ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೇ ಮೀನು ಕ್ಲೀನಿಂಗ್!, ಕೊಳೆತು ನಾರುವ ಕಸ

Last Updated 14 ಜುಲೈ 2012, 5:25 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿಗೆ ಮೂಗು ಮುಚ್ಚಿಕೊಂಡೇ ಹೋಗಬೇಕು. ಒಂದು ಹೆಜ್ಜೆ ಇಡುವುದಕ್ಕೂ ಸರ್ಕಸ್ ಮಾಡಬೇಕು. ನೂಕು-ನುಗ್ಗಲು, ಗುಯ್ಯಗುಡುವ ನೊಣ, ಹರಿಯುವ ರಕ್ತ, ಕೊಳೆತು ನಾರುವ ಕಸ, ಹುಳ ಹಿಡಿದ ಸತ್ತ ಹೆಗ್ಗಣ... ಇದು ನಗರದ ಪ್ರಮುಖ ಮೀನು ಮಾರುಕಟ್ಟೆ ಲಷ್ಕರ್ ಮೊಹಲ್ಲದ ನರಕ ಸದೃಶ್ಯ.


ಮಾರುಕಟ್ಟೆ ಒಳಗೆ ಪ್ರವೇಶವಾಗುತ್ತಿದ್ದಂತೆ ತೆರೆದ ಚರಂಡಿ ನಮ್ಮನ್ನು ಸ್ವಾಗತಿಸುತ್ತದೆ. ಅದು ಸಾದಾ ಮೀನು, ಪಕ್ಕದ ಮಾಂಸದಂಗಡಿಗಳ ತ್ಯಾಜ್ಯಗಳಿಂದ ತುಂಬಿ ಹರಿಯುತ್ತದೆ. ಅದರ ಗಬ್ಬುವಾಸನೆ ಸಹಿಸಿಕೊಂಡು ಒಳಗೆ ಹೋಗುತ್ತಿದ್ದಂತೆ ಜಾರುವ ಟೈಲ್ಸ್‌ಗಳು ಅಪಾಯಕ್ಕೆ ಆಹ್ವಾನಿಸುತ್ತವೆ.

ಈಗಿನ ತುಂತುರು ಮಳೆಯಲ್ಲಿ ಇನ್ನಷ್ಟು ಜಾರಿಕೆ ಉಂಟಾಗಿ ದಿನಕ್ಕೆ ಒಬ್ಬರು-ಇಬ್ಬರು ಬೀಳುವುದು ಖಂಡಿತಾ. ಕೆಲವರು ಕಾಲು ಮುರಿದುಕೊಂಡರೆ, ಇನ್ನು ಕೆಲವರ ತಲೆ ಒಡೆದಿದೆ. ಹಲವು ಮಹಿಳೆಯರು ಬಿದ್ದು ಗಾಯ, ಅವಮಾನ ಎರಡೂ ಆಗಿದೆ.      
  
ಇಲ್ಲಿ ಒಟ್ಟು 21 ಅಂಗಡಿಗಳಿವೆ. 13 ಮಾಂಸದ ಅಂಗಡಿ, ಒಂದು ಮೊಟ್ಟೆ ಅಂಗಡಿ, ಉಳಿದ 7 ಮೀನು ಅಂಗಡಿಗಳಿವೆ. ಒಂದು ಮಾಂಸದ ಅಂಗಡಿ, ಐದು ಮೀನು ಅಂಗಡಿಗಳು ಮಾತ್ರ ಬಾಗಿಲು ತೆರೆದುಕೊಂಡಿರುತ್ತವೆ. ಅವುಗಳ ಮಧ್ಯೆ ಬುಟ್ಟಿಯಲ್ಲಿ ಮೀನು ಮಾರುವ ಮಹಿಳೆಯರ ದೊಡ್ಡ ಗುಂಪು ನೆರೆದಿರುತ್ತದೆ. ಮಾರುಕಟ್ಟೆ ತುಂಬಾ ಕಸದ ರಾಶಿ, ಸತ್ತ ಹೆಗ್ಗಣ, ಕೆಟ್ಟ ಮೀನು ಎಲ್ಲೆಂದರಲ್ಲಿ ಹರಡಿರುತ್ತದೆ. ಅವುಗಳನ್ನು ತುಳಿದುಕೊಳ್ಳುತ್ತಲೇ ಗ್ರಾಹಕರು ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಇದೆ.

ಕ್ಲೀನಿಂಗೂ ಇಲ್ಲೇ: ಯಾವುದೇ, ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಒಂದು ಕಡೆ ಇದ್ದರೆ ಸ್ವಲ್ಪ ದೂರದಲ್ಲಿ ಮೀನು ಸ್ವಚ್ಛ (ಕತ್ತರಿಸುವ) ಗೊಳಿಸುವ ವ್ಯವಸ್ಥೆ ಇರುತ್ತದೆ. ಆದರೆ, ಈ ಮಾರುಕಟ್ಟೆಯಲ್ಲಿ ಮೀನು ಮಾರಾಟದ ಪಕ್ಕವೇ ಕ್ಲೀನಿಂಗ್ ವ್ಯವಸ್ಥೆ ಇದೆ.


ಮೀನು ಕ್ಲೀನು ಮಾಡುವ ಪ್ರತಿಯೊಬ್ಬರ ಬಳಿಯೂ ತ್ಯಾಜ್ಯದ ರಾಶಿ ಇರುತ್ತದೆ. ಕ್ಲೀನ್ ಮಾಡುವವರು ಬೀಡಿ ಸೇದುತ್ತಲೇ, ಬಿದ್ದ ತ್ಯಾಜ್ಯದ ಮಧ್ಯೆಯೇ ಮೀನುಗಳನ್ನು ಸ್ವಚ್ಛ ಮಾಡಿಕೊಡುತ್ತಾರೆ. ವಿಚಿತ್ರ ಎಂದರೆ ಇಲ್ಲಿ ಎಲ್ಲಿಯೂ ಮೀನನ್ನು ನೀರಿನಿಂದ ತೊಳೆಯುವುದಿಲ್ಲ. ಸಾಲದ್ದಕ್ಕೆ ಇಡೀ ಮಾರುಕಟ್ಟೆಯಲ್ಲಿ ನೀರಿನ ವ್ಯವಸ್ಥೆಯೇ ಇಲ್ಲ.

`ಸ್ವಚ್ಛತೆ ಎನ್ನುವುದೇ ಇಲ್ಲಿ ಇಲ್ಲ. ಕ್ಲೀನಿಂಗ್ ಮಾಡುವವರು ಇಲ್ಲಿ ಇರಲೇಬಾರದು. ಒಂದು ಕೆ.ಜಿ. ಕ್ಲೀನ್ ಮಾಡಿಸಲು ಕನಿಷ್ಠ ಒಂದರಿಂದ ಒಂದೂವರೆ ಗಂಟೆ ಕಾಯಬೇಕು; ಅದೂ ಅವರೊಂದಿಗೆ ಮಾತಿನ ಚಕಮಕಿ ನಡೆಸಿ. ಇಷ್ಟೆಲ್ಲ ಹರಸಾಹಸ ಮಾಡಿ ಮೀನು ತರುವುದರ ಒಳಗೆ ಅರ್ಧ ದಿವಸವೇ ಕಳೆದಿರುತ್ತದೆ~ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಹಕ ಜಯನಗರದ ಅಲೋಕ್‌ಕುಮಾರ್.

 `ಮಾರುಕಟ್ಟೆ ಆರಂಭವಾಗಿ ಎರಡು ವರ್ಷ ಕಳೆದಿದೆ. ನಗರಸಭೆ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಾರಕ್ಕೊಮ್ಮೆ ನಗರಸಭೆ ಸಿಬ್ಬಂದಿ ಬರುತ್ತಾರೆ. ಇಲ್ಲಿ ಬೋರ್‌ವೆಲ್ ಇದೆ. ಆದರೆ, ವಿದ್ಯುತ್ ಸಂಪರ್ಕ ಇಲ್ಲ~ ಎನ್ನುತ್ತಾರೆ ಮೀನಿನ ಅಂಗಡಿಯ ಮಾಲೀಕ ಫಿರೋಜ್.

`ಕ್ಲೀನಿಂಗ್ ಮಾಡುವವರು 30 ಜನರಿದ್ದೇವೆ. ನಮಗೆ ಬೇರೆ ಕಡೆ ವ್ಯವಸ್ಥೆ ಮಾಡಿ ಎಂದರೂ ಯಾರೂ ಕೇಳುತ್ತಿಲ್ಲ. ಅಷ್ಟಕ್ಕೂ ಇಲ್ಲಿ ಕೆಲವರು ಮಾಂಸದ ಅಂಗಡಿಗಾಗಿ ಸ್ಟಾಲ್ ತೆಗೆದುಕೊಂಡು ಹೊರಗಡೆ ಅಂಗಡಿ ಮಾಡಿದ್ದಾರೆ. ಇಲ್ಲಿ ಕುರಿ ಕ್ಲೀನ್ ಮಾಡಿಕೊಂಡು ಹೋಗಿ, ಅದರ ತ್ಯಾಜ್ಯವನ್ನು  ಇಲ್ಲೇ ಬಿಟ್ಟು ಹೋಗುತ್ತಾರೆ. ನಗರಸಭೆ ಇದಕ್ಕೆ ಕಡಿವಾಣ ಹಾಕಬೇಕು~ ಎನ್ನುವ ಮಾತು ಕ್ಲೀನಿಂಗ್ ಕೆಲಸ ಮಾಡುವ ಸಿರಾಜುದ್ದೀನ್ ಅವರದ್ದು.

ಮಾಹಿತಿ ಇದೆ: `ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಇದೆ. ಜುಲೈ 15ರಂದು ಅಲ್ಲಿಗೆ ಭೇಟಿ ನೀಡಿ, ಪರಿಶೀಲಿಸುತ್ತೇನೆ~ ಎಂಬ ಭರವಸೆಯನ್ನು ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ `ಪ್ರಜಾವಾಣಿ~ಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT