ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚತಾರಾ ಹೋಟೆಲ್‌ನಲ್ಲೇ ವಸತಿ

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿ ಆರ್.ಟಿ. ನಾರಾಯಣ ಅವರು 1970ರಿಂದ ನಿರಂತರವಾಗಿ ಇಲ್ಲಿನ ಪಂಚತಾರಾ ತಾಜ್‌ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ತಂಗಿದ್ದರು. ಅವರಿಗೆ ಹೋಟೆಲ್ಲೇ ಮನೆಯಾಗಿತ್ತು. ಸೋಮವಾರದಿಂದ ಶುಕ್ರವಾರದವರೆಗೂ ಇಲ್ಲಿದ್ದು, ಶನಿವಾರ ಮತ್ತು ಭಾನುವಾರ ಮೈಸೂರಿಗೆ ತೆರಳುತ್ತಿದ್ದರು.

ಮೂಲತಃ ಮೈಸೂರಿನವರಾದ ಅವರು ಕಣ್ವ ಹೆಸರಿನ ಕೈಗಾರಿಕೆಗಳ ಒಡೆಯ. ರಫ್ತು ಉದ್ಯಮಿ. ರಾಜ್ಯಸಭಾ ಸದಸ್ಯ ಎಸ್.ಎಂ. ಕೃಷ್ಣ ಅವರ ಆಪ್ತ ಕೂಡ.
ಸೂಟ್ ನಂಬರ್ 1509: `ತಾಜ್‌ವೆಸ್ಟ್ ಎಂಡ್ ಹೋಟೆಲ್‌ನ 1509ನೇ ನಂಬರಿನ ಸೂಟ್‌ನಲ್ಲಿ ಉಳಿಯು ತ್ತಿದ್ದರು. 20 ವರ್ಷಗಳ ಹಿಂದೆ 122 ನೇ ನಂಬರಿನ ಸೂಟ್‌ನಲ್ಲಿ ಇದ್ದರು. ನಂತರ ಎರಡು ಕೊಠಡಿಗಳ ಸೂಟ್‌ಗೆ (1509) ಸ್ಥಳಾಂತರ ಆಗಿದ್ದರು. ಅವರು ಊರಲ್ಲಿ ಇರಲಿ- ಬಿಡಲಿ ಅವರ ಹೆಸರಿನಲ್ಲೇ ಕೊಠಡಿ ಇರುತ್ತಿತ್ತು. ಅದರ ಬೀಗ ಕೂಡ ಅವರ ಬಳಿಯೇ ಇರುತ್ತಿತ್ತು' ಎನ್ನುತ್ತಾರೆ ಅವರ ಆಪ್ತ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗರಾಜ್.

ಅಗಾಧ ನೆನಪಿನ ಶಕ್ತಿ: ಹತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವು ದನ್ನು ಕಲಿತಿದ್ದ  ಅವರಿಗೆ ಅಪಾರ  ನೆನಪಿನ ಶಕ್ತಿ  ಕೂಡ ಇತ್ತು.  ದೇಶ- ವಿದೇಶಗಳ ದೂರವಾಣಿ  ಸಂಖ್ಯೆಗಳನ್ನು ಯಾವ ಡೈರಿಯ ಸಹಾಯ ಇಲ್ಲದೆ, ನೇರವಾಗಿ ಡಯಲ್ ಮಾಡುತ್ತಿದ್ದರು. ಹೆಸರು ಹೇಳಿದ ತಕ್ಷಣ ಅವರ ದೂರವಾಣಿ ಸಂಖ್ಯೆ ಕೂಡ ಹೇಳುವುದನ್ನು ಕರಗತ ಮಾಡಿ ಕೊಂಡಿದ್ದರು ಎಂದು ನಾಗರಾಜ್ `ಪ್ರಜಾವಾಣಿ'ಗೆ ತಿಳಿಸಿದರು.

ಟೆನಿಸ್ ಆಟಗಾರ: ಆರ್.ಟಿ. ನಾರಾಯಣ್ ಅವರದ್ದು ತುಂಬು ಕುಟುಂಬ. ಆರ್ಯ ನರಸಿಂಹಾಚಾರ್ ಅವರ ಪುತ್ರರಾಗಿ 1939, ಜೂನ್ 21ರಂದು ಜನಿಸಿದ್ದರು. ಅವಿವಾಹಿತರಾದ ಅವರು ಸಹೋದರಿ ರಂಗಪ್ರಿಯ ಮತ್ತು ಬಾವಮೈದುನ ಎಂ.ಎನ್. ನಾರಾಯಣ್ ಅವರೊಂದಿಗೆ ಒಂಟಿಕೊಪ್ಪಲಿನ 2ನೇ ಮುಖ್ಯರಸ್ತೆಯ ಭವ್ಯ ಬಂಗಲೆಯಲ್ಲಿ ನೆಲೆಸಿದ್ದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಮೈಸೂರಿನಲ್ಲೇ ಪೂರೈಸಿ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿ ಮಾಡಿದ್ದರು. ನಂತರ ಮುಂಬೈಗೆ ತೆರಳಿ ಖಾಸಗಿ ಕಂಪೆನಿಯಲ್ಲಿ 14 ವರ್ಷಗಳ ಕಾಲ ಕೆಲಸ ಮಾಡಿದ್ದರು. ನಂತರ ಇವರು ಕಣ್ವ ಇಂಡಸ್ಟ್ರೀಸ್ ಸ್ಥಾಪಿಸಿದರು. ಟೆನಿಸ್ ಪ್ರೇಮಿ ಯಾಗಿದ್ದ ಅವರು, ಒಂಟಿಕೊಪ್ಪಲು ಟೆನಿಸ್ ಕ್ಲಬ್‌ನಲ್ಲಿ ಬಿಡುವಿನ ವೇಳೆಯಲ್ಲಿ ಟೆನಿಸ್‌ಆಡುತ್ತಿದ್ದರು.

`ನಟಿ ರಮ್ಯಾ ಐದು ವರ್ಷದ ಬಾಲಕಿ ಆಗಿದ್ದಾಗಲೇ ಆಕೆಯನ್ನು ಮೈಸೂರಿಗೆ ಕರೆತಂದು ಸಾಕಿದ್ದರು. ಬಿಡುವಿನ ವೇಳೆಯಲ್ಲಿ ಸಾಕು ಮಗಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಆಕೆ ಕನ್ನಡ ಚಿತ್ರರಂಗದಲ್ಲಿ ಬಹಳ ಎತ್ತರಕ್ಕೆ ಬೆಳೆದಿದ್ದು ಅವರಿಗೆ ಸಂತಸ ತಂದಿತ್ತು. ಆಕೆ ಮಗುವಿದ್ದಾಗ ತೋರುತ್ತಿದ್ದ ಪ್ರೀತಿ ದೊಡ್ಡವಳಾದ ಮೇಲೂ ಕಡಿಮೆಯಾಗಲಿಲ್ಲ. ಆಕೆಯನ್ನು ಊಟಿಯ ಪ್ರತಿಷ್ಠಿತ ಕಾನ್ವೆಂಟ್‌ನಲ್ಲಿ ಓದಿಸಿದ್ದರು' ಎಂದು ಕುಟುಂಬದವರು ಹೇಳಿದರು.

ಒಂದೂವರೆ ದಶಕದಿಂದ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಬೆಳವಣಿಗೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕೆಎಸ್‌ಎಲ್‌ಟಿಎ ಕ್ರೀಡಾಂಗಣದ ನವೀಕರಣ ಮಾಡಿದ್ದು, ಇಲ್ಲಿಯೇ ಎಟಿಪಿ ವಿಶ್ವ ಡಬಲ್ಸ್ ಟೂರ್ನಿ ನಡೆಸಿದ್ದು, ನೂರಾರು ಕಿರಿಯ ಆಟಗಾರರ ತರಬೇತಿಗೆ ಅಗತ್ಯವಾದ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯ ಗಳನ್ನು ರೂಪಿಸಿದ್ದು ಇತ್ಯಾದಿ ಹಲವು ಅಭಿವೃದ್ಧಿ ಕಾರ್ಯಗಳು ನಾರಾಯಣ ಅವರ ಕಣ್ಗಾವಲಲ್ಲೇ ನಡೆದಿತ್ತು ಎಂದು ಕೆಎಸ್‌ಎಲ್‌ಟಿಎ ಕಾರ್ಯದರ್ಶಿ ಸಿ.ಎಸ್.ಸುಂದರರಾಜು, ಜಂಟಿ ಕಾರ್ಯದರ್ಶಿ ರಾಮಸ್ವಾಮಿ, ಸಂಸ್ಥೆ ಯ ತರಬೇತಿ ಕೇಂದ್ರದ ನಿರ್ದೇಶಕ ಸುನಿಲ್ ಯಜಮಾನ್ ಸ್ಮರಿಸಿದ್ದಾರೆ.

ಇಂದು ಅಂತ್ಯಕ್ರಿಯೆ: ಅಂತ್ಯಕ್ರಿಯೆ ಮೈಸೂರಿನ ಗೋಕುಲಂ ಚಿರಶಾಂತಿ ಧಾಮದಲ್ಲಿ ಭಾನುವಾರ (ಆ. 4ರಂದು) ಮಧ್ಯಾಹ್ನ ನೆರವೇರಲಿದೆ.

ಸಿಎಂ ಭೇಟಿ ಕೊನೆಗೂ ಆಗಲಿಲ್ಲ!
ಮೈಸೂರು
:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಸಂಜೆ ಖುದ್ದು ಭೇಟಿ ಮಾಡಿಸುವಂತೆ ನಾರಾಯಣ್ ಪುತ್ರಿ ರಮ್ಯಾರಲ್ಲಿ ಕೋರಿಕೊಂಡಿದ್ದರು.  ಸಂಜೆ ಭೇಟಿ ಮಾಡಿಸುವುದಾಗಿ ಮಗಳು ಭರವಸೆ ನೀಡಿದ್ದರು. ಆದರೆ, ವಿಧಿ ಆಟವೇ ಬೇರೆ ಆಗಿತ್ತು. `ನಿಮ್ಮನ್ನು ಭೇಟಿ ಮಾಡಿಸುವಂತೆ ಅಪ್ಪ ಕೋರಿದ್ದರು. ಅದು ಕೊನೆಗೂ ಸಾಧ್ಯವಾಗಲಿಲ್ಲ' ಎಂದು ಸಿದ್ದರಾಮಯ್ಯ ಅವರೊಂದಿಗೆ ಹೇಳುವಾಗ ರಮ್ಯಾ ಬಿಕ್ಕಿ ಬಿಕ್ಕಿ ಅತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT