ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ಸಂಘ ಉದ್ಘಾಟಿಸಿದ ಆರ್ಯ ರೇಣುಕಾನಂದ ಸ್ವಾಮೀಜಿ

ಕಷ್ಟದಲ್ಲಿರುವವರಿಗೆ ನೆರವಾಗಲು ಸಲಹೆ
Last Updated 6 ಜನವರಿ 2014, 5:44 IST
ಅಕ್ಷರ ಗಾತ್ರ

ದಾವಣಗೆರೆ: ದುಡಿದು ಗಳಿಸುವುದಷ್ಟೇ ಮುಖ್ಯವಲ್ಲ. ಗಳಿಸಿದ್ದರಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದು ಸೋಲೂರು  ಆರ್ಯ ಈಡಿಗ ಮಹಾಸಂಸ್ಥಾನ ಮಠದ ಆರ್ಯ ರೇಣುಕಾನಂದ ಸ್ವಾಮೀಜಿ ಹೇಳಿದರು.

ನಗರದ ಆರ್ಯ ಈಡಿಗ ಹಾಸ್ಟೆಲ್‌ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ, ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಜಿಲ್ಲಾ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

‘ನೆಮ್ಮದಿಯ ಬದುಕಿಗೆ ಒಂದು ಉದ್ಯೋಗ ಬೇಕು. ವೃತ್ತಿ ಮೂಲಕ ಮನುಷ್ಯ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ದುಡಿದ ಹಣದಲ್ಲಿ ಸ್ವಲ್ಪವನ್ನು ದಾನ ಮಾಡಬೇಕು ಎಂದು ದೇವರೇ ಹೇಳಿದ್ದಾನೆ. ಮನುಷ್ಯ ನಾನು, ನನ್ನ ಕುಟುಂಬದವರು ಚೆನ್ನಾಗಿರಬೇಕು ಎಂದಷ್ಟೇ ಬಯಸುವ ಸ್ವಾರ್ಥಿ. ಈ ಸ್ವಾರ್ಥ ಬದಿಗಿಟ್ಟು ಸಮಾಜಕ್ಕಾಗಿ ಬಾಳಬೇಕು’ ಎಂದು ಕರೆ ನೀಡಿದರು.

ಮೇಲ್ವರ್ಗದವರಿಂದ ತುಳಿತಕ್ಕೆ ಒಳಗಾಗಿದ್ದ ಶೋಷಿತರ ಸಂರಕ್ಷಣೆಗೆಂದು ಬಸವಣ್ಣ, ನಾರಾಯಣಗುರು ಅವರಂಥ ದಾರ್ಶನಿಕರು ಹುಟ್ಟಿಬಂದರು. ಅವರ ತತ್ವ ಸಿದ್ಧಾಂತ, ಆದರ್ಶ ಪಾಲಿಸಬೇಕು. ಶಿಕ್ಷಣ ಹೊಂದುವ ಮೂಲಕ ಸ್ವತಂತ್ರರಾಗಬೇಕು ಎಂದು ಹೇಳಿದರು.

‘ಸಂಘ–ಸಂಸ್ಥೆಗಳು ಸ್ವಾರ್ಥ ಮನೋಭಾವ ಇಟ್ಟುಕೊಂಡು ಮುಂದೆ ಬರಬಾರದು. ಸಂಘಗಳ ಪದಾಧಿಕಾರಿಗಳಿಗೆ ನಿಸ್ವಾರ್ಥ ಸೇವಾ ಮನೋಭಾವ ಇರಬೇಕು. ನಿರುದ್ಯೋಗಿಗಳಿಗೆ ಉದ್ಯೋಗದ ದಾರಿ ತೋರಿಸಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಎಷ್ಟೋ ವಿದ್ಯಾರ್ಥಿಗಳಿಗೆ ಪ್ರತಿಭೆ ಇರುತ್ತದೆ. ಆದರೆ, ಹಣಕಾಸಿನ ತೊಂದರೆಯಿಂದ ಮುಂದೆ ಓದಲಾಗುವುದಿಲ್ಲ. ಅಂಥವರಿಗೆ ಸಮಾಜದ ಸಂಘಟನೆಗಳು ನೆರವಾಗಬೇಕು. ಸಂಘ ಸ್ಥಾಪಿಸುವಾಗ ಇರುವ ಉತ್ಸಾಹವೇ ಮುಂದುವರಿಸಿಕೊಂಡು ಹೋಗುವಲ್ಲಿಯೂ ಇರಬೇಕು’ ಎಂದರು.

ರಾಜ್ಯ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್‌.ಎಲ್‌. ಶಿವಾನಂದ್‌ ಮಾತನಾಡಿ, ‘ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎಂದು ನಾರಾಯಣ ಗುರು ಹೇಳಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ನ್ಯಾಯಯುತವಾಗಿ ಪಡೆಯಲು ನಾವು ಜಾಗೃತರಾಗಬೇಕು. ಕೆಲಸಕ್ಕೆ ಸೇರಿದವರು ಸಮಾಜದ ಇತರ ಬಡವರಿಗೆ ನೆರವಾಗಬೇಕು’ ಎಂದು ತಿಳಿಸಿದರು.

‘ಹಿಂದುಳಿದವರಲ್ಲಿಯೂ ಅತಿ ಹಿಂದುಳಿದ ಸಮಾಜ ನಮ್ಮದು. ನಮ್ಮಲ್ಲಿಯೂ ಪ್ರತಿಭಾವಂತರಿದ್ದಾರೆ. ಅವರಿಗೆ ಸಾಣೆ ಹಿಡಿಯುವ ಕೆಲಸವನ್ನು ಸಂಘ ಮಾಡುತ್ತಿದೆ. ಐಎಎಸ್‌, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಮಾರ್ಗದರ್ಶನ ನೀಡುತ್ತಿದೆ. ಉದ್ಯೋಗ ಪಡೆದುಕೊಳ್ಳಲು ಕೌಶಲ ತರಬೇತಿ ನೀಡಲಾಗುತ್ತಿದೆ. 45 ದಿನಗಳ ಈ ತರಬೇತಿ ಪಡೆದು 1,520 ಮಂದಿ ಈಗಾಗಲೇ ಉದ್ಯೋಗ ಕಂಡುಕೊಂಡಿದ್ದಾರೆ. ಅದರಲ್ಲಿ ಶೇ 60ರಷ್ಟು ಮಂದಿ ಮಹಿಳೆಯರು ಹಾಗೂ ಯುವತಿಯರು. ಇದು ಸಂತಸದ ಸಂಗತಿ ಎಂದು ಹೇಳಿದರು.

ಜಿಲ್ಲಾ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ವೆಂಕಟೇಶ್‌ ಮಾತನಾಡಿ, ಸಮಾಜದ ಸಂಘಟನೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸಲು ತರಬೇತಿ ಹಾಗೂ ಉದ್ಯೋಗದ ಮಾರ್ಗದರ್ಶನ ನೀಡಲು ಸಂಘ ಸ್ಥಾಪಿಸಲಾಗಿದೆ ಎಂದು ಕಾರ್ಯಚಟುವಟಿಕೆಯ ವಿವರ ನೀಡಿದರು.

ಇದೇ ಸಂದರ್ಭ ಸಮಾಜದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್‌.ವೈ.ಆನಂದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಎಚ್‌.ಶಂಕರ್‌ ಉದ್ಘಾಟಿಸಿದರು.

ರಾಜ್ಯ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಲಕ್ಷ್ಮೀನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಟಿ.ನರಸಿಂಹಸ್ವಾಮಿ, ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಈ.ಶಾಂತಾರಾಂ, ರೇಣುಕಾಂಬಾ ಕ್ರೆಡಿಟ್‌ ಕೋ–ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಎ.ನಾಗರಾಜ್‌, ಬೆಂಗಳೂರಿನ ಜಿ.ಜಗದೀಶ್‌, ಮುಕುಂದ್‌, ಎನ್‌.ಪುಟ್ಟಸ್ವಾಮಿ ಮೊದಲಾದವರು ಹಾಜರಿದ್ದರು.

ನಾಗರತ್ನಾ ಪ್ರಾರ್ಥಿಸಿದರು. ಸಂಘದ ಖಜಾಂಚಿ ಎಚ್‌.ಭರ್ಮಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT