ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮಬಾಹಿರ ಆಯ್ಕೆ: ಆರೋಪ

Last Updated 2 ಜನವರಿ 2012, 7:50 IST
ಅಕ್ಷರ ಗಾತ್ರ

ಮುಂಡರಗಿ: ಪಟ್ಟಣದ ಎಸ್.ಎಸ್.ಪಾಟೀಲ ನಗರದ ಅಂಗನವಾಡಿ ಕೇಂದ್ರಕ್ಕೆ ವಿಜಯಲಕ್ಷ್ಮಿ ಕಣವಿಮಠ ಎಂಬುವವರು ಈಚೆಗೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಗೆ ಸುಳ್ಳು ದಾಖಲೆಗಳನ್ನು ನೀಡಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಆಯ್ಕೆಯಾಗಿದ್ದು, ಅದನ್ನು ಪುನರ್ ಪರಿಶೀಲಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಎಸ್‌ಪಿ ಜಿಲ್ಲಾಘಟಕದ ಅಧ್ಯಕ್ಷ ಬಸವರಾಜ ನವಲಗುಂದ ಹಾಗೂ ಮತ್ತಿತರರು ಆಗ್ರಹಿಸಿದ್ದಾರೆ.

ಈ ಕುರಿತು ಅವರು ತಾಲ್ಲೂಕು ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಇಲಾಖೆ ಮೂಲಕ ಶನಿವಾರ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ಮನವಿ ಪತ್ರ ರವಾನಿಸಿದ್ದಾರೆ.

ಎಸ್.ಎಸ್.ಪಾಟೀಲ ನಗರದ ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿ ಕಾರ್ಯಕರ್ತೆಯಾಗಿ ಆಯ್ಕೆಯಾ ಗಿರುವ ಜಯಶ್ರಿ ಬಳಗಾನೂರಮಠ ಅಲಿಯಾಸ್ ವಿಜಯಲಕ್ಷ್ಮಿ ಕಣವಿಮಠ ಅವರು ಮೂಲತಃ ತಾಲ್ಲೂಕಿನ ಹಮ್ಮಿಗಿ ಗ್ರಾಮದವರಾಗಿದ್ದು, ಅಲ್ಲಿ ಸ್ವಂತ ಮನೆ ಮತ್ತು ಕೃಷಿ ಜಮೀನನ್ನು ಹೊಂದಿದ್ದಾರೆ. 2003ರಲ್ಲಿ ಬಡ ಮತ್ತು ದೀನ ದಲಿತರಿಗಾಗಿ ಮೀಸಲಿದ್ದ ಆಶ್ರಯ ಮನೆಗಳನ್ನು ನಿಯಮ ಬಾಹಿರವಾಗಿ ಪಡೆದುಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.

 ತಾಲ್ಲೂಕು ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಇಲಾಖೆಗಳು ಅವರು ಸಲ್ಲಿಸಿದ್ದ ದಾಖಲೆಗಳನ್ನು ಪುನರ್ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ದಲಿತರಿಗೆ ಮತ್ತು ಹಿಂದುಳಿದವರಿಗೆ ಮೀಸಲಿದ್ದ ಸರಕಾರಿ ಸೌಲಭ್ಯಗಳನ್ನು ಪಡೆದು ಕೊಂಡಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 ಅವರ ಆಯ್ಕೆ ಕುರಿತಂತೆ ಸರಕಾರ ತಕ್ಷಣ ಸೂಕ್ತ ತನಿಖೆ ನಡೆಸದಿದ್ದಲ್ಲಿ ಬೀದಿಗಿಳಿದು ಹೋರಾಟ ಕೈಗೊಳ್ಳ ಬೇಕಾಗುತ್ತದೆ ಎಂದು ಬಿಎಸ್‌ಪಿ ಶಿರಹಟ್ಟಿ ಮತಕ್ಷೇತ್ರದ ಅಧ್ಯಕ್ಷ ಡಿ.ಎಸ್‌ಪೂಜಾರ, ರೋಣ ಕ್ಷೇತ್ರದ ಅಧ್ಯಕ್ಷ ಪ್ರಕಾಶ ಪೂಜಾರ, ಮುಖಂಡರಾದ ದೇವೇಂದ್ರಪ್ಪ ಕಟ್ಟಿಮನಿ, ಕೋಟೇಶ ಬೇವಿನಕಟ್ಟಿ, ಮಲ್ಲೇಶ ಕಕ್ಕೂರ, ಬಸವರಾಜ ಹೂಗಾರ, ಬಸಪ್ಪ ವಡ್ಡರ, ಯಮುನಪ್ಪ ಯಳವತ್ತಿ, ಮಹಮ್ಮದ ಬಾಗಲಿ, ರಫಿಕ್ ತಳಕಲ್, ಅಬ್ದುಲ್ ಅಡವಿಸೋಮಾಪೂರ, ಇಮಾಮಸಾಬ್ ನಾಗರಹಳ್ಳಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT