ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗಿಗಳೇ ನಿರ್ಣಾಯಕರು

Last Updated 31 ಮೇ 2012, 8:05 IST
ಅಕ್ಷರ ಗಾತ್ರ

ಗಂಗಾವತಿ: ಈಶಾನ್ಯ ಪದವೀಧರ ಮತಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗೆ ಸೋಲಾಗಲಿದೆ. ಮತದಾರರ ಪೈಕಿ ಬಹುತೇಕರು ನಿರುದ್ಯೋಗಿಗಳಾಗಿದ್ದು, ಅವರೇ ನಿರ್ಣಾಯಕರು ಎಂದು ಅಶೋಕಸ್ವಾಮಿ ಹೇರೂರು ಹೇಳಿದರು. 

ಈಶಾನ್ಯ ಪದವೀಧರ ಮತ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರು ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಚಾರ ಕಾರ್ಯ ಕೈಗೊಂಡರು, ಕ್ಷೇತ್ರದಲ್ಲಿ ಸಾಕಷ್ಟು ಪದವೀಧರರಿದ್ದಾರೆ.

ಆದರೆ ನೊಂದಣಿ ಮಾಡಿಸಿರುವುದು ಮಾತ್ರ ಅತ್ಯಲ್ಪ ಜನ. ಪದವೀಧರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ತಿಳವಳಿಕೆ ನೀಡಬೇಕಾದವರು ಈ ಕಾರ್ಯ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ನೀತಿ ಸಂಹಿತೆ ಉಲ್ಲಂಘಿ ಸುತ್ತಿದ್ದಾರೆ. ಚುನಾವಣೆಗೆ ಹೈ-ಕ ಅಭಿವೃದ್ಧಿ ಮಂಡಳಿಯ ವಾಹನ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ. ಆದಾಯದ ಹುದ್ದೆಯಲ್ಲಿರುವ ಅಮರನಾಥರಿಂದ ರಾಜೀನಾಮೆ ಪಡೆಯಬೇಕಾದ ಬಿಜೆಪಿ ಮೌನ ವಹಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಸಸ್ಯಶಾಸ್ತ್ರಜ್ಞರು. ಕಳೆದ 20 ವರ್ಷದಿಂದ ತಮ್ಮ ಕ್ಯಾಬಿನ್ ಬಿಟ್ಟು ಹೊರಬಂದಿಲ್ಲ.
ಸಾರ್ವಜನಿಕ ಸಮಸ್ಯೆಯ ಬಗ್ಗೆ ಅರಿವಿಲ್ಲ. ಜನ ಜಾಗೃತಿ, ಸಮುದಾಯ ಸಂಪರ್ಕ ಎಂದರೇನು ಎಂಬುದು ಕಾಂಗ್ರೆಸ್ ಅಭ್ಯರ್ಥಿಗೆ ತಿಳಿದಿದಲ್ಲ ಎಂದು ಅಶೋಕಸ್ವಾಮಿ ವ್ಯಂಗ್ಯವಾಡಿದರು.

ಇನ್ನೂ ಜೆಡಿಎಸ್ ಅಭ್ಯರ್ಥಿ ಕಳೆದ 20 ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡವರು. ಈ ಬಾರಿಯ ಚುನಾವಣೆಗೆ ಪಕ್ಷದಿಂದ ಟಿಕೆಟ್ ದೊರೆತಿಲ್ಲ ಎಂದು ಜೆಡಿಎಸ್‌ಗೆ ಜಿಗಿದಿದ್ದಾರೆ. ಇಂತವರಿಂದ ಪ್ರಬುದ್ಧ ಮತದಾರರು ಏನನ್ನು ನಿರೀಕ್ಷಿಸಬಲ್ಲರು ಎಂದು ಸ್ವಾಮಿ ಪ್ರಶ್ನಿಸಿದರು.

ತಾವು ಆಯ್ಕೆಯಾದಲ್ಲಿ ಸ್ಥಳೀಯ ಸಂಪನ್ಮೂಲಗಳ ಸದ್ಭಳಕೆಯ ಬಗ್ಗೆ ಒಂದಷ್ಟು ಯೋಜನೆಗಳನ್ನು ರೂಪಿಸಿಕೊಂಡಿದ್ದು, ಸ್ಥಳೀಯರ ಆರ್ಥಿಕ ಪ್ರಗತಿಗೆ ಮುನ್ನುಡಿ ಬರೆಯುವಂತ ಯೋಜನೆ ಹಮ್ಮಿಕೊಂಡಿದ್ದೇನೆ ಎಂದು ವಿವರಣೆ ನೀಡಿದರು.

ಬೀದರ್‌ನಲ್ಲಿ ದೊರೆಯುವ ಗುಣಮಟ್ಟದ ಮಣ್ಣಿನಿಂದ ಇಟ್ಟಿಗೆ ನಿರ್ಮಾಣ, ಶಹಬಾದ್ ಕಲ್ಲಿನ ಪುಡಿಯ ವೈಜ್ಞಾನಿಕ ಬಳಕೆ, ಬತ್ತದ ಹೊಟ್ಟಿನಿಂದ ಎಣ್ಣೆ ತಯಾರಿಕೆಯಂತ ಹಲವು ದೂರದೃಷ್ಟಿಯ ಯೋಜನೆ ಹಮ್ಮಿಕೊಂಡಿದ್ದೇನೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್. ಪಾಟೀಲ್, ಬಾಗಲಕೋಟೆಯ ನಿವೃತ್ತ ಖಜನಾಧಿಕಾರಿ ಕೆ.ಎಂ. ಮದಿರಿ, ಹೈದರಾಬಾದ್ ಕರ್ನಾಟಕ ಪ್ರದೇಶ ಹೋರಾಟ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಎ.ಕೆ. ಮಹೇಶ ಕುಮಾರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT