ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕೆ ನಿಷ್ಠರಾಗಿದ್ದ ಕಾರ್ಯಕರ್ತರು

Last Updated 10 ಏಪ್ರಿಲ್ 2013, 6:15 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಾವು ರಾಜಕೀಯದಲ್ಲಿದ್ದಾಗ ಕಾರ್ಯಕರ್ತರು ಪಕ್ಷಕ್ಕೆ ನಿಷ್ಠರಾಗಿ ನಿಸ್ವಾರ್ಥದಿಂದ ಮತ್ತು ಹುಮ್ಮಸ್ಸಿನಿಂದ ದುಡಿಯುತ್ತಿದ್ದರು. ಅಭ್ಯರ್ಥಿಗಳು ಬರೀ ಉತ್ಸವ ಮೂರ್ತಿ ಆಗಿರುತ್ತಿದ್ದರು. ಎಲ್ಲವನ್ನೂ ಅವರೇ ನಿಭಾಯಿಸುತ್ತಿದ್ದರು ಎಂದು ಮಾಜಿ ಶಾಸಕಿ ಅನ್ನಪೂರ್ಣಬಾಯಿ ರಗಟೆ ಹೇಳಿದರು.

ಬಸವಕಲ್ಯಾಣ ತಾಲ್ಲೂಕು ರಚನೆಗೊಂಡಾಗ ನಡೆದ ಮೊದಲೆರಡು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಇವರಿಗೆ ಈಗ 80 ವರ್ಷವಾಗಿದೆ. ಈಗಲೂ ಆರೋಗ್ಯವಾಗಿದ್ದಾರೆ. ಇವರನ್ನು `ಪ್ರಜಾವಾಣಿ' ಮಾತನಾಡಿಸಿದಾಗ ಈ ರೀತಿ ನೆನಪಿನ ಬುತ್ತಿ ಬಿಚ್ಚಿಟ್ಟರು.

ಒಟ್ಟು ಮೂರು ಚುನಾವಣೆಗಳನ್ನು ಎದುರಿಸಿದ್ದೇನೆ. ಮೊದಲ ಚುನಾವಣೆಗೆ 10 ಸಾವಿರ, ಎರಡನೇಯದಕ್ಕೆ 18 ಸಾವಿರ ಮತ್ತು ಮೂರನೇಯದಕ್ಕೆ 1ಲಕ್ಷ ರೂಪಾಯಿ ಖರ್ಚು ಬಂದಿತು. ಆಗ ವಾಹನ ಇತ್ಯಾದಿಗೆ ಖರ್ಚು ಬರುತ್ತಿತ್ತು ಹೊರತು ಕಾರ್ಯಕರ್ತರು ಹಣ ತೆಗೆದುಕೊಂಡು ಕೆಲಸ ಮಾಡುತ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ರೊಕ್ಕ ಕೊಡದಿದ್ದರೆ ಯಾರೂ ಕೆಲಸ ಮಾಡುವುದೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾವು ಶಾಸಕರಾಗಿದ್ದಾಗ ಬಸವಕಲ್ಯಾಣ ಪಟ್ಟಣದ ಜನಸಂಖ್ಯೆ ಕೇವಲ 10 ಸಾವಿರ ಇತ್ತು. ಈ ಸ್ಥಳವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿಸಿ ಇಲ್ಲಿ ವಿದ್ಯುತ್ ಸಂಪರ್ಕ ಕೊಡಿಸುವಲ್ಲಿ ಶ್ರಮಿಸಿದ್ದೇನೆ. ಇಲ್ಲಿನ ತ್ರಿಪುರಾಂತ ಕೆರೆಯಿಂದ ಪೈಪಲೈನ್ ಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಲಾಗಿತ್ತು. ಸರ್ಕಾರದ ಅನುದಾನ ಹೆಚ್ಚಾಗಿ ಬರುತ್ತಿರಲಿಲ್ಲ. ಆದರೂ ಅಧಿಕಾರಿಗಳಾಗಲಿ, ಜನಪ್ರತಿ

ನಿಧಿಗಳಾಗಲಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದರು ಎಂದೂ ಹೇಳಿದರು.

`ಬಿಟ್ಟರೂ ಬಿಡದಿ ಮಾಯೆ..' ಎನ್ನುವ ಶರಣರ ವಚನದಂತೆ ಒಮ್ಮೆ ರಾಜಕೀಯದ ಮೋಹಪಾಶಕ್ಕೆ ಸಿಲುಕಿದವರು ಅದರಿಂದ ದೂರ ಸರಿಯುವುದು ಕಡಿಮೆ. ನಾನೂ ಅದಕ್ಕೆ ಹೊರತಾಗಿಲ್ಲ. ಟಿಕೆಟ್ ಕೊಟ್ಟರೆ ಈಗಲೂ ಕಣಕ್ಕೆ ಇಳಿಯಲು ಸಿದ್ಧನಿದ್ದೇನೆ ಎಂದೂ ಹೇಳುತ್ತಾರೆ.

ಪರಿಚಯ: ಅನ್ನಪೂರ್ಣಬಾಯಿ ಅವರ ತವರುಮನೆ ಮಹಾರಾಷ್ಟ್ರದ ಸೊಲ್ಲಾಪುರ. ಅಲ್ಲಿಯೇ ಹತ್ತನೇಯವರೆಗೆ ಶಾಲೆ ಕಲಿತಿದ್ದಾರೆ. ಗಂಡನ ಮನೆಗೆ ಆಗಮಿಸಿದಾಗ 25 ನೇ ವರ್ಷದಲ್ಲಿ ರಾಜಕೀಯಕ್ಕೆ ಕಾಲಿಟ್ಟರು. ಇವರು 1957ರಲ್ಲಿ ಕಾಂಗ್ರೆಸ್‌ದಿಂದ ಶಾಸಕರಾದರು. ಜಂಪಾಬಾಯಿ, ಮಾಜಿ ಶಾಸಕ ಬಾಪುರಾವ ಹುಲಸೂರಕರ್, ಭೀಮರಾವ ಪಟವರ್ಧನ ಎದುರಾಳಿಗಳಾಗಿದ್ದರು.

ನಂತರ 1962 ರಲ್ಲಿಯೂ ವಿಜೇತರಾದರು. 1965ರ ಚುನಾವಣೆಯಲ್ಲಿ ಸೋತರು. ಅದಾದ ಮೇಲೆ 1968 ರಿಂದ 1972 ರವರೆಗೆ ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. ಇವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಇಲ್ಲಿನ ವಿದ್ಯಾಶ್ರೀ ಕಾಲೊನಿಯಲ್ಲಿ ಮಗನಾದ ಇಲ್ಲಿನ ಪ್ರಸಿದ್ಧ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಅನಿಲಕುಮಾರ್ ರಗಟೆ ಅವರೊಂದಿಗೆ ವಾಸವಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT