ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿ'

Last Updated 8 ಏಪ್ರಿಲ್ 2013, 6:39 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ನೀಡಿರುವ ಆಯೋಗ, ನೀತಿ ಸಂಹಿತೆ ಜಾರಿ, ಚುನಾವಣೆ ಅಕ್ರಮ ಸಾಧ್ಯತೆಗಳನ್ನು ಪರಿಶೀಲಿಸಲು ಪ್ರತಿ ಕ್ಷೇತ್ರಕ್ಕೂ ಚುನಾವಣಾ ವೀಕ್ಷಕರನ್ನು ಮತ್ತು ಅಭ್ಯರ್ಥಿಗಳ ವೆಚ್ಚ ಪರಿಶೀಲಿಸಲು ಪ್ರತ್ಯೇಕವಾಗಿ ವೀಕ್ಷಕರನ್ನು ನೇಮಕ ಮಾಡಲಿದೆ.

ಅಲ್ಲದೆ, ಇದರ ಜೊತೆಗೆ ಪ್ರತಿ ತಾಲ್ಲೂಕಿಗೆ ಒಬ್ಬ ನೋಡಲ್ ಅಧಿಕಾರಿಯನ್ನೂ ನೇಮಕ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಭಾನುವಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚುನಾವಣಾ ಸಿದ್ಧತೆಯ ವಿವರ ನೀಡಿದ ಅವರು, 10ರಂದು ಅಧಿಸೂಚನೆ ಪ್ರಕಟಣೆಯೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಏ. 17 ಕಡೇ ದಿನ. 18ರಂದು ಪರಿಶೀಲನೆ ನಡೆಯಲಿದೆ. ವಾಪಸು ಪಡೆಯಲು 20 ಕಡೇ ದಿನ. ಮತದಾನ ಮೇ 5ರಂದು ಬೆಳಿಗ್ಗೆ 8 ರಿಂದ ಸಂಜೆ 5ಗಂಟೆವರೆಗೆ ನಡೆಯಲಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 1379 ಮತಗಟ್ಟೆಗಳಿದ್ದು, ಈ ಪೈಕಿ 276 ಸೂಕ್ಷ್ಮ ಮತ್ತು 139 ಅತಿ ಸೂಕ್ಷ್ಮ ಮತಗಟ್ಟೆಗಳು. ಪ್ರತಿ ಮತಗಟ್ಟೆ ಕೇಂದ್ರಕ್ಕೆ ಒಬ್ಬ ಮತಗಟ್ಟೆ ಅಧಿಕಾರಿ, ಇಬ್ಬರು ಮತಗಟ್ಟೆ ಸಹಾಯಕರನ್ನು ನೇಮಿಸಲಿದ್ದು, ಒಟ್ಟಾರೆ 32 ಫ್ಲೈಯಿಂಗ್ ಸ್ಕ್ವಾಡ್‌ಗಳು ಮತ್ತು 18 ಎಸ್‌ಎಸ್‌ಟಿ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ವಿವರಿಸಿದರು.

ಮತಪಟ್ಟಿ ಪರಿಶೀಲನೆ: ಮತಪಟ್ಟಿ ಪರಿಶೀಲನೆ ಕಾರ್ಯ ನಡೆದಿದ್ದು, ಹೆಸರು ಸೇರ್ಪಡೆಗೆ ಏ. 7ಕಡೇ ದಿನವಾಗಿತ್ತು. ಬಂದ ಅರ್ಜಿಗಳ ಪೈಕಿ ಅರ್ಜಿದಾರರನ್ನು ಮುಖತಃ ಕರೆಸಿ ಪರಿಶೀಲಿಸಿ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರ ಪರಿಷ್ಕೃತ ಪಟ್ಟಿ ಏ. 16 ರಂದು ಪ್ರಕಟ ಆಗಲಿದೆ ಎಂದರು.

ಮತಪಟ್ಟಿಗೆ ಸೇರಿಸಲು 35,194 ಅರ್ಜಿಗಳು ಬಂದಿದ್ದು, ಈ ಪೈಕಿ 17,644 ಅರ್ಜಿಗಳನ್ನು ಕೈಬಿಡಲಾಗಿದೆ. ಎರಡು ಕಡೆ ಹೆಸರಿರುವ ಪ್ರಕರಣಗಳನ್ನು ಪರಿಶೀಲಿಸಿ 1976 ಹೆಸರುಗಳನ್ನು ಕೈಬಿಡಲಾಗಿದೆ ಎಂದರು.

ಮತದಾರ ಪಟ್ಟಿಯಲ್ಲಿ ಹೆಸರು ಇದೆ ಎಂದು ಖಾತರಿ ಪಡಿಸಿಕೊಳ್ಳಬೇಕು. ಪಟ್ಟಿಯಲ್ಲಿ ಹೆಸರು ಇಲ್ಲದೆ ಭಾವಚಿತ್ರವುಳ್ಳ ಗುರುತು ಚೀಟಿ ಇದ್ದರೂ ಮತ ನೀಡಲು ಬರುವುದಿಲ್ಲ. ಈ ಬಾರಿ ಮತದಾರರಿಗೆ ಭಾವಚಿತ್ರವಿರುವ ಗುರುತು ಚೀಟಿಗಳನ್ನು ಮತದಾನಕ್ಕೂ ಎರಡು ದಿನ ಮುನ್ನ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಮಾಧ್ಯಮಗಳ ಮೇಲೂ ಗಮನ: ನೀತಿ ಸಂಹಿತೆಯ ಕಟ್ಟು ನಿಟ್ಟಿನ ಜಾರಿ ಕ್ರಮವಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಚುನಾವಣಾ ಸುದ್ದಿಗಳ ಮೇಲೂ ಗಮನಹರಿಸಲಿದ್ದು, ಅಯೋಗದ ಸೂಚನೆಯಂತೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಎಲ್ಲ  ಚುನಾವಣಾ ಸುದ್ದಿಗಳನ್ನು ಗಮನಿಸಲಿದೆ ಎಂದರು.

ನಿರ್ದಿಷ್ಟ ಅಭ್ಯರ್ಥಿ ಪರ ಮತದಾರರ ಮೇಲೆ ಪ್ರಭಾವ ಬೀರುವಂತೆ ಸುದ್ದಿ ಪ್ರಕಟಣೆ, ಪ್ರಸಾರಕ್ಕೆ ಅವಕಾಶ ಇಲ್ಲ. ಜಿಲ್ಲಾ ಮಾಧ್ಯಮ ಸಮಿತಿಗೆ ಈಗಾಗಲೇ ಎರಡು ದೂರುಗಳು ಬಂದಿದ್ದು, ಸಂಬಂಧಿತ ಪತ್ರಿಕೆಗಳಿಗೆ ನೋಟಿಸ್ ನೀಡಲಾಗಿದೆ.
ಜಿಲ್ಲಾಡಳಿತ ಮತ್ತೊಂದು ಸುದ್ದಿ ಗಮನಿಸಿದ್ದು, ನೋಟಿಸ್ ನೀಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT