ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಅಧ್ಯಕ್ಷ ಮಹದೇವು, ಉಪಾಧ್ಯಕ್ಷೆ ಭ್ರಮರಾಂಭ

ಜಿಲ್ಲಾ ಪಂಚಾಯಿತಿ: ಆಪರೇಷನ್ ಹಸ್ತ ಫಲಪ್ರದ, ಜೆಡಿಎಸ್–ಬಿಜೆಪಿಗೆ ಮುಖಭಂಗ
Last Updated 19 ಸೆಪ್ಟೆಂಬರ್ 2013, 8:44 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾ ಪಂಚಾಯತ್‌ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಉಳಿದ ಎಂಟೂವರೆ ತಿಂಗಳ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಕೂರ್ಗಹಳ್ಳಿ ಮಹದೇವು (ಹಿನಕಲ್‌ ಕ್ಷೇತ್ರ) ಮತ್ತು ಉಪಾಧ್ಯಕ್ಷ­ರಾಗಿ ಎಸ್‌. ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ (ಸೋಸಲೆ ಕ್ಷೇತ್ರ) ಆಯ್ಕೆಯಾದರು.

ಕಾಂಗ್ರೆಸ್‌ನ ಮಹದೇವು, ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ತಲಾ 23 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಜೆಡಿಎಸ್‌ನಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್‌ನ ನಳಿನಾಕ್ಷಿ ವೆಂಕಟೇಶ್‌ ಮತ್ತು ಎಂ.ಜೆ. ಗೀತಾ ಬಸವಣ್ಣ ತಲಾ 21 ಮತಗಳನ್ನು ಪಡೆದು ಪರಾಭವಗೊಂಡರು. ಅಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಬಿ’ ಮಹಿಳೆಗೆ ಮೀಸಲಾಗಿತ್ತು.

ಆಪರೇಷನ್‌ ಹಸ್ತ ಫಲ ನೀಡಿದ್ದರಿಂದ ಬಿಜೆಪಿಯ ಇಬ್ಬರು ಸದಸ್ಯರು ಬೆಂಬಲ ನೀಡಲಾಗಿ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳು ಕಾಂಗ್ರೆಸ್‌ ಪಾಲಾದವು. ಜೆಡಿಎಸ್‌–ಬಿಜೆಪಿ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಲು ಮಾಡಿದ ತಂತ್ರ ವಿಫಲ­ವಾಗಿ­ದೆ. ಎರಡೂ ಪಕ್ಷಗಳಿಗೆ ಮುಖಭಂಗವಾಗಿದೆ.

46 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ 21 ಸ್ಥಾನ, ಜೆಡಿಎಸ್‌ 16, ಬಿಜೆಪಿ 8 ಹಾಗೂ ಪಕ್ಷೇತರ ಅಭ್ಯರ್ಥಿ ಒಬ್ಬರು ಇದ್ದರು. ಚುನಾವಣೆಗೆ ಸಿದ್ದಲಿಂಗಪುರ ಕ್ಷೇತ್ರ ಶಕುಂತಲಾ (ಸಿದ್ದಲಿಂಗಪುರ ಕ್ಷೇತ್ರ) ಮತ್ತು ಸಿ.ಟಿ. ರಾಜಣ್ಣ (ಚಿಲ್ಕುಂದ) ಸೇರಿ ಇಬ್ಬರು ಗೈರುಹಾಜರಾಗಿ­ದ್ದರು. ಒಟ್ಟು 44 ಮಂದಿಗೆ ನಡೆದ ಚುನಾವಣೆ­ಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಲು 23 ಸದಸ್ಯರ ಬೆಂಬಲ ಬೇಕಿತ್ತು. ಬಿಜೆಪಿಯ ಎಸ್‌.ಎಂ. ಕೆಂಪಣ್ಣ, ಎಂ. ಮಂಜುಳಾ ಪುಟ್ಟಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಎಲ್‌. ಮಾದಪ್ಪ ಅವರು ಮತ ಹಾಕಿದ್ದರಿಂದ ಕಾಂಗ್ರೆಸ್‌ಗೆ ಗೆಲುವು ಸುಲಭವಾಯಿತು.

ಎರಡು ದಿನಗಳ ಹಿಂದೆ ನಡೆದ ರೆಸಾರ್ಟ್‌ ರಾಜಕೀಯ ಕಾಂಗ್ರೆಸ್‌ಗೆ ಫಲ ನೀಡಿದೆ. ಕುದುರೆ ವ್ಯಾಪಾರ ತಡೆಯುವ ಸಲುವಾಗಿ ಮೂರೂ ಪಕ್ಷಗಳು ಸದಸ್ಯರಿಗೆ ವಿಪ್‌ ಜಾರಿ ಮಾಡಿದ್ದವು. ಆದರೆ ಬಿಜೆಪಿಯ ಇಬ್ಬರು ಸದಸ್ಯರು ವಿಪ್‌ ಉಲ್ಲಂಘಿಸಿ, ಕಾಂಗ್ರೆಸ್‌ ಬೆಂಬಲಿಸುವ ಮೂಲಕ ಗೆಲುವಿಗೆ ಕಾರಣಕರ್ತರಾದರು.

ತಲಾ ಎರಡು ನಾಮಪತ್ರ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಎರಡು ನಾಮಪತ್ರಗಳನ್ನು ಅಭ್ಯರ್ಥಿಗಳು ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮಹದೇವು ಅವರು ಸಲ್ಲಿಸಿದ ನಾಮಪತ್ರಕ್ಕೆ ಸದಸ್ಯರಾದ ಎಲ್‌. ಮಾದಪ್ಪ ಮತ್ತು ಎಂ.ಬಿ. ಸಿದ್ದೇಗೌಡ ಅವರು ಸೂಚಕರಾಗಿದ್ದರು. ನಳಿನಾಕ್ಷಿ ವೆಂಕಟೇಶ್‌ ಅವರಿಗೆ ಮಂಜು ಮತ್ತು ಸಿ.ಜೆ. ದ್ವಾರಕೀಶ್‌ ಅವರು ಸೂಚಕರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ನ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ಅವರ ನಾಮಪತ್ರಕ್ಕೆ ಕೆ. ಮಹದೇವು ಮತ್ತು ಮಾರುತಿ ಸೂಚಿಸಿದರೆ, ಜೆಡಿಎಸ್‌ನ ಎಂ.ಜೆ. ಗೀತಾ ಬಸವಣ್ಣ ಅವರಿಗೆ ಸುನಿತಾ ವೀರಪ್ಪಗೌಡ ಮತ್ತು ಕೆ. ಲಲಿತಾ ಜಿ.ಟಿ. ದೇವೇಗೌಡ ಸೂಚಕರಾಗಿದ್ದರು.

ಕಾಂಗ್ರೆಸ್‌ನಿಂದ ಉಪಾಧ್ಯಕ್ಷ ಸ್ಥಾನಕ್ಕೆ ರೇವಮ್ಮ ಮಾಲೇಗೌಡ (ಹದಿನಾರು ಕ್ಷೇತ್ರ) ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ ಹಿಂದುಳಿದ ‘ಎ’ ವರ್ಗಕ್ಕೆ ಸೇರಿದ ಇವರು ಜಾತಿ ಪ್ರಮಾಣಪತ್ರ ಮರೆತು ಬಂದಿದ್ದರಿಂದ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅದೇ ಪಕ್ಷದ ಭ್ರಮರಾಂಭ ಅವರು ಹಿಂದುಳಿದ ‘ಎ’ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದರಿಂದ ನಾಮಪತ್ರ ಸಲ್ಲಿಸಿ, ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಸೆ. 18ರಿಂದ ಆರಂಭವಾಗುವ ಅಧ್ಯಕ್ಷ ಉಪಾಧ್ಯಕ್ಷರ ಅವಧಿ 2014 ಜೂನ್‌ 10 ಕ್ಕೆ ಕೊನೆಗೊಳ್ಳಲಿದೆ. ಸದಸ್ಯರು ಕೈ ಎತ್ತುವ ಮೂಲಕ ಚುನಾವಣಾ ಪ್ರಕ್ರಿಯೆ ನಡೆಯಿತು. ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ, ಹೆಚ್ಚುವರಿ ಆಯುಕ್ತರಾದ ಬಿ. ರಾಮು ಅವರು  ಸಹಾಯಕ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT