ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ವಾರ್ಥ ಸೇವೆಯ ಕಾಡಶೆಟ್ಟಿಹಳ್ಳಿ ಮಕ್ಕಳ ಮನೆ

Last Updated 11 ಜೂನ್ 2011, 7:05 IST
ಅಕ್ಷರ ಗಾತ್ರ

ಗುಬ್ಬಿ: ಗ್ರಾಮೀಣ ಭಾಗದ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ, ಅವರನ್ನು ಮುಖ್ಯವಾಹಿನಿಗೆ ತರುವ ಸಾಂಸ್ಕೃತಿಕ ಚುಟುವಟಿಕೆ ತಾಣವಾದ ತಾಲ್ಲೂಕಿನ ಕಡಬ ಹೋಬಳಿ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿನ `ಮಕ್ಕಳ ಮನೆ-ಸಾಂಸ್ಕೃತಿಕ ಅಧ್ಯಯನ ಕೇಂದ್ರ~ ನಿಸ್ವಾರ್ಥ ಸೇವೆಯಲ್ಲಿ ವಿಶಿಷ್ಟವಾಗಿ ಕಾಣಿಸಿಕೊಂಡಿದೆ.

ಪ್ರಾಕೃತಿಕ ಸೊಬಗಿನ ನಡುವೆ ಉದ್ಯೋಗಕ್ಕಾಗಿ ಸೃಷ್ಟಿಯಾದ ಶಿಕ್ಷಣ ಹೊತುಪಡಿಸಿ ಮಕ್ಕಳ ಅಭಿರುಚಿಗೆ ತಕ್ಕಂತೆ ಇಚ್ಚೆ ಪಡುವ ಕಲಾವಿದ್ಯೆಯಲ್ಲಿ ನೈಪುಣ್ಯತೆ ಸಂಪಾದಿಸಲು ಸೂಕ್ತವಾದ ಈ ಸಾಂಸ್ಕೃತಿಕ ಕೇಂದ್ರ 2005ರಲ್ಲಿ ಸ್ಥಾಪನೆಯಾಯಿತು.

ಕಾಡಶೆಟ್ಟಿಹಳ್ಳಿ ಗ್ರಾಮದ ರಂಗಾಸಕ್ತರು ಜಿಲ್ಲೆಯ ಹಲವು ಕಲಾವಿದರನ್ನು ಒಗ್ಗೂಡಿಸಿ `ಮಕ್ಕಳ ಹಬ್ಬ~ ಎಂಬ ನಾಟಕೋತ್ಸವದ ಮೂಲಕ ತನ್ನ ಚಟುವಟಿಕೆಯನ್ನು ಅಧಿಕೃತವಾಗಿ ಆರಂಭಿಸಿದರು. ನೂರಾರು ಪುಟಾಣಿ ರಂಗ ಕಲಾವಿದರನ್ನು ಕುರಿಗಳು ಸಾರ್ ಕುರಿಗಳು, ಯಡ್ಡಾಯಣ, ಕಾಗೆಕಣ್ಣು ಸೇರಿದಂತೆ ಹಲವು ನಾಟಕ ಪ್ರದರ್ಶಿಸಿ ಸ್ಥಳೀಯ ಮಕ್ಕಳಲ್ಲಿ ಪ್ರೋತ್ಸಾಹ ತುಂಬುವ ಪ್ರವೃತ್ತಿ ಅಂದಿನಿಂದಲೇ ಕೈಗೊಳ್ಳಲಾಯಿತು. ಅದರ ಫಲ ಇಂದು ಈ ಕೇಂದ್ರದ ವಿದ್ಯಾರ್ಥಿ ಕೆ.ಆರ್.ಯೋಗಾನಂದ ನೀನಾಸಂ ರಂಗ ತರಬೇತಿ ಕೇಂದ್ರದಲ್ಲಿ ರಂಗ ಪದವಿ ಗಳಿಸಿದ್ದಾರೆ.

ನಗರ ಮತ್ತು ಹಳ್ಳಿ ಎಂಬ ಶೈಕ್ಷಣಿಕ ಅಸಮಾನತೆ ಹೋಗಲಾಡಿಸುವ ಸಲುವಾಗಿ ಮಕ್ಕಳಮನೆ-ಸಾಂಸ್ಕೃತಿಕ ಅಧ್ಯಯನ ಕೇಂದ್ರ ತಾಲ್ಲೂಕಿನ ಸಣ್ಣ ಗ್ರಾಮದಲ್ಲಿ ಸ್ಥಾಪನೆಯಾಯಿತು ಎನ್ನುವ ಈ ಕೇಂದ್ರದ ಕಾರ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಪ್ರತಿ ಮಕ್ಕಳಲ್ಲಿಯೂ ಅಡಗಿರುವ ಪ್ರತಿಭೆ ಬೆಳೆಸಿದರೆ ಮಾತ್ರ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ಈ ನಿಟ್ಟಿನಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗೆ ಸಕ್ರಿಯವಾಗಿ ಪಾಲ್ಗೊಳ್ಳಲು ವ್ಯವಸ್ಥಿತ ಸಜ್ಜಿಕೆ ನಿರ್ಮಿಸಲಾಗಿದೆ ಎನ್ನುವರು.

ಸಮಾಜದ ಗಣ್ಯವ್ಯಕ್ತಿಗಳ ಜಯಂತಿಯಂದು ವಿಶೇಷ ವೇದಿಕೆ ಮೂಲಕ ಮಕ್ಕಳಿಗೆ ವೇದಿಕೆ ಸೃಷ್ಟಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಿಚಾರ ಸಂಕಿರಣ, ನಾಟಕೋತ್ಸವ, ರಂಗೋತ್ಸವ, ಜನಪದ ಕಲಾ ಪ್ರದರ್ಶನ ರಂಗ ಗೀತೆ ಗಾಯನ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಕಲಾ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಮೈಸೂರಿನ `ರಂಗಾಯಣ~ ಸಹಕಾರದಲ್ಲಿ ಇಂದಿಗೂ ನಡೆಸುವ ಮಕ್ಕಳ ಶಿಬಿರದಲ್ಲಿ ಈ ಮಕ್ಕಳಮನೆ ಅಂತರರಾಷ್ಟ್ರೀಯ ಸಂಕಿರಣವನ್ನು ಸಹ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

2006ರಲ್ಲಿ ಐಟಿಐ, ಸಿಡಾ ಮತ್ತು ಸ್ವೀಡನ್ ಹಾಗೂ ರಂಗಾಯಣ ನಡೆಸಿದ ರಂಗಭೂಮಿ ಜಾಗತಿಕ ಹುಡುಗಾಟದಲ್ಲಿ ಈ ಅಧ್ಯಯನ ಕೇಂದ್ರ ವಿಶೇಷತೆಯಲ್ಲಿ ಗುರುತಿಸಿಕೊಂಡಿದೆ.

ರಂಗಕಲೆ ಮತ್ತು ಜಾನಪದ ಕಲೆ ಜತೆ ಮಕ್ಕಳಿಗಾಗಿ ಗ್ರಂಥಾಲಯ, ಕ್ರೀಡಾ ಚಟುವಟಿಕೆ, ಮಕ್ಕಳ ಆಸಕ್ತಿ ಪೋಷಿಸುವ ತರಬೇತಿ ಶಿಬಿರಗಳು ಕಲೆಯ ಪರಿಕಲ್ಪನೆಗೆ ತಕ್ಕಂತೆ ವಾರದ ಅಂತ್ಯದ ದಿನವಾದ ಪ್ರತಿ ಶನಿವಾರ-ಭಾನುವಾರ ನಡೆಸಲಾಗುತ್ತದೆ. ಈ ಎಲ್ಲ ಚಟುವಟಿಕೆಗೆ ತನ್ನದೇ ಆದ ಸ್ವಂತ ಕಟ್ಟಡ ಹೊಂದಿರುವ ಮಕ್ಕಳಮನೆ ಎರಡು ಕೊಠಡಿ, ಒಂದು ಸಭಾಂಗಣ, 46್ಡ28 ಅಡಿ ಅಳತೆ ರಂಗ ವೇದಿಕೆ ಹೊಂದಿದೆ.

ಕೇಂದ್ರದ ಅಧ್ಯಕ್ಷರಾಗಿ ಕೆ.ಎನ್.ರಾಜಣ್ಣ, ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ಕೆ.ಟಿ.ಮೃತ್ಯುಂಜಯಪ್ಪ ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಣದಲ್ಲಿ ವಿವಿಧ ಕಲಾ ಪ್ರಕಾರಗಳನ್ನು ಗುರುತಿಸಲು `ಶಿಕ್ಷಣದಲ್ಲಿ ಕಲೆ~ ಎಂಬ ನೂತನ ಪ್ರಯೋಗ ನಡೆಸುವ ಯೋಜನೆ ರೂಪಿಸಲಾಗಿದೆ.

ರವೀಂದ್ರ ಕಲಾನಿಕೇತನದ ಸಹಕಾರದಲ್ಲಿ ಇಚ್ಚೆಗೆ ಅನುಗುಣವಾಗಿ ಕಲಾತ್ಮಕ ಚಿತ್ರಕಲೆ ತರಬೇತಿ ಹಾಗೂ ಸಾಂಸ್ಕೃತಿಕ ಶಾಲೆ ಆರಂಭಕ್ಕೆ ಪೀಠಿಕೆಯಾಗಿ ಮಕ್ಕಳ ಸಾಹಿತ್ಯ ಪ್ರಕಟಣೆ ಮಾಡುವ ಮಹತ್ತರ ಕಾರ್ಯ ನಡೆಸಲು ಕೇಂದ್ರ ಯೋಜಿಸಿದೆ.

ಪಿ.ಟಿ.ಆರ್ ಪ್ರಶಸ್ತಿ ಪಡೆದ ಈ ಕೇಂದ್ರ ಗ್ರಾಮೀಣ ಮಕ್ಕಳ ಪ್ರತಿಭೆಗೆ ದೇವಾಲಯವಾಗಿದೆ. ಇಲ್ಲಿ ಕಲಿತ ಮಕ್ಕಳು ತಮ್ಮದೇ ಆದ ಭವಿಷ್ಯ ಕಲೆಯಲ್ಲಿ ಆಸಕ್ತಿ ಹೊಂದಿ ಭವಿಷ್ಯ ರೂಪಿಸಿಕೊಳ್ಳುವ ಹಂತ ತಲುಪಿರುವುದು ಸಾಧನೆಯೇ ಸರಿ. ಮೆಚ್ಚುಗೆ ಸೂಸುವ ಸಮುದಾಯ ಈ ಮಕ್ಕಳ ಮನೆಯ ಸಂಸ್ಥಾಪಕರೊಂದಿಗೆ ಕೈ ಜೋಡಿಸಿದಲ್ಲಿ ಮತ್ತಷ್ಟು ಅದ್ಭುತ ಪ್ರತಿಭೆಗಳು ಸಮಾಜಕ್ಕೆ ಕೊಡುಗೆಯಾಗಿ ನೀಡುವರು. 
-ಎಸ್.ಕೆ.ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT