ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣ ಅಗತ್ಯ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಆಹಾರಧಾನ್ಯಗಳ ಬೆಲೆ ದಿನದಿನಕ್ಕೂ ಗಗನಕ್ಕೇರುತ್ತಿರುವುದು ಆತಂಕಕಾರಿ ಬೆಳವಣಿಗೆ. ಜನಸಾಮಾನ್ಯರು ದಿನನಿತ್ಯ ಬಳಸುವ ಆಹಾರದ ಮೂಲವಾಗಿರುವ ಅಕ್ಕಿಯ ಬೆಲೆ ದಿಢೀರನೆ ಹೆಚ್ಚಾಗಿರುವುದು ಅವರ ಬದುಕನ್ನು ದುರ್ಭರಗೊಳಿಸಿದೆ.

ಅಕ್ಕಿ ಗಿರಣಿಗಳಿಗೆ ಬತ್ತದ ಪೂರೈಕೆ ಕಡಿಮೆಯಾಗುತ್ತಿರುವುದು ಹಾಗೂ ಅಕ್ಕಿ ರಫ್ತಾಗುತ್ತಿರುವುದು  ಧಾರಣೆ ಹೆಚ್ಚಲು ಕಾರಣ ಎಂದು ಅರ್ಥೈಸಲಾಗುತ್ತಿದೆ.
 
ತೀವ್ರವಾಗಿ ಬೆಲೆ ಹೆಚ್ಚಳವಾಗುತ್ತಿರುವುದಕ್ಕೆ ಸರ್ಕಾರದ ಧೋರಣೆಯೂ ಕಾರಣ ಎನ್ನಲಾಗಿದೆ. ಸರ್ಕಾರ ಈ ಸಲ ಬತ್ತಕ್ಕೆ ರೂ.13.20 ಬೆಂಬಲ ಬೆಲೆ ನೀಡಿ ದೊಡ್ಡ ಪ್ರಮಾಣದಲ್ಲಿ ಬತ್ತವನ್ನು ಖರೀದಿಸಿ ದಾಸ್ತಾನು ಮಾಡಿದೆ. ಅದನ್ನು ಅಕ್ಕಿಯನ್ನಾಗಿ ಪರಿವರ್ತಿಸಿ, ಮಾರುಕಟ್ಟೆಗೆ ತರಲು ನಿಧಾನಿಸಿದೆ.

ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಏರಲು ಇದೂ ಒಂದು ಕಾರಣ ಎಂದು ಅಧಿಕಾರಿಗಳೇ ಹೇಳುತ್ತಾರೆ. ಇದು ಇಲಾಖೆಯಲ್ಲಿ ನಿರ್ವಹಣೆಯ ಕೊರತೆಯನ್ನು ಹೇಳುತ್ತದೆ.  ಬರ ಪರಿಸ್ಥಿತಿಯಿಂದ ಆಹಾರಧಾನ್ಯಗಳ ಉತ್ಪಾದನೆ ಕಡಿಮೆಯಾಗಿದೆ. ಈಗಾಗಲೇ ದುರ್ಬಲ ಮುಂಗಾರಿನಿಂದ ಕೃಷಿ ಚಟುವಟಿಕೆಗಳು ಏರುಪೇರಾಗಿವೆ.
 
ದಿನಬಳಕೆಯ ಆಹಾರಧಾನ್ಯಗಳು, ತರಕಾರಿ ಬೆಲೆಗಳು ಗಗನಕ್ಕೇರಿ, ಆತಂಕ ಸೃಷ್ಟಿಸಿವೆ. ಇತ್ತೀಚಿನ ವರ್ಷಗಳಲ್ಲಿ ಅಕ್ಕಿ, ಗೋಧಿ, ಮೆಕ್ಕೆಜೋಳ, ತರಕಾರಿ, ಖಾದ್ಯತೈಲದ ಬೆಲೆಗಳು ಬೇಡಿಕೆ ಹೆಚ್ಚಳ, ಪೂರೈಕೆ ಅಭಾವದಿಂದ ದುಪ್ಪಟ್ಟಾಗಿವೆ. 

ರೈತರು ಆಹಾರಧಾನ್ಯಗಳ ಬದಲಿಗೆ ಹಣದ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಹೀಗಾಗಿ ಆಹಾರಧಾನ್ಯಗಳ ಅಭಾವ ಸೃಷ್ಟಿಯಾಗಿದೆ. ತೈಲಬೆಲೆ ಏರಿಕೆ ಪರಿಣಾಮವೂ ಆಹಾರಧಾನ್ಯಗಳ ಬೆಲೆ ಏರಿಕೆಗೆ ಕಾರಣವಾಗಿದೆ.

ಆದರೂ ಬತ್ತದ ಕೊರತೆ ಎದುರಾದಂತೆ ಕೃತಕ ಅಭಾವ ಸೃಷ್ಟಿಸಿ, ದರ ಹೆಚ್ಚಿಸಿಕೊಳ್ಳುವ ಹುನ್ನಾರವನ್ನೂ ಅಲ್ಲಗಳೆಯಲಾಗದು. ಮುಕ್ತಮಾರುಕಟ್ಟೆಯಲ್ಲಿ ಅಕ್ಕಿ ಪೂರೈಕೆ ವ್ಯವಸ್ಥೆ ಈಗ ಅಕ್ಕಿ ಗಿರಣಿಯ ಮಾಲೀಕರ ಹಿಡಿತದಲ್ಲೇ ಇದೆ.
 
ಅನೇಕ ವರ್ತಕರು ಅಕ್ರಮ ದಾಸ್ತಾನು ಮಾಡಿಕೊಂಡಿರುವ ಸಾಧ್ಯತೆಗಳಿವೆ. ಇಂತಹ ಕೃತಕ ಅಭಾವದ ಮೂಲಗಳನ್ನು ಕಂಡುಹಿಡಿಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಬಡವರ ಊಟಕ್ಕೆ ಕಲ್ಲು ಹಾಕುವ ಇಂತಹ ಪ್ರವೃತ್ತಿ ಮಾನವವಿರೋಧಿ ಕೃತ್ಯವೆನಿಸಿಕೊಳ್ಳುತ್ತದೆ.

ಶ್ರೀಸಾಮಾನ್ಯರು ದಿನನಿತ್ಯ ಬಳಸುವ ಆಹಾರ ಪದಾರ್ಥಗಳು ಅವರ ಕೈಗೆಟಕುವ ಬೆಲೆಗೆ ಸಿಗುವಂತಾಗಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸುಧಾರಿಸಬೇಕು. ಬೆಂಬಲ ಬೆಲೆ ಕೊಟ್ಟು, ಖರೀದಿಸಿದ ಬತ್ತವನ್ನು ಸರ್ಕಾರ ತಕ್ಷಣವೇ ಪಡಿತರದ ಮೂಲಕ ವಿತರಿಸಲು ಏನು ಅಡ್ಡಿ? ಆಹಾರ ಧಾನ್ಯಗಳ ಬೆಲೆಗಳು ಮುಂಬರುವ ದಿನಗಳಲ್ಲಿ ದುಬಾರಿಯಾಗಲಿವೆ ಎಂದು ವಿಶ್ವ ಆಹಾರ ವರದಿಯಲ್ಲಿ ಭವಿಷ್ಯ ನುಡಿಯಲಾಗಿದೆ.

ಇದರಿಂದ ಜನ ಅಪೌಷ್ಟಿಕತೆಯಿಂದ ಬಳಲುವ ಸಾಧ್ಯತೆ ಇದೆ ಎಂದೂ ವರದಿ ಎಚ್ಚರಿಸಿದೆ. ಆರ್ಥಿಕ ಹಿಂಜರಿತದ ನೆರಳು ಮತ್ತೊಮ್ಮೆ ನಮ್ಮ ಮುಂದಿದೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕು.

ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಲು ಕೇಂದ್ರವೂ ಹೆಣಗಾಡುತ್ತಿದೆ. ರಾಜ್ಯವೂ ಅಸಹಾಯಕವಾಗಿದೆ. ಸರ್ಕಾರವೇ ಹೀಗೆ ಕೈಕಟ್ಟಿ ಕುಳಿತರೆ ಶ್ರೀ ಸಾಮಾನ್ಯ ಯಾರಿಂದ ತಾನೆ ಪರಿಹಾರ ನಿರೀಕ್ಷಿಸಲು ಸಾಧ್ಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT