ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯಕ್ಕೊಳಗಾಗಿರುವ ಶಾಸನ, ವೀರಗಲ್ಲುಗಳು

Last Updated 3 ಡಿಸೆಂಬರ್ 2012, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಇತಿಹಾಸದ ಅಧ್ಯಯನಕ್ಕೆ ಮೂಲ ಆಕರಗಳಲ್ಲಿ ಒಂದಾಗಿರುವ ಬೇಗೂರಿನ ಪಾರ್ವತಿ ನಾಗೇಶ್ವರ ದೇವಸ್ಥಾನದಲ್ಲಿರುವ 1,100 ವರ್ಷ ಹಳೆಯ ಶಿಲಾಶಾಸನ ಹಾಗೂ ವೀರಗಲ್ಲುಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ದೇವಸ್ಥಾನದ ಸುತ್ತ ರಾಜಗೋಪುರಗಳ ನಿರ್ಮಾಣದಿಂದಾಗಿ ಶಾಸನಗಳು ಹಾಗೂ ವೀರಗಲ್ಲುಗಳಿಗೆ ಹಾನಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. 

ಬೇಗೂರು ಗ್ರಾಮವು ಬೆಂಗಳೂರು-ಹೊಸೂರು ನಡುವೆ ಇದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಾಹಿತಿ ತಂತ್ರಜ್ಞಾನದ ಕಂಪೆನಿಗಳ ಆಗಮನದಿಂದ ಈ ಗ್ರಾಮದಲ್ಲೂ ಕೆಲವು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ.

ಅಭಿವೃದ್ಧಿಯ ನಾಗಾಲೋಟದ ನಡುವೆ ಐತಿಹಾಸಿಕ ದೇವಸ್ಥಾನದಲ್ಲಿರುವ ಶಿಲಾಶಾಸನಗಳು, ವೀರಗಲ್ಲುಗಳ ಸಂರಕ್ಷಣೆಗೆ ನಿರ್ಲಕ್ಷ್ಯ ತಾಳಲಾಗಿದೆ ಎಂದು ಇತಿಹಾಸತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

`ದೇವಸ್ಥಾನದ ಸುತ್ತ ನಾಲ್ಕು ರಾಜಗೋಪುರಗಳನ್ನು ನಿರ್ಮಿಸುತ್ತಿರುವುದರಿಂದ ದೇವಸ್ಥಾನದ ನೈಜ ಸೌಂದರ್ಯವನ್ನು ಹಾಳುಗೆಡವಲಾಗಿದೆ. ಅಲ್ಲದೆ ದೇವಸ್ಥಾನದಲ್ಲಿರುವ ಕೆಲವು ಹಳೆಯ ಕಂಬಗಳು ಬೀಳುವ ಸ್ಥಿತಿಯಲ್ಲಿವೆ. ಕೆಲವೊಂದು ಶಾಸನಗಳು ಮುರಿದು ಹೋಗಿವೆ. ರಾಜಕೀಯ ಮುಖಂಡರ ಒತ್ತಡದಿಂದಾಗಿ ಶಿಲಾಶಾಸನಗಳ ಸ್ಥಳಾಂತರಕ್ಕೆ ಅಡ್ಡಿ ಉಂಟಾಗಿದೆ' ಎಂದು ಆರೋಪ ಕೇಳಿ ಬಂದಿದೆ.

`ಹಳೆಗನ್ನಡದಲ್ಲಿರುವ ಇಲ್ಲಿನ ಶಿಲಾಶಾಸನದಲ್ಲಿ `ಬೆಂಗಳೂರು ಕದನ'ದ ಬಗ್ಗೆ ಉಲ್ಲೇಖ ಇದೆ. ಗಂಗರು (ಜೈನರು) ಹಾಗೂ ನೊಳಂಬರ (ಶೈವರು) ನಡುವಿನ ಯುದ್ಧದಲ್ಲಿ ಗಂಗರು ಸೋಲುತ್ತಾರೆ. ಬೆಂಗಳೂರಿನ ಇತಿಹಾಸದಲ್ಲಿ ಇದೊಂದು ಮಹತ್ವದ ತಿರುವು. ಒಂದು ಕಾಲದಲ್ಲಿ ಬೇಗೂರು ಸುತ್ತಮುತ್ತಲಿನ ಪ್ರದೇಶಗಳು ಜೈನರ ಪ್ರಸಿದ್ಧ ಕ್ಷೇತ್ರಗಳಾಗಿದ್ದವು. ಬಳಿಕ ಈ ಪ್ರದೇಶಗಳಲ್ಲಿ ನೊಳಂಬರು ಪ್ರಾಬಲ್ಯಕ್ಕೆ ಬಂದರು' ಎಂದು ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ ಬೆಂಗಳೂರು ಕೇಂದ್ರದ ಉಪನಿರ್ದೇಶಕ ಎಸ್.ಕೆ. ಅರುಣಿ ಬೆಳಕು ಚೆಲ್ಲಿದ್ದಾರೆ.

`ಗ್ರಾಮದಲ್ಲಿರುವ ಊರಿನಲ್ಲಿ ಪಾರ್ವತಿ ನಾಗೇಶ್ವರ ದೇವಸ್ಥಾನವು ಅವಳಿ ದೇವಸ್ಥಾನ. ದೇವಸ್ಥಾನವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಮೆರುಗು ನೀಡಿರುವುದು ಇಲ್ಲಿನ ಅಪೂರ್ವ ಶಿಖರಗಳು. ಕಲ್ಲಿನಿಂದ ನಿರ್ಮಿಸಿರುವ ಶಿಖರಗಳು ವೃತ್ತಾಕಾರ ಹಾಗೂ ಚೌಕಾಕಾರದಿಂದ ಕೂಡಿವೆ. ದಕ್ಷಿಣ ಭಾರತದಲ್ಲಿರುವ ಗಂಗರ ಕಾಲದ ಕೆಲವೇ ದೇವಸ್ಥಾನಗಳು ಶಿಖರ ಸಮೇತದಿಂದ ಈವರೆಗೆ ಉಳಿದುಕೊಂಡಿವೆ' ಎಂದು ಅವರು ಮಾಹಿತಿ ನೀಡಿದ್ದಾರೆ.

`ಗ್ರಾಮದಲ್ಲಿ ಈವರೆಗೆ ಆರಕ್ಕೂ ಅಧಿಕ ವೀರಗಲ್ಲುಗಳು ದೊರಕಿದ್ದು, ಗ್ರಾಮದ ಇತಿಹಾಸವನ್ನು ಕಟ್ಟಿಕೊಡುತ್ತವೆ. ಇಲ್ಲಿನ ಆರು ಅಡಿ ಎತ್ತರದ ಒಂದು ಶಾಸನವನ್ನು ಬೆಂಗಳೂರಿನ ಮ್ಯೂಸಿಯಂಗೆ ಸ್ಥಳಾಂತರ ಮಾಡಲಾಗಿದೆ. ಉಳಿದವುಗಳ ಸಂರಕ್ಷಣೆಗೂ ತುರ್ತು ಕ್ರಮ ಅಗತ್ಯ ಇದೆ. ಗ್ರಾಮದಲ್ಲಿ ಭಗ್ನಗೊಂಡ ಜೈನ ತೀರ್ಥಂಕರರ ಹಾಗೂ ಮುನಿಗಳ ಶಿಲ್ಪಗಳು ಇವೆ. ಇವುಗಳು ಜೈನರ ಇತಿಹಾಸ ಅಧ್ಯಯನ ಮಾಡಲು ಪ್ರಮುಖ ಆಕರಗಳು' ಎಂದು ಅವರು ತಿಳಿಸಿದ್ದಾರೆ.

`ದೇವಸ್ಥಾನದ ನಾಲ್ಕು ಸುತ್ತ ರಾಜಗೋಪುರಗಳನ್ನು ಕಟ್ಟುವುದರಿಂದ ದೇವಸ್ಥಾನದ ನೈಜ ಸೌಂದರ್ಯಕ್ಕೆ ಧಕ್ಕೆ ಉಂಟಾಗಲಿದೆ. ಇದರಿಂದಾಗಿ ಶಿಖರಗಳಿಗೆ ತಡೆಗೋಡೆ ನಿರ್ಮಿಸಿದಂತೆ ಆಗಿದೆ. ಪುರಾತತ್ವ ಇಲಾಖೆಯವರು ಬೇಗೂರಿನ ದೇವಸ್ಥಾನ, ಶಾಸನಗಳು, ವೀರಗಲ್ಲುಗಳ ದಾಖಲೀಕರಣ ಮಾಡಬೇಕು. ಅಲ್ಲದೆ ದೇವಸ್ಥಾನದ ಸುತ್ತ ಸೂಕ್ತ ನಿರ್ವಹಣೆ ಇಲ್ಲದೆ ಅನಾಥವಾಗಿ ಬಿದ್ದಿರುವ ಶಿಲಾಶಾಸನಗಳು ಹಾಗೂ ವೀರಗಲ್ಲುಗಳನ್ನು ದೇವಸ್ಥಾನದ ಒಳಭಾಗಕ್ಕೆ ಸ್ಥಳಾಂತರಿಸಿ ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಬೇಕು. ಸರಳ ಕನ್ನಡದಲ್ಲಿ ಶಾಸನದ ಬಗ್ಗೆ ವಿವರ ನೀಡಬೇಕು. ಈ ಮೂಲಕ ಮುಂದಿನ ತಲೆಮಾರಿಗೂ ಇತಿಹಾಸವನ್ನು ತಲುಪಿಸಿದಂತೆ ಆಗುತ್ತದೆ' ಎಂದು ಅರುಣಿ ಅಭಿಪ್ರಾಯಪಟ್ಟರು.

`ದೇವಸ್ಥಾನದ ಪರಂಪರೆಗೆ ಧಕ್ಕೆ ಉಂಟಾಗುವ ಪ್ರಮೇಯ ಎದುರಾದಾಗ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಪುರಾತತ್ವ ಹಾಗೂ ಮುಜರಾಯಿ ಇಲಾಖೆಯವರು ಜನರಿಗೆ ಮನವರಿಕೆ ಮಾಡಿಕೊಟ್ಟು ಅಂತಹ ಚಟುವಟಿಕೆಯನ್ನು ತಡೆಯಬೇಕು' ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡಾ ರೆಡ್ಡಿ ಸಲಹೆ ನೀಡಿದ್ದಾರೆ.

`ಐತಿಹಾಸಿಕ ಪ್ರಮುಖ ಸಂಗತಿಗಳ ಸಂರಕ್ಷಣೆಗೆ ಮುನ್ನ ಅವುಗಳಿರುವ ಜಾಗವನ್ನು ಸರ್ಕಾರ ಐತಿಹಾಸಿಕ ಪ್ರಮುಖ ಸ್ಥಳ ಎಂದು ಹೆಸರಿಸಬೇಕು. ಬಳಿಕ ಆ ಜಾಗ ಕಂದಾಯ ಇಲಾಖೆಯಿಂದ ಪುರಾತತ್ವ ಇಲಾಖೆಗೆ ಹಸ್ತಾಂತರ ಆಗಬೇಕು. ಬೇಗೂರಿನ ವಿಚಾರದಲ್ಲಿ ಈವರೆಗೆ ಅಂತಹ ಕಾರ್ಯ ಆಗಿಲ್ಲ. ರಾಜ್ಯ ಸರ್ಕಾರ ತುರ್ತು ಗಮನ ಹರಿಸಿ ಕಾರ್ಯಪ್ರವೃತ್ತ ಆಗಬೇಕು' ಎಂದು ಇತಿಹಾಸತಜ್ಞರು ಸಲಹೆ ನೀಡಿದ್ದಾರೆ.

`ಮೂಲ ಚರ್ಚೆಯಾಗಲಿ'
`ಬೆಂಗಳೂರು ಈ ಹಿಂದೆ ಬೆಂದಕಾಳೂರು ಆಗಿತ್ತು ಎಂಬ ಸಾಮಾನ್ಯ ಅಭಿಪ್ರಾಯ ಇದ್ದು, ಈ ಕುರಿತು ವ್ಯಾಪಕ ಚರ್ಚೆ ನಡೆದಿದೆ. ಬೆಂಗಳೂರಿನ ಮೂಲ ಹೆಸರಿನ ಬಗ್ಗೆ ಮೊದಲ ಬಾರಿಗೆ 8ನೇ ಶತಮಾನದ ಶಾಸನದಲ್ಲಿ ಉತ್ತರ ಸಿಗುತ್ತದೆ. ಈಗಿನ ಬೆಂಗಳೂರು ಈ ಹಿಂದೆಯೇ ಬೆಂಗಳೂರೇ ಆಗಿತ್ತು ಎಂಬುದಾಗಿ ಶಾಸನದಲ್ಲಿ ಉಲ್ಲೇಖಿಸ ಲಾಗಿದೆ. ಈ ಶಾಸನವನ್ನು ಮೂಲವಾಗಿ ಟ್ಟುಕೊಂಡು ಬೆಂಗಳೂರಿನ ಮೂಲದ ಕುರಿತಾಗಿ ವ್ಯಾಪಕ ಚರ್ಚೆ ಆಗಬೇಕಿದೆ'

-ಅರುಣಿ, ಉಪನಿರ್ದೇಶಕ, ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತು.

`ತುರ್ತು ರಕ್ಷಣೆ ಅಗತ್ಯ'
`ಬೇಗೂರಿನ ಶಾಸನಗಳು, ವೀರಗಲ್ಲುಗಳ ಸಂರಕ್ಷಣೆಗೆ ತುರ್ತು ಕ್ರಮ ಅಗತ್ಯ ಇದೆ. ಕೆಲವು ವರ್ಷದ ಹಿಂದೆ ದೇವಸ್ಥಾನದ ಸುತ್ತ ಇದ್ದ ಗಂಗರ ಕಾಲದಲ್ಲಿ ನಿರ್ಮಿಸಿದ್ದ ಕಾಂಪೌಂಡ್ ಅನ್ನು ತೆರವು ಮಾಡಲಾಗಿತ್ತು.

ದೇವಸ್ಥಾನದ ಸುತ್ತ ರಾಜಗೋಪುರಗಳನ್ನು ಕಟ್ಟಲಾಗುತ್ತಿದೆ. ದೇವಸ್ಥಾನದೊಳಗಿರುವ ಪುರಾತನ ಬಾವಿಯನ್ನು ಮುಚ್ಚುವ ಪ್ರಸ್ತಾಪ ಇದೆ. ಅಪರೂಪದ ವಿಗ್ರಹಗಳು ಇವೆ. ಇವುಗಳ ರಕ್ಷಣೆ ಆಗಬೇಕು'.

-ಪ್ರೊ.ದೇವರಕೊಂಡಾ ರೆಡ್ಡಿ,
ಅಧ್ಯಕ್ಷ, ಕರ್ನಾಟಕ ಇತಿಹಾಸ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT