ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಪುಟಕ್ಕೆ ಭದ್ರಾವತಿ ಕೋರ್ಟ್ ಕಟ್ಟಡ

Last Updated 4 ಜೂನ್ 2012, 5:10 IST
ಅಕ್ಷರ ಗಾತ್ರ

ಭದ್ರಾವತಿ:  ಐವತ್ತು ವರ್ಷದ ಇತಿಹಾಸ ಹೊತ್ತಿರುವ ಇಲ್ಲಿನ ನ್ಯಾಯಾಲಯ ಕಟ್ಟಡ ಇನ್ನು ಕೆಲವೇ ದಿನದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡು ಕಾಲಗರ್ಭ ಸೇರಲಿದೆ...

ಹೌದು. ಇಲ್ಲಿನ ಹಳೇನಗರ ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ `ಟಿ~ ಆಕಾರ ಹೊತ್ತಿರುವ ಕಟ್ಟಡವನ್ನು ಕೆಡವಿ, ಅಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ನ್ಯಾಯಾಲಯ ನಿರ್ಮಾಣ ನಡೆಯಲಿದೆ.

ಹಾಲಿ ಪ್ರವೇಶ ಸ್ಥಳದ ಎರಡು ಬದಿಯಲ್ಲಿ ವಿಶಾಲವಾದ ನ್ಯಾಯಾಲಯ ಸಭಾಂಗಣ, ಇದರ ಮಧ್ಯದಲ್ಲಿ ಪ್ರಾಂಗಣ ಅದರ ಹಿಂದೆ ಸಾಲು ಕಚೇರಿಗಳನ್ನು ಹೊಂದಿದ್ದ ಕಟ್ಟಡ ಧರೆಗೆ ಉರುಳಲಿದೆ.

ಇತಿಹಾಸ: ಇಲ್ಲಿನ ತರೀಕೆರೆ ರಸ್ತೆ ಕೃಷಿ ಇಲಾಖೆ ಹಿಂಭಾಗದ ಈಗಿನ ತಮಿಳು ಶಾಲೆಯಲ್ಲಿ ಮೊಟ್ಟ ಮೊದಲಿಗೆ 1928ರಿಂದ ನ್ಯಾಯಾಲಯ ಕಲಾಪ ನಡೆದಿತ್ತು. ನಂತರ 1963ರಲ್ಲಿ ಹಾಲಿ ಇರುವ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗಿತ್ತು.

ಮೊದಲ ಕೋರ್ಟ್ ಸ್ಥಳದಲ್ಲಿ  ಬಿ. ಕೃಷ್ಣಭಟ್, ಗುರುಲಿಂಗ ಮೂರ್ತಿ, ಎಂ. ಸತ್ಯನಾರಾಯಣ ಕೆಲಸ ಮಾಡಿದ್ದರು ಎಂಬುದು ಹೆಮ್ಮೆಯ ಸಂಗತಿ. ನಂತರ ಇವರ ಪ್ರಯತ್ನ ಫಲವಾಗಿ 1963ರಲ್ಲಿ ನಿರ್ಮಾಣವಾದ `ಟಿ~ ಮಾದರಿ ಕಟ್ಟಡದಲ್ಲಿ ಈ ಹಿರಿಯ ವಕೀಲರ ಜತೆಗೆ ಮಂಗೋಟೆ ಮುರಿಗೆಪ್ಪ, ಹೆಬ್ಬಂಡಿ ಪ. ಬಸವರಾಜಪ್ಪ ಸೇರ್ಪಡೆಯಾಗುವ ಮೂಲಕ ತಮ್ಮ ವೃತ್ತಿ ಬದುಕಿನ 50 ವಸಂತಗಳನ್ನು ಪೂರೈಸಿರುವುದು ಇಲ್ಲಿಯೇ ಎಂಬುದು ವಿಶೇಷ.

1963ರಲ್ಲಿ ಆರಂಭವಾದ ಕಟ್ಟಡವನ್ನು ಅಂದಿನ ಮೈಸೂರು ರಾಜ್ಯದ ಮುಖ್ಯ ನ್ಯಾಯಾಧೀಶ ಎಚ್. ಹೊಂಬೇಗೌಡ ಉದ್ಘಾಟಿಸಿದ್ದರು. ಆಗ ಮುನ್ಸೀಫ್ ನ್ಯಾಯಾಧೀಶ ಬಿ.ಆರ್. ಅಶ್ವತ್ಥರಾಮ್ ಉಪಸ್ಥಿತರಿದ್ದರು.

ವರ್ಷ ಕಳೆದಂತೆ ವಕೀಲರು, ಪ್ರಕರಣಗಳು ಹಾಗೂ ಜನಸಂಖ್ಯೆ ಹೆಚ್ಚಾದಂತೆ ಹಾಲಿ ಇರುವ ಸ್ಥಳದಲ್ಲೇ 1987ರಲ್ಲಿ 2ನೇ ಹಂತದ ಕಟ್ಟಡ ನಿರ್ಮಾಣ ನಡೆದು, 3ನೇ ಕೋರ್ಟ್ ಆರಂಭವಾಯಿತು. 2010-11ನೇ ಸಾಲಿನಲ್ಲಿ 3ನೇ ಹಂತದ ಕಟ್ಟಡ ಕಾಮಗಾರಿ ನಡೆದು ಪುನಃ 4ನ್ಯಾಯಾಲಯಗಳು ತಮ್ಮ ಕೆಲಸ ಆರಂಭಿಸಿದವು.

ಈ ರೀತಿಯ ನ್ಯಾಯಾಲಯ ಸಂಕೀರ್ಣಕ್ಕೆ ಮುಕುಟವಿಟ್ಟ ರೀತಿ ವೃತ್ತಾಕಾರದ ಕಂಬಗಳ ಸಾಲು, ವಿಶಾಲ ಪ್ರಾಂಗಣ, ಹಾಗೂ ಇನ್ನಿತರೆ ವಿಶೇಷ ವಿನ್ಯಾಸ ಹೊತ್ತಿದ್ದ ಕಟ್ಟಡಕ್ಕೆ ಈಗ ಮುಕ್ತಿಕೊಟ್ಟು, ನವೀನ ಮಾದರಿ ಕಟ್ಟಡ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಅಡಿಯಿಟ್ಟಿದ್ದು, ಅದರ ಭಾಗವಾಗಿ ತೆರವುಕಾರ್ಯ ನಡೆದಿದೆ.

ತೆರವು ಕಾರ್ಯ ನಡೆಯುವ ಜಾಗದಲ್ಲಿನ ಎರಡು ನ್ಯಾಯಾಲಯಗಳು ಹಳೇನಗರ ಬಸವೇಶ್ವರ ವೃತ್ತದಲ್ಲಿನ ವೀರಭದ್ರೇಶ್ವರ ಕಾಂಪ್ಲೆಕ್ಸ್‌ನಲ್ಲಿ ಸೋಮವಾರದಿಂದ ಕಾರ್ಯ ಮಾಡಲಿದ್ದು, ಉಳಿದ ನಾಲ್ಕು ನ್ಯಾಯಾಲಯಗಳು ಹಾಲಿ ಸ್ಥಳದಲ್ಲೇ ತಮ್ಮ ಕೆಲಸ ನಿರ್ವಹಿಸಲಿವೆ.
 
ಒಟ್ಟಿನಲ್ಲಿ ಹಲವು ದಶಕದ ಇತಿಹಾಸ ಹೊತ್ತಿದ್ದ ನ್ಯಾಯಾಲಯ ಕಟ್ಟಡ ಕಲವೇ ದಿನದಲ್ಲಿ ಇತಿಹಾಸದ ಪುಟ ಸೇರಲಿದೆ. ಆದರೆ, ಅದರೊಂದಿಗೆ ಕಾಲಕಳೆದ ಅನೇಕ ಮನಸ್ಸುಗಳ, ಮಾಸದ ನೆನಪು ಮಾತ್ರ ನಿರಂತರವಾಗಿ ಉಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT