ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ನಾದನೃತ್ಯ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಚಲನಚಿತ್ರ ರಂಗವನ್ನು ಅನೇಕ ದಶಕಗಳ ಕಾಲ ಆಳಿದ ಡಾ. ವೈಜಯಂತಿಮಾಲಾ ಬಾಲಿ ಅವರು ಭಾರತೀಯ ನತ್ಯರಂಗದ ಧ್ರುವತಾರೆ. ಭರತನಾಟ್ಯದಲ್ಲಿ ಎಂದೂ ಬೆಳದಿಂಗಳು. 50ಕ್ಕೂ ಮೀರಿ ಚಲನಚಿತ್ರಗಳಲ್ಲಿ ನಟಿಸಿ, ಭಿನ್ನ ಭಾಷೆಗಳಲ್ಲಿ ಅಭಿನಯಿಸಿರುವರಲ್ಲದೆ 5 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿ, ದಾಖಲೆ ಸ್ಥಾಪಿಸಿದ್ದಾರೆ.

ತಂಜಾವೂರು ಶೈಲಿಯ ಭರತನಾಟ್ಯವನ್ನು ಹಿರಿಯ ಗುರುಗಳಿಂದ ಸುದೀರ್ಘವಾಗಿ ಕಲಿತು, ಕಠಿಣ ಸಾಧನೆ ಮಾಡಿ, ಮೇರು ಕಲಾವಿದೆಯಾಗಿದ್ದಾರೆ. ಆಕೆಯ ನೃತ್ಯಕ್ಕೆ ವಿಶ್ವವೇ ವೇದಿಕೆ. ಅಮೆರಿಕ, ಆಸ್ಟ್ರೇಲಿಯ, ಸ್ವೀಡನ್, ನೆದರ್‌ಲ್ಯಾಂಡ್ಸ್, ಫ್ರಾನ್ಸ್ - ಹೀಗೆ ಅವರು ನರ್ತಿಸಿರುವ ಪಟ್ಟಿ ಬೆಳೆಯುತ್ತಲೇ ಇದೆ. ಅವರ ಸಾಧನೆ, ಪ್ರತಿಭೆ, ಅನುಭವಗಳಿಗೆ ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಗೌರವ ಡಾಕ್ಟರೇಟ್ (ಅಣ್ಣಾಮಲೆ ವಿಶ್ವವಿದ್ಯಾಲಯ) ಅವರಿಗೆ ಸಂದಿರುವ ಗೌರವಗಳ ಸರಮಾಲೆಯೇ ಇದೆ.

ಭರತನಾಟ್ಯದಲ್ಲಿ ಸಾಂಪ್ರದಾಯಿಕ ಮಾರ್ಗ ಪದ್ಧತಿಯಲ್ಲದೆ ನವಸಂಧಿ, ಆಂಡಾಳ್, ಶ್ರೀರಾಮಗಳಲ್ಲದೆ ನಾಲಕ್ಕಾರು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ-ಅಭಿನಯಿಸಿದ್ದಾರೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಚೌಡಯ್ಯ ಸ್ಮಾರಕ ಸಭಾಂಗಣ ತನಿಯಾಗಿ ನರ್ತಿಸಿದ ಡಾ. ವೈಜಯಂತಿಮಾಲಾ ಬಾಲಿ ಅವರನ್ನು ಸಭೆ ತದೇಕಚಿತ್ತದಿಂದ ವೀಕ್ಷಿಸತೊಡಗಿತು.

`ಶಿವಕಾಮ ಸುಂದರೀ~ ಕೃತಿಯಿಂದ ಹಸನಾಗಿ ಪ್ರಾರಂಭ. ಕೆಂಪು ಸೀರೆಉಟ್ಟು, ಮಿತ ಆಭರಣಗಳಿಂದ ಶೋಭಿತರಾಗಿದ್ದ ವೈಜಯಂತಿಮಾಲಾ ದೇವಿಯ ವಿವಿಧ ಭಂಗಿಗಳನ್ನು ಸುಂದರವಾಗಿ ಪ್ರದರ್ಶಿಸಿದರು. ಎರಡನೆಯ ರಚನೆ ಸಭೆಗೆ ಒಂದು ಸ್ವಾಗತಾರ್ಹ ಸೋಜಿಗ. ಕರ್ನಾಟಕದ ಓರ್ವ ಪ್ರಸಿದ್ಧ ವಾಗ್ಗೇಯಕಾರನ ವರ್ಣ. ವೈಣಿಕ ಶಿಖಾಮಣಿ ವೀಣೆ ಶೇಷಣ್ಣನವರ ವರ್ಣ, ಅದೂ ಹೆಚ್ಚು ಚಾಲ್ತಿಯಲ್ಲಿಲ್ಲದ ಝಲವರಾಳಿ ರಾಗದಲ್ಲಿ!

ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ ಮೇಲಿನ `ಕಾಮಶತಕೋಟಿ ಸುಂದರ~ ಆದಿತಾಳದಲ್ಲಿ ನಿಬದ್ಧವಾಗಿತ್ತು. ಮೊದಲನೇ ಆವರ್ತದಲ್ಲಿದ್ದ ಜತಿಗಳು, ವಿಸ್ತಾರವಾಗೂ, ಗಾಂಭೀರ್ಯದಿಂದಲೂ ಕೂಡಿತ್ತು. ಉಳಿದ ಆವರ್ತಗಳ ಜತಿಗಳು ಕಿರಿದಾಗಿದ್ದರೂ ಬಿಗಿ ಹಂದರದಲ್ಲಿ ಹೆಣೆದಿದ್ದು, ವರ್ಣದ ಭವ್ಯತೆಯನ್ನು ಎತ್ತಿಹಿಡಿದವು.

ವರ್ಣವನ್ನು- ಸಂಗೀತವನ್ನು ತಾನೇ ಅನುಭವಿಸುತ್ತಾ, ಅಭಿನಯಿಸುತ್ತಾ, ಕಲಾಭಿಮಾನಿಗಳಿಗೆ ಒಂದು ಅನಿರ್ವಚನೀಯ ಅನುಭವ ನೀಡಿದರು. 38 ನಿಮಿಷ ಅಖಂಡವಾಗಿ ವರ್ಣ ಮಾಡಿದರೂ, ವಿರಾಮ ತೆಗೆದುಕೊಳ್ಳದೇ ತಕ್ಷಣ ನಾರಾಯಣತೀರ್ಥರ ಒಂದು ರಚನೆ (ಗೋವಿಂದ ಮಹ ಗೋಪಿಕಾ) ತೆಗೆದುಕೊಂಡರು.
ಆಕೆಯ ಅಭಿನಯ ಎಂದೂ ಸುಂದರ. ನಿರೀಕ್ಷೆಗೆ ವಿರುದ್ಧವಾಗಿ ತಿಲ್ಲಾನ ತೆಗೆದುಕೊಳ್ಳದೆ ಮಂಗಳಕ್ಕೆ ಸರಿದರು. ಅದೂ ಕನ್ನಡದ ಮಂಗಳ, ಪುರಂದರ ದಾಸರ `ಮಂಗಳಂ ಜಯ ಮಂಗಳಂ~ ಆಯ್ದುದು ಸಂತೋಷ. 78ರ ಇಳಿ ವಯಸ್ಸಿನಲ್ಲೂ ಕುಗ್ಗದ ಉತ್ಸಾಹ, ಅಂಗಶುದ್ಧ, ಖಚಿತ ಲಯ ಹಾಗೂ ಗಾಢ ಪ್ರಭಾವದ ಅಭಿನಯ.

ವಯಸ್ಸಿನಲ್ಲಿ ಕಿರಿಯರಾದರೂ ಗಾಯಕಿ ಅನಂತ ರವೀಂದ್ರನ್ ತಮ್ಮ ಕಂಚಿನ ಕಂಠದಿಂದ ಸಭೆಯ ಪ್ರಶಂಸೆಗೆ ಪಾತ್ರರಾದರು. ನಟ್ಟುವಾಂಗದಲ್ಲಿ ಗಾಯತ್ರಿ ಶಶಿಧರನ್, ಮೃದಂಗದಲ್ಲಿ ಶಕ್ತಿವೇಲು, ಕೊಳಲಿನಲ್ಲಿ ಚೈತನ್ಯ ಕುಮಾರ್ ಹಾಗೂ ಪಿಟೀಲಿನಲ್ಲಿ ಅನಂತಕೃಷ್ಣನ್ - ಪುಷ್ಟಿ ನೀಡಿದರು. ಒಂದು ಸಾಂಪ್ರದಾಯಿಕ, ಘನವಾದ, ಸುಂದರವಾದ ಭರತನಾಟ್ಯ, ನೋಡಿದ ಸಂತೃಪ್ತಿ ರಸಿಕರಿಗೆ ಉಂಟಾದುದು ಸಹಜವೇ.

ಸಂಭ್ರಮ ಪುರಸ್ಕಾರ
ಮಂಗಳವಾರ ಸಂಜೆ ವಿದ್ವಾನ್ ಟಿ.ಎಂ. ಕೃಷ್ಣ ಅವರ ಗಾಯನದೊಂದಿಗೆ ಈ ವರ್ಷದ `ನಿರಂತರ~ಕ್ಕೆ ತೆರೆ ಬಿದ್ದಿತು. ಹಿರಿಯ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಈ ವರ್ಷದ `ಸಂಭ್ರಮ ಪುರಸ್ಕಾರ~ವನ್ನು ಸ್ವೀಕರಿಸಿದರು. ಸಂಗೀತ ಶಿಕ್ಷಣ, ರಾಗ ಸಂಯೋಜನೆ, ಸಂಗೀತ-ನೃತ್ಯ ಉತ್ಸವಗಳ ಏರ್ಪಾಡು, ಪ್ರಶಸ್ತಿ ವಿತರಣೆಗಳ ಮೂಲಕ `ಸಂಗೀತ ಸಂಭ್ರಮ~ ಕಳೆದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಗಣ್ಯ ಅತಿಥಿಗಳ (ಎಂ. ವಿಠಲಮೂರ್ತಿ, ಚೆನ್ನರಾಜ ಜೈನ್ ಮತ್ತು ವಿದುಷಿ ನಾಗಮಣಿ ಶ್ರೀನಾಥ್) ಪ್ರಶಂಸೆಗೆ ಪಾತ್ರವಾಯಿತು.

ಸಂಗೀತ ಕಛೇರಿ ಪ್ರಾರಂಭವಾಗಲು ಸಾಕಷ್ಟು ತಡವಾದರೂ ಕೇಳುಗರನ್ನು ನಿರಾಶೆಗೊಳಿಸದೆ ಟಿ.ಎಂ.ಕೃಷ್ಣ ಸಂತೃಪ್ತಿಗೊಳಿಸಿದರು. `ಸುಪರಿಚಿತ  ಭವನುತ~ ಕೀರ್ತನೆಯಿಂದ ಕಾರ್ಯಕ್ರಮಕ್ಕೆ ನಾಂದಿ ಹಾಕಿ, ಸ್ವರ ಪ್ರಸ್ತಾರ ಮಾಡಿದರು. ಅದರಲ್ಲೂ ಧೈವತದ ಸುತ್ತ ಹಾಕಿದ ಸಂಗತಿಗಳು ಮೆಲುಕು ಹಾಕುವಂತಿತ್ತು. `ಜಾನಕೀ ಪತೆ~ ಕತಿಗೆ ಹಾಕಿದ ಸ್ವರ ಕಿರಿದಾಗಿದ್ದರೂ ಭಾವಪೂರ್ಣವಾಗಿತ್ತು. ನಂತರ `ಇಂತ ಕಂಟೆ ಕಾ ವಲನ ಈ ಕಷ್ಟಮು~ ಒಂದು ಅರ್ಥಪೂರ್ಣ ಕೀರ್ತನೆ ಹಾಗೂ ಮಾಮೂಲಿ ಕೃತಿಗಳಿಗಿಂತ ಭಿನ್ನ.

ತ್ಯಾಗರಾಜರ ಭವ್ಯವಾದ ಕೃತಿಗಳಲ್ಲಿ ಒಂದಾದ `ದಾಚುಕೋವಲೇನ~ ವಿಸ್ತಾರಕ್ಕೆ ಆಯ್ದು, ಭಾವಪೂರ್ಣವಾಗಿ ಹಾಡಿದರು. ತೋಡಿ ರಾಗದ ಆಲಾಪನೆ ರಕ್ತಿಯಿಂದ ರಸಪೂರ್ಣವಾಗಿ ಹೊಮ್ಮಿಸಿ, ಕೀರ್ತನೆಗೆ ಭದ್ರ ಬುನಾದಿ ಹಾಕಿದರು. ನೆರವಲ್ (ಸೌಮಿತ್ರೀ ತ್ಯಾಗರಾಜುನಿ) ಹಾಗೂ ಸ್ವರ ಪ್ರಸ್ತಾರಗಳೂ ರಾಗ-ಕೃತಿಗೆ ಪೂರಕವಾಗಿದ್ದವು. ಮಾಧವಮಾಮವ, ಶಾರದೆ, ಕರುಣಾನಿಧೆ, ಸಾಗರ ಶಯನ ಹಾಗೂ `ಬಾಲಕೃಷ್ಣಂ ಕಲಯ ಸಖಿ~ ಒಂದಾದ ಮೇಲೊಂದರಂತೆ ಭಕ್ತಿಪೂರ್ಣ ಪದಗಳು ಹೊಮ್ಮಿದವು. ಸಂಗೀತದ ಭಾವ ಹೊರಹಾಕಬಲ್ಲ ಗಾಢ ಕಂಠ, ಭಾವಪೂರ್ಣ ನಿರೂಪಣೆ, ತೇಜೋಮಯ ಸಂಗತಿಗಳಿಂದ ಟಿ.ಎಂ. ಕೃಷ್ಣ ತುಂಬಿದ ಸಭೆಯನ್ನು ತಣಿಸಿದರು. ಗಾಯನಕ್ಕೆ ಪಿಟೀಲು (ಎಚ್.ಕೆ. ವೆಂಕಟರಾಂ) ಒತ್ತಾಸೆಯಾಗಿದ್ದರೆ, ಲಯ ವಾದ್ಯಗಳು (ತುಮಕೂರು ರವಿಶಂಕರ್ ಮತ್ತು ವ್ಯಾಸವಿಠಲ) ಒಳ್ಳೆಯ ಕಾವು ತುಂಬಿದವು.

ಸೊಬಗಿನ ಯುಗಳ
ಆ ಮೊದಲು ನಿರಂತರದಲ್ಲಿ ಯುಗಳ ಗಾಯನ ಮಾಡಿದ ರಂಜನಿ ಮತ್ತು ಗಾಯತ್ರಿ ಇಂದು ಶೀಘ್ರವಾಗಿ ಜನಪ್ರಿಯತೆಯ ಶಿಖರ ಏರುತ್ತಿರುವವರು. ಕರ್ನಾಟಕ ಸಂಗೀತದ ರಕ್ತಿ ರಾಗಗಳಲ್ಲಿ ಒಂದಾದ ಮಂದಾರಿ ಕಾಮವರ್ಧಿನಿ ಕುಟುಂಬಕ್ಕೆ ಸೇರಿದ ರಾಗ. ಧೈವತ ವರ್ಜ್ಯ, ಷಾಡವ ರಾಗ. ತ್ಯಾಗರಾಜರ ನಂತರದ ಕಾಲದಲ್ಲಿ ಹೆಚ್ಚು ಜನಾನುರಾಗಿ. ಮಂದಾರಿಯಲ್ಲಿ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ರಚಿಸಿರುವ ಎರಡು ಕೃತಿಗಳಲ್ಲಿ ಒಂದಾದ `ನಿನು ಚೆಪ್ಪಗಾ~ - ಭಾವ ತುಂಬಿ ನಿರೂಪಿಸಿದರು. `ನೀಲಾಂಬರಿ~ ರಾಗ ಹಾಡುತ್ತಿದ್ದಂತೆಯೇ ಕೇಳುಗರು `ಶೃಂಗಾರ ಲಹರಿ~ ನಿರೀಕ್ಷಿಸತೊಡಗಿದರು.

ಆದರೆ ಗಾಯಕಿಯರು ಅಪರೂಪವಾದ `ನೀಕೇ ದಯರಾಕ~ ಒಳ್ಳೆ ವಿಳಂಬದಲ್ಲಿ ಹಾಡಿ, ನಾದಮಯ ವಾತಾವರಣ ಸಷ್ಟಿಸಿದರು. ಎಂದೂ ಪ್ರಿಯವಾದ ಖರಹರಪ್ರಿಯವನ್ನು ವಿಶಾಲವಾಗಿ ಅರಳಿಸಿ, `ರಾಮ ನೀ ಎಡ~ ಕೃತಿಗೆ ಸ್ವರವನ್ನು ವಿಳಂಬದಲ್ಲಿ ಪ್ರಾರಂಭಿಸಿ, ಕ್ರಮೇಣ ದ್ರುತಕ್ಕೆ ಸರಿದು, ಪೂರ್ಣತ್ವ ನೀಡಿದರು. ದೇವರನಾಮ, ಅಭಂಗ್‌ಗಳೂ ಸೇರಿ ಕೇಳುಗರು ಸಂತೋಷಪಟ್ಟರು. ಉತ್ತಮ ಕಂಠ, ಚೈತನ್ಯಪೂರ್ಣ ನಿರೂಪಣೆ, ತಾಜಾ ಸಂಗತಿಗಳು, ಯುಗಳ ಗಾಯನದ ಒತ್ತಾಸೆಗಳಿಂದ ಕಛೇರಿಯ ಪರಿಣಾಮ ಪ್ರಭಾವಕಾರಿಯಾಯಿತು. ಪಿಟೀಲಿನಲ್ಲಿ ಬಿ.ಯು. ಗಣೇಶ ಪ್ರಸಾದ್, ಮೃದಂಗದಲ್ಲಿ ಎಚ್.ಎಸ್. ಸುಧೀಂದ್ರ ಹಾಗೂ ಘಟದಲ್ಲಿ ಎಂ.ಎ.ಕೃಷ್ಣಮೂರ್ತಿ - ಪರಸ್ಪರ ಹೊಂದಾಣಿಕೆಯಿಂದ ಪಕ್ಕವಾದ್ಯಗಳನ್ನು ನುಡಿಸಿದರು.

ಗಾಢ ಆಗದ ಕಥಕ್
ಅನುಭವೀ ನರ್ತಕ ಜಯಂತ್ ಕಸ್ತೂರ್ ತಮ್ಮ ಕಥಕ್ ತನಿ ಕಾರ್ಯಕ್ರಮವನ್ನು ಗಣೇಶನಿಗೆ ವಂದಿಸಿ (ಕಾಯಿಯೇ ಗಣಪತಿ ಜಗವಂದನ) ಪ್ರಾರಂಭಿಸಿದರು. ಕಥಕ್‌ನ ಲಯ ಪ್ರದರ್ಶಿಸಲು ನೃತ್ತ ಭಾಗಕ್ಕೆ ಸರಿದರು. 16 ಅಕ್ಷರಗಳ ಆವರ್ತದಲ್ಲಿ ಸುಲಲಿತವಾಗಿ ಪಾದಚಲನೆ ಮಾಡುತ್ತಾ, ಥಾಟ್‌ನಲ್ಲಿ ಭಿನ್ನ ಬಗೆಯ ಬೋಲ್ಸ್‌ಗಳನ್ನು ನಿರೂಪಿಸಿದರು. ಅಭಿನಯ ಭಾಗದಲ್ಲಿ 16 ವರ್ಷದ ಬಾಲೆ ಹಾಡುವ `ಬಾಲೆ ಉಮರ್~ನ ಛೇಡೋ  ಆಯ್ದದ್ದಲ್ಲದೆ ಒಂದು ಬನಾರಸಿ ದಾದ್ರಾ ಸಹ ಮಾಡಿದರು. ನಿಜ, ಅನುಭವೀ ನರ್ತಕರಂತೆ ತೋರಿದರೂ ಕಾರ್ಯಕ್ರಮ ಗಾಢವಾಗಿ ಮೂಡಲಿಲ್ಲ ಎಂದೇ ಹೇಳಬೇಕು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT