ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಾಹಕರಿಂದ ಬಸ್‌ಪಾಸ್, ಟಿಕೆಟ್ ಮರುಮಾರಾಟ

Last Updated 22 ಜನವರಿ 2011, 8:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ದೇಶದಲ್ಲೇ ಮಾದರಿ ಸಂಸ್ಥೆಯಾಗಿದ್ದು, ಲಾಭವನ್ನು ಗಳಿಸುತ್ತಿದೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ಬಸ್ ನಿಲ್ದಾಣಗಳನ್ನು ನಿರ್ಮಿಸುವ ಬಗ್ಗೆ ಭರವಸೆ ಕೂಡ ನೀಡುತ್ತದೆ. ಆದರೆ ಸಾರಿಗೆ ಸಂಸ್ಥೆಯಲ್ಲಿನ ಕೆಲ ಸಿಬ್ಬಂದಿಗಳು ಸಂಸ್ಥೆಯ ನಷ್ಟಕ್ಕೆ ಕಾರಣವಾಗುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬರುತ್ತಿಲ್ಲ. ಸ್ವತಃ ಬಸ್ ನಿರ್ವಾಹಕರೇ ಪಾಸ್‌ಗಳನ್ನು ಮತ್ತು ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ಮರುಮಾರಾಟ ಮಾಡುವುದರ ಮೂಲಕ ಸಾರಿಗೆ ಸಂಸ್ಥೆಯ ಆರ್ಥಿಕ ಹಾನಿಗೆ ಕಾರಣವಾಗುತ್ತಿದ್ದಾರೆ.

ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುವ ಕೆಲ ಪ್ರಯಾಣಿಕರಿಗೆ ನಿರ್ವಾಹಕರು ಈಗಾಗಲೇ ಬಳಸಲಾಗಿರುವ ಬಸ್‌ಪಾಸ್‌ಗಳನ್ನು ಮತ್ತು ಟಿಕೆಟ್‌ಗಳನ್ನು ಮರುಮಾರಾಟ ಮಾಡುತ್ತಿದ್ದಾರೆ. ಹೊಸ ಬಸ್‌ಪಾಸ್ ಮತ್ತು ಟಿಕೆಟ್ ನೀಡುವಂತೆ ಕೇಳಿದರೆ, ‘ಇದನ್ನೇ ತೆಗೆದುಕೊಳ್ಳಿ. ಏನೂ ತೊಂದರೆಯಿಲ್ಲ’ ಎಂದು ನಿರ್ವಾಹಕರೆ ಪ್ರಯಾಣಿಕರಿಗೆ ಕಾನೂನುಬಾಹಿರವಾಗಿ ಬಸ್‌ನಲ್ಲಿ ಪ್ರಯಾಣಿಸಲು ಉತ್ತೇಜನ ನೀಡುತ್ತಿದ್ದಾರೆ. ಈ ರೀತಿಯ ಅನುಭವಗಳಿಗೆ ಒಳಗಾಗಿರುವ ಪ್ರಯಾಣಿಕರೇ ಇದರ ಬಗ್ಗೆ ಆರೋಪಿಸಿದ್ದಾರೆ.ನಿರ್ವಾಹಕರ ವರ್ತನೆಯ ಬೇಸರ ಕೂಡ ವ್ಯಕ್ತಪಡಿಸುತ್ತಾರೆ.

‘ಬೆಂಗಳೂರಿಗೆ ಹೋಗಲು ಜ.12ರ ರಾತ್ರಿ 9ಕ್ಕೆ ಚಿಕ್ಕಬಳ್ಳಾಪುರದ ಹಳೆಯ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಬಸ್ ಹತ್ತಿದೆ. ನಿರ್ವಾಹಕರಿಗೆ ಹಣವನ್ನು ಕೊಟ್ಟು ಟಿಕೆಟ್ ನೀಡುವಂತೆ ಕೋರಿದೆ. ಆದರೆ ನಿರ್ವಾಹಕರು ಟಿಕೆಟ್ ಬದಲು ತಮ್ಮ ಕಿಸೆಯಲಿದ್ದ ಈಗಾಗಲೇ ಬಳಸಲಾಗಿರುವ ಬಸ್‌ಪಾಸ್ ನೀಡಿದರು. ಟಿಕೆಟ್ ಕೇಳಿದರೆ, ಪಾಸ್ ಕೊಡುತ್ತೀರಲ್ಲ ಎಂದು ಪ್ರಶ್ನಿಸಿದರೆ, ಅವರು ಬೇರೆಯದ್ದೇ ಉತ್ತರ ನೀಡಿದರು’ ಎಂದು ಪ್ರಯಾಣಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಮ್ಮನೆ ಬಸ್‌ಪಾಸ್ ತೆಗೆದುಕೊಳ್ಳಿ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲೂ ನೀವು ಪಾಸ್‌ನಲ್ಲೇ ಸಂಚರಿಸಬಹುದು. ಟಿಕೆಟ್ ತೆಗೆದುಕೊಂಡು ಏನು ಮಾಡುತ್ತೀರಿ ಎಂದು ಹೇಳಿದ ನಿರ್ವಾಹಕರು ನಂತರ ಇತರ ಪ್ರಯಾಣಿಕರಿಗೆ ಟಿಕೆಟ್ ನೀಡುವುದನ್ನು ಮುಂದುವರೆಸಿದರು’ ಎಂದು ಅವರು ತಿಳಿಸಿದರು. ಅಚ್ಚರಿಯ ಸಂಗತಿಯೆಂದರೆ, 40 ರೂಪಾಯಿಗೆ ಅವರು 85 ರೂಪಾಯಿ ಮೌಲ್ಯದ ಬಸ್‌ಪಾಸ್ ಮಾರಿದ್ದರು!!

ಇನ್ನೂ ಗಮನಾರ್ಹ ಅಂಶವೆಂದರೆ, ನಿರ್ವಾಹಕರು ಆ ಪಾಸ್‌ನಲ್ಲಿ ಪ್ರಯಾಣಿಕನ ವಯಸ್ಸು ಬರೆದಿರಲಿಲ್ಲ, ಸಹಿ ಕೂಡ ತೆಗೆದುಕೊಂಡಿರಲಿಲ್ಲ. ರಾತ್ರಿ 9 ಗಂಟೆಗೆ ಬೆಂಗಳೂರಿಗೆ ಹೋಗುವ ಕಡೆಯ ಬಸ್ ಆಗಿದ್ದರೂ ಪ್ರಯಾಣಿಕ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಎರಡೂ ಕಡೆ ಸಂಚರಿಸಿದ್ದಾರೆ ಎಂಬಂತೆ ಪಾಸ್‌ನಲ್ಲಿ ಗುರುತು ಕೂಡ ಮಾಡಿದ್ದರು. ಈ ಒಂದು ಘಟನೆಯಷ್ಟೇ ಅಲ್ಲ, ದಿನವೊಂದಕ್ಕೆ ಈ ರೀತಿಯ ಘಟನೆಗಳು ಹಲವು ನಡೆಯುತ್ತವೆ ಎಂದು ಪ್ರಯಾಣಿಕರು ಆರೋಪಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT