ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ವಿದ್ಯುತ್‌ಗೆ ತತ್ವಾರ; ಕಂಗಾಲು

ಚುನಾವಣೆ ಅಬ್ಬರ, ಪ್ರಚಾರ ಜೋರು
Last Updated 13 ಏಪ್ರಿಲ್ 2013, 6:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಚುನಾವಣೆಯದ್ದೇ ಅಬ್ಬರ, ಸಂಭ್ರಮ ಮತ್ತು ಪ್ರಚಾರ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಅವರ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. `ನಮಗೆ ಮತ ನೀಡಿ' ಎಂದು ಪ್ರತಿಯೊಬ್ಬರಿಗೂ ಕೈ ಮುಗಿದು ಮತ ಯಾಚಿಸುತ್ತಿದ್ದಾರೆ.

ಆದರೆ, ಕೆಲ ಗ್ರಾಮೀಣ ಪ್ರದೇಶದಲ್ಲಿ ಬೇರೆಯದ್ದೇ ಪರಿಸ್ಥಿತಿಯಿದ್ದು, ಗ್ರಾಮಸ್ಥರು ತೀವ್ರ ಸ್ವರೂಪದ ನೀರು ಮತ್ತು ವಿದ್ಯುತ್ ಕೊರತೆ ಎದುರಿಸುತ್ತಿದ್ದಾರೆ. ಅತ್ತ ರಾಜಕಾರಣಿಗಳು ಮತ್ತು ಅವರ ಬೆಂಬಲಿಗರು ಮತಯಾಚಿಸುತ್ತಿದ್ದರೆ, ಇತ್ತ ಗ್ರಾಮಸ್ಥರು, `ನಮಗೆ ನೀರು ಮತ್ತು ವಿದ್ಯುತ್ ಕೊಡಿ' ಎಂದು ಒತ್ತಾಯಿಸುತ್ತಿದ್ದಾರೆ.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಮತ್ತು ಅವರ ಕಾರ್ಯಕರ್ತರು ಜನರಿಂದ ಹಲವಾರು ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ.

`ನಮ್ಮ ಪಕ್ಷ ಮತ್ತು ಅಭ್ಯರ್ಥಿ ಪರ ಮತ ಹಾಕಿ' ಎಂದು ಮನವಿ ಮಾಡಿದ ಮರುಕ್ಷಣವೇ ಜನರು, `ಮತವನ್ನು ಕೇಳಲು ಮಾತ್ರವೇ ಬರುತ್ತೀರಿ. ಚುನಾವಣೆ ನಂತರ ನೀವೆಲ್ಲರೂ ದೂರವಾಗುತ್ತೀರಿ. ಮೊದಲು ನೀರು ಮತ್ತು ವಿದ್ಯುತ್ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಿ. ನಮ್ಮ ಸಮಸ್ಯೆಗಳನ್ನು ಪರಿಹರಿಸುವವರ ಪರ ಮತ ಚಲಾಯಿಸುತ್ತೇವೆ' ಎನ್ನುತ್ತಿದ್ದಾರೆ.

ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಕೆಲ ಕಡೆ ಗ್ರಾಮಸ್ಥರು ನೀರು ಮತ್ತು ವಿದ್ಯುತ್ ಸಮಸ್ಯೆ ನಿವಾರಣೆಗಾಗಿ ಪ್ರತಿಭಟನೆ ನಡೆಸಿದ ಘಟನೆಗಳೂ ನಡೆದಿವೆ. ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಬಳಿಯಿರುವ ಮಿಣಕನಗುರ್ಕಿ ಬಳಿ ಗ್ರಾಮಸ್ಥರು ಕೆಲ ದಿನಗಳ ಹಿಂದೆ ಗ್ರಾಮಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರೆ, ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಪ್ಪಹಳ್ಳಿ ಗ್ರಾಮಪಂಚಾಯಿತಿ ಕಚೇರಿಗೆ ಇತ್ತೀಚೆಗಷ್ಟೇ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಗ್ರಾಮೀಣ ಪ್ರದೇಶದಲ್ಲಿ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತಿವೆ.

`ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬ ಉದ್ದೇಶ ನಮಗೂ ಇದೆ. ಆದರೆ ಮನೆಯಲ್ಲಿ ಕುಡಿಯಲು ಮತ್ತು ಬಳಸಲು ನೀರೇ ಇಲ್ಲದಿರುವಾಗ, ನಾವು ಚುನಾವಣೆ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಾದರೂ ಹೇಗೆ? ಮತ ಹಾಕಿಯೆಂದು ಕೇಳಲು ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಬರುತ್ತಿದ್ದಾರೆ. ಅಭ್ಯರ್ಥಿಗಳ ಸಾಧನೆ ಮತ್ತು ಪಕ್ಷದ ಮಹಿಮೆ ಹೇಳುತ್ತಿದ್ದಾರೆಯೇ ಹೊರತು ನೀರು ಮತ್ತು ವಿದ್ಯುತ್ ಸಮಸ್ಯೆ ಪರಿಹರಿಸುವ ಬಗ್ಗೆ ಯಾವುದೇ ಭರವಸೆಗಳು ನೀಡುತ್ತಿಲ್ಲ' ಎಂದು ನಾಯನಹಳ್ಳಿ ಗ್ರಾಮದ ಕಾಲೇಜು ವಿದ್ಯಾರ್ಥಿನಿ ಎನ್.ವಿ.ವಂದನಾ `ಪ್ರಜಾವಾಣಿ'ಗೆ ತಿಳಿಸಿದರು.

`ನಗರಪ್ರದೇಶದಲ್ಲಿ ಕೆಲ ಗಂಟೆಗಳ ಮಟ್ಟಿಗಾದರೂ ವಿದ್ಯುತ್ ಮತ್ತು ನೀರು ಪೂರೈಕೆ ಇರುತ್ತದೆ. ಆದರೆ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಎರಡಕ್ಕೂ ಬರ. ಕುಡಿಯುವ ನೀರು ತರಲು 2 ರಿಂದ 3 ಕಿ.ಮೀ.ಗಳಷ್ಟು ದೂರ ನಡೆಯಬೇಕು. ಅಲ್ಲಿ ತೋಟದಲ್ಲಿನ ಕೊಳವೆಬಾವಿಗಳಿಂದ ನೀರು ತರುವಾಗ, ತೋಟದ ಮಾಲೀಕರಿಂದ ಬಯ್ಯಿಸಿಕೊಳ್ಳಬೇಕು. ಗೃಹೋಪಯೋಗಕ್ಕೆ ನೀರು ಬಳಸಲು ಸಹ ನಾವು ಎಚ್ಚರವಹಿಸಬೇಕು. ವಿದ್ಯುತ್ ಪದೇ ಪದೇ ಕಡಿತಗೊಳ್ಳುವುದರಿಂದ ನಮಗೆ ವಿದ್ಯಾಭ್ಯಾಸ ಮಾಡಲು ಆಗುವುದಿಲ್ಲ. ಮನೆಯಲ್ಲಿ ದೈನಂದಿನ ಕೆಲಸಕಾರ್ಯಗಳಿಗೂ ಅಡಚಣೆಯಾಗುತ್ತದೆ' ಎಂದು ಅವರು ತಿಳಿಸಿದರು.

`ನಾವು ಕೃಷಿ ಕೆಲಸ ಮಾಡುವುದೇ ದುಸ್ತರವಾಗಿದೆ. ಹೊಲ, ತೋಟಗಳಲ್ಲಿ ಕೆಲಸ ಮಾಡಲು ಒಂದೆಡೆ ಕೂಲಿಕಾರ್ಮಿಕರು ಸಿಗುತ್ತಿಲ್ಲ, ಮತ್ತೊಂದೆಡೆ ಅಂತರ್ಜಲ ಬತ್ತುತ್ತಿರುವುದರಿಂದ ಕೊಳವೆಬಾವಿಗಳಿಂದಲೂ ನೀರು ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೃಷಿಕರ ಪಾಡನ್ನು ಯಾರು ಕೇಳುತ್ತಾರೆ? ಚುನಾವಣೆಯಲ್ಲಿ ಮತ ಕೇಳಲಿಕ್ಕೆ ಬರುವವರು ನಮ್ಮಂತೆ ಕಷ್ಟ ಪಡುತ್ತಾರಾ? ಚುನಾವಣೆಯಲ್ಲಿ ಗೆದ್ದವರು ಬರೀ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದರೆ ಸಾಲದು. ನಮ್ಮ ಮೂಲ ಸಮಸ್ಯೆಗಳಾದ ನೀರು ಮತು ವಿದ್ಯುತ್ ಪರಿಹರಿಸಲು ಸಹ ಮುಂದಾಗಬೇಕು. ಚುನಾವಣೆ ಪ್ರಚಾರದಲ್ಲಿ ಅಭ್ಯರ್ಥಿಯ ಮತ್ತು ಪಕ್ಷಗಳ ಸಾಧನೆ-ಹಿರಿಮೆ ಹೇಳುವ ಬದಲು ಮೂಲ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಬೇಕು' ಎಂದು ಯಲುವಹಳ್ಳಿ ಗ್ರಾಮದ ವೆಂಕಟರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT