ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳ ಅಂಗಳದಿ ಚಂದ್ರಿಕಾ

Last Updated 10 ಮೇ 2012, 19:30 IST
ಅಕ್ಷರ ಗಾತ್ರ

`ನೆನಪುಗಳ ಅಂಗಳದಿ ನಿನ್ನ ನಗೆಯ ತುಂಬಿಕೊಂಡ ಬೆಳದಿಂಗಳು~ ಎಂಬ ಮಧುರವಾದ ಹಾಡನ್ನು ಹಾಡಿ ರಾಜ್ಯಪ್ರಶಸ್ತಿ ಪಡೆದವರು ಚಂದ್ರಿಕಾ ಗುರುರಾಜ್. ಅದು ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ `ಬೆಳದಿಂಗಳ ಬಾಲೆ~ ಚಿತ್ರದ ಹಾಡು.

ಇದುವರೆಗೂ 85ಕ್ಕೂ ಹೆಚ್ಚು ಸಿನಿಮಾಗೆ ಹಾಡಿರುವ ಚಂದ್ರಿಕಾ, ಇತ್ತೀಚಿನ `ಸಿದ್ಧಗಂಗಾ~ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. `ತುಂಬಾ ದಿನಗಳ ನಂತರ ಈ ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿತು. ಇಂದು ನನ್ನ ದನಿಯ ಅವಶ್ಯಕತೆ ಚಿತ್ರರಂಗಕ್ಕೆ ಇಲ್ಲವೇನೋ ಬಿಡಿ.

ಇವತ್ತಿನ ಹಾಡುಗಳೇ ಬೇರೆ ರೀತಿಯವು. ಅವುಗಳ ನಿರೀಕ್ಷೆಗೆ ತಕ್ಕಂತೆ ಹಾಡಲು ನಾನು ಸೂಕ್ತವಲ್ಲವೇನೋ?~- ಚಂದ್ರಿಕಾ ನೋವು ಬೆರೆತ ದನಿಯಲ್ಲಿ ಮಾತನಾಡುತ್ತಾರೆ.

ತುಮಕೂರಿನವರಾದ ಚಂದ್ರಿಕಾ ಚಿಕ್ಕಂದಿನಲ್ಲೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತವರು. ಲತಾ ಮಂಗೇಶ್ಕರ್ ಅವರ ಕಟ್ಟಾ ಅಭಿಮಾನಿಯಾದ ಅವರು ರೇಡಿಯೋದಲ್ಲಿ ಲತಾ ಹಾಡುಗಳನ್ನು ಕೇಳಿಕೊಂಡು ಅದರಂತೆ ಹಾಡಲು ಪ್ರಯತ್ನಿಸುತ್ತಿದ್ದರು.

ಕಾರ್ಯಕ್ರಮವೊಂದರಲ್ಲಿ ಹಾಡುತ್ತಿದ್ದಾಗ ಮುಖ್ಯ ಅತಿಥಿಯಾಗಿ ಬಂದಿದ್ದ ಶಂಕರ್‌ನಾಗ್, ಚಂದ್ರಿಕಾ ಅವರ ಗಾನ ಪ್ರತಿಭೆಯನ್ನು ಮೆಚ್ಚಿಕೊಂಡರು. ಅಷ್ಟು ಮಾತ್ರವಲ್ಲ ಅವರನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಪರಿಚಯಿಸಿದರು. `ಇಂದ್ರಜಿತ್~ ಚಿತ್ರದ `ಕಡಲಿಗೆ ಒಂದು ಕೊನೆಯಿದೆ..~ ಹಾಡಿನ ಮೂಲಕ ಅವರ ಸಿನಿಮಾ ಸಂಗೀತ ಸಖ್ಯ ಆರಂಭವಾಯಿತು.

`ಅಂದು ಒಂದೇ ಟೇಕ್‌ನಲ್ಲಿ ಹಾಡಬೇಕಿತ್ತು. ಇಂದು ಬಿಡಿಬಿಡಿಯಾಗಿ ಹಾಡಿದರೂ ನಡೆಯುತ್ತದೆ~ ಎಂದು ನೆನಪಿಗೆ ಜಾರುವ ಚಂದ್ರಿಕಾಗೆ ತಾವು ಹಾಡಿದ ಹಾಡುಗಳ ಬಗ್ಗೆ ತೃಪ್ತಿ ಇದೆ.

`ಚೈತ್ರದ ಪ್ರೇಮಾಂಜಲಿ~ಯ ಶೀರ್ಷಿಕೆ ಹಾಡು, `ರಂಜಿತಾ~ ಚಿತ್ರದ `ಏನಿದ್ದರೇನು ಹೆಣ್ಣಾದ ಬಳಿಕ~, `ಪ್ರೇಮ ರಾಗ ಹಾಡು ಗೆಳತಿ~ಯ `ಬಾ ಬಾರೆ ಓ ಗೆಳತಿ~, `ಪ್ರತಾಪ್ ಚಿತ್ರದ `ಈ ಜೋಗದ ಜಲಪಾತ~, `ಅನುರಾಗ ಸಂಗಮ~ದ `ಸಂಗಮ ಸಂಗಮ ರಾಗ ಅನುರಾಗ~ ಅವರು ಹಾಡಿದ ಪ್ರಮುಖ ಹಾಡುಗಳು.

15 ವರ್ಷಗಳಿಂದ ಹಿಂದೂಸ್ತಾನಿ ಸಂಗೀತಕ್ಕೆ ಆಕರ್ಷಿತರಾಗಿರುವ ಅವರು `ಗಜಲ್~ ಮತ್ತು `ಭಜನ್~ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಹಂಸಲೇಖ, ಉಪೇಂದ್ರ ಕುಮಾರ್, ವಿ. ಮನೋಹರ್, ರಾಜ್‌ಕೋಟಿ, ರಾಜನ್-ನಾಗೇಂದ್ರ, ಕೀರವಾಣಿ ಮುಂತಾದ ಸಂಗೀತ ನಿರ್ದೇಶಕರ ರಾಗ ಸಂಯೋಜನೆಯಲ್ಲಿ ಹಾಡಿದ ಅನುಭವ ಅವರದು.
 
ಆಗಾಗ್ಗೆ ದೂರದರ್ಶನದಲ್ಲೂ ಹಾಡುವ ಚಂದ್ರಿಕಾ ಇದುವರೆಗೂ ಭಕ್ತಿಗೀತೆ, ಭಾವಗೀತೆ, ದಾಸವಾಣಿ ಸೇರಿ ಸುಮಾರು ಒಂದೂವರೆ ಸಾವಿರ ಹಾಡುಗಳನ್ನು ಹಾಡಿದ್ದಾರೆ.

`ಅವಕಾಶ ಇರಲಿ ಬಿಡಲಿ ನಾನು ಹಾಡುವುದನ್ನು ಬಿಟ್ಟಿಲ್ಲ. ನಾನು ಹಾಡೋದು ಆತ್ಮತೃಪ್ತಿಗೆ~ ಎನ್ನುವ ಚಂದ್ರಿಕಾಗೆ ವಿಭಿನ್ನ ರೀತಿಯ ಸಂಗೀತ ಶಾಲೆ ಆರಂಭಿಸುವ ಕನಸಿದೆ.

`ಹೊಸ ತಲೆಮಾರಿಗೆ ನಮ್ಮ ಬಗ್ಗೆ ಮಾಹಿತಿ ಇಲ್ಲ ಎಂದಾಗ ನೋವಾಗುತ್ತದೆ. ಇಂದು ಚಿತ್ರರಂಗದಲ್ಲಿ ಅವರವರದೇ ಗುಂಪಿನವರನ್ನು ಎತ್ತಿ ಹಿಡಿಯಲಾಗುತ್ತಿದೆ. ಮುಂಚಿನಿಂದಲೂ ಕನ್ನಡ ಚಿತ್ರರಂಗದಲ್ಲಿ `ಹಿತ್ತಲ ಗಿಡ ಮದ್ದಲ್ಲ~ ಎಂಬ ಧೋರಣೆ ಇದೆ. ಅದು ಇಂದು ಮತ್ತಷ್ಟು ಹೆಚ್ಚಾಗಿದೆ~ ಎಂದು ಬೇಸರಿಸಿಕೊಳ್ಳುತ್ತಾರೆ ಈ ಹಿರಿಯ ಹಿನ್ನೆಲೆ ಗಾಯಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT