ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿದಂತೆ ನಡೆದ ಸಿದ್ಧಾರೂಢರು: ಸುತ್ತೂರು ಶ್ರೀ

Last Updated 17 ಫೆಬ್ರುವರಿ 2012, 6:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾತ್ಮರ ಸಮದರ್ಶಿ ವ್ಯಕ್ತಿತ್ವಕ್ಕೆ ಸಿದ್ಧಾರೂಢರು ಜೀವಂತ ದೃಷ್ಟಾಂತವಾಗಿದ್ದು, ಅವರು ನುಡಿದಂತೆ ಬದುಕಿ ತೋರಿಸಿದರು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಸಿದ್ಧಾರೂಢ ಮಠದ ಆವರಣದಲ್ಲಿ ನಡೆಯುತ್ತಿರುವ ವಿಶ್ವ ವೇದಾಂತ ಪರಿಷತ್‌ನ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಅವರು ಮಾತನಾಡಿದರು.

ಹರಿಯುವ ನದಿಯಂತೆ ಲೌಕಿಕ ಸುಖ ಗಳಿಗೆ ಮನಸ್ಸು ಹರಿಯಬಿಡದೆ ಪವಾಡ ಸದೃಶವಾದ ಬದುಕನ್ನು ಬದುಕಿದ ಸಿದ್ಧಾರೂಢರು ತಮ್ಮ ನಂತರವೂ ಅದೇ ಪರಂಪರೆಯನ್ನು ಬೆಳೆಸಿದ್ದಾರೆ ಎಂದರು.

ಕ್ಷಣಿಕ ಸುಖಗಳಿಗೆ ಮಾರು ಹೋಗಿ ಇಂದು ಮನುಷ್ಯರು ದುರಂತಗಳಿಗೆ ಕಾರಣರಾಗುತ್ತಿದ್ದಾರೆ. ತಪ್ಪು ಮಾಡಿ ಮಠ-ಮಾನ್ಯಗಳಿಗೆ ಬಂದು ಗುರುಗಳ ಆಶೀರ್ವಾದ ಪಡೆದರೆ ಸಾಕ್ಷಾತ್ಕಾರ ದೊರೆಯುತ್ತದೆ ಎಂದು ಭಾವಿಸುವವರು ಹೆಚ್ಚಾಗಿದ್ದಾರೆ ಇದು ಬದಲಾಗಬೇಕಿದೆ ಎಂದು ಅವರು ಹೇಳಿದರು. ವ್ಯಕ್ತಿ-ಸಮಷ್ಠಿಯಾದಿಯಾಗಿ ಸದ್ಭಾವನೆಗಳ ಜಾಗೃತಿಯಾದಾಗ ಮಾತ್ರ ಪರಸ್ಪರರಲ್ಲಿ ಪ್ರೀತಿ-ವಿಶ್ವಾಸ ಸಾಧ್ಯ.ದುರಾಸೆ ತ್ಯಜಿಸಿದರೆ ಮನುಷ್ಯ ಸಂತೋಷವಾಗಿ ಇರಲು ಸಾಧ್ಯ ಎಂದರು.

ಸಿದ್ಧಾರೂಢರು ನಾಡಿನ ತುಂಬಾ ಸಂಚರಿಸಿ ಜನರಿಗೆ ಆಶೀರ್ವಸಿದರು. ಅವರ ತಪೋ ಶಕ್ತಿಯಿಂದಲೇ ಇಂದು ನಾಡು ಶ್ರೀಮಂತವಾಗಿದೆ. ದೈನಂದಿನ ಕೆಲಸಗಳನ್ನು ಮಾಡಿಕೊಳ್ಳುವುದು ಕಷ್ಟಕರವಾಗಿರುವ ಇಂದಿನ ದಿನಮಾನಗಳಲ್ಲಿ ದಶಕಗಳಿಂದ ಶ್ರೀಮಠ ದಲ್ಲಿ ಸಿದ್ಧಾರೂಢರ ಭಕ್ತರು ಅಖಂಡ ಭಜನೆ ನಡೆಸಿಕೊಂಡು ಬರುತ್ತಿರುವುದು ಸೋಜಿಗದ ಸಂಗತಿ ಎಂದರು.

ಬೀದರ ಬಸವಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ಆತ್ಮಜ್ಞಾನ ಆಗದೆ ಮನುಷ್ಯರಿಗೆ ಶಾಂತಿ ಸಾಧ್ಯವಿಲ್ಲ. ಇಂದು ಹೆಚ್ಚು ಓದಿದವರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣ ಹೆಚ್ಚು  ಕಳವಳಕಾರಿಯಾಗಿದೆ. ತನು ತೃಪ್ತಿ ಗೊಂಡರೂ ಮನದ ಹಸಿವು ಮನುಷ್ಯನನ್ನು ಬೇತಾಳನಂತೆ ಕಾಡುತ್ತಿದೆ. ನಮ್ಮಳಗಿನ ಸಾಮರ್ಥ್ಯ ಲಿಂಗಸ್ವರೂಪ ಹಾಗೂ ಬ್ರಹ್ಮ ಸ್ವರೂಪವಾಗಿದೆ ಎಂದು ಹೇಳಿದರು.

ಗುಲ್ಬರ್ಗಾ ಸಿದ್ಧಾರೂಢ ಮಠ ಪೂರ್ಣ ಪ್ರಜ್ಞಾಶ್ರಮದ ಮಾತಾ ಲಕ್ಷ್ಮೀದೇವಿ ಮಾತನಾಡಿ, ಮನುಷ್ಯನಿಗೆ ಜ್ಞಾನದಿಂದ ತೃಪ್ತಿ ಸಿಗುತ್ತದೆ. ಜ್ಞಾನದ ಜತೆ ಸಂಯಮ ಹಾಗೂ ತಾಳ್ಮೆ ಬೆಳೆಸಿಕೊಂಡರೆ ಆತ್ಮಸಾಕ್ಷಾತ್ಕಾರ ಸಾಧ್ಯ. ಉಪನಿಷತ್ತುಗಳು ರಾಜಾಜ್ಞೆ ಇದ್ದಂತೆ, ಶರೀರದ ಜಂಜಾಟದೊಳಗೆ ನಿತ್ಯದ ಬದುಕಿನ ಸವಿಯನ್ನೇ ಕಳೆದುಕೊಂಡಿದ್ದೇವೆ. ವೇದಗಳಲ್ಲಿ, ಅಧ್ಯಾತ್ಮದಲ್ಲಿ ಮನುಷ್ಯನ ಎಲ್ಲಾ ಸಮಸ್ಯೆಗಳಿಗೂ ಉತ್ತರವಿದೆ ಎಂದು ಅಭಿಪ್ರಾಯಪಟ್ಟರು.


ಸಮಾರಂಭದಲ್ಲಿ ಹರಿದ್ವಾರ ಸಾಧನಾ ಸದನದ ಮಹಾಮಂಡ ಲೇಶ್ವರ ಸ್ವಾಮಿ ವಿಶ್ವಾತ್ಮಾನಂದ ಪುರಿಜಿ ಮಹಾರಾಜ, ಬೀದರ ಚಿದಂಬರಾಶ್ರಮದ ಶಿವಕುಮಾರ ಸ್ವಾಮಿಗಳು, ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಶಿವಪುತ್ರ ಸ್ವಾಮೀಜಿ, ವಿಜಾಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರು ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕಮುನವಳ್ಳಿ ಶಂಕರಾನಂದ ಸ್ವಾಮೀಜಿ, ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರು ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT