ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚರಾಜ್ಯ ಚುನಾವಣಾ ಸಮರ: ಜಾತಿ, ಹಣ ಬಲಕ್ಕೆ ಒತ್ತು

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಉತ್ತರ ಪ್ರದೇಶ

ಆಗ್ರಾ (ಐಎಎನ್‌ಎಸ್): ರಾಜಕೀಯ ಕ್ಷೇತ್ರವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಸಲುವಾಗಿ ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಅವಿರತ ಹೋರಾಟಕ್ಕೆ ಉತ್ತರ ಪ್ರದೇಶದಲ್ಲಂತೂ ಯಾವುದೇ ಬೆಲೆ ಸಿಕ್ಕಿದಂತೆ ಕಾಣುತ್ತಿಲ್ಲ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯತ್ತ ಗಮನ ಹರಿಸಿದಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಜಾತಿ ಮತ್ತು ಹಣ ಬಲಕ್ಕೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಒತ್ತು ನೀಡಿರುವುದು ಸ್ಪಷ್ಟವಾಗಿದೆ.

`ರಾಜಕೀಯ ಪಕ್ಷಗಳು ಈ ಬಾರಿಯಾದರೂ ಹಳೆ ರೀತಿಯಲ್ಲಿ ಬದಲಿಸಿಕೊಳ್ಳುತ್ತವೆಂದು ನಂಬಿದ್ದೆವು. ಆದರೆ ನಮ್ಮೆಲ್ಲ ಭರವಸೆಗಳೂ ಮೂಲೆಗುಂಪಾಗಿವೆ~ ಎಂದು ಸಾಮಾಜಿಕ ಕಾರ್ಯಕರ್ತ ಶ್ರವಣ್ ಕುಮಾರ್ ಸಿಂಗ್ ರಾಜಕೀಯ ಪಕ್ಷಗಳನ್ನು, ಅದರಲ್ಲೂ ಬಿಜೆಪಿಯನ್ನು ದೂರಿದ್ದಾರೆ.

ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಫೆಬ್ರುವರಿ ತಿಂಗಳಿನಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ಹಲವು ಹೊಸ ಮುಖಗಳನ್ನು ಆರಿಸಿದ್ದರೂ ಅಲ್ಲಿಯೂ ಜಾತಿಯೇ ಬಹು ಮುಖ್ಯ ಪಾತ್ರ ವಹಿಸಿದೆ ಎಂದು ರಾಜಕೀಯ ವಿಶ್ಲೇಷಕ ಸುಧೀರ್ ಗುಪ್ತ ಅಭಿಪ್ರಾಯಪಟ್ಟಿದ್ದಾರೆ.

ಆಗ್ರಾದಲ್ಲಿ ಜಾತಿ ಆಧಾರದ ಮೇಲೇ ಎಲ್ಲ ರಾಜಕೀಯ ಪಕ್ಷಗಳೂ ಸ್ಪರ್ಧಿಗಳನ್ನು ನಿಲ್ಲಿಸಿವೆ. ಬಿಎಸ್‌ಪಿ ಮತ್ತು ಬಿಜೆಪಿ, ಬನಿಯಾ ಸಮುದಾಯದವರನ್ನು ಸ್ಪರ್ಧೆಗಿಳಿಸಿದ್ದರೆ, ಎಸ್‌ಪಿ ಬ್ರಾಹ್ಮಣರಿಗೆ ಪ್ರಾಶಸ್ತ್ಯ ನೀಡಿದೆ ಎಂದು ಗುಪ್ತ ಹೇಳಿದ್ದಾರೆ.

ಇವೆಲ್ಲವನ್ನೂ ಗಮನಿಸಿದರೆ ನಿಜವಾದ ಅಣ್ಣಾ ಬೆಂಬಲಿಗರು ಯಾರು? ಅವರೆಲ್ಲ ಎಲ್ಲಿಗೆ ಹೋದರು? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಪ್ರಕರಣ ದಾಖಲು
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇರೆಗೆ ಮತೇರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಲಿ ಅಕ್ಬರ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅವರು ಕೌಟುಂಬಿಕ ಸಮಾರಂಭದ ಹೆಸರಿನಲ್ಲಿ ಕಾಕ್ರಿ ಗ್ರಾಮದಲ್ಲಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಸಾವಿರಾರು ಗ್ರಾಮಸ್ಥರು ಭಾಗವಹಿಸ್ದ್ದಿದು, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಇಂದ್ರಭೂಷಣ್ ತಿಳಿಸಿದ್ದಾರೆ.

 ಅಕ್ರಮ ಹಣ
ಚುನಾವಣೆಗೆ ಪೂರ್ವಭಾವಿಯಾಗಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ 1.37 ಕೋಟಿಗೂ ಅಧಿಕ ಹಣ, 10 ಕೆ.ಜಿ ಬೆಳ್ಳಿ ಮತ್ತು ಆರು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಲಾಗಿದೆ.

ಶಾಸಕ ಪ್ರತಿಭಟನೆ
 ನಾಲ್ಕು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರೂ ಈ ಬಾರಿ ತಮ್ಮನ್ನು ಕಣಕ್ಕೆ ಇಳಿಸದ ಬಿಜೆಪಿ ವಿರುದ್ಧ ಶಾಸಕ ನರೇಂದ್ರ ಸಿಂಗ್ ಗೌರ್ ಪ್ರತಿಭಟನೆ ನಡೆಸಿದ್ದಾರೆ.

ಚುನಾವಣೆ ಬಳಿಕ ನಿರ್ಧಾರ
ಒಂದು ವೇಳೆ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳೊಂದಿಗೆ ಮೈತ್ರಿ ಹೊಂದುವ ತನ್ನ ನಿರ್ಧಾರವನ್ನು ಸಮಾಜವಾದಿ ಪಕ್ಷ ಮುಕ್ತವಾಗಿರಿಸಿದೆ.

ನಾವೇ ಬಹುಮತ ಪಡೆಯಲಿದ್ದೇವೆ ಎಂಬ ಬಲವಾದ ನಂಬಿಕೆ ಇದೆ. ಬಹುಮತ ದೊರೆತಲ್ಲಿ ಮುಲಾಯಂ ಸಿಂಗ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ಚುನಾವಣಾ ಫಲಿತಾಂಶ ಬಂದ ಬಳಿಕ ಎಲ್ಲವೂ ನಿರ್ಧಾರವಾಗುತ್ತದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ಪಂಜಾಬ್
ಅಭ್ಯರ್ಥಿಗಳ ಪಟ್ಟಿ ಪ್ರಕಟ
ಚಂಡೀಗಡ (ಐಎಎನ್‌ಎಸ್): ಕಳೆದ ಕೆಲವು ದಿನಗಳಿಂದ ಕಂಡುಬಂದಿದ್ದ ಅನಿಶ್ಚಿತತೆಯ ಬಳಿಕ ಕಾಂಗ್ರೆಸ್ 114 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಅಮರೀಂದ್ರ ಸಿಂಗ್ ಅವರು ಪಟಿಯಾಲ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ರಾಜಿಂದರ್ ಕೌರ್ ಭಟ್ಟಲ್, ಸಂಗ್ರೂರ್ ಜಿಲ್ಲೆಯ ಲೆಹ್ರಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಪಕ್ಷದ ಪ್ರಮುಖರ ಸಂಬಂಧಿಗಳಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕೀಯ ಮುಂದುವರಿದಿದೆ ಎಂಬ ಆರೋಪವೂ ಕೇಳಿಬಂದಿದೆ. ಇದೇ ವೇಳೆ, ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನೂ ಕಾಂಗ್ರೆಸ್ ಬಿಡುಗಡೆ ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT