ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯ್ತಿ ಭ್ರಷ್ಟತೆಗೆ ಪಿಡಿಒ ಬಲಿ?

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪಂಚಾಯ್ತಿ ರಾಜ್ಯ ವ್ಯವಸ್ಥೆಯ ಮೂಲಕ ಪರಿಣಾಮಕಾರಿ ವಿಕೇಂದ್ರಿಕರಣ ಸಾಧ್ಯವಾಗಬೇಕಾದರೆ ಅವುಗಳ ಆಡಳಿತ ಅಧಿಕಾರಗಳು ಬಹಳ ಪ್ರಮುಖವಾಗುತ್ತವೆ.

ಗ್ರಾಮ ಪಂಚಾಯ್ತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಕಾಯಿದೆ,1959ರ ಅನ್ವಯ ಕರ್ನಾಟಕ ರಾಜ್ಯದಲ್ಲಿ ಚುನಾಯಿತ ಗ್ರಾಮ ಪಂಚಾಯ್ತಿಗಳು ಹಾಗೂ ತಾಲ್ಲೂಕು ಅಭಿವೃದ್ಧಿ ಮಂಡಳಿಗಳು ಅಸ್ತಿತ್ವಕ್ಕೆ ಬಂದವು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿನ ಶಾಸಕರು, ಸಂಸದರು ಹಾಗೂ ತಾಲ್ಲೂಕು ಅಭಿವೃದ್ಧಿ ಮಂಡಳಿಗಳ ಅಧ್ಯಕ್ಷರುಗಳನ್ನೊಳಗೊಂಡ ಜಿಲ್ಲಾ ಅಭಿವೃದ್ಧಿ ಮಂಡಳಿಗಳು ಕಾರ್ಯಾರಂಭ ಮಾಡಿದವು.
 
ಗ್ರಾಮ ಪಂಚಾಯ್ತಿಗಳಿಗೆ ಕಾರ್ಯದರ್ಶಿಗಳ ನೇಮಕವಾಯಿತು. ಕ್ಷೇತ್ರಾಭಿವೃದ್ಧಿ ಅಧಿಕಾರಿಗಳು (ಬಿ.ಡಿ.ಒ.ಗಳು) ತಾಲ್ಲೂಕು ಅಭಿವೃದ್ಧಿ ಮಂಡಳಿಗಳ ಅಧಿಕಾರಿ ಮುಖ್ಯಸ್ಥರಾಗಿ ತಾಲ್ಲೂಕುಗಳಲ್ಲಿನ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಾಧಿಸಿ ಕಾರ್ಯಕ್ರಮಗಳ ಅನುಷ್ಠಾನದ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಿದ್ದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ಯ ಇಲಾಖೆಯ ಸಚಿವರಾಗಿದ್ದ ಅಬ್ದುಲ್ ನಜೀರ್‌ಸಾಬ್ ನೇತೃತ್ವದಲ್ಲಿ ನಡೆದ ಕರ್ನಾಟಕದ ಅಧಿಕಾರ ವಿಕೇಂದ್ರಿಕರಣ ಪ್ರಯೋಗ ಸ್ಥಳೀಯ ಆಡಳಿತದ ವಿನ್ಯಾಸವನ್ನೇ ಬದಲಿಸಿಬಿಟ್ಟಿತು. ಹೊಸ ಕಾಯಿದೆಯಲ್ಲಿ ಚುನಾಯಿತ ಜಿಲ್ಲಾ ಪರಿಷತ್ತುಗಳ (ಈಗ ಜಿಲ್ಲಾ ಪಂಚಾಯ್ತಿಗಳು) ಅಧ್ಯಕ್ಷ ಉಪಾಧ್ಯಕ್ಷರಿಗೆ ಕ್ರಮವಾಗಿ ರಾಜ್ಯ ಸಚಿವರ ಹಾಗೂ ಉಪಸಚಿವರ ಸ್ಥಾನಮಾನ ನೀಡಲಾಗಿದ್ದು ಅಧ್ಯಕ್ಷರನ್ನು ಜಿಲ್ಲೆಯ ಕಾರ್ಯಕಾರಿ ಮುಖ್ಯಸ್ಥರೆಂದು ಪರಿಗಣಿಸಲಾಗಿತ್ತು. ಪರಿಷತ್ತಿನ ಮುಖ್ಯ ಕಾರ್ಯದರ್ಶಿಗಳ ಸೇವೆಗೆ ಸಂಬಂಧಿಸಿದಂತೆ ಅವರ ವಾರ್ಷಿಕ ಗುಪ್ತ ವರದಿಗಳನ್ನು ಸರ್ಕಾರಕ್ಕೆ ಕಳುಹಿಸುವ ಅಧಿಕಾರವನ್ನು ಸಹ ನೀಡಲಾಗಿತ್ತು.
 
ಜಿಲ್ಲೆಯ ಜಿಲ್ಲಾಧಿಕಾರಿಗಳಿಗಿಂತ ಹೆಚ್ಚಿನ ಸೇವಾ ಹಿರಿತನ ಹೊಂದಿ ಭಾರತ ಆಡಳಿತ ಸೇವೆಗೆ ಸೇರಿದ (ಐ.ಎ.ಎಸ್.) ಅಧಿಕಾರಿಗಳನ್ನು ಮಾತ್ರ ಮುಖ್ಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗುತ್ತಿತ್ತು. ಜಿಲ್ಲೆಯ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳು ಮತ್ತು ಕಾರ್ಯಕ್ರಮಗಳನ್ನು ಕಂದಾಯ ಇಲಾಖೆಯಿಂದ ಸಂಪೂರ್ಣವಾಗಿ ಬೇರ್ಪಡಿಸಿ ಅವೆಲ್ಲವನ್ನು ಜಿಲ್ಲಾ ಪರಿಷತ್ತುಗಳಲ್ಲಿ ವಿಲೀನಗೊಳಿಸಲಾಯಿತು. ವಿವಿಧ ಅಭಿವೃದ್ಧಿ ಇಲಾಖೆಗಳ ಜಿಲ್ಲಾ ಮುಖ್ಯಸ್ಥರೂ ಸೇರಿದಂತೆ ಎಲ್ಲ ವರ್ಗಗಳ ಅಧಿಕಾರಿ ಸಿಬ್ಬಂದಿಯನ್ನು ಜಿಲ್ಲಾ ಪರಿಷತ್ತು ಜಿಲ್ಲಾ ಪಂಚಾಯ್ತಿಗಳ ಸಂಪೂರ್ಣ ಆಡಳಿತ ವ್ಯಾಪ್ತಿಗೆ ತಂದಿರುವುದನ್ನು ಕರ್ನಾಟಕದಲ್ಲಿ ಮಾತ್ರ ಕಾಣಬಹುದಾಗಿದೆ.

ರಾಜ್ಯದ 1985ರ ಕಾಯಿದೆಯಲ್ಲಿ `ಎ~ ಮತ್ತು `ಬಿ~ ಶ್ರೇಣಿಯ ಅಧಿಕಾರಿಗಳನ್ನು ಶಾಶ್ವತ ನಿಯೋಜನೆ ಮೇರೆಗೆ ಜಿಲ್ಲಾ ಪರಿಷತ್ತುಗಳಿಗೆ ನೀಡಲಾಗಿತ್ತು. `ಸಿ~ ಮತ್ತು `ಡಿ~ ದರ್ಜೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಕೂಡಾ ಜಿಲ್ಲಾ ಪರಿಷತ್ತುಗಳಿಗೆ ನೀಡಲಾಗಿತ್ತು. ಹಿಂದಿನ ಮಂಡಲ ಪಂಚಾಯ್ತಿಗಳ ಕಾರ್ಯದರ್ಶಿಗಳನ್ನು ಜಿಲ್ಲಾ ಪರಿಷತ್ತುಗಳ ಸಿಬ್ಬಂದಿಯೆಂದು ಪರಿಗಣಿಸಿ ಪರಿಷತ್‌ಗಳೇ ಅವರನ್ನು ನೇಮಕ ಮಾಡುತ್ತಿತ್ತು. ಮಂಡಲ ಪಂಚಾಯ್ತಿಗಳೊಂದಿಗೆ ಸಮಾಲೋಚನೆ ಮಾಡಿ ಕಾರ್ಯದರ್ಶಿಗಳ ನೇಮಕಾತಿ ಮಾಡಬೇಕಾಗಿತ್ತು. ಅವರ ವೇತನ ಭತ್ಯೆಯನ್ನು ಪರಿಷತ್ತುಗಳ ನಿಧಿಯಿಂದ ನೀಡಲಾಗುತ್ತಿತ್ತು. ಉಳಿದ ಸಿಬ್ಬಂದಿಯನ್ನು ಮಂಡಲ ಪಂಚಾಯ್ತಿಗಳು ನಿಯಮಾನುಸಾರ ನೇಮಕ ಮಾಡಬಹುದಾಗಿತ್ತು.

ರಾಜ್ಯದಲ್ಲಿನ ಗ್ರಾಮ ಪಂಚಾಯ್ತಿಗಳಲ್ಲಿ ಕಳೆದ ವರ್ಷದವರೆಗೆ ಹಿಂದೆ ಇದ್ದಂತೆ ಕಾರ್ಯದರ್ಶಿಗಳು ಸಿಬ್ಬಂದಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜನಸಂಖ್ಯೆಯನ್ನು ಪರಿಗಣಿಸಿ ಗ್ರಾಮ ಪಂಚಾಯ್ತಿಗಳನ್ನು ವರ್ಗೀಕರಿಸಿ ದರ್ಜೆ 1 ಮತ್ತು ದರ್ಜೆ 2 ಎಂದು ಪಟ್ಟಿಮಾಡಿ ಪದವೀಧರರಾಗಿದ್ದ ಕಾರ್ಯದರ್ಶಿಗಳನ್ನು ಒಂದನೇ ದರ್ಜೆ ಪಂಚಾಯ್ತಿಗಳಿಗೆ ನೇಮಕ ಮಾಡಲಾಯಿತು. ಗ್ರಾಮ ಪಂಚಾಯ್ತಿಗಳು ಹೆಚ್ಚು ಹೆಚ್ಚು ಅಭಿವೃದ್ಧಿ ಹಾಗೂ ಸಮಾಜಕಲ್ಯಾಣ ಕಾರ್ಯಕ್ರಮಗಳು ವಿಶೇಷವಾಗಿ ಉದ್ಯೋಗ ಭರವಸೆ ಯೋಜನೆ ನಿರ್ವಹಿಸಬೇಕಾಗಿದ್ದು ಅಲ್ಲದೆ ಹಣಕಾಸಿನ ವಹಿವಾಟು ಜವಾಬ್ದಾರಿ ಹೆಚ್ಚಿದ್ದು ವಿವಿಧ ಇಲಾಖಾ ಅಧಿಕಾರಿ ಸಿಬ್ಬಂದಿಯೊಡನೆ ಸತತ ಸಂಪರ್ಕ ಸಮನ್ವಯ ಸಾಧಿಸಬೇಕಾಗುತ್ತದೆಂಬ ಕಾರಣಕ್ಕೆ ಉನ್ನತ ಮಟ್ಟದವರನ್ನು ಅಧಿಕಾರಿ ಮುಖ್ಯಸ್ಥರನ್ನಾಗಿ ನೇಮಿಸಬೇಕೆಂದು ತೀರ್ಮಾನಿಸಿ ಸರ್ಕಾರ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿ.ಡಿ.ಒ.ಗಳು) ನೇಮಕ ಮಾಡಿತು. ಕೆಲವು ಕಡೆ ಈ ಹಿಂದೆ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಪದವೀಧರರಿಗೆ ಬಡ್ತಿ ನೀಡಿ ಪಿ.ಡಿ.ಓ.ಗಳಾಗಿ ನೇಮಿಸಲಾಯಿತು. ಈಗಿನ ಕಾಯಿದೆಯಂತೆ ಪಿ.ಡಿ.ಒ. ಮತ್ತು ಕಾರ್ಯದರ್ಶಿಗಳಿಬ್ಬರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ವೇತನ ನೀಡಲಾಗುತ್ತಿದೆ. ಬಡ್ತಿಹೊಂದಿ ಪಿ.ಡಿ.ಒ. ಗಳಾದವರಿಗೆ
ಈಗಾಗಲೇ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುವ ಅನುಭವವಿದ್ದು ಚುನಾಯಿತ ಪ್ರತಿನಿಧಿಗಳು, ವಿವಿಧ ಅಧಿಕಾರಿಗಳು ಹಾಗೂ ಸ್ಥಳೀಯ ಜನತೆಯೊಂದಿಗೆ ಕಾರ್ಯನಿರ್ವಹಿಸಿರುತ್ತಾರೆ, ಹೊಂದಾಣಿಕೆ ಮಾಡಿಕೊಂಡಿರುತ್ತಾರೆ.

ನೂತನ ಹುದ್ದೆಯಲ್ಲಿ ಅವರಿಗೆ ಹೆಚ್ಚಿನ ಸಮಸ್ಯೆಗಳು ಎದುರಾಗುವುದಿಲ್ಲ. ತಮ್ಮ ಬುದ್ಧಿವಂತಿಕೆ ಮತ್ತು ಚಾಕಚಕ್ಯತೆಯಿಂದ ಸ್ಥಳೀಯ ಸಂಕಷ್ಟಗಳಿಂದ ಪಾರಾಗುತ್ತಾರೆ.
ಆದರೆ ನೇರ ನೇಮಕಾತಿ ಮೂಲಕ ಪಿ.ಡಿ.ಓ.ಗಳಾಗಿ ಗ್ರಾಮ ಪಂಚಾಯ್ತಿಗಳಿಗೆ ಬಂದಿರುವವರಿಗೆ ವಿಶೇಷವಾಗಿ ಮಹಿಳೆಯರಿಗೆ-ಹಲವಾರು ಸಮಸ್ಯೆಗಳು ಎದುರಾಗುತ್ತವೆ, ಆದರ್ಶಗಳ ಬೆನ್ನುಹತ್ತಿ ಸೇವಾ ಮನೋಭಾವದಿಂದ ಗ್ರಾಮೀಣ ಪ್ರದೇಶಗಳಿಗೆ ಬಂದವರಿಗೆ ಸ್ಥಳೀಯ ರಾಜಕರಣ, ಪಂಚಾಯ್ತಿ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಗುಂಪುಗಾರಿಕೆಗೆ ಹೊಂದಿಕೊಳ್ಳುವುದು ಕಷ್ಟ ಸಾಧ್ಯವಾಗುತ್ತದೆ. ದೂರದಿಂದ ಬರುವ ಒಂಟಿ ಮಹಿಳಾಧಿಕಾರಿಗಳು ಅಪಮಾನಕರ ವರ್ತನೆ ಹಾಗೂ ಲೈಂಗಿಕ ಕಿರುಕುಳಕ್ಕೆ ಬಲಿಯಾಗಬೇಕಾಗಿದೆ. ಅಂತಹವರಿಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಂದ, ಸಹೋದ್ಯೋಗಿಗಳಿಂದ, ಮೇಲಾಧಿಕಾರಿಗಳಿಂದ ಅಗತ್ಯ ಸಹಕಾರ, ರಕ್ಷಣೆ ಸಿಗುತ್ತಿಲ್ಲ.

ಇದರಿಂದ ಬೇಸತ್ತು ಬೇರೆಡೆ ವರ್ಗಾವಣೆ ಬಯಸುವುದು ಇಲ್ಲವೇ ರಾಜೀನಾಮೆ ನೀಡುವುದು ಸಾಮಾನ್ಯವಾಗಿದೆ. ಇನ್ನಷ್ಟು ಹತಾಶೆಗೊಂಡ ದುರ್ಬಲ ಮನಸ್ಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಕೇವಲ ಗ್ರಾಮಪಂಚಾಯ್ತಿಗಳಿಗೆ ಮಾತ್ರ ಸೀಮಿತವಲ್ಲ. ಬೇರೆ ಬೇರೆ ಇಲಾಖಾ ಕಛೇರಿಗಳಲ್ಲಿ, ಖಾಸಗಿ ಕ್ಷೇತ್ರಗಳಲ್ಲಿ, ನಗರ ಹಾಗೂ ಗ್ರಾಮೀಣ ಪರಿಸರದಲ್ಲಿ ಸಹ ಇಂತಹ ಸನ್ನಿವೇಶಗಳು ಎದುರಾಗುತ್ತವೆ. ಆದರ್ಶಗಳನ್ನು ಹೊಂದಿ ನಿಯಮಾನುಸಾರ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರಿಗೆ ಎಲ್ಲ ರೀತಿಯ ಸಹಕಾರ, ರಕ್ಷಣೆ ನೀಡಬೇಕಾದುದು ನಾಗರೀಕ ಸಮಾಜದ ಕರ್ತವ್ಯ.

ಪಂಚಾಯ್ತಿಗಳಿಂದ ನಿರ್ವಹಿಸುವ ಕಾಮಗಾಗಳಿಗೆ ಬಿಲ್ ಪಾವತಿಸುವಾಗ ಚೆಕ್ಕುಗಳಿಗೆ ಅಧ್ಯಕ್ಷರು ಮತ್ತು ಪಿ.ಡಿ.ಓ. ಜಂಟಿ ಸಹಿ ಮಾಡಬೇಕಾಗುತ್ತದೆ. ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ನೋಡಿಯೂ ಕಣ್ಣುಮುಚ್ಚಿೊಂಡಿರಬೇಕಾಗುತ್ತದೆ. ಪಂಚಾಯ್ತಿಯ ಕ್ರಿಯಾ ಯೋಜನೆಯಲ್ಲಿ ಸೇರದ ಕಾಮಗಾರಿಗಳಿಗೆ ಅನುಮತಿ ನೀಡಬೇಕಾಗುತ್ತದೆ, ಕಾಮಗಾರಿಗಳನ್ನೇ ಮಾಡದ ತಾಂತ್ರಿಕ ವಿಭಾಗದ ಭ್ರಷ್ಟ ಅಧಿಕಾರಿಗಳು ತಯಾರಿಸುವ ಬಿಲ್‌ಗಳಿಗೆ ಚೆಕ್‌ಗಳನ್ನು ನೀಡಬೇಕೆಂಬ ಒತ್ತಡಕ್ಕೆ ಬಲಿಯಾಗಬೇಕಾಗುತ್ತದೆ. ತಮ್ಮ ಬಂಧುಗಳು ಮತ್ತು ಸ್ನೇಹಿತರ ಮೂಲಕ ಅಕ್ರಮ ಕಾಮಗಾರಿ ಮಾಡಿಸುವ ಚುನಾಯಿತ ಪ್ರತಿನಿಧಿಗಳು ಪಂಚಾಯ್ತಿ ಕಾಮಗಾರಿಗಳನ್ನು ಅಕ್ರಮ ಗಳಿಕೆಯ ದಾರಿಮಾಡಿಕೊಂಡಿದ್ದಾರೆ. ಈ ರೀತಿ ಜನಪ್ರತಿನಿಧಿಗಳು ಮತ್ತು ಅವರ ಜತೆ ಷಾಮೀಲಾಗಿರುವ ಇಲಾಖೆಯ ಮೇಲಾಧಿಕಾರಿಗಳು ಪ್ರಾಮಾಣಿಕ ಸಿಬ್ಬಂದಿಯ ಬದುಕನ್ನು ದುರ್ಭರಗೊಳಿಸುತ್ತಿದ್ದಾರೆ. ಹಲವು ಪಂಚಾಯ್ತಿಗಳಲ್ಲಿ ಕಾರ್ಯದರ್ಶಿಗಳೇ ಇತರರನ್ನು ಪ್ರಚೋದಿಸಿ ಪಿ.ಡಿ.ಓ.ಗಳ ವಿರುದ್ಧ ಗುಂಪುಗಾರಿಕೆ ಮಾಡಿಸುತ್ತಿದ್ದಾರೆ.

ಗ್ರಾಮ ಪಂಚಾಯ್ತಿಗಳ ಆಡಳಿತದ ಮೇಲುಸ್ತುವಾರಿ ಕಾರ್ಯ ಅಧಿಕಾರಿಗಳ ಹಂತದಲ್ಲಿ ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಂದ (ಇ.ಒ.) ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ (ಸಿ.ಇ.ಒ.) ಜರುಗಬೇಕಾಗಿದೆ. ಬಹುತೇಕ ತಾಲ್ಲೂಕುಗಳಲ್ಲಿ ಈ ಕಾರ್ಯ ಸಮರ್ಪಕವಾಗಿಲ್ಲ. ತಾಲ್ಲೂಕು ಪಂಚಾಯ್ತಿಗಳಿಗೆ ಹಿಂದೆ ಇದ್ದ ಕ್ಷೇತ್ರಾಭಿವೃದ್ಧಿ ಅಧಿಕಾರಿಗಳ ಸ್ಥಾನವನ್ನು ಮೇಲ್ದರ್ಜೆಗೆ ಏರಿಸಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡಬೇಕೆಂಬ ಪ್ರಸ್ತಾಪ ಸರ್ಕಾರದ ಮುಂದೆ ಬಂದಾಗ ಅರ್ಹತೆಯಿದ್ದ ಬಿ.ಡಿ.ಒ.ಗಳಿಗೆ ಬಡ್ತಿ ನೀಡಿ ತೆರವಾಗಿರುವ ಸ್ಥಾನಗಳಿಗೆ ನೇಮಕಮಾಡಲಾಯಿತು. ಈ ಹುದ್ದೆಗಳಿಗೆ ಕಂದಾಯ ಇಲಾಖೆಯಲ್ಲದೆ, ಆರೋಗ್ಯ, ಪಶುವೈದ್ಯಕೀಯ ಇಲಾಖೆಯ ವೈದ್ಯರೂ ಸೇರಿದಂತೆ ಅಭಿವೃದ್ಧಿ ಆಡಳಿತ ವ್ಯವಸ್ಥೆಯ ಅನುಭವವಿಲ್ಲದವರನ್ನು ಇ.ಓ.ಗಳನ್ನಾಗಿ ನೇಮಕ ಮಾಡಲಾಯಿತು.

ಇಂತಹ ಅನೇಕ ಅಧಿಕಾರಿಗಳಿಗೆ ಗ್ರಾಮ ಪಂಚಾಯ್ತಿ ಆಡಳಿತ ವ್ಯವಸ್ಥೆಯ ಮೇಲುಸ್ತುವಾರಿ, ತಾಲ್ಲೂಕು ಮಟ್ಟದಲ್ಲಿ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮತ್ತು ಜನಪ್ರತಿನಿಧಿಗಳ ಜತೆ ಸಂಬಂಧ ಸ್ಥಾಪನೆ ಸಾಧ್ಯವಾಗುತ್ತಿಲ್ಲ. ಈ  ಸಮನ್ವಯದ ಕೊರತೆಯಿಂದಾಗಿ ಕಛೇರಿ ಕೆಲಸ ಹಾಗೂ ಅಭಿವೃದ್ಧಿ ಕಾರ್ಯ ಅನುಷ್ಠಾನ ಸಮರ್ಪಕವಾಗಿ ಸಾಗುತ್ತಿಲ್ಲ. ಅಧಿಕಾರಿಗಳ ಹಂತದಲ್ಲಿ ಗ್ರಾಮ ಪಂಚಾಯ್ತಿಯ ಕಾರ್ಯಕ್ರಮಗಳ ಬಗ್ಗೆ, ಪಿ.ಡಿ.ಒ. ಕಾರ್ಯದರ್ಶಿಗಳ ಕಾರ್ಯನಿರ್ವಹಣೆ ಬಗ್ಗೆ ಉಸ್ತುವಾರಿ ಮಾರ್ಗದರ್ಶನ ನೀಡಲು ಕಾರ್ಯನಿರ್ವಾಹಕ ಅಧಿಕಾರಿಗಳ ಅಧೀನದಲ್ಲಿ ಹಿರಿಯ ಅನುಭವಿ ಅಧಿಕಾರಿಯೊಬ್ಬರನ್ನು `ಪಂಚಾಯ್ತಿ ಸಮನ್ವಯಾಧಿಕಾರಿಯಾಗಿ~ ನೇಮಿಸುವುದು ಸೂಕ್ತ. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು, ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಕಾಯಿದೆಯಂತೆ ಆಯಾ ಹಂತದಲ್ಲಿ `ಕಾರ್ಯಕಾರಿ ಮುಖ್ಯಸ್ಥರಾಗಿದ್ದು ನಿಯಮಾನುಸಾರ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಅಗತ್ಯ ಸಹಕಾರ, ಮಾರ್ಗದರ್ಶನ ನೀಡುತ್ತ ಅಭಿವೃದ್ಧಿ ಆಡಳಿತ ಸುಸೂತ್ರವಾಗಿ ಜರುಗುವಂತೆ ಗಮನಹರಿಸಬೇಕಾಗುತ್ತದೆ.

ಪ್ರಸ್ತುತ ನಮ್ಮ ರಾಜ್ಯದ ಪಂಚಾಯ್ತಿ ಕಾಯಿದೆಯಡಿಯಲ್ಲಿ ಮೂರೂ ಹಂತಗಳ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ ಎ.ಬಿ.ಸಿ.ಡಿ. ಶ್ರೇಣಿಗಳ ಅಧಿಕಾರಿ ಸಿಬ್ಬಂದಿ ವರ್ಗದವರನ್ನು ನೇಮಕಾತಿ ಮಾಡುವ ಅಥವಾ ತಮ್ಮ ವ್ಯಾಪ್ತಿಯೊಳಗೆ ವರ್ಗಾವಣೆ ಮಾಡುವ ಪ್ರತ್ಯೇಕ ಅಧಿಕಾರವಿರುವುದಿಲ್ಲ. ಈ  ಅಧಿಕಾರ ಸರ್ಕಾರಕ್ಕಿರುತ್ತದೆ, ಸರ್ಕಾರದಿಂದ ಅಧಿಕಾರ (ಡೆಲಿಗೇಶನ್) ಪಡೆದ ಅಧಿಕಾರಿಗಿರುತ್ತದೆ ಅಥವಾ ಸರ್ಕಾರ ರಚಿಸುವ  ಪ್ರಾಧಿಕಾರಕ್ಕಿರುತ್ತದೆ. ವಾಸ್ತವವಾಗಿ ಜಿಲ್ಲಾ ಪಂಚಾಯ್ತಿಗಳ ಸಿ.ಇ.ಓ.ಗಳಿಗೆ ನೀಡಿರುವ ಅಧಿಕಾರ ಸರ್ಕಾರದ ಔದಾರ್ಯದ ಆದೇಶದಿಂದ ಬಂದದ್ದು. ಈ ಅಧಿಕಾರ ಸರ್ಕಾರ ಯಾವುದೇ ಇಲಾಖೆ ಅಧಿಕಾರಿಗೆ ನೀಡಬಹುದಾಗಿದೆ. ಆಂಧ್ರಪ್ರದೇಶವೂ ಸೇರಿದಂತೆ ಕೆಲವು ರಾಜ್ಯಗಳು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ನೇಮಕ, ಅವರ ವರ್ಗಾವಣೆ, ಶಿಸ್ತು ಕ್ರಮ ಇತ್ಯಾದಿ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು  “ಪಂಚಾಯ್ತಿ ರಾಜ್ಯ ಸೇವೆ”ಗಳನ್ನು (ಕರ್ನಾಟಕ ಲೋಕಸೇವಾ ಆಯೋಗದ ಮಾದರಿಯಲ್ಲಿ) ಪ್ರತ್ಯೇಕವಾಗಿ ರಚಿಸಿವೆ. ಈ ಸಂಸ್ಥೆಗಳು ಪಾರದರ್ಶಕವಾಗಿ, ನಿಯಮಾನುಸಾರವಾಗಿ ಕಾರ‌್ಯನಿರ್ವಹಿಸುತ್ತಿರುವ ಕಾರಣ ಸಿಬ್ಬಂದಿ ಆಡಳಿತ ಸುಸೂತ್ರವಾಗಿ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಈ ವ್ಯವಸ್ಥೆಯನ್ನು ಪರಿಶೀಲಿಸಿ ಅನುಷ್ಠಾನಕ್ಕೆ ತರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT