ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಕಟ್ಟಡದಲ್ಲಿ ಕೊಠಡಿ ಕೊರತೆ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ರೇಷ್ಮೆ ನಗರದಲ್ಲಿ ಇರುವ ಮಹಿಳೆಯರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣವಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇಲ್ಲಿ ತರಗತಿಗಳು ಆರಂಭವಾಗಲಿವೆ. ಆದರೆ ಹೊಸ ಕಟ್ಟಡದಲ್ಲಿ ತರಗತಿ ಕೊಠಡಿಗಳ ಸಂಖ್ಯೆ ಕಡಿಮೆ ಇರುವುದರಿಂದ ಕಾಲೇಜಿನ ಎಲ್ಲ ಕೋರ್ಸ್‌ಗಳು ಇಲ್ಲಿಗೆ ಸ್ಥಳಾಂತರವಾಗುವುದು ಅನುಮಾನವಾಗಿದೆ !

ಕಾಲೇಜು ಆರಂಭವಾದಾಗಿನಿಂದ (2007) ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪದವಿ ಕಾಲೇಜು ನೂತನ ಕಟ್ಟಡದಿಂದ ಪೂರ್ಣ ಪ್ರಮಾಣದಲ್ಲಿ ಹರ್ಷ ಪಡುವ ಸ್ಥಿತಿಯಲ್ಲಿ ಇಲ್ಲವಾಗಿದೆ.

ರಾಮನಗರದ ಮಾಗಡಿ ರಸ್ತೆಯಲ್ಲಿ ಕೆರೆಯ ಅಂಗಳದಲ್ಲಿ ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಿರುವ ಎರಡು ಅಂತಸ್ತಿನ ಈ ಕಟ್ಟಡದಲ್ಲಿ ಇರುವುದು ಕೇವಲ 4 ತರಗತಿ ಕೊಠಡಿಗಳು ಮಾತ್ರ. ಇದರಲ್ಲಿ ಒಂದು ಕೊಠಡಿಯನ್ನು ಕಂಪ್ಯೂಟರ್ `ಲ್ಯಾಬ್~ ಗೆಂದು ಗುರುತಿಸಲಾಗಿದ್ದು, ಇನ್ನೂ ಕೇವಲ ಮೂರು ಕೊಠಡಿಯಲ್ಲಿ ತರಗತಿಗಳನ್ನು ನಡೆಸಬೇಕಾದ ದುಸ್ತಿತಿ ಕಾಲೇಜಿಗೆ ಬಂದೆರಗಿದೆ.

ಸಂಭ್ರಮ ತರದ ಹೊಸ ಕಟ್ಟಡ: ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣ ಆಗಿದ್ದರೂ ಅದರ ಸಂಭ್ರಮ ಪಡುವ ಸ್ಥಿತಿ ಕಾಲೇಜಿನ ಸಿಬ್ಬಂದಿ ಗಿಲ್ಲವಾಗಿದೆ. ಹೊಸ ಕಟ್ಟಡ ನಿರ್ಮಾಣವಾಗಿರುವುದರಿಂದ ಕಾಲೇಜಿನ ಬೋಧನೆ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ತೊಂದರೆಗಳು ಎದುರಾಗುವ ಸಾಧ್ಯತೆ ಇದ್ದು, ಅದನ್ನು ಎದುರಿಸಲು ಹರಸಾಹಸ ಪಡಬೇಕಾಗುತ್ತದೆ ಎಂದು ಕಾಲೇಜಿನ ಹಿರಿಯ ಪ್ರಾಧ್ಯಾಪಕರೊಬ್ಬರು ತಿಳಿಸುತ್ತಾರೆ.

ಒಟ್ಟಾರೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ಬಿ.ಎ (ಎಚ್.ಇ.ಪಿ, ಎಚ್.ಇ.ಎಸ್, ಎಚ್.ಇ.ಕೆ), ಬಿ.ಕಾಂ, ಬಿ.ಬಿ.ಎಂ ಕೋರ್ಸ್‌ಗಳು ನಡೆಯುತ್ತಿವೆ. ಇವುಗಳ ಜತೆಗೆ ಈ ಶೈಕ್ಷಣಿಕ ವರ್ಷದಿಂದ ಬಿ.ಎಸ್ಸಿ (ಭೌತಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್) ವಿಷಯವನ್ನು ಕಡ್ಡಾಯವಾಗಿ ಆರಂಭಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶಿಸಿದೆ.

ಬಿ.ಎ ಪದವಿಯಲ್ಲಿ ಐಚ್ಛಿಕ ವಿಷಯಗಳ ಕೋರ್ಸ್‌ಗಳು ಹೆಚ್ಚಿವೆ. ಇದರಲ್ಲಿನ ಮೂರು ವರ್ಷದ ವಿದ್ಯಾರ್ಥಿಗಳಿಗೆ 5ರಿಂದ 6 ಕೊಠಡಿಗಳು ಬೇಕು. ಬಿ.ಕಾಂ ಮತ್ತು ಬಿ.ಬಿ.ಎಂ ಪದವಿ ವಿದ್ಯಾರ್ಥಿಗಳಿಗೆ ತಲಾ ಮೂರು ಕೊಠಡಿಗಳ (ಒಟ್ಟು 6) ಅಗತ್ಯ ಇದೆ. ಅವುಗಳ ಜತೆಗೆ ಬಿ.ಎಸ್ಸಿ ಕೋರ್ಸ್ ಆರಂಭವಾಗುತ್ತಿರುವುದರಿಂದ ಭೌತಶಾಸ್ತ್ರದ ಲ್ಯಾಬ್ ಮತ್ತು ಕಂಪ್ಯೂಟರ್ ಲ್ಯಾಬ್‌ಗೆ ತಲಾ ಒಂದು ಕೊಠಡಿ ಅಗತ್ಯ ಇದೆ.

ಪ್ರಾಚಾರ್ಯರು, ಕಾಯಂ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರಿಗೆ ಪ್ರತ್ಯೇಕ ಕೊಠಡಿಗಳ ಅಗತ್ಯ ಇದೆ. ಇವುಗಳ ಜತೆಗೆ ಇಡೀ ಕಾಲೇಜಿಗೆ ಒಂದು ಗ್ರಂಥಾಲಯ ಕೊಠಡಿ ಬೇಕಿದೆ.

ಒಟ್ಟಾರೆ ಪದವಿ ಕಾಲೇಜಿನಲ್ಲಿ 15ರಿಂದ 17 ಕೊಠಡಿಗಳ ಅಗತ್ಯ ಇದೆ. ಕಾಲೇಜಿನ ತರಗತಿಗಳನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನದ ಪಾಳಿಯಲ್ಲಿ ನಡೆಸುವುದಾದರೆ ಕನಿಷ್ಠ 10 ತರಗತೊ ಕೊಠಡಿಗಳಾದರೂ ಬೇಕು. ಆದರೆ ಕೇವಲ 3 ರಿಂದ 4 ಕೊಠಡಿಗಳಿರುವ ಕಟ್ಟಡವನ್ನು ನಿರ್ಮಿಸಿಕೊಟ್ಟರೆ ಇತರೆ ತರಗತಿಗಳನ್ನು ನಡೆಸುವುದು ಕಷ್ಟವಾಗುತ್ತದೆ ಎಂದು ಕಾಲೇಜಿನ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.

ಎರಡು ಕೋರ್ಸ್ ಮಾತ್ರ ಸ್ಥಳಾಂತರ:  ಕೊಠಡಿಗಳ ಕೊರತೆ ಇರುವ ಕಾರಣ ಕಾಲೇಜಿನ ಎರಡು ಕೋರ್ಸ್‌ಗಳನ್ನು ಮಾತ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಕಾಲೇಜು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಬಿ.ಎ ಹಾಗೂ ಬಿ.ಎಸ್ಸಿ ಕೋರ್ಸ್‌ಗಳನ್ನು ಮಾತ್ರ ವರ್ಗಾಯಿಸಿ ಉಳಿದ ಕೋರ್ಸ್‌ಗಳನ್ನು ಹಾಗೂ ಪ್ರಾಚಾರ್ಯರ ಕೊಠಡಿಯನ್ನು ಈಗಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿಯೇ ಮುಂದುವರೆಸಲು ಕಾಲೇಜು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಕಟ್ಟಡದಲ್ಲಿ ಬಿ.ಎ ಮೂರೂ ವರ್ಷದ ಕೋರ್ಸ್‌ನ ವಿದ್ಯಾರ್ಥಿಗಳಿಗೆ ತಲಾ ಒಂದೊಂದು ಕೊಠಡಿ ಹಾಗೂ ಹೊಸದಾಗಿ ಆರಂಭವಾಗಲಿರುವ ಬಿ.ಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಒಂದು ತರಗತಿಯನ್ನು (ಕಂಪ್ಯೂಟರ್ ಲ್ಯಾಬ್) ಒದಗಿಸಲು ಕಾಲೇಜು ತೀರ್ಮಾನಿಸಿದೆ. ವಿಜ್ಞಾನ ವಿಷಯ ಈ ವರ್ಷ ಆರಂಭವಾಗಿರುವ ಕಾರಣ ಕಾಲೇಜಿನಲ್ಲಿ ಭೌತಶಾಸ್ತ್ರದ ಲ್ಯಾಬ್ ಕೂಡ ನಿರ್ಮಿಸಬೇಕಾದ ಜವಾಬ್ದಾರಿ ಕಾಲೇಜಿನ ಮೇಲಿದೆ.

ಹೊಸ ಕಟ್ಟಡದಲ್ಲಿ ಸಣ್ಣದಾದ ಒಂದು ಕೊಠಡಿ ಇದ್ದು, ಅದನ್ನು `ಸ್ಟಾಫ್ ರೂಂ~ ಮಾಡಲು ಚಿಂತಿಸಲಾಗಿದೆ. ಅಲ್ಲದೆ ಇರುವ ಕೊಠಡಿಗಳಲ್ಲಿಯೇ ಯಾವುದಾದರೂ ಒಂದರಲ್ಲಿ ಈ ಎರಡೂ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ (ತಾತ್ಕಾಲಿಕ) ವ್ಯವಸ್ಥೆಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಸಾಹಿತ್ಯ ಬೋಧಕರಿಗೆ ಕಿರುಕುಳ: ಕನ್ನಡ, ಇಂಗ್ಲಿಷ್, ಉರ್ದು ಸಾಹಿತ್ಯ ವಿಷಯಗಳ ಬೋಧಕರು ಬಿ.ಎ, ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳಲು ಹೊಸ ಕಟ್ಟಡಕ್ಕೆ ಬರಬೇಕಾಗುತ್ತದೆ. ಇನ್ನೂ ಬಿ.ಕಾಂ ಮತ್ತು ಬಿ.ಬಿ.ಎಂ ಪದವಿ ವಿದ್ಯಾರ್ಥಿಗಳಿಗೆ ಸಾಹಿತ್ಯ ವಿಷಯ ಬೋಧಿಸಲು ಒಂದೂವರೆ ಕಿ.ಮೀ ದೂರದಲ್ಲಿ ಇರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣಕ್ಕೆ ಬರಬೇಕಾದ ದುಸ್ತಿತಿ ಎದುರಾಗಿದೆ. ಅದಕ್ಕಾಗಿ ವಾರದಲ್ಲಿ ಮೂರು ದಿನ ಹೊಸ ಕಟ್ಟಡ, ಉಳಿದ ಮೂರು ದಿನ ಹಳೆ ಕಟ್ಟಡದ ಕಾಲೇಜುಗಳಲ್ಲಿ ಬೋಧಿಸಲು ವ್ಯವಸ್ಥೆ ಕಲ್ಪಿಸಲು ಕಾಲೇಜು ಚಿಂತಿಸುತ್ತಿದೆ.

ಇನ್ನೂ ಕಾಲೇಜಿನ ಪ್ರಾಚಾರ್ಯ ಸ್ಥಿತಿಯಂತೂ ಹೇಳತೀರದು. ಏಕೆಂದರೆ ಎರಡೂ ಕಟ್ಟಡಗಳ ನಡುವೆ ಒಂದೂವರೆ ಕಿ.ಮೀ ಅಂತರ ಇದ್ದು, ಇವೆರೆಡೂ ಕಾಲೇಜುಗಳಲ್ಲಿ ನಡೆಯುವ ಬೋಧನಾ ಚಟುವಟಿಕೆ ಮತ್ತು ಆಡಳಿತಾತ್ಮಕ ವಿಷಯಗಳತ್ತ ಗಮನ ಕೇಂದ್ರೀಕರಿಸಿ ಕೆಲಸ ಮಾಡಬೇಕಾದ ಜವಾಬ್ದಾರಿ ಪ್ರಾಚಾರ್ಯರ ಮೇಲಿದೆ.

ಇದೇ ರೀತಿ ಗ್ರಂಥಾಲಯಾಧಿಕಾರಿ ಸಮಸ್ಯೆಯೂ ಇದೆ. ಎರಡು ಕಡೆಯ ಕಟ್ಟಡಗಳಲ್ಲಿ ಇವರೊಬ್ಬರೇ ಕಾರ್ಯ ನಿರ್ವಹಿಸಬೇಕಿದೆ. ಆದ್ದರಿಂದ ಇವರೂ ಕೂಡ ಮೂರು ದಿನ ಹೊಸ ಕಟ್ಟಡ, ಉಳಿದ ಮೂರು ದಿನ ಹಳೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ವಾರದಲ್ಲಿ ಕೇವಲ ಮೂರು ದಿನ ಮಾತ್ರ ಗ್ರಂಥಾಲಯ ಲಭ್ಯವಾಗುವಂತ ಸ್ಥಿತಿ ಬಂದಿದೆ. ಬೋಧಕೇತರ ಸಿಬ್ಬಂದಿಯನ್ನು ಹೊಸ ಕಟ್ಟಡ ಮತ್ತು ಹಳೆ ಕಟ್ಟಡಕ್ಕೆಂದು ನಿಯೋಜಿಸಬೇಕಾದ ಸ್ಥಿತಿ ಎದುರಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ ಇದೇ 20ರಿಂದ ಪದವಿ ತರಗತಿಗಳನ್ನು ಪುನರಾರಂಭಿಸುವಂತೆ ಆದೇಶ ಹೊರಡಿಸಿದೆ. ಹೊಸ ಕಟ್ಟಡದಲ್ಲಿ ಕಾರ್ಯಾರಂಭ ಆದ ನಂತರ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ನಿಜವಾದ ಸಮಸ್ಯೆಯ ಅರಿವಾಗುತ್ತದೆ ಎಂದು ಕಾಲೇಜಿನ ಹೆಸರೇಳಲು ಇಚ್ಚಿಸದ ಪ್ರಾಧ್ಯಾಪಕರೊಬ್ಬರು ತಿಳಿಸುತ್ತಾರೆ.

ಹೊಸ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಿದ ಸರ್ಕಾರ, ಇಲ್ಲಿ ನಡೆಯುವ ಕೋರ್ಸ್‌ಗಳಿಗೆ ತಕ್ಕಂತೆ ಕಟ್ಟಡ ಮತ್ತು ತರಗತಿ ಕೊಠಡಿಗಳು ಹಾಗೂ ಇತರ ಮೂಲ ಸೌಕರ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಹೊರಬೇಕು. ಸ್ಥಳೀಯ ಶಾಸಕರು, ಸಂಸದರು ಈ ಬಗ್ಗೆ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಸಮಸ್ಯೆ ಆಗದಂತೆ ಎಚ್ಚರವಹಿಸಿ ಸುಗಮವಾಗಿ ತರಗತಿಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂಬುದು ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT