ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ರೈತರ ಪ್ರತಿಭಟನೆ.ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನ

Last Updated 21 ಮಾರ್ಚ್ 2011, 19:30 IST
ಅಕ್ಷರ ಗಾತ್ರ

 ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಸಮರ್ಪಕ ಗೇಜ್ ನಿರ್ವಹಣೆ ಮಾಡದೇ ಇರುವುದರಿಂದ ನೀರು ಹರಿಸುತ್ತಿಲ್ಲ. ನೀರಿಲ್ಲದೇ ಬೆಳೆ ಒಣಗುತ್ತಿದ್ದು, ಕೂಡಲೇ ನೀರು 104ನೇ ಮೈಲ್ ಕೆಳಭಾಗದ ರೈತರ ಜಮೀನಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಸಂಬಂಧಪಟ್ಟ ರೈತರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ 2 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಕ್ರೋಶಗೊಂಡ ಕೆಲ ರೈತರು ತಮ್ಮ ಜೊತೆ ತಂದಿದ್ದ ಕ್ರಿಮಿನಾಶಕದ ಬಾಟಲಿಗಳನ್ನು ತೆರೆದು ಕುಡಿಯಲು ಯತ್ನಿಸಿದಾಗ ಪೊಲೀಸರು, ಕೆಲ ರೈತ ಮುಖಂಡರು ತಡೆದು ಸಮಾಧಾನ ಪಡಿಸಿದರು.

ನೀರಾವರಿ ಅಧಿಕಾರಿಗಳ ಅಸಡ್ಡೆ ಧೋರಣೆ, ಬೇಡಿಕೆಗೆ ಸ್ಪಂದಿಸದೇ ಇರುವುದಕ್ಕೆ ಆಕ್ರೋಷಗೊಂಡಿದ್ದ ರೈತರು ತಾಳ್ಮೆ ಕಳೆದುಕೊಂಡು ಘೋಷಣೆ ಕೂಗಿದರು. ಈಗಾಗಲೇ ನೀರಾವರಿ ಇಲಾಖೆ ಯರಮರಸ್ ಉಪವಿಭಾಗದ ಅಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟನೆ ಮಾಡಿದ್ದಾಗಿದೆ. ಬೀಗ ಜಡಿದು ಬೇಡಿಕೆ ಈಡೇರಿಸಲು ಒತ್ತಾಯಿಸಲಾಗಿದೆ. ಆದರೆ ಇದ್ಯಾವುದಕ್ಕೂ ನೀರಾವರಿ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಇನ್ನೊಂದೆರಡು ಬಾರಿ ಕಾಲುವೆಯ 104ನೇ ಮೈಲ್ ಕೆಳಭಾಗದ ಜಮೀನಿಗೆ ನೀರು ಹರಿಸಿದರೆ ಜಮೀನಿನಲ್ಲಿ ಬೆಳೆದ ಬೆಳೆ ಕೈಗೆಟುಕುತ್ತದೆ. ಇಲ್ಲದೇ ಇದ್ದರೆ ಹಾಳು ಎಂಬ ಸಮಸ್ಯೆಯನ್ನು ಒಂದುವರೆ ತಿಂಗಳಿಂದ ತರಲಾಗುತ್ತಿದ್ದರೂ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಅಪಾದಿಸಿದರು.

ನೀರಾವರಿ ಅಧಿಕಾರಿಗಳು ಕಾಲುವೆಗೆ ನೀರು ಹರಿಸುವುದಿಲ್ಲ. ಜಮೀನಿಗೆ ನೀರಿಲ್ಲ. ತಮಗೆ ಕಣ್ಣೀರೇ ಗತಿ ಎಂದು ತಮ್ಮ ಅಳಲು ತೋಡಿಕೊಂಡರು. ಮೇಲ್ಭಾಗದಿಂದ ಗಣೇಕಲ್ ಜಲಾಶಯಕ್ಕೆ ನೀರು ಹರಿಸಿ ಕೆಳಭಾಗದ ಜಮೀನಿಗೆ ಯಾವುದೇ ರೀತಿ ನೀರಿನ ಸಮಸ್ಯೆ ಆಗದಂತೆ ಗಮನಹರಿಸುವ ಅಧಿಕಾರಿಗಳ ಭರವಸೆ  ಹುಸಿಯಾಗಿದೆ ಎಂದು ದೂರಿದರು. ನಂತರ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಅವರು ನೀರಾವರಿ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT