ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು: ಪಂಚಾಯಿತಿಗೆ ಮುತ್ತಿಗೆ

Last Updated 1 ಜೂನ್ 2013, 10:50 IST
ಅಕ್ಷರ ಗಾತ್ರ

ಯಾದಗಿರಿ: ಕುಡಿಯುವ ನೀರಿಗಾಗಿ ಆಗ್ರಹಿಸಿ ಸಮೀಪದ ವಡಗೇರಾದ ಆಶ್ರಯ ಬಡಾವಣೆಯ ಮಹಿಳೆಯರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ನಡೆಯಿತು.

ಬಡಾವಣೆಯ ನೂರಾರು ಮಹಿಳೆಯರು ಕಳೆದ ಹದಿನೈದು ದಿನಗಳಿಂದ ಬಡಾವಣೆಗೆ ಕುಡಿಯುವ ನೀರಿಲ್ಲದೆ ತೊಂದರೆಯನ್ನು ಅನುಭವಿಸುತ್ತಿದ್ದರು. ಈ ಬಗ್ಗೆ ಅನೇಕ ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಬಡಾವಣೆಯ ಮಹಿಳೆಯರು ಪಂಚಾಯಿತಿಗೆ ಮುತ್ತಿಗೆ ಹಾಕಬೇಕಾಯಿತು ಎಂದು ಪರ್ವೀನ್ ಬೇಗಂ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹದಿನೈದು ದಿನಗಳಿಂದ ಬಡಾವಣೆಗೆ ನೀರಿಲ್ಲದೇ ಮಹಿಳೆಯರು ಸುಮಾರು ಒಂದು ಕಿ.ಮೀ. ದೂರದಲ್ಲಿರುವ ಸಿಹಿ ನೀರಿನ ಬಾವಿಯಿಂದ ಕುಡಿಯುವ ನೀರನ್ನು ತರುತ್ತಿದ್ದೇವೆ. ಬಡಾವಣೆಯಲ್ಲಿರುವ ಎರಡು ಕೊಳವೆಬಾವಿ ಕೆಟ್ಟು ಹೋಗಿವೆ. ಕಂದಳ್ಳಿ ಬ್ಯಾರೇಜ್‌ನಿಂದ ಬರುವ ನೀರೂ ನಿಂತು ಹೋಗಿದೆ. ಇದರಿಂದಾಗಿ ಮಹಿಳೆಯರು ಬೆಳಿಗ್ಗೆ ಎದ್ದು ಕೆಲಸಗಳನ್ನು ಬಿಟ್ಟು ಕುಡಿಯುವ ನೀರಿಗಾಗಿ ಅಲೆಯುತ್ತಿದ್ದರೂ ಪಂಚಾಯಿತಿ ಅಧಿಕಾರಿಗಳು ಯಾವುದೇ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಮಹಿಳೆಯರು ದೂರಿದರು.

ರೊಚ್ಚಿಗೆದ್ದ ಮಹಿಳೆಯರು ಪಂಚಾಯತಿಗೆ ಬೀಗ ಹಾಕಲು ಮುಂದಾದರು. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಪಂಚಾಯಿತಿ ಅಧ್ಯಕ್ಷೆ, ಸಮಸ್ಯೆಯನ್ನು ಆಲಿಸಿದರು. ಒಂದು ದಿನದ ಅವಕಾಶ ಕೊಡಿ. ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಪಂಚಾಯಿತಿಯ ಕಾರ್ಯದರ್ಶಿಯೊಂದಿಗೆ ಮಾತನಾಡಿ, ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದರು. ಕಂದಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿರುವ ನೀರು ಸರಬರಾಜು ಕೇಂದ್ರದ ಮೋಟಾರ್ ಸುಟ್ಟು ಹೋಗಿದೆ. ಇದರಿಂದಾಗಿ ಆಶ್ರಯ ಬಡಾವಣೆಗೆ ನೀರಿನ ಸಮಸ್ಯೆಯಾಗಿದೆ ಎಂದು ಕಾರ್ಯದರ್ಶಿ ವಿವರಣೆ ನೀಡಿದರು. ಕೂಡಲೇ ಮೋಟಾರ್ ದುರಸ್ತಿ ಮಾಡಿ ಕುಡಿಯುವ ನೀರು ಸರಬರಾಜು ಮಾಡುವಂತೆ ಕಾರ್ಯದರ್ಶಿಗೆ ಆದೇಶಿಸಿದರು.

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗದಂತೆ ನೋಡಿಕೊಳ್ಳಿ ಎಂದು ಆದೇಶ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಆದೇಶಕ್ಕೂ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಅಹ್ಮದಿ ಬೇಗಂ, ಯಂಕಮ್ಮ, ಫಿರೋಜಾ ಬೇಗಂ, ಮಹಾದೇವಮ್ಮ, ತಾಯಮ್ಮ, ರಿಯಾನಾ, ಸೈದಮ್ಮ, ಸಿದ್ದಮ್ಮ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT