ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ಅಂಚಿನ ತಹಶೀಲ್ದಾರರಿಗೆ ಪ್ರಭಾರ ಅಧಿಕಾರ!

ಕುಷ್ಟಗಿ: ದಿಕ್ಕಿಲ್ಲದಂತಿರುವ ಪುರಸಭೆ, ಸಾರ್ವಜನಿಕರ ಪರದಾಟ
Last Updated 23 ಸೆಪ್ಟೆಂಬರ್ 2013, 6:53 IST
ಅಕ್ಷರ ಗಾತ್ರ

ಕುಷ್ಟಗಿ: ಇಲ್ಲಿಯ ಪುರಸಭೆಯ ಮುಖ್ಯಾಧಿಕಾರಿಯನ್ನು ಏಕಾಏಕಿ ಎತ್ತಂಗಡಿ ಮಾಡಿ ಯಲಬುರ್ಗಾ ಪಟ್ಟಣ ಪಂಚಾಯಿತಿಗೆ ನಿಯೋಜನೆ ಮಾಡಿರುವ ಜಿಲ್ಲಾಧಿಕಾರಿಯ ಕ್ರಮ ಅಚ್ಚರಿಗೆ ಕಾರಣವಾಗಿದೆ.

ಅಲ್ಲದೇ ಬೆಳೆವಣಿಗೆ ಹೊಂದುತ್ತಿ­ರುವ ಈ ಪಟ್ಟಣದ ಕೆಲಸ ಕಾರ್ಯಗಳು ಮತ್ತು ಜನ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಭಾರ ಅಧಿಕಾರ ವಹಿಸಿಕೊಂಡಿರುವ ತಹಶೀಲ್ದಾರರಿಗೆ ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ಹೆಚ್ಚಿನ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಪೂರೈಸುವುದು, ನೈರ್ಮಲ್ಯ ನಿರ್ವಹಣೆ ವ್ಯವಸ್ಥೆ, ತುರ್ತು ಕೆಲಸ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಕಾಯಂ ಮುಖ್ಯಾಧಿಕಾರಿಯ ಅವಶ್ಯಕತೆ ಇದೆ. ಆದರೆ ಕಳೆದ ಒಂದು ವಾರ­ದಿಂದಲೂ ಮುಖ್ಯಾಧಿಕಾರಿ ಇಲ್ಲದ ಕಾರಣ ಕೆಲಸ ಕಾರ್ಯಗಳಿಗೆ ಅಡ್ಡಿಯಾ­ಗಿದೆ ಎಂಬುದು ತಿಳಿದುಬಂದಿದೆ.

ಮುಖ್ಯಾಧಿಕಾರಿ ಹುದ್ದೆ ಪ್ರಭಾರ ಅಧಿಕಾರ ವಹಿಸಿಕೊಂಡಿರುವ ಎನ್‌.ಬಿ. ಪಾಟೀಲ ಇತ್ತೀಚೆಗಷ್ಟೇ ತಹಶೀಲ್ದಾರ­ರಾಗಿ ಇಲ್ಲಿಗೆ ಬಂದಿದ್ದು ಪಟ್ಟಣದ ಪ್ರಮುಖ ಸಮಸ್ಯೆಗಳು ಅವರ ಅರಿವಿಗೆ ಬರುತ್ತಿಲ್ಲ, ಅಲ್ಲದೇ ಅವರು ಪಟ್ಟಣ­ದಿಂದ ನಾಲ್ಕು ಕಿಮೀ ದೂರದ ಸರ್ಕ್ಯೂ­ಟ್‌ಹೌಸ್‌ನಲ್ಲಿ ತಂಗಿದ್ದು ಪುರಸಭೆ ಕಚೇರಿಗೆ ಬರುವುದೇ ಅಪರೂಪ. ಪಟ್ಟ­ಣದ ಜನ ಬೆಳಗಿನ ಜಾವ ವಾಯು­ವಿಹಾರಕ್ಕೆ ಊರ ಹೊರಗೆ ಹೋಗು­ತ್ತಿದ್ದರೆ. ತಹಶೀಲ್ದಾರರು ಮಾತ್ರ ವಾಯುವಿಹಾರದ ಹೆಸರಿನಲ್ಲಿ ಪಟ್ಟಣಕ್ಕೆ ನಡೆದು ಬಂದು ಕೆಲಸ ಕಾರ್ಯಗಳನ್ನು ಪರೀಶಿಲಿಸಲು ಪ್ರಯಾಸ ಪಡುತ್ತಿರುವುದು ಕಂಡುಬಂದಿದೆ.

ಅಲ್ಲದೇ ನಿವೃತ್ತಿ ಇನ್ನೂ ಕೇವಲ ಎಂಟು ತಿಂಗಳು ಮಾತ್ರ ಉಳಿದಿದ್ದು ಇಂಥ ಇಳಿ ವಯಸಿ್ಸನಲ್ಲಿ ಕಂದಾಯ ಇಲಾಖೆ ಕೆಲಸಗಳ ಒತ್ತಡ ನಿಭಾಯಿ­ಸುವುದೇ ಅವರಿಗೆ ಅಸಾಧ್ಯವಾಗಿದೆ. ಹೀಗಿರುವಾರ ಪಟ್ಟಣದ ಸಮಸ್ಯೆಗಳ ಬಗ್ಗೆ ಗಮನಹರಿಸಲು ಅವರಿಗೆ ಸಾಧ್ಯವೆ? ಎಂದು ಪುರಸಭೆ ಸಿಬ್ಬಂದಿಯೊಬ್ಬರು ಹೇಳಿದರು. ಪಟ್ಟಣದ ಅನೇಕ ಸಮಸ್ಯೆಗಳನ್ನು ಕೇಳುವವರು ಇಲ್ಲದಂತಾಗಿದೆ. ಪುರಸಭೆ ಸಿಬ್ಬಂದಿಯ ಮೇಲೆ ಹಿಡಿತ ಸಾಧಿಸಿ ಕೆಲಸ ಮಾಡಿಸಿಕೊಳ್ಳುವುದು ತಹಶೀಲ್ದಾರರಿಗೆ ದುಸ್ತರದ ಸಂಗತಿ. ಹೀಗಿದ್ದೂ ಅವರಿಗೆ ಪುರಸಭೆ ಪ್ರಭಾರ ಅಧಿಕಾರ ನೀಡಿ ಸಣ್ಣ ಪಟ್ಟಣ ಪಂಚಾಯಿತಿಗೆ ಇಲ್ಲಿಯ ಮುಖ್ಯಾಧಿಕಾರಿಯನ್ನು ನಿಯೋಜನೆ ಮಾಡಿರುವ ಜಿಲ್ಲಾಧಿಕಾರಿಯ ಕ್ರಮ ಎಷ್ಟರಮಟ್ಟಿಗೆ ಸರಿ ಎಂಬುದು ಹೆಸರು ಪ್ರಕಟಿಸಲು ಇಚ್ಛಿಸದ ಪುರಸಭೆಯ ಕೆಲ ಸದಸ್ಯರ ಆಕ್ಷೇಪ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೊಪ್ಪಳಕ್ಕೆ ನಿಯೋಗ ತೆರಳಿದ್ದ ಅನೇಕ ಸದಸ್ಯರು ಪುರಸಭೆಗೆ ಕಾಯಂ ಮುಖ್ಯಾಧಿಕಾರಿಯನ್ನು ನಿಯೋಜಿ­ಸುವಂತೆ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಎತ್ತಂಗಡಿ ಏಕೆ?: ಈ ಮಧ್ಯೆ ಮುಖ್ಯಾಧಿಕಾರಿಯಾಗಿದ್ದ ಮಹಾದೇವ ಬಿಸೆ ಅವರನ್ನು ದಿಢೀರನೆ ಎತ್ತಂಗಡಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಬಿಸೆ ಅವರ ಕಾರ್ಯನಿರ್ವಹಣೆ ಸಮರ್ಪ-ಕವಾಗಿ­ರದ ಕಾರಣ ಕೆಲ ದಿನಗಳ ಮಟ್ಟಿಗೆ ಮಾತ್ರ ಸಾಧಾರಣ ‘ಶಿಕ್ಷೆ’ರೂಪದಲ್ಲಿ ಜಿಲ್ಲಾಧಿಕಾರಿ ಯಲಬುರ್ಗಾಕ್ಕೆ ನಿಯೋಜನೆ ಮಾಡಿದ್ದಾರೆ ಹೊರತು ವರ್ಗ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಕೆಲ ಗುತ್ತಿಗೆದಾರರ ಮತ್ತು ಜಿಲ್ಲಾ ಅಭಿವೃದ್ಧಿ ಕೋಶದ ಅಧಿಕಾರಿ ಒತ್ತಡದಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎಂಬುದು ಗೊತ್ತಾಗಿದೆ.

ಈ ಮಧ್ಯೆ ಶನಿವಾರ ಇಲ್ಲಿಯ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ನಿವಾಸದಲ್ಲಿ ಸಭೆ ಸೇರಿದ್ದ ಪುರಸಭೆ ಅಧ್ಯಕ್ಷೆ ಮಂಜುಳಾ ನಾಗರಾಳ ಮತ್ತು ಕೆಲ ಸದಸ್ಯರು, ಮಹಾದೇವ ಬಿಸೆ ಅವರ ಸ್ಥಾನಕ್ಕೆ ಬೇರೆ ಮುಖ್ಯಾಧಿಕಾರಿಯನ್ನು ಇಲ್ಲಿಗೆ ಕರೆತರುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದು ಸರ್ಕಾರದ ಮೇಲೆ ಒತ್ತಡ ತರುವಂತೆ ಬಯ್ಯಾಪುರ ಅವರಿಗೆ ಮನವಿ ಮಾಡಿದ್ದಾರೆ ಎಂದು ಸದಸ್ಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT