ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ ಜಲದಲ್ಲಿ ರಾಜಕೀಯ ಬೇಡ: ದೇವೇಗೌಡ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಆದರೆ, ನಮ್ಮ ಗುರಿ ಶಾಶ್ವತ ಪರಿಹಾರ ಪಡೆಯುವುದಾಗಬೇಕು. ಆ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು~ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮಂಗಳವಾರ ಇಲ್ಲಿ ಹೇಳಿದರು.

`ನೆಲ- ಜಲದ ವಿಷಯದಲ್ಲಿ ರಾಜಕೀಯ ಬೇಡ~ ಎಂದು ಹೇಳಿದ ಅವರು, ಕಾವೇರಿ ಚಳವಳಿಯಲ್ಲಿ ಭಾಗವಹಿಸಿದ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

`ಕಾವೇರಿ ವಿವಾದ ಸೂಕ್ಷ್ಮ ವಿಚಾರ. ಆವೇಶಕ್ಕೆ ಒಳಗಾಗಿ ಈ ಕುರಿತು ಬೇಕಾಬಿಟ್ಟಿ ಹೇಳಿಕೆ ನೀಡುವುದು ಸರಿಯಲ್ಲ. ಶಾಶ್ವತ ಪರಿಹಾರಕ್ಕಾಗಿ ನನ್ನ ಪ್ರಯತ್ನ ನಿರಂತರವಾಗಿ ನಡೆಯುತ್ತದೆ~ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`1991ರ ನಂತರ ನಾಲ್ಕೈದು ಬಾರಿ ಈ ರೀತಿಯ ಸಂಕಷ್ಟ ಎದುರಾಗಿದೆ. ಉಳಿದಂತೆ ಸಮಸ್ಯೆ ಇರಲಿಲ್ಲ. ಸಂಕಷ್ಟ ಸಂದರ್ಭದಲ್ಲಿ ನೀರು ಬಿಡುಗಡೆ ಮಾಡಿದಾಗೆಲ್ಲ ಪ್ರಕೃತಿ ನಮ್ಮ ಕೈಹಿಡಿದಿದೆ. ಈಗಲೂ ಅಂತಹ ಸಾಧ್ಯತೆ ಇದೆ.  ಎರಡು ಮೂರು ದಿನದಿಂದ ಮಳೆ ಆಗುತ್ತಿರುವುದು ಶುಭ ಸೂಚನೆ~ ಎಂದರು.

`ತಮಿಳುನಾಡಿಗೆ ನೀರು ಬಿಡಬೇಕು ಎಂಬ ಕಾವೇರಿ ನದಿ ಪ್ರಾಧಿಕಾರದ (ಸಿಆರ್‌ಎ) ಆದೇಶ ಪಾಲಿಸುವಂತೆ ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ ನೀಡಿತು. ಅದನ್ನು ಪಾಲಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದವರಲ್ಲಿ ನಾನು ಮೊದಲಿಗ. ಕಾನೂನು ಹೋರಾಟದಲ್ಲಿ ಯಶಸ್ಸು ಸಾಧಿಸಬೇಕಾದರೆ ಈ ರೀತಿಯ ತೀರ್ಮಾನಗಳು ಅನಿವಾರ್ಯ. ಇದೇ ವಿಷಯವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೂ ಹೇಳಿದ್ದೆ~ ಎಂದು ಅವರು ಸ್ಮರಿಸಿದರು.

`ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ 40 ಟಿಎಂಸಿ ಅಡಿ ನೀರು ಬಿಡುವಂತೆ ಸೂಚಿಸಿತ್ತು. ಆ ಸಂದರ್ಭದಲ್ಲಿ ಹಿರಿಯ ವಕೀಲ ಎಫ್.ಎಸ್.ನಾರಿಮನ್ ಅವರ ಸಲಹೆಯಂತೆ 5 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೆವು.

ಬಳಿಕ ಸುಪ್ರೀಂ ಕೋರ್ಟ್ ಮುಂದೆ ಹೋಗಿ ನೀರು ಬಿಡುವುದು ಕಷ್ಟ ಎಂದು ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲಾಯಿತು. ಆಗ ಕೋರ್ಟ್ ತನ್ನ ತೀರ್ಪನ್ನು ಪುನರ್‌ಪರಿಶೀಲಿಸಿ, 11 ಟಿಎಂಸಿ ಅಡಿಗೆ ಇಳಿಸಿತು. ಅದರ ಆಧಾರದ ಮೇಲೆ ನೀರು ಬಿಡಲು ಸಲಹೆ ಮಾಡಿದೆ~ ಎಂದು ಗೌಡರು ಹೇಳಿದರು.

`ಸಿ.ಆರ್.ಎ ಆದೇಶ ಹೊರಬಿದ್ದ ಬಳಿಕ ಅದರಿಂದಾಗುವ ಪರಿಣಾಮಗಳ ಬಗ್ಗೆ ಪ್ರಧಾನಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರ ಜತೆ ಮಾತನಾಡಿದೆ. ಅದರ ಪರಿಣಾಮವಾಗಿ ಕೇಂದ್ರ ತಂಡ ಅಧ್ಯಯನಕ್ಕೆ ರಾಜ್ಯಕ್ಕೆ ಬಂತು. ಈಗ ಅದು ವರದಿ ನೀಡುವವರೆಗೂ ಕಾಯಬೇಕು. ಕೇಂದ್ರ ತಂಡಕ್ಕೆ ರಾಜ್ಯದಲ್ಲಿನ ಸಂಕಷ್ಟ ಸ್ಥಿತಿ ಅರ್ಥವಾಗಿದೆ. ಇದೇ 11ರಂದು ಕಾವೇರಿ ಉಸ್ತುವಾರಿ ಸಮಿತಿ ಸಭೆ ಸೇರುತ್ತಿದೆ. ಸಭೆ ಬಳಿಕ ಪರಿಹಾರ ಸಿಗಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಡಕು ಧ್ವನಿ ಬೇಡ: `ಕೃಷ್ಣಾ ನೀರಾವರಿ ಯೋಜನೆಗಳಿಗೆ ಕಾವೇರಿ ಕೊಳ್ಳದ ಜನರ ಬೆಂಬಲ ಇಲ್ಲ ಎನ್ನುವ ಒಡಕು ಭಾವನೆ ಸರಿಯಲ್ಲ. ನಾವೆಲ್ಲ ಒಂದೇ ಎನ್ನುವ ಭಾವನೆ ಮೂಡಬೇಕು. ಆಗ ಮಾತ್ರ ಯಶಸ್ಸು ಸಾಧ್ಯ~ ಎಂದು ಈ ಕುರಿತು ಕೆಲವು ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಉಲ್ಲೇಖಿಸಿ ಕಿವಿಮಾತು ಹೇಳಿದರು.

ಪತ್ರಿಕಾಗೋಷ್ಠಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, `ತಮಿಳುನಾಡಿಗೆ ನೀರು ಬಿಡುವುದಿಲ್ಲ ಎನ್ನುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಈ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬಾರದು~ ಎಂದು ಹೇಳಿದರು.

ಸಂಸದ ಎನ್.ಚೆಲುವರಾಯಸ್ವಾಮಿ, ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ, ಜೆಡಿಎಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಪೂಜಾ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಎಚ್‌ಡಿಕೆಗೆ ದೇವೇಗೌಡ ಮೆಚ್ಚುಗೆ
ಬೆಂಗಳೂರು: `ಕಾವೇರಿ ವಿಷಯದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಂಯಮದಿಂದ ನಡೆದುಕೊಂಡರು. ರಾಜೀನಾಮೆ ಕೊಟ್ಟು ಹೋರಾಟಕ್ಕೆ ಇಳಿಯುವ ತುಡಿತ ಅವರಲ್ಲಿ ಇದ್ದರೂ ದುಡುಕಿನ ನಿರ್ಧಾರ ತೆಗೆದುಕೊಳ್ಳಲಿಲ್ಲ. ಮಾಧ್ಯಮಗಳ ಮುಂದೆಯೂ ಹೇಳಿಕೆ ನೀಡಲಿಲ್ಲ. ಈ ವಿಷಯದಲ್ಲಿ ಪ್ರಬುದ್ಧತೆ ಪ್ರದರ್ಶಿಸಿದರು~-

ಹೀಗೆ ಕುಮಾರಸ್ವಾಮಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಎಚ್.ಡಿ.ದೇವೇಗೌಡ. `ಕಾವೇರಿ ಚಳವಳಿ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರು ಮತ್ತು ಸಂಸದರು ರಾಜೀನಾಮೆ ಪತ್ರಗಳನ್ನು ನನಗೆ ನೀಡಿದ್ದರು. ಇದನ್ನು ಕೆಲವರು ನಾಟಕ ಎಂದು ಟೀಕಿಸಿದರು. ಯಾರು ಏನೇ ಹೇಳಿದರೂ ನಮ್ಮ ಶಾಸಕರು ಮತ್ತು ಸಂಸದರಲ್ಲಿ ಬದ್ಧತೆ ಕಂಡೆ. ರಾಜೀನಾಮೆ ಕೊಡುವುದು ಬೇಡ ಎಂದು ನಾನೇ ಸಮಾಧಾನಪಡಿಸಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT