ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನೂಪುರ ಭ್ರಮರಿ' ಲೋಕಾರ್ಪಣೆ

Last Updated 18 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿ ಮತ್ತು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಶುಕ್ರವಾರ ಖಿಂಚಾ ಸಭಾಂಗಣದಲ್ಲಿ ಅಖಿಲ ಭಾರತೀಯ ನೃತ್ಯ ಸಂಶೋಧನ ಸಮ್ಮೇಳನ ನಡೆಯಿತು. 

ಈ ಸಂದರ್ಭದಲ್ಲಿ ದೇಶದ ಮೊಟ್ಟಮೊದಲ ನೃತ್ಯ ಸಂಶೋಧನ ನಿಯತಕಾಲಿಕೆ `ನೂಪುರಾಗಮ'ದ ಅನಾವರಣ, ಕರ್ನಾಟಕದ ನೃತ್ಯ ಕಲಾವಿದರ ವಿಶೇಷ ಸಂಶೋಧನ ಸಮೀಕ್ಷೆಯನ್ನೊಳಗೊಂಡ `ನೂಪುರ ಭ್ರಮರಿ' ವಿಶೇಷ ಸಂಚಿಕೆ ಮತ್ತು www.noopurabhramari com ಪರಿಷ್ಕೃತ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

`ಸಂಗೀತವಾಗಲೀ, ನೃತ್ಯವಾಗಲೀ ಕೆಲವರಿಗಷ್ಟೇ ಸೀಮಿತವಾಗುವುದು ಒಳಿತಲ್ಲ. ಈ ನಿಟ್ಟಿನಲ್ಲಿ ತೆರೆದ ಮನಸ್ಸಿನ ವಿಚಾರ ವಿನಿಮಯ ಆಗಬೇಕು. ಇದರಿಂದ ಮರೆತುಹೋಗಿರುವ ಎಷ್ಟೋ ವಿಷಯಗಳನ್ನು ನೆನಪು ಮಾಡಿಕೊಳ್ಳಬಹುದು. ಸ್ವಾತಂತ್ರ್ಯಾನಂತರ ಭಾರತದಲ್ಲಿ ನೃತ್ಯಕಲೆಗೆ ಗೌರವ ಲಭಿಸಿರುವುದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕಾಗಿದೆ.

ಈಗ ಉಳಿದುಕೊಂಡಿರುವ ನೃತ್ಯ ಕಲೆ, ಸಾಗಿಬಂದಿರುವ ಹಾದಿಯನ್ನು ತಿಳಿಯುವ ಪ್ರಯತ್ನದಲ್ಲಿ ಅಜ್ಞಾತ ನೃತ್ಯ ಕಲಾವಿದರು ಅನುಭವಿಸಿರಬಹುದಾದ ನೋವು ಮತ್ತು ನಲಿವುಗಳ ಪರಾಮರ್ಶೆ ಆಗಬೇಕಾದ ಅವಶ್ಯಕತೆ ಇದೆ' ಎಂದರು ಸಮ್ಮೇಳನ ಸಭಾಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಚ್.ಎಸ್.ಗೋಪಾಲ ರಾವ್.

ಹೆಸರಾಂತ ಕನ್ನಡ ವಿದ್ವಾಂಸರು, ಸಂಶೋಧಕರಾದ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರಿ ಕರ್ನಾಟಕದ ಕಲಾವಿಶೇಷಗಳ ಕುರಿತು ಮಾತನಾಡಿ ಸಂಶೋಧನೆಯ ಅಗತ್ಯವನ್ನು ಸ್ಪಷ್ಟಪಡಿಸಿದರು. ಈ ಸಂದರ್ಭ ಹಿರಿಯ ನೃತ್ಯ ಕಲಾವಿದೆ ಲೀಲಾ ರಾಮನಾಥನ್ ಅವರಿಗೆ `ನೂಪುರ ಕಲಾ ಕಲಾಹಂಸ' ಬಿರುದಿನ ಜತೆಗೆ ಜೀವಮಾನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ `ವರ್ಷದ ಶ್ರೇಷ್ಠ ನೃತ್ಯ ವಿಮರ್ಶೆ ಪ್ರಶಸ್ತಿ'ಯನ್ನು `ವಿಮರ್ಶಾ ವಾಙ್ಮಯಿ' ಬಿರುದಿನೊಂದಿಗೆ ಪ್ರದಾನ ಮಾಡಲಾಯಿತು. ನಂತರ ಸಂಶೋಧನಾಧರಿತವಾದ ನಾಟ್ಯಶಾಸ್ತ್ರ, ಚಿತ್ರ ಪೂರ್ವರಂಗ ಮತ್ತು ನವರಸಕೃಷ್ಣ ನೃತ್ಯ ಪ್ರಸ್ತುತಿಗಳು ಹಲವು ಕಲಾವಿದರಿಂದ ನಡೆದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT