ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳಿಗೆ ದೇಣಿಗೆ: ಉದ್ಯಮವೇ ಜೀವಾಳ

Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಣಿಗೆಯ ವಿಷಯದಲ್ಲಿ ರಾಜಕೀಯ ಪಕ್ಷಗಳಿಗೆ ಉದ್ಯಮ ಸಂಸ್ಥೆ­ಗಳೇ ಜೀವಾಳ ಎಂಬುದು 2004–05ರಿಂದ 2011–12ರ ವರೆಗಿನ ದೇಣಿಗೆ­ಗಳ ವಿವರಗಳನ್ನು ಪರಿಶೀಲಿಸಿ­ದರೆ ತಿಳಿಯುತ್ತದೆ.

ಈ ಅವಧಿಯಲ್ಲಿ ರಾಷ್ಟ್ರೀಯ ರಾಜ­ಕೀಯ ಪಕ್ಷಗಳು ₨ 435.87 ಕೋಟಿ ದೇಣಿಗೆ ಸಂಗ್ರಹಿಸಿವೆ. ಇದರಲ್ಲಿ ₨378.89 ಕೋಟಿ ದೇಣಿಗೆ ಉದ್ಯಮ ಸಂಸ್ಥೆ­ಗಳಿಂದಲೇ ಬಂದಿದೆ. ಇದು ರಾಜ­ಕೀಯ ಪಕ್ಷಗಳು ಪಡೆದಿರುವ ದೇಣಿಗೆಯ ಶೇ 87 ಭಾಗ.

ರಾಜಕೀಯ ಪಕ್ಷಗಳಲ್ಲೂ ಬಿಜೆಪಿಗೆ ಉದ್ಯಮ ಸಂಸ್ಥೆಗಳಿಂದ ಗರಿಷ್ಠ ದೇಣಿಗೆ ಹರಿದು ಬಂದಿದೆ. ಬಿಜೆಪಿಯು ಉದ್ಯಮ ಅಥವಾ ವ್ಯಾಪಾರ ವಲಯದ 1334 ದಾನಿ­ಗಳಿಂದ ₨ 192.47 ಕೋಟಿ ದೇಣಿಗೆ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿರುವ ಕಾಂಗ್ರೆಸ್‌ 418 ದಾನಿಗಳಿಂದ ₨ 172.25 ಕೋಟಿ ದೇಣಿಗೆ ಪಡೆದಿದೆ.

ಕಾಂಗ್ರೆಸ್‌ನ ಶೇ 92ರಷ್ಟು ದೇಣಿಗೆ ಈ ವಲಯ­ದಿಂದಲೇ ಬಂದರೆ, ಬಿಜೆಪಿ ಪಡೆದಿರುವ ದೇಣಿಗೆ ಪ್ರಮಾಣ ಶೇ 85.

ಗರಿಷ್ಠ ದೇಣಿಗೆ ವಲಯ: ಉತ್ಪಾದನಾ ವಲಯ ಗರಿಷ್ಠ ಪ್ರಮಾಣದಲ್ಲಿ ದೇಣಿಗೆ ನೀಡಿದೆ. ಈ ವಲಯ 595 ದೇಣಿಗೆಗಳ ಮೂಲಕ ₨ 99.71 ಕೋಟಿಗಳನ್ನು ರಾಜಕೀಯ ಪಕ್ಷಗಳಿಗೆ ನೀಡಿದೆ.

ನಂತರದ ಸ್ಥಾನದಲ್ಲಿ ನಿರ್ಮಾಣ ರಂಗ ಇದೆ. ಈ ವಲಯ 340 ದೇಣಿಗೆ­ಗಳ ಮೂಲಕ ₨ 24.10 ಕೋಟಿಗಳನ್ನು ನೀಡಿದೆ. ಆಸ್ಪತ್ರೆಗಳು ಅತ್ಯಂತ ಕಡಿಮೆ ಪ್ರಮಾಣ­­ದಲ್ಲಿ ದೇಣಿಗೆ ನೀಡಿದ್ದು  16 ದೇಣಿಗೆ­ಗಳ ಮೂಲಕ ₨ 14 ಲಕ್ಷಗಳನ್ನು ನೀಡಿವೆ.

ಉದ್ಯಮ ಸಂಸ್ಥೆಗಳಲ್ಲಿ ಆದಿತ್ಯ ಬಿರ್ಲಾ ಗುಂಪಿನ ಚುನಾವಣಾ ಟ್ರಸ್ಟ್‌ ಗರಿಷ್ಠ ಪ್ರಮಾಣದಲ್ಲಿ ದೇಣಿಗೆ ನೀಡಿದೆ. ಈ ಸಂಸ್ಥೆಯು ಒಟ್ಟು  ₨ 36.41 ಕೋಟಿ ದೇಣಿಗೆ ನೀಡಿದೆ. ₨ 11.85 ಕೋಟಿ ದೇಣಿಗೆ ನೀಡಿರುವ ಟೊರೆಂಟ್ ಪವರ್‌ ಲಿ. ಮತ್ತು  ಭಾರ್ತಿ ಗುಂಪಿನ ಭಾರ್ತಿ ಚುನಾವ­ಣಾ ಟ್ರಸ್ಟ್‌ ₨ 11 ಕೋಟಿ ದೇಣಿಗೆ ನೀಡಿವೆ.

ಆದಿತ್ಯ ಬಿರ್ಲಾ ಗುಂಪಿನ ಚುನಾ­ವಣಾ ಟ್ರಸ್ಟ್‌ನಿಂದ ಬಿಜೆಪಿಗೆ ದೊರೆತ ದೇಣಿಗೆ ₨ 26.57 ಕೋಟಿ. ಟೊರೆಂಟ್‌ ಪವರ್‌ ಲಿ. ಈ ಪಕ್ಷಕ್ಕೆ ನೀಡಿದ ಮೊತ್ತ ₨ 13 ಕೋಟಿ. ಏಷ್ಯಾನೆಟ್‌ ಹೋಲ್ಡಿಂಗ್‌ ಪ್ರೈ. ಲಿ. ಬಿಜೆಪಿಗೆ ₨ 10 ಕೋಟಿ ದೇಣಿಗೆ ನೀಡಿದೆ.

ವಿವರ ಸಲ್ಲಿಕೆ ಕಡ್ಡಾಯ: ಪ್ರತಿ ಹಣಕಾಸು ವರ್ಷದಲ್ಲಿ (ಏಪ್ರಿಲ್‌ 1ರಿಂದ ಮಾರ್ಚ್‌ 31ರ ವರೆಗೆ) ₨ 20 ಸಾವಿರಕ್ಕಿಂತ ಹೆಚ್ಚು ದೇಣಿಗೆ ನೀಡಿದವರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಬೇಕು. ದಾನಿಗಳ ವಿಳಾಸ, ಪಾನ್‌ ಸಂಖ್ಯೆ, ಪಾವತಿಯ ವಿಧಾನಗಳನ್ನು ಸಲ್ಲಿ­ಸ­ಬೇಕು.
ರಾಜಕೀಯ ಪಕ್ಷಗಳಿಗೆ ₨ 20,000ಕ್ಕಿಂತ ಹೆಚ್ಚಿನ ದೇಣಿಗೆ ನೀಡಿರುವವರ ಮಾಹಿತಿಯನ್ನು ಸಲ್ಲಿಸುವಾಗ ಯಾವುದೇ ವಿವರವನ್ನು ಖಾಲಿ ಬಿಡಬಾರದು ಎಂದು ಸುಪ್ರೀಂ ಕೋರ್ಟ್‌  ತೀರ್ಪು ನೀಡಿದೆ.

ಹಾಗೆಯೇ ಒಂದೇ ಬಾರಿ ಅಥವಾ ಹಲವು ಭಾಗಗಳಾಗಿ ಕನಿಷ್ಠ ₨ 20,000 ದೇಣಿಗೆ ನೀಡಿದ ಎಲ್ಲರ ಪಾನ್‌ ವಿವರಗಳನ್ನು ನೀಡಬೇಕು. ಆದರೆ ರಾಜಕೀಯ ಪಕ್ಷಗಳು ಇದನ್ನು ಪಾಲಿಸಿಲ್ಲ.

ಪಾನ್‌ ಮಾಹಿತಿಯೇ ಇಲ್ಲ: ಆದರೆ ₨25.28­ ಕೋಟಿ ದೇಣಿಗೆ ನೀಡಿರುವ 301 ದಾನಿಗಳ ಪಾನ್‌ ವಿವರಗಳು ಅಥವಾ ವಿಳಾಸವನ್ನು ರಾಜಕೀಯ ಪಕ್ಷಗಳು ಹೊಂದಿಲ್ಲ. ಬಿಜೆಪಿಗೆ ದೇಣಿಗೆ ನೀಡಿರುವ 273 ದಾನಿಗಳು ಪಾನ್‌ ವಿವರಗಳನ್ನು ನೀಡಿಲ್ಲ. ಇವರು ಒಟ್ಟು ₨22.53 ಕೋಟಿ ದೇಣಿಗೆ ನೀಡಿದ್ದಾರೆ.
ಹಾಗೆಯೇ ₨ 1.02 ಕೋಟಿ ದೇಣಿಗೆ ನೀಡಿರುವ 58 ದಾನಿಗಳು ಯಾವ ವಿಧಾನದ ಮೂಲಕ ಹಣ ಪಾವತಿಸಿದ್ದಾರೆ ಎಂಬ ಬಗ್ಗೆಯೂ ರಾಜಕೀಯ ಪಕ್ಷಗಳಲ್ಲಿ ಮಾಹಿತಿ ಇಲ್ಲ. 

ವಿದೇಶಿ ಕಂಪೆನಿಗಳಿಂದಲೂ ದೇಣಿಗೆ: ವಿದೇಶಿ ಕಂಪೆನಿಗಳು ಅಥವಾ ವಿದೇಶಿ ಕಂಪೆನಿಗಳ ನಿಯಂತ್ರಣದಲ್ಲಿರುವ ಭಾರತದಲ್ಲಿರುವ ಕಂಪೆನಿ­ಗಳಿಂದ ರಾಜಕೀಯ ಪಕ್ಷಗಳು ದೇಣಿಗೆ ಸ್ವೀಕರಿಸು­ವಂತಿಲ್ಲ. ಆದರೆ ಕಾಂಗ್ರೆಸ್‌ ಮತ್ತು ಬಿಜೆಪಿ ಇಂತಹ ಕಂಪೆನಿ­ಗಳಿಂದ ಒಟ್ಟು ₨ 29.26 ಕೋಟಿ ದೇಣಿಗೆ ಪಡೆದಿವೆ. 
ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್ ಸಂಸ್ಥೆ ಈ ವಿವರಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಜೊತೆಗೆ ಪಕ್ಷಗಳು ವಿದೇಶಿ ದೇಣಿಗೆ ಸಂಗ್ರಹಿಸಿರುವ ಬಗ್ಗೆ ದೆಹಲಿ ಹೈಕೋರ್ಟ್‌ನಲ್ಲಿ ದಾವೆಯನ್ನೂ ಹೂಡಿದೆ.

ಕಾಂಗ್ರೆಸ್‌ ಮತ್ತು ಸಿಪಿಐ(ಎಂ) ಹೊರತು­ಪಡಿಸಿ ಇತರ ಯಾವುದೇ ಪಕ್ಷಗಳು 2012–13ನೇ ವರ್ಷ­ದ ದೇಣಿಗೆ ವರದಿಗಳನ್ನು ಸಲ್ಲಿಸಿಲ್ಲ. ಹಾಗಾಗಿ 2004–05ರಿಂದ 2011–12ರ ವರೆಗಿನ ಎಂಟು ವರ್ಷ­ಗಳ ದೇಣಿಗೆಯ ವಿಶ್ಲೇಷಣೆ ನಡೆಸ­ಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT