ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯಕ್ಕೆ ಹಾಜರಾಗಲು ಮುಷರಫ್‌ಗೆ `ಸುಪ್ರೀಂ' ಆದೇಶ

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ದೇಶದ್ರೋಹ ಆಪಾದನೆಗೆ ಸಂಬಂಧಿಸಿದಂತೆ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಪಾಕಿಸ್ತಾನದ ಸುಪ್ರೀಂಕೋರ್ಟ್  ಮಾಜಿ ಸೇನಾ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರಿಗೆ ಆದೇಶಿಸಿದ್ದು,  ಅವರು ದೇಶ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.

2007ರಲ್ಲಿ ಸಂವಿಧಾನದ ತತ್ವಗಳನ್ನು ಬುಡಮೇಲು ಮಾಡಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸುವ ಮೂಲಕ ಮುಷರಫ್ ಅವರು ದೇಶದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಐದು ಅರ್ಜಿಗಳಿಗೆ ಸಂಬಂಧಿಸಿದ ಪ್ರಾಥಮಿಕ ವಾದವನ್ನು ಆಲಿಸಿದ ಇಬ್ಬರು ನ್ಯಾಯಮೂರ್ತಿಗಳ ಪೀಠವು, ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಷರಫ್ ಅವರಿಗೆ ನಿರ್ದೇಶಿಸಿದೆ.

ದೇಶದ್ರೋಹ ಆರೋಪಕ್ಕೆ ಉತ್ತರಿಸಲು ಮುಷರಫ್ ಅಥವಾ ಅವರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಮುಷರಫ್ ಅವರು ದೇಶ ತೊರೆಯುವುದನ್ನು ತಡೆಯಲು ಅವರ ಹೆಸರನ್ನು ನಿರ್ಗಮನ ನಿಯಂತ್ರಣ ಪಟ್ಟಿಯಲ್ಲಿ ಸೇರಿಸುವಂತೆ ಗೃಹ ಇಲಾಖೆಯ ಕಾರ್ಯದರ್ಶಿಗೆ ನ್ಯಾಯಪೀಠವು ಆದೇಶಿಸಿದೆ.

1973ರ ದೇಶದ್ರೋಹ (ಶಿಕ್ಷೆ) ಕಾಯ್ದೆಯನ್ವಯ ಮುಷರಫ್ ಅವರನ್ನು ವಿಚಾರಣೆಗೆ ಗುರಿಪಡಿಸಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ. ಅರ್ಜಿದಾರರೆಲ್ಲರೂ ವಕೀಲರಾಗಿದ್ದು, 2007ರಲ್ಲಿ ದೇಶದಲ್ಲಿ ಸಂವಿಧಾನ ಬಾಹಿರವಾಗಿ ತುರ್ತು ಸ್ಥಿತಿ ಜಾರಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ ತತ್ವಗಳನ್ನು ಬುಡಮೇಲು ಮಾಡಿ ದೇಶದ ಮೇಲೆ ತುರ್ತು ಸ್ಥಿತಿ ಹೇರಿದ್ದ ಮುಷರಫ್ ಅವರನ್ನು ಗಲ್ಲಿಗೇರಿಸಬೇಕು ಇಲ್ಲವೇ ಜೈಲಿಗೆ ಕಳುಹಿಸಬೇಕು ಎಂದು ವಕೀಲರಾದ ಹಮೀದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಮುಷರಫ್ ಅವರು ದೇಶಕ್ಕೆ ಮರಳಿದ ನಂತರ ಬಂಧಿಸಬೇಕು ಎಂದು 2012ರಲ್ಲಿ ಸಂಸತ್ತಿನ ಮೇಲ್ಮನೆಯು ಗೊತ್ತುವಳಿ ಅಂಗೀಕರಿಸಿದ್ದರೂ ಸರ್ಕಾರ ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನ್ಯಾಯಪೀಠದ ಎದುರು ವಾದ ಮಂಡಿಸಿದ ಎಲ್ಲಾ ವಕೀಲರೂ, ಮುಷರಫ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ತುರ್ತು ಪರಿಸ್ಥಿತಿ ಜಾರಿ ಮಾಡಿದ್ದ ಮುಷರಫ್ ಕ್ರಮ ಸಂವಿಧಾನ ಬಾಹಿರ ಎಂದು ಘೋಷಿಸಿರುವ ಸುಪ್ರೀಂಕೋರ್ಟ್, ಮುಷರಫ್ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು ಎಂಬುದನ್ನು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಮುಷರಫ್ ಅವರು 2007ರಲ್ಲಿ ಸುಮಾರು 12 ನ್ಯಾಯಾಧೀಶರನ್ನು ಪದಚ್ಯುತಿಗೊಳಿಸಿದ್ದು ಇವರಲ್ಲಿ ಇಫ್ತಿಕಾರ್ ಚೌಧರಿ ಅವರೂ ಸೇರಿದ್ದರು. ಈ ಕಾರಣ ವಿಚಾರಣೆ ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ  ಸಂಶಯಗಳು ಮೂಡಿದ ಹಿನ್ನೆಲೆಯಲ್ಲಿ ಮುಖ್ಯನ್ಯಾಯಮೂರ್ತಿ ಚೌಧರಿ ಅವರು ಈ ಪ್ರಕರಣದ ವಿಚಾರಣೆಯಿಂದ ಬೆಳಿಗ್ಗೆ ಹಿಂದೆ ಸರಿದಿದ್ದಾರೆ.

ಚೌಧರಿ ಅವರೇ ತಮ್ಮನ್ನು ಸೇರಿದಂತೆ ಮೂವರು ನ್ಯಾಯಮೂರ್ತಿಗಳ ಪೀಠ ರಚಿಸಿದ್ದರು. ನಂತರ ಕೊನೆ ಗಳಿಗೆಯಲ್ಲಿ ವಿಚಾರಣೆಯಿಂದ ಹಿಂದೆ ಸರಿದರು.

ಸ್ವಇಚ್ಛೆಯಿಂದ ನಾಲ್ಕು ವರ್ಷಗಳ ಕಾಲ ದೇಶದಿಂದ ಹೊರಗುಳಿದಿದ್ದ ಮುಷರಫ್ ಅವರು ಕಳೆದ ತಿಂಗಳು ದೇಶಕ್ಕೆ ಮರಳಿದ್ದು, ಮೇ 11ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಖಿಲ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷದ ನೇತೃತ್ವ ವಹಿಸಲಿದ್ದಾರೆ. ಆದರೆ ಈ ಮಾಜಿ ಸರ್ವಾಧಿಕಾರಿ ಕರಾಚಿ, ಕಸೂರ್ ಮತ್ತು ಇಸ್ಲಾಮಾಬಾದ್ ಕ್ಷೇತ್ರದಲ್ಲಿ ಸಲ್ಲಿಸಿರುವ ನಾಮಪತ್ರಗಳು ತಿರಸ್ಕೃತಗೊಂಡಿವೆ. ಚಿತ್ರಾಲ್‌ನಲ್ಲಿ ಸಲ್ಲಿಸಿರುವ ನಾಮಪತ್ರ ಸ್ವೀಕೃತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT