ತದೆ.

ನೀರು- ಕಣ್ಣೀರು ಕೆನ್ನೆಗೆ ವ್ಯತ್ಯಾಸವಾದರೂ ತಿಳಿಯೋದು ಹೇಗೆ? ನಿನ್ನ ನೆನಪುಗಳೂ ಹಾಗೆಯೇ... ನೀನು ದೂರವಾಗಿದ್ದರೂ ಅವೆಲ್ಲ ಪುಳಕಗಳೆ.

ನನಗೆ ಗೊತ್ತು. ಏನೆಲ್ಲ ಸಮರ್ಥನೆಗಳನ್ನು ಕೊಟ್ಟರೂ, ಬುದ್ಧಿ ಖರ್ಚು ಮಾಡಿ ಇಂತಹ ನೂರೊಂದು ಉದಾಹರಣೆಗಳನ್ನು ಮಂಡಿಸಿದರೂ ನೀನು ನನ್ನನ್ನು ಕ್ಷಮಿಸೋಲ್ಲ ಎಂದು. ನಿನ್ನ ಕೋಟಾದಲ್ಲಿರುವ ಎಲ್ಲ ಕ್ಷಮಾಪಣೆಗಳನ್ನೂ ನನ್ನನ್ನು ಕ್ಷಮಿಸಲು ಬಳಸಿಬಿಟ್ಟಿದ್ದೀಯ ನೀನು.

ನಿನ್ನನ್ನು ಮರೆತು ಬಿಡಲು ತೀರ್ಮಾನಿಸಿದ್ದೀನಿ. ನಿನ್ನ ನೆನಪುಗಳು ನನ್ನನ್ನು ಕಾಡುತ್ತವೆ, ನೋವಾಗುತ್ತದೆ ಅದಕ್ಕೆ ಈ ನಿರ್ಧಾರ ಎಂದು ಭಾವಿಸಬೇಕಿಲ್ಲ. ಇಂದಿಗೂ ಆ ಎಲ್ಲ ನೆನಪುಗಳು ನನ್ನಲ್ಲಿ ಸಂತಸದ ಗೆರೆಗಳನ್ನೇ ಮೂಡಿಸುತ್ತಿವೆ.

ನೀನೇ ದೂರ ಹೋದ ಮೇಲೆ ನಿನ್ನ ನೆನಪುಗಳ ಸವಿಯನ್ನು ಅನುಭವಿಸುವುದು `ಅನೈತಿಕ~ ಎನಿಸಲಾರಂಭಿಸಿದೆ. ಅದಕ್ಕೆ ಈ ತೀರ್ಮಾನ ಅಷ್ಟೆ.

ನನ್ನಂತಹ ಪೋಲಿ- ಪಕಾಡಿಯ ಜತೆ ನೀನು ಇಷ್ಟು ದಿನಗಳ ಕಾಲ ಇದ್ದೇ ಎಂಬುದೇ ಹೆಮ್ಮೆಯ ಸಂಗತಿ. ನೀನಲ್ಲದೆ ಬೇರೆ ಯಾರೂ ನನ್ನನ್ನ ಅಷ್ಟೊಂದು ಬಾರಿ ಕ್ಷಮಿಸಲು ಸಾಧ್ಯವಿಲ್ಲ. ನೀನು ಇಲ್ಲ ಎಂದು ಅಂದುಕೊಂಡಾಗಲೆಲ್ಲ ನೀನೇ ಬೇಕು ಅನಿಸುತ್ತದೆ. ಈಗಲೂ ಪ್ರೀತಿ ಎಂದರೇನು ಎಂದರೆ ನಾನು ಕ್ಷಮೆ ಎಂದೇ ಹೇಳುತ್ತೇನೆ...

ನಾನು ಅಂದು ಮಾಡಿದ ತಪ್ಪನ್ನ ನೀನು ಮಾತ್ರವ್ಲ್ಲಲ ಬೇರೆ ಯಾವುದೇ ಹುಡುಗಿಯೂ ಮನ್ನಿಸೋಲ್ಲ ಅಂತ ನಂಗೆ ಗೊತ್ತು. ಅದೆಷ್ಟು ಕೆಟ್ಟ ಅಭ್ಯಾಸಗಳಿಂದ ನನ್ನನು ನೀನು ದೂರ ಮಾಡಿದೆ ಎಂದು ನೆನಪಿಸಿಕೊಂಡರೆ ಆಶ್ಚರ್ಯವಾಗುತ್ತದೆ.
 
ನನ್ನತನವನ್ನು ನಾನು ಬಿಟ್ಟಷ್ಟು ಎಂದರೆ ಸರಿ ಎನಿಸಬಹುದೇನೋ! ಕಂಡ ಕಂಡವರ ಹಿಂದೆ ಹೋಗಬಾರದು, ಗುಂಪಿನಲ್ಲಿ ಪೋಲಿಯಂತೆ ಮಾತನಾಡಬಾರದು, ಗಡ್ಡ ಬೋಳಿಸಿಕೊಳ್ಳಬೇಕು ಎಂಬುವುದರಿಂದ ಹಿಡಿದು ತಿಂಡಿ- ಊಟ ಮಾಡಿದ ಮೇಲೆ ತಟ್ಟೆಯಲ್ಲಿ ಸ್ವಲ್ಪ ನೀರು ಹಾಕಬೇಕು. ಇಲ್ಲದಿದ್ದರೆ ಅದು ಒಣಗುತ್ತದೆ ಎನ್ನುವವರೆಗೂ, ಎಲ್ಲವೂ ನೀನು ಕಲಿಸಿಕೊಟ್ಟ ಪಾಠಗಳೇ...

ನಾನು ಇರೋದೆ ಹೀಗೆ. ಬದಲಾಗಲ್ಲ ಎಂಬ ವ್ಯಕ್ತಿಯಲ್ಲೂ ಒಂದು ಧನಾತ್ಮಕ ಬದಲಾವಣೆ ತರುವುದು ಒಂದು ಪ್ರೀತಿಸೋ ಹೃದಯದಿಂದ ಮಾತ್ರ ಸಾಧ್ಯ. ಇಷ್ಟೆಲ್ಲ ಪೀಠಿಕೆ ಹಾಕಿ ಕಥೆ ಹೇಳುತ್ತಿರುವುದಕ್ಕೆ ಕಾರಣ ಇದೆ...

ಅದೊಂದು ದಿನ ಗಂಭೀರವಾಗಿ ಯೋಚಿಸುತ್ತಿದ್ದೆ. `ಇಂದೇ ಕೊನೆ ಯಾವೊಂದು ನೆನಪುಗಳು ಇರಬಾರದು. ಇನ್ನೆಂದೂ ಆಕೆಯನ್ನು ಜ್ಞಾಪಕ ಮಾಡಿಕೊಳ್ಳಬಾರದು. ಮನಸ್ಸಿಗಿಂತ ದೊಡ್ಡದು ಯಾವುದೂ ಇಲ್ಲ. ಇದು ನನಗೆ ಸವಾಲು. ನಿಜ, ಇಂದಿಗೆ ನಿನ್ನನ್ನು ಮರೆತೇ ಬಿಟ್ಟೇ ಎಂದು ನಿಟ್ಟುಸಿರು ಬಿಟ್ಟಿದ್ದೆ~

ಹತ್ತು ದಿನಗಳು ಕಳೆದವು. ಅದೊಂದು ದಿನ ಒಬ್ಬನೇ ಹೋಟೆಲ್‌ಗೆ ಹೋದೆ. ನನಗಿಷ್ಟವಾದ ಬಿಸಿಬೇಳೆ  ಬಾತ್ ತಿಂದೆ. ಸ್ವಲ್ಪ ಹೊತ್ತಿನ ನಂತರ ಬಂದ ಸಪ್ಲೈಯರ್ ಹೇಳಿದ `ಸರ್ ಬೋರ್ಡ್ ನೋಡ್ಲಿಲ್ವಾ ಪ್ಲೇಟಲ್ಲಿ ನೀರು ಹಾಕಬಾರದು~, ಪ್ಲೇಟಲ್ಲಿ ನೀರು ಹಾಕಬೇಡಿ ಎಂದು ಹೇಳುವುದೇ ಕೆಲಸವಾಗಿದೆ ಎಂದು ಗೊಣಗಿದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT