ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ಆಯೋಗ ವಿಳಂಬ?

ಸರ್ಕಾರದ ನಿಲುವಿಗೆ `ನ್ಯಾಯಾಂಗ' ವಿರೋಧ
Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಈಗಿರುವ ನೇಮಕಾತಿ ಮಂಡಳಿ ಪದ್ಧತಿಯನ್ನು ರದ್ದುಪಡಿಸಲು ಮುಂದಾಗಿರುವ ಕೇಂದ್ರದ ನಿರ್ಧಾರಕ್ಕೆ ನ್ಯಾಯಾಂಗ ವ್ಯವಸ್ಥೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಈ ಸಂಬಂಧ ಅಸ್ತಿತ್ವಕ್ಕೆ ಬರಬೇಕಾಗಿರುವ ನ್ಯಾಯಾಂಗ ನೇಮಕಾತಿ ಆಯೋಗ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ಜಾರಿಗೆ ತರುವ ಅಗತ್ಯವೇ ಇಲ್ಲ; ಬದಲಿಗೆ ಎರಡು ದಶಕಗಳಷ್ಟು ಹಳೆಯದಾದ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗುವಂತೆ ನ್ಯಾಯಾಂಗದಿಂದ ತೀವ್ರ ಒತ್ತಡ ಬರುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ನಿರ್ಗಮಿಸುತ್ತಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಇತ್ತೀಚೆಗೆ ಈ ಸಂಬಂಧ ಹೇಳಿಕೆ ನೀಡಿ, ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರದ ಉದ್ದೇಶಿತ ವ್ಯವಸ್ಥೆಯ ಬದಲಿಗೆ ಈಗಿರುವ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗುವುದು ಒಳ್ಳೆಯದು; ನ್ಯಾಯಾಂಗದ ಉನ್ನತ ಸ್ಥಾನಗಳಿಗೆ ನೇಮಕ ಮಾಡುವ ಮೊದಲು ಸುದೀರ್ಘ ಸಮಾಲೋಚನೆ ಅಗತ್ಯ ಎಂದು ಪ್ರತಿಪಾದಿಸಿದ್ದರು.

ನ್ಯಾಯಮೂರ್ತಿ ಕಬೀರ್ ಅವರ ಉತ್ತರಾಧಿಕಾರಿ ಪಿ. ಸದಾಶಿವನ್ ಸಹ ನ್ಯಾಯಮೂರ್ತಿ ಕಬೀರ್ ಅವರ ಅಭಿಪ್ರಾಯವನ್ನೇ ಪುನರುಚ್ಚರಿಸಿ, ಈಗಿರುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಅಗತ್ಯವೇ ಇಲ್ಲ ಎಂದಿದ್ದಾರೆ.

ಈ ನಡುವೆ ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದ ಎಲ್ಲ ಮಸೂದೆಗಳನ್ನು ಒಂದೇ ಸಲ ಮಂಡಿಸಲು ವಿರೋಧ ಪಕ್ಷಗಳು ಕೇಂದ್ರವನ್ನು ಆಗ್ರಹಿಸಿವೆ.

ಹಿರಿಯ ವಕೀಲರಿಗೆ ನಿವೃತ್ತಿಯ ನಂತರ ಸರ್ಕಾರಿ ಸಂಬಂಧದ ಕೆಲಸಗಳನ್ನು ವಹಿಸದೆ, ಈ ಕುರಿತು ನಿಷೇಧ ಹೇರಬೇಕು ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT