ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲೆ ಕೊಡುವ ಅಕ್ಷರ ಕಲೆ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ನಿಮಗೆ ಸುಂದರವಾದ ಬರವಣಿಗೆ ಇದ್ದರೆ ಇಲ್ಲೊಂದು ಅವಕಾಶ~ ಎಂದು ಈಚೆಗೆ ಜಾಹೀರಾತೊಂದು ಪ್ರಕಟವಾಗಿತ್ತು. ಹೀಗೆ ಮುದ್ದಾದ ಅಕ್ಷರಗಳಿಗೂ ಉದ್ಯೋಗ ಅವಕಾಶ ಸಿಗುವಂತೆ ಮಾಡಿರುವುದು `ಕ್ಯಾಲಿಗ್ರಫಿ ~ ಎಂಬ ವಿಶಿಷ್ಟ ಕೋರ್ಸ್.

ಅಕ್ಷರಗಳನ್ನು, ಸಂಖ್ಯೆಗಳನ್ನು, ಪದಗಳನ್ನು, ವಾಕ್ಯಗಳನ್ನು ಸುಂದರವಾಗಿ ಹಾಗೂ ಆಕರ್ಷಕವಾಗಿ ಬರೆಯುವ ಕಲೆಯೇ `ಕ್ಯಾಲಿಗ್ರಫಿ ~.

ಈಚೆಗೆ ನಮ್ಮನ್ನಗಲಿದ ಆ್ಯಪಲ್ ಕಂಪ್ಯೂಟರ್ ತಯಾರಿಕೆ ಸಂಸ್ಥೆ ರೂವಾರಿ ಸ್ಟೀವ್ ಜಾಬ್ಸ್ ಸಹ ಸುಮ್ಮನೆ ಕ್ಯಾಲಿಗ್ರಫಿ ಎಂಬ ಕೋರ್ಸ್‌ಗೆ ಸೇರಿಕೊಂಡ. ಬದುಕಿನ ಆರಂಭದಲ್ಲಿ ಕಲಿತ ವಿದ್ಯೆ ಮುಂದೆ ಎಲ್ಲಿ ಉಪಯೋಗವಾಗಬಹುದು ಎಂಬ ಕಲ್ಪನೆ ಇರಲಿಲ್ಲ.
 
ಹತ್ತು ವರ್ಷಗಳ ನಂತರ ಮೆಕಿಂತೋಶ್ ಕಂಪ್ಯೂಟರ್ ಅನ್ನು ಮೊದಲು ವಿನ್ಯಾಸ ಮಾಡುವಾಗ ಮುದ್ದಾದ ಅಕ್ಷರಗಳ ನಡುವಿನ ಸಮಾನ ಅಂತರದ `ಫಾಂಟ್~ಗಳು ಹಲವು ಅವಕಾಶಗಳಿಗೆ ನಾಂದಿ ಆಯಿತು. ಹೀಗೆ ಸ್ಟೀವ್ ವಿಭಿನ್ನವಾಗಿ ಯೋಚಿಸುವಂತೆ ಮಾಡಿದ್ದೇ ಕ್ಯಾಲಿಗ್ರಫಿ  ಕೋರ್ಸ್.

ಮುದ್ರಣ ತಂತ್ರಜ್ಞಾನ ಪ್ರವರ್ಧಮಾನಕ್ಕೆ ಬರುವುದಕ್ಕೆ ಬಹು ಮೊದಲಿನಿಂದಲೂ ಕ್ಯಾಲಿಗ್ರಫಿ ಅಸ್ತಿತ್ವದಲ್ಲಿತ್ತು. ವಿನ್ಯಾಸ ತಂತ್ರಜ್ಞಾನದಲ್ಲಿ ಜಾದೂ ಮಾಡಿರುವ ಹಲವು ಸಾಫ್ಟ್‌ವೇರ್‌ಗಳ ಬೆನ್ನ ಹಿಂದೆ ನಿಂತಿರುವ ಕಲೆ ಕ್ಯಾಲಿಗ್ರಫಿ ಎಂದರೆ ಅಚ್ಚರಿಯಾಗಬಹುದು.
ಇಂದಿಗೂ ಕ್ರಿಯಾಶೀಲತೆಯುಳ್ಳ ಸುಂದರ ಅಕ್ಷರಗಳಿಗೆ ಭಾರಿ ಬೇಡಿಕೆ ಇದೆ. ಇದರ ಜತೆಯಲ್ಲಿ ಈ ವಿಶಿಷ್ಟ ಕೋರ್ಸ್‌ನಿಂದ ವಿದ್ಯಾರ್ಥಿಗಳಿಗೆ ಹಲವು ಉಪಯೋಗಗಳಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಗ್ರೀಟಿಂಗ್ ಕಾರ್ಡ್ ಉದ್ದಿಮೆ, ಆಹ್ವಾನ ಪತ್ರಿಕೆ, ನೋಟಿಸ್ ಬೋರ್ಡ್, ಸೂಚನಾ ಫಲಕ, ಸರ್ಟಿಫಿಕೇಟ್, ವ್ಯಾಪಾರಿ ಪತ್ರ, ಲೋಗೋಸ್, ಚಿಹ್ನೆ, ಅಲಂಕೃತ ಪುಸ್ತಕ, ಬ್ಯಾನರ್, ಕಟೌಟ್, ಮ್ಯಾಗ್‌ಝಿನ್, ಪೇಂಟಿಂಗ್ಸ್, ನಕ್ಷೆ, ಕಾನೂನು ವ್ಯವಹಾರ ಪತ್ರಗಳಿಗೂ ವೃತ್ತಿಪರ `ಕ್ಯಾಲಿಗ್ರಾಫರ್~ಗಳ ಬಳಕೆಯಾಗುತ್ತಿದೆ.

ಯಾರಿಗೆ ಈ ಕೋರ್ಸ್?
ಹತ್ತು ವರ್ಷದ ಬಾಲರಿಂದ ವೃದ್ಧವರಿಗೂ ಒಂದು ಹವ್ಯಾಸಿ ಕೋರ್ಸ್ ಆಗಿ ಕಲಿಯಬಹುದು. ಕೋರ್ಸ್‌ಗೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಹುಡುಕಿದರೆ ಸಾಕಷ್ಟು ಮಾಹಿತಿ ಸಿಗುತ್ತದೆ. ಆದರೆ ಎಲ್ಲೆಂದರಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ತರಬೇತಿ ಕೇಂದ್ರಗಳ ಬಗ್ಗೆ ಎಚ್ಚರ ಅಗತ್ಯ. 

ಅಂತರ್ಜಾಲದ ಮೂಲಕ ಸಹ ಈ ಕೋರ್ಸ್ ಕಲಿಯಬಹುದು. `ಪರಿಣಾಮಕಾರಿ ಕ್ಯಾಲಿಗ್ರಫಿ  ಕಲಿಕೆಗೆ ನೇರ ತರಬೇತಿ ಬೇಕು~ ಎನ್ನುವುದು ಖ್ಯಾತ ಕ್ಯಾಲಿಗ್ರಾಫರ್ ಪಿ.ಅಚ್ಯುತ್ ಅನಿಸಿಕೆ.

`ತಮಿಳುನಾಡು, ಹೈದರಾಬಾದ್ ಹಾಗೂ ಮೈಸೂರು ಭಾಗದ ಅನೇಕ ವಿದ್ಯಾರ್ಥಿಗಳು ಈ ಕೋರ್ಸ್‌ನಲ್ಲಿ ಆಸಕ್ತಿ ತೋರುತ್ತಿದ್ದಾರೆ. ಸುಂದರ ಅಕ್ಷರ ಆತ್ಮವಿಶ್ವಾಸ ಹೆಚ್ಚುವುದಕ್ಕೆ ಸಹಾಯವಾಗುತ್ತದೆ. ನಮ್ಮ ದಿನನಿತ್ಯ ಚಟುವಟಿಕೆಗೆ ಸುಂದರ ಬರವಣಿಗೆ ಅತ್ಯಗತ್ಯವಾಗಿದೆ. ಕೇವಲ ವೃತ್ತಿಯಾಗಿ ಸ್ವೀಕರಿಸುವವರಲ್ಲಿ ತಾಳ್ಮೆ ಜತೆ ನಿರಂತರ ಪರಿಶ್ರಮ ಅಗತ್ಯ ಎಂದು ಅಭಿಪ್ರಾಯ ಪಡುತ್ತಾರೆ ತರಬೇತುದಾರ ಆರ್.ಭಾಸ್ಕರ್.

ಕೋರ್ಸ್ ಅವಧಿ
15 ದಿನ ಹಾಗೂ ಒಂದು ತಿಂಗಳ ಅವಧಿಯ ಕೋರ್ಸ್‌ಗಳಿವೆ. ಪ್ರತಿದಿನ ಒಂದು ತಾಸು ತರಗತಿ ಇರುತ್ತದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವಾರಾಂತ್ಯ ತರಬೇತಿಗಳೂ ಇವೆ. ಆರಂಭದಲ್ಲಿ ಬೇಸಿಕ್ (20 ದಿನಕ್ಕೆ ರೂ.1200), ಇಂಟರ್ ಮಿಡಿಯೇಟ್ (20 ದಿನಕ್ಕೆ ರೂ.1200) ಹಾಗೂ ಅಡ್ವಾನ್ಸ್ಡ್ (30 ದಿನಕ್ಕೆ ರೂ.2 ಸಾವಿರ ) ಕೋರ್ಸ್ ನಡೆಯುತ್ತವೆ.
ವಿವರಗಳಿಗೆ ಆರ್.ಭಾಸ್ಕರ್ 9845655105 ಅಥವಾ www.HandwritingAOne.comಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT