ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರರ ಅನರ್ಹತೆ- ಕಾಯ್ದಿರಿಸಿದ ತೀರ್ಪು

Last Updated 1 ಫೆಬ್ರುವರಿ 2011, 18:10 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದ ತಕ್ಷಣ ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಐವರು ಪಕ್ಷೇತರ ಶಾಸಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಪಿ.ಎಂ. ನರೇಂದ್ರಸ್ವಾಮಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ, ಡಿ. ಸುಧಾಕರ್, ಶಿವರಾಜ ತಂಗಡಗಿ ಅವರು ಸಲ್ಲಿಸಿರುವ ಅರ್ಜಿ ಇದಾಗಿದೆ. ವಿವಾದದ ಕುರಿತಾದ ವಾದ ಹಾಗೂ ಪ್ರತಿವಾದ ಮಂಗಳವಾರ ಮುಗಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಮೋಹನ ಶಾಂತನಗೌಡರ್, ಎಸ್. ಅಬ್ದುಲ್ ನಜೀರ್ ಹಾಗೂ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ಪೂರ್ಣಪೀಠ ತೀರ್ಪನ್ನು ಕಾಯ್ದಿರಿಸಿತು.

ಐವರು ಶಾಸಕರನ್ನು ಯಾವ ಆಧಾರದ ಮೇಲೆ ಅನರ್ಹಗೊಳಿಸಲಾಗಿದೆ ಎಂಬುದನ್ನು ನ್ಯಾಯಮೂರ್ತಿಗಳು ತಿಳಿಯಬಯಸಿದ್ದ ಹಿನ್ನೆಲೆಯಲ್ಲಿ ಅವರ ನಿರ್ದೇಶನದ ಮೇರೆಗೆ ಸ್ಪೀಕರ್ ಹೊರಡಿಸಿರುವ ಆದೇಶದ ದಾಖಲೆಗಳನ್ನು ಸೀಲು ಮಾಡಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಲಾಯಿತು.

ಸ್ಪೀಕರ್‌ರಿಂದ ಪ್ರಮಾಣ ಪತ್ರ: ಈ ಮಧ್ಯೆ, ಸ್ಪೀಕರ್ ಕೆ.ಜಿ.ಬೋಪಯ್ಯ ಪರವಾಗಿ ವಕೀಲ ಶಶಿಕಾಂತ್ ಅವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ದಾಖಲೆ ಹಾಜರಿಗೆ ಹೈಕೋರ್ಟ್ ಆದೇಶಿಸಿರುವುದರ ಬಗ್ಗೆ ಅದರಲ್ಲಿ ಕೆಲವೊಂದು ಆಕ್ಷೇಪಣೆಗಳನ್ನೂ ಸಲ್ಲಿಸಲಾಗಿದೆ.

ಅದರಲ್ಲಿ ‘ಭಾರತೀಯ ಸಂವಿಧಾನದ 212ನೇ ವಿಧಿಯ ಪ್ರಕಾರ ಸ್ಪೀಕರ್ ಅವರು ನ್ಯಾಯಾಂಗದ ಪರಾಮರ್ಶೆಗೆ ಒಳಪಡುವುದಿಲ್ಲ. ಈ ಹಿನ್ನೆಲೆಯಲ್ಲಿ, ಯಾವುದೇ ದಾಖಲೆಗಳನ್ನು ಹಾಜರು ಪಡಿಸುವಂತೆ ಯಾವುದೇ ನ್ಯಾಯಾಲಯ ಆದೇಶ ಹೊರಡಿಸುವ ಅವಕಾಶ ಇಲ್ಲ. ಈ ರೀತಿ ದಾಖಲೆ ಹಾಜರು ಪಡಿಸುವಂತೆ ಹೈಕೋರ್ಟ್ ಸ್ಪೀಕರ್ ಅವರಿಗೆ ನಿರ್ದೇಶಿಸಿರುವ ಘಟನೆ ಹಿಂದೆ ಎಂದಿಗೂ ನಡೆದಿಲ್ಲ. ಆದರೆ ಹೈಕೋರ್ಟ್‌ನ ಆದೇಶಕ್ಕೆ ಗೌರವ ಕೊಡುವ ಹಿನ್ನೆಲೆಯಲ್ಲಿ, ಈ ದಾಖಲೆಗಳನ್ನು ಹಾಜರುಪಡಿಸಲಾಗಿದೆ’ ಎಂದು ತಿಳಿಸಲಾಗಿದೆ.

ವಿಚಾರಣೆ ವೇಳೆ ವಾದ ಮಂಡಿಸುವಾಗಲೂ ಸ್ಪೀಕರ್ ಅವರ ಅಧಿಕಾರದ ಬಗ್ಗೆ ತಿಳಿಸಿದ ವಕೀಲರು, ‘ಸ್ಪೀಕರ್ ಅವರು ದೇಶದಲ್ಲಿನ ಯಾವುದೇ ಕೋರ್ಟ್‌ಗಳ ಮುಂದೆ ಹಾಜರು ಆಗಬಾರದು ಎಂದು ಅಖಿಲ ಭಾರತ ಸ್ಪೀಕರ್‌ಗಳ ಸಮ್ಮೇಳನದಲ್ಲಿ ನಿರ್ಣಯ ಮಂಡಿಸಲಾಗಿತ್ತು. ಈ ಬಗ್ಗೆ ಪ್ರಮಾಣ ಪತ್ರವನ್ನೂ ಸಲ್ಲಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಬೋಪಯ್ಯ ಅವರ ವಿರುದ್ಧ ಗಂಭೀರ ಸ್ವರೂಪದ ಆರೋಪ ಬಂದಿರುವ ಹಿನ್ನೆಲೆಯಲ್ಲಿ, ಅವರೂ ತಮ್ಮ ವಾದ ಮಂಡಿಸುವುದು ಅನಿವಾರ್ಯವಾಗಿದೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT